Asianet Suvarna News Asianet Suvarna News

ವೀಸಿಗಳಿಗೆ ನೇಮಕಾತಿ-ಕಟ್ಟಡ ನಿರ್ಮಾಣ ಹೊಣೆ ಬೇಡ, ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ

ವೀಸಿಗಳಿಗೆ ನೇಮಕಾತಿ, ಕಟ್ಟಡ ನಿರ್ಮಾಣ ಹೊಣೆ ಬೇಡ. ಈ ಜವಾಬ್ದಾರಿಯಿಂದ ಹೊರಗಿಟ್ಟರೆ ಮಾತ್ರ ವಿವಿ ಶಿಕ್ಷಣ ಗುಣಮಟ್ಟಹೆಚ್ಚಳ ಸಾಧ್ಯ ಎಂದು  ವಿಧಾನಸಭೆಯಲ್ಲಿ  ಶಾಸಕರ ಅಭಿಮತ. ವಿವಿ ಸುಧಾರಣೆ ಬಗ್ಗೆ ಬಿಸಿಬಿಸಿ ಚರ್ಚೆ

University reform discussion in Karnataka assembly session gow
Author
First Published Sep 22, 2022, 10:38 PM IST

ವಿಧಾನಸಭೆ (ಸೆ.22): ಇತ್ತೀಚೆಗೆ ಕುಸಿಯುತ್ತಿರುವ ಶಿಕ್ಷಣ ಗುಣಮಟ್ಟಸೇರಿದಂತೆ ರಾಜ್ಯದ ವಿಶ್ವವಿದ್ಯಾಲಯಗಳ ದುಃಸ್ಥಿತಿಗಳ ಕುರಿತು ಸದಸ್ಯರು ಪಕ್ಷಾತೀತವಾಗಿ ಎಳೆಎಳೆಯಾಗಿ ಬಿಚ್ಚಿಡುವುದರ ಜತೆಗೆ ನಿಯಮಾವಳಿಯಿಂದ ನೇಮಕಾತಿ ಮತ್ತು ಕಟ್ಟಡ ನಿರ್ಮಾಣ ವಿಚಾರವನ್ನು ಹೊರಗಿಟ್ಟರೆ ಮಾತ್ರ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದು ಸಲಹೆ ನೀಡಿದರು. ಬುಧವಾರ ಮಂಡಿಸಿದ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕದ ಮೇಲೆ ನಡೆದ ಚರ್ಚೆಯ ವೇಳೆ ವಿಶ್ವವಿದ್ಯಾನಿಲಯದ ಬಹುತೇಕ ಕುಲಪತಿಗಳು ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಕ್ಕಿಂತ ಹೆಚ್ಚಾಗಿ ನೇಮಕಾತಿ ಮತ್ತು ಕಟ್ಟಡ ನಿರ್ಮಾಣದ ಕಡೆ ಗಮನಹರಿಸುತ್ತಿರುವುದೇ ಅಕ್ರಮಕ್ಕೆ ಕಾರಣವಾಗಿದೆ. ಹಣ ಮಾಡುವ ವಿಚಾರಕ್ಕೆ ಹೆಚ್ಚು ಗಮನಹರಿಸುವುದರಿಂದ ಗುಣಮಟ್ಟದ ಶಿಕ್ಷಣದತ್ತ ಹೆಚ್ಚಿನ ಗಮನಹರಿಸುತ್ತಿಲ್ಲ ಎಂದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರಸ್ತುತ ಇರುವ ವಿಶ್ವವಿದ್ಯಾಲಯಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಭಯಾನಕವಾಗಿವೆ. ಕೆನಡಾ ದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಭಾರತೀಯರು ತೆರಳುತ್ತಿದ್ದಾರೆ. ಯಾವ ಕಾರಣಕ್ಕಾಗಿ ಹೋಗುತ್ತಿದ್ದಾರೆ ಎಂಬುದನ್ನು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸದಸ್ಯ ಯು.ಟಿ.ಖಾದರ್‌, ಗುಣಮಟ್ಟಶಿಕ್ಷಣ ಕೊಡಿಸುವ ಸಂಬಂಧ ನಿಯಮ ರೂಪಿಸಬೇಕು. ಮಂಗಳೂರು ವಿಶ್ವವಿದ್ಯಾಲಯವು ‘ಎ’ ಗುಣಮಟ್ಟದಿಂದ ‘ಬಿ’ಗೆ ಕುಸಿದಿದೆ. ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್‌ ಸಭೆಯನ್ನು ಬೆಂಗಳೂರಿನ ಪಂಚತಾರಾ ಹೊಟೇಲ್‌ನಲ್ಲಿ ನಡೆಸಲಾಗುತ್ತದೆ. ತಕ್ಷಣ ಕುಲಪತಿ ಮತ್ತು ಸಿಂಡಿಕೇಟ್‌ ಅನ್ನು ಸೂಪರ್‌ಸೀಡ್‌ ಮಾಡಬೇಕು. ಅಲ್ಲದೇ, ಮಂಗಳೂರು ವಿಶ್ವವಿದ್ಯಾಲಯಗಳ ಅಕ್ರಮಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಡೀಮ್ಡ್ ವಿವಿಗಳಲ್ಲಿ ಕಾಪಿ- ರಾಮಸ್ವಾಮಿ: ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ ಮಾತನಾಡಿ, ಈ ಹಿಂದೆ ಸರ್ಕಾರವೇ ಮನೆ ಬಾಗಿಲಿಗೆ ಹೋಗಿ ಕುಲಪತಿಗಳಾಗುವಂತೆ ಮನವಿ ಮಾಡುತ್ತಿತ್ತು. ಆದರೆ, ಈಗ ಕೆಲವರು ನಮ್ಮನ್ನು ಕುಲಪತಿ ಮಾಡಿ ಎಂದು ಸರ್ಕಾರದ ಕಾಲಿಗೆ ಬಂದು ಬೀಳುತ್ತಿದ್ದಾರೆ. ಸರ್ಕಾರ ತಾಲೂಕಿಗೊಂದು ವಿಶ್ವವಿದ್ಯಾಲಯ ಮಾಡಿ ಶಿಕ್ಷಣ ಸಬಲೀಕರಣ ಮಾಡಬೇಕು ಎಂದು ವ್ಯಂಗ್ಯವಾಡಿದ ಅವರು, ಡೀಮ್‌್ಡ ವಿಶ್ವವಿದ್ಯಾಲಯಗಳಲ್ಲಿ ಶೇ.90ರಷ್ಟುಫಲಿತಾಂಶ ಬಂದರೆ, ಸರ್ಕಾರಿ ಕಾಲೇಜುಗಳಲ್ಲಿ ಶೇ.45-50ರಷ್ಟುಫಲಿತಾಂಶ ಬರುತ್ತದೆ. ಡೀಮ್‌್ಡ ವಿಶ್ವವಿದ್ಯಾಲಯಗಳು ಕಾಪಿ ಮಾಡಿಸಿ ಹೆಚ್ಚಿನ ಫಲಿತಾಂಶ ತಂದುಕೊಳ್ಳುತ್ತಿವೆ. ಹೊರಗುತ್ತಿಗೆ ನೇಮಕಾತಿಯಿಂದ ವೇತನದಲ್ಲಿ ತಾರತಮ್ಯ ಇರುವ ಕಾರಣ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸದಸ್ಯ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಹೊಸ ಶಿಕ್ಷಣ ನೀತಿಯ ವರದಿಯಲ್ಲಿಯೇ ರಾಜ್ಯದಲ್ಲಿ ವಿಶ್ವವಿದ್ಯಾಲಯ ಆರಂಭಕ್ಕೆ ಹಣಕಾಸು ಮತ್ತು ಮಾನವಸಂಪನ್ಮೂಲ ಇಲ್ಲ ಎಂದು ಹೇಳಿದೆ. ವಾರ್ಷಿಕವಾಗಿ 14 ಕೋಟಿ ರು. ಮತ್ತು ಪ್ರತಿ ವಿವಿಗೆ ಎರಡು ಕೋಟಿ ರು. ಎಂದು ಸರ್ಕಾರ ಹೇಳಿದೆ. ಈ ಮೊತ್ತದಲ್ಲಿ ವಿವಿ ಸ್ಥಾಪನೆ ಹೇಗೆ ಸಾಧ್ಯ ಎಂದು ಕೇಳಿದರು.

