ಮಾಸ್ಟರ್ ಡಿಗ್ರಿ ಮಾಡ್ಕೊಂಡು ಕೆಲಸಕ್ಕಾಗಿ ಅಲೆದಾಟ ನಡೆಸ್ತಿರೋರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ರಾಜ್ಯದಲ್ಲಿರುವ ವಿವಿಧ ಸರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ಬೆಂಗಳೂರು: ಶಿಕ್ಷಕ ವೃತ್ತಿಯನ್ನು ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ (Guest Lecturers) ಹುದ್ದೆಗಳ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆಯು ಅಧಿಕೃತವಾಗಿ ಚಾಲನೆ ನೀಡಿದೆ.
2026-27ನೇ ಶೈಕ್ಷಣಿಕ ಸಾಲಿನ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿ ಕುರಿತಾದ ಪ್ರಮುಖ ದಿನಾಂಕಗಳು, ಅರ್ಹತೆ ಮತ್ತು ಇತರ ಮಾಹಿತಿ ಇಲ್ಲಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಲು ಕೊನೆಯ ದಿನ: ಜುಲೈ 18, 2025
- ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಣೆ: ಜುಲೈ 19
- ಅರ್ಜಿ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ: ಜುಲೈ 19 ರಿಂದ 22 ರವರೆಗೆ
- ತಾತ್ಕಾಲಿಕ ವರ್ಕ್‌ಲೋಡ್ (Workload) ಪಟ್ಟಿ ಪ್ರಕಟಣೆ: ಜುಲೈ 25
- ಕೌನ್ಸಿಲಿಂಗ್ ಮೆರಿಟ್ ಪಟ್ಟಿ ಪ್ರಕಟಣೆ: ಜುಲೈ 26
- ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ: ಜುಲೈ 28
ಅರ್ಹತೆಗಳೇನಿರಬೇಕು?
- ಸ್ನಾತಕೋತ್ತರ ಪದವಿಯಲ್ಲಿ (PG) ಕನಿಷ್ಠ 55% ಅಂಕಗಳನ್ನು ಹೊಂದಿರಬೇಕು (ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ 50% ಅಂಕಗಳು ಕಡ್ಡಾಯ).
- NET/K-SET/SLET ಅಥವಾ PhD ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು
- ಕಳೆದ ವರ್ಷ (2025-26) ಅರ್ಜಿ ಸಲ್ಲಿಸಿದವರೂ ಸಹ ಈ ಬಾರಿ ಹೊಸದಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯ
ಆಯ್ಕೆ ಪ್ರಕ್ರಿಯೆ ಮತ್ತು ಮೆರಿಟ್ ಲೆಕ್ಕಾಚಾರ
ಒಟ್ಟು 100 ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. PhD ಹೊಂದಿದ್ದರೆ 12 ಅಂಕ, NET/K-SET/SLET ಇದ್ದರೆ 9 ಅಂಕ ಹಾಗೂ M.Phil ಹೊಂದಿದ್ದರೆ 6 ಅಂಕಗಳನ್ನು ನೀಡಲಾಗುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡಿದ ಅನುಭವವಿದ್ದರೆ ಪ್ರತಿ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 48 ಅಂಕಗಳನ್ನು ನೀಡಲಾಗುತ್ತದೆ. (ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಸೇವಾನುಭವವನ್ನು ಪರಿಗಣಿಸಲಾಗುವುದಿಲ್ಲ). ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ನೀಡಲಾಗುತ್ತದೆ.
ಈ ಬಾರಿ ಆಯ್ಕೆಯಾಗುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ಇಲಾಖೆಯು ಮಹತ್ವದ ಸೌಲಭ್ಯವೊಂದನ್ನು ನೀಡಿದೆ. ಸೇವಾವಧಿಯಲ್ಲಿ ಅವರಿಗೆ 90 ದಿನಗಳ ಕಾಲ ವೇತನ ಸಹಿತ ಮಾತೃತ್ವ ರಜೆ ಲಭ್ಯವಿರಲಿದೆ.ಅರ್ಜಿ ಸಲ್ಲಿಸುವಾಗ ಯಾವುದೇ ಸುಳ್ಳು ಮಾಹಿತಿ ನೀಡಬಾರದು ಅಥವಾ ನಕಲಿ ದಾಖಲೆಗಳನ್ನು ಸಲ್ಲಿಸಬಾರದು. ಒಂದು ವೇಳೆ ತಪ್ಪು ಮಾಹಿತಿ ಕಂಡುಬಂದಲ್ಲಿ ಅಭ್ಯರ್ಥಿತನ ರದ್ದುಪಡಿಸುವುದಲ್ಲದೆ, ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಸಾಮಾನ್ಯ, ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಇಲಾಖೆಯ ಅಧಿಕೃತ ವೆಬ್‌ಸೈಟ್ ಅನ್ನು ನಿರಂತರವಾಗಿ ಪರಿಶೀಲಿಸಲು ಸೂಚಿಸಲಾಗಿದೆ.


