ಬಿಸಿ ಬಿಸಿ ಕಜ್ಜಾಯ... ಶಿಕ್ಷಕರ ದಿನದಂದು ಈ ವೀಡಿಯೋ ನೋಡದಿದ್ರೆ ಹೇಗೆ?
ಶಿಕ್ಷಕರ ದಿನವಾದ ಇಂದು ಶಿಕ್ಷಕರೊಬ್ಬರು ತರಲೆ ವಿದ್ಯಾರ್ಥಿಗೆ ಸರಿಯಾಗಿ ಬಾರಿಸಿದ ವೀಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋಗೆ ಕಾಮೆಂಟ್‌ಗಳ ಸುರಿಮಳೆಯೇ ಬಂದಿದೆ.

ಇಂದು ಶಿಕ್ಷಕರ ದಿನ ಮಕ್ಕಳ ಬದುಕಿಗೆ ದಾರಿ ದೀಪವಾಗುವ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವ ಶಿಕ್ಷಕರನ್ನು ನೆನೆಯದೇ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಇಂದು ಶಿಕ್ಷಕರ ದಿನವನ್ನು ನೆನಪು ಮಾಡಿಕೊಳ್ಳುತ್ತಿದ್ದು, ತಮಗೆ ದಾರಿ ತೋರಿದ ತಮ್ಮ ತಪ್ಪುಗಳನ್ನು ತಿದ್ದಿ ಸರಿ ಮಾರ್ಗದಲ್ಲಿ ನಡೆಸಿದ ಶಿಕ್ಷಕರನ್ನು ಬಹುತೇಕರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕರೆಂದರೆ ಮೊದಲು ನಮಗೆ ನೆನಪಾಗುವುದು ಬಾಲ್ಯ, ಬಾಲ್ಯದ ನಮ್ಮ ತರಲೆ ಕೀಟಲೆಗಳನ್ನು ಸಂಯಮದಿಂದಲೇ ನಿಭಾಯಿಸುತ್ತಿದ್ದ ಶಿಕ್ಷಕರು ತಾಳ್ಮೆ ಮೀರಿದಾಗ ಸರಿಯಾಗಿ ಎರಡು ಬಾರಿಸುತ್ತಿದ್ದರು. ಆಗ ನೋವೆನಿಸಿದರು. ಈಗ ಆ ದಿನಗಳ ನೆನೆದರೆ ಮೊಗದಲ್ಲಿ ಮಂದಹಾಸ ಮೂಡಿ ಮರೆಯಾಗುತ್ತದೆ. ಅದೇ ರಿತಿ ಶಿಕ್ಷಕರ ದಿನವಾದ ಇಂದು ಶಿಕ್ಷಕರೊಬ್ಬರು ತರಲೆ ವಿದ್ಯಾರ್ಥಿಗೆ ಸರಿಯಾಗಿ ಬಾರಿಸಿದ ವೀಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋಗೆ ಕಾಮೆಂಟ್‌ಗಳ ಸುರಿಮಳೆಯೇ ಬಂದಿದೆ.
@gharkekalesh ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಈ ವೀಡಿಯೋ ಶೇರ್ ಮಾಡಿ ಶಿಕ್ಷಕರ ದಿನದ ಶುಭಾಶಯ ಕೋರಲಾಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಶಾಲೆಯೊಂದರಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವೇದಿಕೆಯಲ್ಲಿ ಶಿಕ್ಷಕರು ಹಾಗೂ ಅತಿಥಿಗಳ ಕುಳಿತಿದ್ದರೆ, ಕೆಳಗೆ ಮಕ್ಕಳು ಕುಳಿತಿದ್ದಾರೆ. ಈ ವೇಳೆ ವಿದ್ಯಾರ್ಥಿಯೋರ್ವ ಸಂಭ್ರಮಾಚರಣೆ ವೇಳೆ ಹುಟ್ಟುಹಬ್ಬದ ವೇಳೆ ಬಳಸುವಂತಹ ಮೇಣದಂತಿರುವ ಸ್ಪೇಯನ್ನು ಶಿಕ್ಷಕರ ಮುಖದ ಮೇಲೆಲ್ಲಾ ಸಿಂಪಡಿಸಿದ್ದಾನೆ, ನೋಡುವಷ್ಟು ನೋಡಿದ ಶಿಕ್ಷಕರು ಸಮಾರಂಭ ಎಂಬುದನ್ನು ನೋಡದೇ ಆ ವಿದ್ಯಾರ್ಥಿಯನ್ನು ಹಿಡಿದು ಬೆನ್ನನ್ನು ಬಾಗಿಸಿ ಬೆನ್ನಿಗೆರಡು ಬಾರಿಸಿದ್ದಾರೆ. ಈ ವೇಳೆ ನೆಲದ ಮೇಲೆ ಕುಳಿತ ಇತರ ವಿದ್ಯಾರ್ಥಿಗಳು ನಗುತ್ತಿದ್ದಾರೆ.
