ಶಾಲೆಗಳಲ್ಲಿ ಡಿಸೆಂಬರ್‌ನಿಂದ ಭಗವದ್ಗೀತೆ ಪಾಠ: ಸಚಿವ ನಾಗೇಶ್
ಮುಂದಿನ ಡಿಸೆಂಬರ್‌ನಿಂದ ಭಗವದ್ಗೀತೆ ಒಳಗೊಂಡಿರುವ ನೈತಿಕ ಶಿಕ್ಷಣವನ್ನು ಶಾಲಾ ಶಿಕ್ಷಣ ಪಠ್ಯಕ್ರಮದಲ್ಲಿ ಬೋಧಿಸಲಾಗುವುದು. ಆದರೆ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ (ಸೆ.19): ಮುಂದಿನ ಡಿಸೆಂಬರ್‌ನಿಂದ ಭಗವದ್ಗೀತೆ ಒಳಗೊಂಡಿರುವ ನೈತಿಕ ಶಿಕ್ಷಣವನ್ನು ಶಾಲಾ ಶಿಕ್ಷಣ ಪಠ್ಯಕ್ರಮದಲ್ಲಿ ಬೋಧಿಸಲಾಗುವುದು. ಆದರೆ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನೈತಿಕ ಶಿಕ್ಷಣ ಬೋಧಿಸುವ ಪಠ್ಯಕ್ರಮದ ಬಗ್ಗೆ ತಜ್ಞರ ಸಮಿತಿ ರಚಿಸಲಾಗುವುದು. ಸಮಿತಿ ನೀಡುವ ಶಿಫಾರಸು ಆಧರಿಸಿ ಸರ್ಕಾರ ತೀರ್ಮಾನಿಸಲಿದೆ ಎಂದರು. ಸರ್ಕಾರದ ಉತ್ತರಕ್ಕೆ ಸಮಾಧಾನಗೊಳ್ಳದ ಪ್ರಾಣೇಶ್, ಈ ಹಿಂದೆ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಕ್ರಮ ಕೈಗೊಳ್ಳಲಾಗುವುದು. ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ತಜ್ಞರ ಸಮಿತಿ ರಚಿಸಲಾಗುವುದು ಎಂದು ಉತ್ತರ ನೀಡಲಾಗಿತ್ತು.
ಈಗ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಉತ್ತರ ನೀಡಲಾಗಿದೆ. ಭಗವದ್ಗೀತೆ ಬೋಧಿಸಲು ಯಾರ ವಿರೋಧವೂ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಯಾವುದಾದರೂ ಮುಜುಗರ ಇದೆಯಾ ಎಂದು ಪ್ರಶ್ನಿಸಿದರಲ್ಲದೇ, ಪಠ್ಯದಲ್ಲಿ ಚಿಕ್ಕಮಗಳೂರಿನ ಬಾಬಾಬುಡನಗಿರಿ ಎಂದು ಉಲ್ಲೇಖಿಸಲಾಗಿದೆ. ಈ ಹೆಸರನ್ನು ಇನಾಂ ದತ್ತಾತ್ರೇಯ ಪೀಠ ಎಂದು ಪರಿಷ್ಕರಣೆ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದೇನೆ. ಪಠ್ಯಕ್ರಮದಲ್ಲಿ ಆಗಿರುವ ತಪ್ಪುಗಳನ್ನು ಮುಂದೆ ಸರಿಪಡಿಸಲಾಗುವುದು ಎಂದು ಹೇಳಿದರು.
2030ರೊಳಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಾಧ್ಯತೆ: ಬಿ.ಸಿ. ನಾಗೇಶ್
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿಲ್ಲ: ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾನಗಿ ನವೀಕರಣದ ನೆಪದಲ್ಲಿ ಶಿಕ್ಷಣ ಇಲಾಖೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು. ಹಿರಿಯ ಸದಸ್ಯ ಬಸವರಾಜ ಹೊರಟ್ಟಿಅವರು ನಿಯಮ 330 ರ ಅಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣಾಧಿಕಾರಿಗಳು ಯಾವುದೇ ಕಿರುಕುಳ ನೀಡುತ್ತಿಲ್ಲ. ಸದಸ್ಯರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಮಕ್ಕಳ ಸುರಕ್ಷತೆಗಾಗಿ ಶಾಲಾ ಕಟ್ಟಡಗಳಲ್ಲಿ ನೂತನವಾಗಿ ಅಳವಡಿಸಬೇಕಾದ ಕ್ರಮಗಳ ಕುರಿತು ಸುಪ್ರೀಂಕೋರ್ಚ್ ನೀಡಿರುವ ತೀರ್ಪನ್ನು ಹೊಸದಾಗಿ ಅನುಮತಿ ಪಡೆಯುವ ಶಾಲೆಗಳಿಗಷ್ಟೇ ಅನ್ವಯ ಮಾಡಿದ್ದೇವೆ.
