ಶಿಕ್ಷಣಕ್ಕಿಂತ ಧರ್ಮ ಮೇಲು ಎಂಬುದನ್ನು ಸಾಬೀತು ಮಾಡಿದ ಉಡುಪಿ ಹಿಜಾಬ್ ಹೋರಾಟಗಾರ್ತಿಯರು
* ಶಿಕ್ಷಣಕ್ಕಿಂತ ಧರ್ಮ ಮೇಲು ಎಂಬುದನ್ನು ಸಾಬೀತು ಮಾಡಿದ ಉಡುಪಿ ಹಿಜಾಬ್ ಹೋರಾಟಗಾರ್ತಿಯರು
* ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಇಬ್ಬರು ಬಾಲಕಿಯರು ಗೈರು
* ಹಿಜಾಬ್ ನಮ್ಮ ಹಕ್ಕು ಎಂದು ಹೋರಾಟ ಆರಂಭಿಸಿ ಹೈ ಕೋರ್ಟ್ ಮೆಟ್ಟಿಲೇರಿ ಸೋತಿದ್ದರು
ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಮಾ.29): ಹಿಜಾಬ್ (Hijab Row) ಹೋರಾಟಗಾರ್ತಿಯರು ಕೊನೆಗೂ ಶಿಕ್ಷಣಕ್ಕಿಂತ ಧರ್ಮ ಮೇಲು ಎಂಬುದನ್ನು ಸಾಬೀತು ಮಾಡಿದ್ದಾರೆ. ಇಂದು (ಮಂಗಳವಾರ) ನಡೆದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಇಬ್ಬರು ಬಾಲಕಿಯರು ಗೈರು ಹಾಜರಾಗಿದ್ದಾರೆ. ಈ ಮೂಲಕ ತಮ್ಮ ಅಮೂಲ್ಯ ಒಂದು ವರ್ಷದ ಶಿಕ್ಷಣವನ್ನು ಹಿಜಾಬ್ ಹೋರಾಟಕ್ಕೆ ಬಲಿ ಕೊಟ್ಟಿದ್ದಾರೆ.
ಹಿಜಾಬ್ ಹೋರಾಟಕ್ಕೆ ಉಡುಪಿಯೇ ಮೂಲ ಕೇಂದ್ರ ಅನ್ನೋದು ಎಲ್ಲರಿಗೂ ಗೊತ್ತಿದೆ. ಉಡುಪಿ(Udupi) ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು ಎಂದು ಹೋರಾಟ ಆರಂಭಿಸಿ ಹೈ ಕೋರ್ಟ್ ಮೆಟ್ಟಿಲೇರಿ ಸೋತಿದ್ದರು. ಹಿಜಾಬ್ ಕುರಿತಾದ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಹೋರಾಟದ ಭಾಗವಾಗಿ ಇಂದು ಇಬ್ಬರು ಬಾಲಕಿಯರು ತಮ್ಮ ಪ್ರಥಮ ಪಿಯುಸಿಯ ಅಂತಿಮ ಪರೀಕ್ಷೆಯಲ್ಲಿ ಗೈರಾಗಿದ್ದಾರೆ.
ಅಲ್ಲಾಹು ಅಕ್ಬರ್' ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಗೈರು
ಮುಸ್ಕಾನ್ ಮತ್ತು ಸಫಾ ಪ್ರಥಮ ಪಿಯುಸಿ ಪರೀಕ್ಷೆಗೆ ಗೈರಾದ ವಿದ್ಯಾರ್ಥಿನಿಯರು. ಹೋರಾಟ ನಡೆಸುತ್ತಿರುವ ಆರು ಮಂದಿ ಬಾಲಕಿಯರಲ್ಲಿ, ನಾಲ್ವರು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದರೆ, ಇಬ್ಬರು ಬಾಲಕಿಯರು ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ. ಮುಸ್ಕಾನ್ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದು ಇಂದು ಆಕೆಗೆ ಫಿಸಿಕ್ಸ್ ಪರೀಕ್ಷೆ ಇತ್ತು. ಕಾಮರ್ಸ್ ಓದುವ ಸಫಾಗೆ ಇಂದು ಬಿಸಿನೆಸ್ ಸ್ಟಡೀಸ್ ಪರೀಕ್ಷೆ ಇತ್ತು. ಇಬ್ಬರೂ ಪರೀಕ್ಷೆಗೆ ಗೈರಾಗುವ ಮೂಲಕ ತಮ್ಮ ಹಠ ಮುಂದುವರಿಸಿದ್ದಾರೆ.