ಮೇಷ್ಟ್ರು ಸಿಗದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ: ಶಿಕ್ಷಕರ ದಿನಕ್ಕೆ ಸಿದ್ದರಾಮಯ್ಯ ವಿಶೇಷ ಲೇಖನ
ಈ ವೀಡಿಯೋ ನೋಡಿದ ನೆಟ್ಟಿಗರು ವೀಡಿಯೋಗೆ ಸಖತ್ ಕಾಮೆಂಟ್ ಮಾಡಿದ್ದಲ್ಲದೇ ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಕೆಲವರು ಶಿಕ್ಷಕರು ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ಆತ ಕಿರಿಕಿರಿ ಮಾಡುತ್ತಿದ್ದ ಎಂದು ಕಾಮೆಂಟ್ ಮಾಡಿದ್ದಾರೆ. ಗುರು ಆಶೀರ್ವಾದ ಮಾಡಿದರು ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಎಲ್ಲರಿಗೂ ಸಿಗುವುದು ನಿಧಾನಕ್ಕೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬನ್ನಿ ಮಕ್ಕಳೇ ಪ್ರಸಾದ ಸ್ವೀಕರಿಸಿ ಎಂದು ಕಾಮೆಂಟ್ ಮಾಡಿದ್ದಾರೆ, ಮತ್ತೆ ಕೆಲವರು ಶಿಕ್ಷಕರ ದಿನದಂದು ಶಿಕ್ಷಕರು ಥಳಿಸುವಂತಿಲ್ಲ ಎಂದು ಶಿಕ್ಷಕರ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಜೀವನದಲ್ಲಿ ಗುರಿ ಹಾಗೂ ಗುರು ತುಂಬಾ ಮುಖ್ಯ, ಬಾಲ್ಯದಲ್ಲಿ ಮಕ್ಕಳ ತಪ್ಪನ್ನು ತಿದ್ದುತ್ತಾ ಸರಿ ದಾರಿಯಲ್ಲಿ ನಡೆಸಿ ಗುರಿ ಮುಟ್ಟಿಸುವ ಶಿಕ್ಷಕರನ್ನು ಎಂದೂ ಮರೆಯಲಾಗದು. ಮಾಜಿ ರಾಷ್ಟ್ರಪತಿ ದಿವಂಗತ ಸರ್ವಪಲ್ಲಿ ರಾಧಾಕೃಷ್ಣ ಅವರ ಸ್ಮರಣಾರ್ಥ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಇಂದು ಬಹುತೇಕ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಮಕ್ಕಳು ಸ್ಪರ್ಧೆಗಳನ್ನು ಆಯೋಜಿಸಿ ತಮ್ಮ ಗುರುಗಳಿಗೆ ಮನೋರಂಜನೆ ನೀಡುತ್ತಾರೆ.
ಬದುಕಿನ ದಾರಿ ತೋರುವ ಗುರುವೆಂಬ ದೀಪಸ್ತಂಭ: ಶಿಕ್ಷಕರ ದಿನದ ಇತಿಹಾಸ, ಮಹತ್ವ ಗೊತ್ತಾ?