ವಿವಿ ಸಭೆಗಳು ಇನ್ನು ನೇರಪ್ರಸಾರ: ಸಚಿವ ಅಶ್ವತ್ಥ್‌ನಾರಾಯಣ
ಮಾಜಿ ಪ್ರಧಾನಿ ದಿವಂಗತ ಎ.ಬಿ.ವಾಜಪೇಯಿ ಅವರ ಸ್ಮರಣಾರ್ಥ ಡಿಸೆಂಬರ್ ತಿಂಗಳನ್ನು ‘ಸುಶಾಸನ ಮಾಸ’ವನ್ನಾಗಿ ಆಚರಣೆ
ಬೆಂಗಳೂರು(ನ.30): ಮಾಜಿ ಪ್ರಧಾನಿ ದಿವಂಗತ ಎ.ಬಿ.ವಾಜಪೇಯಿ ಅವರ ಸ್ಮರಣಾರ್ಥ ಡಿಸೆಂಬರ್ ತಿಂಗಳನ್ನು ‘ಸುಶಾಸನ ಮಾಸ’ವನ್ನಾಗಿ ಆಚರಿಸಲಾಗುತ್ತಿದೆ. ಜೊತೆಗೆ ವಿಶ್ವವಿದ್ಯಾಲಯದ ಆಡಳಿತವನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯನ್ನಾಗಿ ಮಾಡುವ ಉದ್ದೇಶದಿಂದ ಅಕಾಡೆಮಿ ಕೌನ್ಸಿಲ್, ಹಣಕಾಸು ಸಮಿತಿ ಹಾಗೂ ಸಿಂಡಿಕೇಟ್ ಸಭೆಗಳ ನೇರ ಪ್ರಸಾರಕ್ಕೆ ಚಾಲನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಡಿ.25ಕ್ಕೆ ವಾಜಪೇಯಿ ಅವರ ಜನ್ಮದಿನದಂದು ಸುಶಾಸನ ದಿನ ಆಚರಿಸಲಾಗುತ್ತಿತ್ತು. ಈ ವರ್ಷ ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ ತಿಂಗಳು ಪೂರ್ತಿ ಸುಶಾಸನ ಮಾಸವನ್ನಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಡಿ.1ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಸಿಇಟಿ ಅರ್ಜಿ ತಪ್ಪಿಲ್ಲದೆ ತುಂಬುವುದನ್ನು ಕಲಿಸಲು ಸಹಾಯಕೇಂದ್ರ: ಅಶ್ವತ್ಥನಾರಾಯಣ
ಪಾರದರ್ಶಕತೆಗೆ ಏನು ಕ್ರಮ?:
ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಇವುಗಳಲ್ಲಿ ಅಕಾಡೆಮಿ ಕೌನ್ಸಿಲ್, ಹಣಕಾಸು ಸಮಿತಿ ಹಾಗೂ ಸಿಂಡಿಕೇಟ್ ಸಭೆಗಳ ನೇರ ಪ್ರಸಾರ ವ್ಯವಸ್ಥೆ ಮಾಡಲಾಗುವುದು. ಇದು ಒಮ್ಮೆ ಜಾರಿಗೆ ಬರುತ್ತಿದ್ದಂತೆ ಕಾಯಂ ವ್ಯವಸ್ಥೆಯಾಗಿ ಮುಂದುವರಿಯಲಿದೆ. ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟಪ್ರತಿಯೊಂದು ಮಾಹಿತಿಯನ್ನು ಡಿ.10ರೊಳಗೆ ಆಯಾಯ ವೆಬ್‌ಸೈಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸಂಯೋಜಿತ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳು ಕೂಡ ಪ್ರತಿಯೊಂದು ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಘಟಕ ಕಾಲೇಜುಗಳಲ್ಲಿ ವೆಬ್‌ಸೈಟ್ ಇಲ್ಲದಿದ್ದರೆ ವಿವಿ ವೆಬ್‌ಸೈಟ್‌ನಲ್ಲಿಯೇ ವಿವರಗಳನ್ನು ಪ್ರಕಟಿಸಬೇಕು. ಶುಲ್ಕದ ವಿವರ, ವಿವಿಗಳಿಗೆ ಮಂಜೂರಾದ ಅನುದಾನದ ಮೊತ್ತ, ಕೈಗೊಳ್ಳಲಾಗಿರುವ ಯೋಜನೆಗಳು, ಬೋಧಕ ಸಿಬ್ಬಂದಿ ಸಂಖ್ಯೆ, ಬೋಧಕೇತರ ಸಿಬ್ಬಂದಿ ಸಂಖ್ಯೆಯೂ ಸೇರಿದಂತೆ ಪ್ರತಿಯೊಂದು ಮಾಹಿತಿಯೂ ವೆಬ್‌ಸೈಟ್‌ನಲ್ಲಿ ಲಭ್ಯವಿರಬೇಕು ಎಂದರು.
BTS2022: 100ಕ್ಕೂ ಹೆಚ್ಚು ಸ್ಟಾರ್ಟಪ್ ಮಳಿಗೆಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸಿದ ಅಶ್ವತ್ಥನಾರಾಯಣ
ಮಾಸಾಚರಣೆ ಕಾರ‍್ಯಕ್ರಮ
ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆಗಳ ವತಿಯಿಂದ ಡಿ.1ರಿಂದ ವಿವಿಧ ಕಾರ್ಯಕ್ರಮ ಜರುಗಲಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಪೋಸ್ಟರ್ ರಚನೆ ಸ್ಪರ್ಧೆ, ಉದ್ಯಮಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕಾರ್ಯಗಾರಗಳು, ವಿದ್ವತ್ ಗೋಷ್ಠಿಗಳು ಇತ್ಯಾದಿ ನಡೆಯಲಿವೆ. ಜೊತೆಗೆ, ಬೇರೆ ಬೇರೆ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಎನ್‌ಇಪಿ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಐದು ವರ್ಷಗಳ ಗುರಿಯನ್ನಿಟ್ಟು ಸಾಂಸ್ಥಿಕ ಅಭಿವೃದ್ಧಿ ಯೋಜನೆ(ಐಡಿಪಿ) ಸಿದ್ಧಪಡಿಸಲು ವಿವಿಗಳಿಗೆ ಸೂಚಿಸಲಾಗಿದೆ. ‘ನೀತಿ’ ಆಯೋಗ ಕೂಡ ಇದನ್ನು ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಾಗಾರವ ನಡೆಸಲಿದೆ ಎಂದರು.
ಉದ್ಯಮದ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ’ಸ್ಕಿಲ್ ಕನೆಕ್ಟ್’ ಪೋರ್ಟಲ್ ಅನ್ನು ಪರಿಷ್ಕೃತಗೊಳಿಸಲಾಗಿದ್ದು ಡಿ.1ಕ್ಕೆ ಮುಖ್ಯಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಉತ್ಕೃಷ್ಟತಾ ಕೇಂದ್ರ ಕಟ್ಟಡದ ಉದ್ಘಾಟನೆ, ಹುಬ್ಬಳ್ಳಿಯಲ್ಲಿ ’ಬಹು ಕೌಶಲ್ಯ ಕೇಂದ್ರದ ಉದ್ಘಾಟನೆ ಕೂಡ ನಡೆಯಲಿದೆ ಎಂದು ತಿಳಿಸಿದರು.