ಪ್ರತಿ ಕಾಲೇಜಿನಲ್ಲೂ ತಲಾ 100 ವಿದ್ಯಾರ್ಥಿಗಳಿಗೆ ಒಬ್ಬ ಪುರುಷ ಮತ್ತು ಓರ್ವ ಮಹಿಳಾ ಉಪನ್ಯಾಸಕರನ್ನ ಈ ಕೇಂದ್ರಕ್ಕೆ ಸಂಯೋಜಕರನ್ನಾಗಿ ನೇಮಕ. 

ಬೆಂಗಳೂರು(ನ.26): ವಿದ್ಯಾರ್ಥಿಗಳು ಯಾವುದೇ ತಪ್ಪಿಲ್ಲದೆ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲು ವಿಜ್ಞಾನ ಪಠ್ಯಕ್ರಮವಿರುವ ಪ್ರತಿಯೊಂದು ಪದವಿಪೂರ್ವ ಕಾಲೇಜಿನಲ್ಲೂ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಹಂತದಲ್ಲಿ ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಶಿಕ್ಷಣ ಇಲಾಖೆಯ ಸ್ಟೂಡೆಂಟ್‌ ಅಚೀವ್ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌(ಎಸ್‌ಎಟಿಎಸ್‌)ನಲ್ಲಿ ದಾಖಲಾಗಿರುತ್ತದೆ. ಅದನ್ನೇ ಪಿಯು ಹಂತಕ್ಕೂ ಯಥಾವತ್ತಾಗಿ ಪಡೆದು ಸಿಇಟಿ ಅರ್ಜಿಯಲ್ಲೂ ಅದನ್ನೇ ನಮೂದಿಸುವಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯ ನೌಕರರ ನೇಮಕಕ್ಕೂ ಕೇಂದ್ರ ಪರೀಕ್ಷೆ?: ಕನ್ನಡಿಗ ಉದ್ಯೋಗಾಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ..!

ಜಂಟಿ ಸಭೆ:

ವಿದ್ಯಾರ್ಥಿಗಳು ಸಿಇಟಿ ಅರ್ಜಿ ಭರ್ತಿ ಮಾಡುವಾಗ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಂಬಂಧ ಶುಕ್ರವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರೊಂದಿಗೆ ಅಶ್ವತ್ಥನಾರಾಯಣ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈಗ ಸಾಕಷ್ಟು ವಿದ್ಯಾರ್ಥಿಗಳು ಸಿಇಟಿ ಅರ್ಜಿಯಲ್ಲಿ ಜಾತಿ, ಆದಾಯ ಪತ್ರದ ಆರ್‌.ಡಿ.ಸಂಖ್ಯೆ, ತಂದೆಯ ಹೆಸರು, ಜಾತಿಯ ಹೆಸರು ಇತ್ಯಾದಿಗಳನ್ನು ತಪ್ಪಾಗಿ ದಾಖಲಿಸುತ್ತಿದ್ದಾರೆ. ಇದನ್ನೆಲ್ಲ ಸರಿಪಡಿಸಲು ಏಳೆಂಟು ಬಾರಿ ಅವಕಾಶ ಕೊಡುತ್ತಿದ್ದು, ಇದರಿಂದ ಸಮಯ ವ್ಯರ್ಥವಾಗುತ್ತಿರುವುದರ ಜತೆಗೆ ಉಳಿದ ಪ್ರಕ್ರಿಯೆಗಳು ವಿಳಂಬ ಆಗುತ್ತಿವೆ. ಹೀಗಾಗಿ ಪಿಯುಸಿಯಲ್ಲಿ ಇರುವಾಗಲೇ ಸಿಇಟಿ ಅರ್ಜಿ ತುಂಬಲು ಕಲಿಸುವ ಸಹಾಯಕ ಕೇಂದ್ರಗಳ ಮೂಲಕ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆ ರೂಪಿಸಲಾಗುವುದು ಎಂದರು.

ತರಬೇತಿ:

ಪ್ರತಿ ಕಾಲೇಜಿನಲ್ಲೂ ತಲಾ 100 ವಿದ್ಯಾರ್ಥಿಗಳಿಗೆ ಒಬ್ಬ ಪುರುಷ ಮತ್ತು ಓರ್ವ ಮಹಿಳಾ ಉಪನ್ಯಾಸಕರನ್ನ ಈ ಕೇಂದ್ರಕ್ಕೆ ಸಂಯೋಜಕರನ್ನಾಗಿ ನೇಮಿಸಲಾಗುವುದು. ಇದರ ಜತೆಗೆ ಒಂದು ಜಿಲ್ಲೆಗೆ ತಲಾ ನಾಲ್ವರು ಪ್ರಧಾನ ತರಬೇತುದಾರರನ್ನು ಒದಗಿಸಲಾಗುವುದು. ಸಂಯೋಜಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ತರಬೇತಿ ಕೊಡಲಿದೆ. ಹಾಗೆಯೇ ಪ್ರಧಾನ ತರಬೇತುದಾರರಿಗೆ ಪ್ರಾಧಿಕಾರದಿಂದ ಪ್ರತ್ಯೇಕವಾಗಿ ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದರು.