Education: ಬೆಂಗಳೂರು ನಗರದಲ್ಲಿವೆ 51 ಅನಧಿಕೃತ ಖಾಸಗಿ ಶಾಲೆಗಳು!
- ನಗರದಲ್ಲಿವೆ 51 ಅನಧಿಕೃತ ಖಾಸಗಿ ಶಾಲೆಗಳು?
- ಸರ್ಕಾರದ ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಶಾಲೆಗಳ ಪಟ್ಟಿಮಾಡಿದ ಶಿಕ್ಷಣ ಇಲಾಖೆ
- ಕೆಲ ಶಾಲೆಗಳಿಗೆ ಈಗಾಗಲೇ ಬೀಗ; ಕೆಲ ಶಾಲೆಗಳಿಗೆ ನೋಟಿಸ್
- ಆಡಳಿತ ಮಂಡಳಿಯ ಉತ್ತರದ ಮೇಲೆ ಶಾಲೆ ಭವಿಷ್ಯ
- ಉತ್ತರ ಭಾಗದಲ್ಲಿ ಹೆಚ್ಚು ಅನಧಿಕೃತ ಶಾಲೆ
ಲಿಂಗರಾಜು ಕೋರಾ
ಬೆಂಗಳೂರು (ಸೆ.9): ರಾಜ್ಯದಲ್ಲಿ ಅನುಮತಿಯೇ ಇಲ್ಲದೆ ನಡೆಯುತ್ತಿರುವ ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ನಡೆಸುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಇಂತಹ 51 ಶಾಲೆಗಳನ್ನು ಪತ್ತೆ ಮಾಡಿ ನೋಟಿಸ್ ನೀಡಿದ್ದಾರೆ.
ನೋಟಿಸ್‌ಗೆ ಈ ಶಾಲೆಗಳು ನೀಡುವ ಉತ್ತರವನ್ನು ಆಧರಿಸಿ ಆ ಶಾಲೆಗಳನ್ನು ಬಂದ್ ಮಾಡಬೇಕಾ ಮುಂದುವರೆಸಬೇಕಾ ಎಂಬ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಗೊಳ್ಳಲಿದೆ. 51 ಶಾಲೆಗಳ ಪೈಕಿ ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿ ಹೆಚ್ಚು 38 ಶಾಲೆಗಳನ್ನು ಪತ್ತೆ ಹೆಚ್ಚಲಾಗಿದೆ. ಉಳಿದಂತೆ ಬೆಂಗಳೂರು ಉತ್ತರ ವಲಯದಲ್ಲಿ 11 ಶಾಲೆಗಳು ಮತ್ತು ಆನೇಕಲ್ ತಾಲೂಕಿನಲ್ಲಿ ಎರಡು ಶಾಲೆಗಳು ಶಿಕ್ಷಣ ಇಲಾಖೆ ಕಾಯ್ದೆಯ ನಿಯಮ ಉಲ್ಲಂಘಿಸಿ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ಶಾಲೆಗಳಿಗೆ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಎಲ್ಲ ಶಾಲೆಗಳ ಪಟ್ಟಿ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
ಖಾಸಗಿ ಶಾಲೆಗಳು ಸರ್ಕಾರದ ಕಾಯ್ದೆ, ಕಾನೂನುಗಳನ್ನು ಪಾಲಿಸುತ್ತಿಲ್ಲ. ವಿವಿಧ ಜಿಲ್ಲೆಗಳಲ್ಲಿ ಅನೇಕ ಶಾಲೆಗಳು ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ
ಆರ್.ವಿಶಾಲ್ ಅವರು ಇಲಾಖೆಯ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳ ದಾಖಲೆಗಳನ್ನು ಪರಿಶೀಲಿಸಿ ಅನಧಿಕೃತವಾಗಿ ಶಾಲೆಗಳು ನಡೆಯುತ್ತಿರುವುದು ಕಂಡುಬಂದರೆ ಅವುಗಳ ಪಟ್ಟಿಮಾಡಿ ಮಾಹಿತಿ ಕಳುಹಿಸುವಂತೆ ಹಾಗೂ ಕಾನೂನಾತ್ಮಕವಾಗಿ ನೋಟಿಸ್ ನೀಡಿ ಆ ಶಾಲೆಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.
ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯ ಆರಂಭ: ಶಿಕ್ಷಣ ಇಲಾಖೆ ಆದೇಶ
ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ದಕ್ಷಿಣ ವಲಯ ಡಿಡಿಪಿಐ ಬೈಲಾಂಜನಪ್ಪ ಮತ್ತು ಉತ್ತರ ವಲಯದ ಡಿಡಿಪಿಐ ಲೋಹಿತೇಶ್ವರ ರೆಡ್ಡಿ ತಮ್ಮ ವ್ಯಾಪ್ತಿಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಒಟ್ಟಾರೆ 51 ಶಾಲೆಗಳನ್ನು ಪತ್ತೆ ಹೆಚ್ಚಿ ನೋಟಿಸ್ ನೀಡಿದ್ದಾರೆ. ಕೆಲ ಶಾಲೆಗಳನ್ನು ಈಗಾಗಲೇ ಬಂದ್ ಮಾಡಿದ್ದಾರೆ. ಉಳಿದ ಶಾಲೆಗಳು ನೀಡುವ ಉತ್ತರದ ಮೇಲೆ ಅವುಗಳ ಭವಿಷ್ಯ ನಿರ್ಧಾರವಾಗಲಿದೆ ಎಂದು ಇಲಾಖಾ ಅಧಿಕಾರಿಗಳು ಹೇಳಿದ್ದಾರೆ.
ಪಟ್ಟಿಮಾಡಿರುವ ಶಾಲೆಗಳಲ್ಲಿ ಕೆಲ ಶಾಲೆಗಳು ಹೊಸದಾಗಿ ಆರಂಭವಾಗಿದ್ದು, ಅವುಗಳು ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಇನ್ನು ಕೆಲ ಶಾಲೆಗಳು ಪ್ರತೀ ವರ್ಷ ಮಾನ್ಯತೆ ನವೀಕರಿಸಿಕೊಳ್ಳಬೇಕಾದ ನಿಯಮ ಪಾಲಿಸಿಲ್ಲ. ಮತ್ತೆ ಕೆಲ ಶಾಲೆಗಳು ಇಲಾಖೆ ಗಮನಕ್ಕೆ ತಾರದೆ ಶಾಲೆಗಳನ್ನು ಸ್ಥಳಾಂತರ ಮಾಡಿವೆ. ಇಲಾಖೆಯಿಂದ ರಾಜ್ಯ ಪಠ್ಯಕ್ರಮ ಬೋಧನೆಗೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧಿಸುತ್ತಿರುವುದು, ಕೇಂದ್ರ ಪಠ್ಯಕ್ರಮ ಬೋಧನೆಗೆ ಅನುಮತಿ ಪಡೆದು ಎರಡೂ ಪಠ್ಯಕ್ರಮ ಬೋಧಿಸುತ್ತಿರುವುದು, ಅನುಮತಿ ಇಲ್ಲದೆ ಹೆಚ್ಚುವರಿ ತರಗತಿಗಳನ್ನು ನಡೆಸುತ್ತಿರುವುದು ಹೀಗೆ ಅನೇಕ ರೀತಿಯಲ್ಲಿ ಕರ್ನಾಟಕ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳು ಮತ್ತು ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಶಾಲೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಹಾಗಾಗಿ ಈ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಗುರುತಿಸಿರುವ ಅನಧಿಕೃತ 51 ಶಾಲೆಗಳಿವು:
ಬೆಂಗಳೂರು ದಕ್ಷಿಣ ವಲಯ
ಗೂಡ್ ಶೆಡ್ ರಸ್ತೆಯ ಟ್ರಿನಿಟಿ ಶಾಲೆ, ಶ್ರೀಗಂಧ ಕಾವಲಿನ ಆರ್ಕಿಡ್‌್ಸ ಇಂಟರ್ ನ್ಯಾಷನಲ್ ಶಾಲೆ, ಎಂಇಎಸ್ ಪಬ್ಲಿಕ್ ಸ್ಕೂಲ್, ಗವಿಪುರ ಬಡಾವಣೆ, ಸೋಮನಹಳ್ಳಿ ಮತ್ತು ಚನ್ನಮ್ಮನಕೆರೆ ಅಚ್ಚುಕಟ್ಟು ಈ ಮೂರು ಪ್ರದೇಶದ ಸರಸ್ವತಿ ವಿದ್ಯಾಮಂದಿರ ಶಾಲೆಗಳು, ಮಲ್ಲತ್ತಹಳ್ಳಿಯ ಹೋಲಿ ಫೈತ್ ಪಬ್ಲಿಕ್ ಶಾಲೆ, ಕನಕಪುರ ರಸ್ತೆ ಬೋಳಾರೆಯ ಸನ್ ಶೈನ್ ಪಬ್ಲಿಕ್ ಶಾಲೆ, ಕೆ.ಗೊಲ್ಲಹಳ್ಳಿ ವಿವೇಕಾನಂದ ಪಬ್ಲಿಕ್ ಶಾಲೆ, ಗೋಣಿಪುರದ ಕಲ್ಪತರು ವಿದ್ಯಾನಿಕೇತನ ಶಾಲೆ, ಮಂಜುನಾಥನಗರದ ಅಪೋಲೋ ಕಾನ್ವೆಂಟ್, ಗುಡ್ ಲಕ್ ಸ್ಕೂಲ್, ಮೈಸೂರು ರಸ್ತೆ ಬಾಪೂಜಿನಗರ ವ್ಯಾಪ್ತಿಯ ಸೆಂಟ್ ಕೈಕಲ್ಸ್ ಶಾಲೆ, ಸೌಂತೆಂಡ್ ಪಬ್ಲಿಕ್ ಶಾಲೆ, ದಿ ಏಷಿಯನ್ ಸ್ಕೂಲ್, ಬ್ಲೂಲೈನ್ ಪಬ್ಲಿಕ್ ಶಾಲೆ, ಎಂ.ಕೆ.ಮಿರಾಕಲ್ ಸ್ಕೂಲ್, ಪಾದರಾಯನಪುರದ ಮೌಂಟ್ ಅಬು ಆಂಗ್ಲ ಶಾಲೆ, ಸನ್ ಶೈನ್ ಆಂಗ್ಲ ಶಾಲೆ, ಎವರ್ ಗ್ರೀನ್ ಪಬ್ಲಿಕ್ ಶಾಲೆ, ವಿಜಯನಗರದ ಸಿದ್ಧಗಂಗಾ ಪಬ್ಲಿಕ್ ಸ್ಕೂಲ್, ವಾಲ್ಮೀಕಿ ನಗರದ ರೋಷನ್ ಆಂಗ್ಲ ಶಾಲೆ, ಗಂಗೊಂಡನಹಲ್ಳಿಯ ಅಲ್ ಹರಮ್ ಶಾಲೆ, ವಿ.ಎಸ್. ಗಾರ್ಡನ್‌ನ ಸೆಂಟ್ ಅಂತೋಣಿ ಶಾಲೆ, ಮೈಸೂರು ರೋಡ್ ಪೈಪ್‌ಲೈನ್‌ನ ಅಲ್ ಖಲಮ್ ಪಬ್ಲಿಕ್ ಶಾಲೆ, ಜೆ.ಪಿ.