ಹಳೆ ಶಾಲೆಗಳಿಗಲ್ಲ. ಸದ್ಯಇರುವ ಖಾಸಗಿ ಶಾಲೆಗಳ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ನೀಡಬೇಕೆಂದು ಒಂದಲ್ಲ ಒಂಬತ್ತು ಬಾರಿ ಸೂಚಿಸಲಾಗಿದೆ. ಆದರೂ ಪ್ರಮಾಣಪತ್ರ ಸಲ್ಲಿಸದ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಶಿಕ್ಷಣ ಇಲಾಖೆಯಲ್ಲಿ ಯಾವುದೇ ಹೊಸ ಕಾನೂನು-ನಿಯಮ ರೂಪಿಸಿಲ್ಲ. ಹಳೆಯದನ್ನೇ ಪಾಲಿಸಲಾಗುತ್ತಿದ್ದು ಅದನ್ನೇ ಕಿರಿಕಿರಿಯೆಂದರೆ ಹೇಗೆ? ಮೇಲ್ಮನೆಯಲ್ಲಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವವರು ಹೇಳಿದಂತೆ ಮಾಡಬೇಕೆಂಬುದಾದರೆ ಸದನವೇ ತೀರ್ಮಾನ ಮಾಡಲಿ. ಆದರೆ, ಭವಿಷ್ಯದಲ್ಲಿ ಮಕ್ಕಳಿಗೆ ಏನಾದರೂ ತೊಂದರೆ ಆದಲ್ಲಿ ಯಾರು ಅದರ ಜವಾಬ್ದಾರಿ ಹೊರುತ್ತಾರೆ ಎಂದು ಪ್ರಶ್ನಿಸಿದರು. ಈ ನಡುವೆ ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ಅಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎಂತಹ ಸೌಲಭ್ಯ ಇದೆ. ಸಂಕನೂರು ನೇತೃತ್ವದಲ್ಲಿ ಸಮಿತಿ ರಚಿಸಿ ಒಂದು ಉತ್ತಮ ವರದಿ ನೀಡಿದ್ದೆವು.
ರೈತರ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ: ಸಚಿವ ನಾಗೇಶ್
ಅದರ ಬಗ್ಗೆ ಗಮನ ಹರಿಸಬೇಕು. ಖಾಸಗಿ ಅನುದಾನಿತ ಶಾಲೆ ಮಕ್ಕಳಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗುವ ಅನುಕೂಲ, ಸೌಲಭ್ಯ ಸಿಗಬೇಕು. ಸೂಕ್ತ ಅನುಕೂಲ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಬಸವರಾಜ ಹೊರಟ್ಟಿಅವರು, ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಶಾಲೆಗಳಿಗೊಂದು, ಖಾಸಗಿ ಶಾಲೆಗಳಿಗೊಂದು ನಿಯಮ ರೂಪಿಸಿ ತಾರತಮ್ಯ ಮಾಡಲಾಗುತ್ತಿದೆ. ಕಟ್ಟಡ ಸುರಕ್ಷತೆ ನೆಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ತೊಂದರೆ ಕೊಡಲಾಗುತ್ತಿದ್ದು ತುಘಲಕ್ ದರ್ಬಾರು ನಡೆಯುತ್ತಿದೆ. ನವೀಕರಣ ನಿರಾಕರಿಸಲ್ಪಟ್ಟಶಾಲೆಗಳ ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತಿಸಬೇಕು. ಇಲಾಖೆಯಲ್ಲಿ ಮೌಲ್ಯ ಉಳಿಸಿಕೊಳ್ಳಬೇಕೆಂದರಲ್ಲದೆ, ಶಿಕ್ಷಕರ ನೇಮಕಾತಿಯಲ್ಲಿನ ವಯೋಮಿತಿ ಸಡಿಲಿಕೆಯಲ್ಲಿನ ವ್ಯತ್ಯಾಸ ಸರಿಪಡಿಸಬೇಕೆಂದು ಒತ್ತಾಯಿಸಿದರು.