ಬಿಜೆಪಿ ಸದಸ್ಯ ಅರವಿಂದ್‌ ಬೆಲ್ಲದ್‌ ಮಾತನಾಡಿ, ಧಾರವಾಡ ಕರ್ನಾಟಕ ವಿವಿಯಲ್ಲಿಯೂ ಸಾಕಷ್ಟುಅಕ್ರಮಗಳು ನಡೆದಿವೆ. ವಿವಿಯ ನಿಯಮಗಳನ್ನು ಬದಲಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

ಕಾಂಗ್ರೆಸ್‌ ಸದಸ್ಯ ಕೃಷ್ಣಬೈರೇಗೌಡ ಮಾತನಾಡಿ,ವಿವಿ ಆರಂಭಕ್ಕೆ ಬೇಕಾದ ಅಗತ್ಯ ಅನುದಾನ ವಿಚಾರದಲ್ಲಿ ಸರ್ಕಾರ ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಸರ್ಕಾರ ಹೇಳಿದ ಮೊತ್ತದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಭ್ರಷ್ಟಕುಲಪತಿಗಳ ನೇಮಕಾತಿಯಲ್ಲಿ ಶಾಸಕರದ್ದು ಒಂದು ಪಾತ್ರ ಇದೆ. ಅವರು ಸಹ ಶಿಫಾರಸ್ಸು ಮಾಡುತ್ತಾರೆ. ಹೀಗಾಗಿ ಶಾಸಕರ ಮೇಲೂ ಜವಾಬ್ದಾರಿ ಇದೆ ಎಂದು ವಿವರಿಸಿದರು.

ಚರ್ಚೆಯಲ್ಲಿ ಸದಸ್ಯರಾದ ಎಂ.ಬಿ.ಪಾಟೀಲ್‌, ಈಶ್ವರ್‌ಖಂಡ್ರೆ, ಪರಮೇಶ್ವರ್‌ ನಾಯ್‌್ಕ, ರಹೀಂಖಾನ್‌, ಚರಂತಿಮಠ, ಮಹೇಶ್‌, ಮಂಜುನಾಥ್‌, ವೇದವ್ಯಾಸ ಮುಂತಾದವರು ಭಾಗವಹಿಸಿದ್ದರು.

 ಶಾಲೆಗಳಲ್ಲಿ ಡಿಸೆಂಬರ್‌ನಿಂದ ಭಗವದ್ಗೀತೆ ಪಾಠ: ಸಚಿವ ನಾಗೇಶ್‌

ವಿವಿ ಪಾರದರ್ಶಕತೆಗೆ ಹೊಸ ಕಾಯ್ದೆ: ಡಾ ಅಶ್ವತ್ಥ
ಬೆಂಗಳೂರು: ವಿಶ್ವವಿದ್ಯಾನಿಲಯಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಂಬಂಧ ಹೊಸ ಕಾಯ್ದೆಯನ್ನು ತರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅಶ್ವಾಸನೆ ನೀಡಿದ್ದಾರೆ.

Uttara Kannada: ಕಂಪ್ಯೂಟರ್ ಸಾಕ್ಷರತೆ ಪರೀಕ್ಷಾ ಕೇಂದ್ರ ಇಲ್ಲದೇ ಪರೀಕ್ಷಾರ್ಥಿಗಳ ಪರದಾಟ

ಸದಸ್ಯರ ಸಲಹೆಗಳನ್ನು ಆಲಿಸಿದ ಸಚಿವರು, ಗುಣಮಟ್ಟದ ಶಿಕ್ಷಣದ ಒತ್ತು ನೀಡುವುದು ಸೇರಿದಂತೆ ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಪಾರದರ್ಶಕತೆ ಕಾಯ್ದುಕೊಳ್ಳಲು ಕಾಯ್ದೆ ಜಾರಿ ಮಾಡುವ ಉದ್ದೇಶ ಇದೆ. ಅಲ್ಲದೇ, ಸುಧಾರಣೆ ತರುವ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಿ ವರದಿ ಪಡೆದುಕೊಳ್ಳಲಾಗಿದೆ. ಇದನ್ನು ಸಾರ್ವಜನಿಕ ಅಭಿಪ್ರಾಯಕ್ಕೂ ಬಿಡಲಾಗಿದೆ. ಎಲ್ಲವೂ ಪಡೆದ ಬಳಿಕ ಹೊಸ ಕಾಯ್ದೆ ತರಲಾಗುವುದು. ವಿವಿಗಳಿಗೆ ಸ್ವಾತಂತ್ರ್ಯ ನೀಡುವುದರ ಜತೆಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ ಎಂದರು.

Follow Us:
Download App:
  • android
  • ios