ನಗರದ ಟ್ವಿಂಕಲರ್ಸ್ ಶಾಲೆ, ಬಿಸ್ಮಿಲ್ಲಾ ನಗರದ ಎಫ್ ಜವಾಹರ್ ಶಾಲೆ, ವೆಂಕಟಾಪುರದ ಆದಿತ್ಯ ಸ್ಕೂಲ್, ರಾಜೇಂದ್ರ ನಗರದ ಗ್ರೀನ್ ಲ್ಯಾಂಡ್ ಪಬ್ಲಿಕ್ ಶಾಲೆ, ಚೇಳಕೆರೆಯ ಸೆಂಟ್ ಪಾಲ್ ಪ್ರಾಥಮಿಕ ಶಾಲೆ, ಕಾವೇರಿ ನಗರದ ಕಾವೇರಿ ಪ್ರಾಥಮಿಕ ಶಾಲೆ, ಜಗದೀಶ್ ನಗರದ ಜೆ.ಎಂ.ಜೆ. ಇಂಗ್ಲಿಷ್ ಪ್ರೈಮರಿ ಶಾಲೆ, ನಾಗವಾರಪಾಳ್ಯದ ಮಹಾತ್ಮ ಮೆಮೋರಿಯಲ್ ಸ್ಕೂಲ್, ಸುದ್ದಗುಂಟೆಪಾಳ್ಯದ ಮದರ್ ಥೆರೆಸಾ ಶಾಲೆ, ವಿದ್ಯಾ ನಗರದ ಸ್ವಾಮಿ ವಿವೇಕಾನಂದ ಶಾಲೆ, ಮಾರ್ನಿಂಗ್ ಸ್ಟಾರ್ ಎಜುಕೇಷನ್ ಟ್ರಸ್ಟ್, ಕೊಡಿಗೇಹಳ್ಳಿಯ ಸೆಂಟ್ ಥಾಮಸ್ ಶಾಲೆ, ಟಿ.ಸಿ.ಪಾಳ್ಯದ ಸ್ಟಾನ್ ಫೋರ್ಡ್ ಪಬ್ಲಿಕ್ ಸ್ಕೂಲ್, ಆನೇಕಲ್ ತಾಲೂಕಿನ ಕಾಚರಕನಹಳ್ಳಿಯ ಸರಸ್ವತಿ ವಿದ್ಯಾನಿಕೇತನ, ಶಿಕಾರಿಪಾಳ್ಯದ ಮದರ್ ಥೆರೇಸಾ ಸ್ಕೂಲ್ ಈ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಶಿಕ್ಷಕರಿಗೆ ‘Google Guru’ ಸ್ಪರ್ಧಿ: ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಬೆಂಗಳೂರು ಉತ್ತರ ವಲಯ
ಟಾಸ್ಕರ್ ಟೌನ್‌ನ ಅಲ್ ಅಮೀನ್ ಕಂಬಲ್ ಪೋಷ್ ಶಾಲೆ, ಶಿವಾಜಿ ನಗರದ ಗ್ಲೋಬಲ್ ಪಬ್ಲಿಕ್ ಶಾಲೆ, ಬೆಸ್ಟ್ ಪಬ್ಲಿಕ್ ಶಾಲೆ, ಭಾರತಿ ನಗರದ ನವ ಭಾರತ್ ಷಾ ಶಾಲೆ, ಚಾಂದಿನ್ ಚೌಕ್‌ನ ಭಾರ್ಗವಿ ಪಬ್ಲಿಕ್ ಶಾಲೆ, ಕೃಷ್ಣಯ್ಯನಪಾಳ್ಯದ ಹೋಲಿ ಫೈಯಿತ್ ಆಂಗ್ಲ ಮಾಧ್ಯಮ ಶಾಲೆ, ಕುಶಾಲನಗರ ವಾರ್ಡ್ ಅನ್ವರ್ ಲೇಔಟ್‌ನ ಲೋರೆಟ್ಟಾಆಂಗ್ಲ ಶಾಲೆ, ಚಾಮುಂಡಿನಗರದ ಗಾರ್ಡಿಯನ್ ಪಬ್ಲಿಕ್ ಶಾಲೆ, ಕತಾಳಿಪಾಳ್ಯದ ಚಚ್‌ರ್ ಜುಬಿಲಿ ಪ್ರಾಥಮಿಕ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.