"
ಹೈಕೋರ್ಟ್ ತೀರ್ಪು ಬಂದಾಗಲೇ ಆರು ಮಂದಿ ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿದ್ದರು. ಹಿಜಾಬ್ ಇಲ್ಲದೆ ನಾವು ತರಗತಿ ಗಾಗಲಿ ಪರೀಕ್ಷೆ ಗಾಗಲಿ ಭಾಗವಹಿಸುವುದಿಲ್ಲ ಎಂದಿದ್ದರು. ಅದೇ ಪ್ರಕಾರ ದ್ವಿತೀಯ ಪಿಯುಸಿಯ ಪ್ರಾಯೋಗಿಕ ಪರೀಕ್ಷೆ ಯಿಂದಲೂ ತಪ್ಪಿಸಿಕೊಂಡಿದ್ದರು. ಹೈಕೋರ್ಟ್ ತೀರ್ಪಿಗಿಂತ ಕುರಾನ್ ನಮಗೆ ಅಂತಿಮ ಎಂದು ಬಾಲಕಿಯರು ಸುದ್ದಿಗೋಷ್ಠಿಯಲ್ಲಿ ಸಾರಿದ್ದರು.
ಸೋಮವಾರ ಆರಂಭವಾದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಿಜಾಬ್ ಯಾವುದೇ ಪರಿಣಾಮ ಬೀರಲಿಲ್ಲ. ಜಿಲ್ಲೆಯಲ್ಲಿ ಒಟ್ಟು 210 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರೂ, ಹಿಜಬ್ ನ ಕಾರಣಕ್ಕೆ ಯಾರು ಪರೀಕ್ಷೆ ತಪ್ಪಿಸಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿತ್ತು. ಆದರೆ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಮಾತ್ರ ಹಾಗಾಗಲಿಲ್ಲ. ನಿರೀಕ್ಷೆಯಂತೆ ಹಿಜಾಬ್ ಹೋರಾಟಗಾರ್ತಿಯರು ಗೈರುಹಾಜರಾತಿಯ ಮೂಲಕ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಸದ್ಯ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಆದರೆ ಹೈಕೋರ್ಟ್ ಮೆಟ್ಟಿಲೇರಿದ ಆರು ಮಂದಿ ವಿದ್ಯಾರ್ಥಿನಿಯರು ತಟಸ್ಥರಾಗಿದ್ದಾರೆ. ಈವರೆಗೆ ಸುಪ್ರೀಂಕೋರ್ಟಿಗೆ ಹೋಗುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇವರು ಕಲಿಯುವ ಶಾಲೆಯಲ್ಲಿ ಹಿಜಬ್ ಧರಿಸಲು ಈ ಹಿಂದಿನಿಂದಲೂ ಅವಕಾಶ ಇರಲಿಲ್ಲ. ಇದೇ ಕಾರಣಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ನಿಲ್ಲಲಿಲ್ಲ. ಹಾಗಾಗಿ ಈ ಬಾರಿ ಹಿಜಾಬ್ ಧರಿಸಲು ಅವಕಾಶವಿದ್ದ ಖಾಸಗಿ ಕಾಲೇಜುಗಳ ವಿದ್ಯಾರ್ಥಿನಿಯರ ಮೂಲಕ ಸುಪ್ರೀಂಕೋರ್ಟಿನಲ್ಲಿ ಹೋರಾಟ ಮುಂದುವರಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ದ್ವಿತೀಯ ಪರೀಕ್ಷೆ ಪರೀಕ್ಷೆ ಆರಂಭವಾಗುತ್ತದೆ. ಮೊದಲೇ ಘೋಷಿಸಿದಂತೆ ಉಳಿದ ನಾಲ್ಕು ಮಂದಿ ವಿದ್ಯಾರ್ಥಿನಿಯರು ಕೂಡ ಆ ಪರೀಕ್ಷೆಗೆ ಗೈರುಹಾಜರಾದರೆ ಆಶ್ಚರ್ಯವಿಲ್ಲ.
ಮಂಡ್ಯದ ಮುಸ್ಕಾನ್ ಗೈರು
ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಧೈರ್ಯವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು (Allah Hu Akbar) ಎಲ್ಲೆಡೆ ಸುದ್ದಿಯಾಗಿತ್ತು.
ಇದೀಗ ಮಂಡ್ಯದ (Mandya) ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಮುಸ್ಕಾನ್ (Muskan) ಪದವಿ ಪರೀಕ್ಷೆಗೆ (Degree Exam) ಗೈರಾಗಿದ್ದರು. ಈ ಮೂಲಕ ಕರ್ನಾಟಕ ಹೈಕೋರ್ಟ್ ನೀಡಿದ್ದ ಹಿಜಾಬ್ ತೀರ್ಪು (Hijab verdict) ಅನ್ನು ವಿರೋಧಿಸಿದ್ದಳು.