Asianet Suvarna News Asianet Suvarna News

ಬದುಕಿನ ದಾರಿ ತೋರುವ ಗುರುವೆಂಬ ದೀಪಸ್ತಂಭ: ಶಿಕ್ಷಕರ ದಿನದ ಇತಿಹಾಸ, ಮಹತ್ವ ಗೊತ್ತಾ?

ಶಿಕ್ಷಕರ ದಿನಾಚರಣೆ ಕೇವಲ ಒಂದು ದಿನದ ಸಾಂಕೇತಿಕ ಆಚರಣೆಯಾಗಬಾರದು. ಶಿಕ್ಷಣದ ನಿಜವಾದ ಮೌಲ್ಯಗಳನ್ನು ಅಳವಡಿಸಿಕೊಂಡು ಗುರು ಶಿಷ್ಯರ ಸಂಬಂಧವನ್ನು ಪುನರ್‌ ಪ್ರತಿಷ್ಠಾಪಿಸಬೇಕಾದ ಅನಿವಾರ್ಯತೆ ಇದೆ. ಹಾಗಾದರೆ ಮಾತ್ರ ಶಿಕ್ಷಕರ ದಿನಾಚರಣೆಯು ಹೆಚ್ಚು ಅರ್ಥಪೂರ್ಣವಾದೀತು.
 

teachers day 2023 know the history significance and celebrations of teachers day gvd
Author
First Published Sep 5, 2023, 2:00 AM IST

ಡಾ.ಮುರಲೀ ಮೋಹನ ಚೂಂತಾರು

ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದಿದೆ. ಶಾಸ್ತ್ರಕ್ಕೆಂಬಂತೆ ಮತ್ತದೇ ಆಚರಣೆಗಳು, ಶಿಷ್ಟಾಚಾರಕ್ಕಾಗಿ ಶಿಕ್ಷಕರನ್ನು ಹಾಡಿ ಹೊಗಳುವುದು, ಸನ್ಮಾನ ಮಾಡುವುದು... ಇವೆಲ್ಲಾ ಆಧುನಿಕ ಶಿಕ್ಷಣ ವ್ಯವಸ್ಥೆಯ ವ್ಯಾಪಾರೀಕರಣಗೊಂಡ ವಿಭಿನ್ನ ಮುಖಗಳು ಎಂದರೂ ತಪ್ಪಲ್ಲ. ಈಗಿನ ಶಿಕ್ಷಣ ವ್ಯವಸ್ಥೆ ಬಹಳ ಭಿನ್ನವಾಗಿದೆ. ಶಿಕ್ಷಣ ಬಹುದೊಡ್ಡ ವ್ಯಾಪಾರವಾಗಿ ಮಾರ್ಪಟ್ಟಿದೆ. ಇವತ್ತು ಶಿಕ್ಷಣ ಸಂಸ್ಥೆ ನಡೆಸುವವರು ಉದ್ಯಮಿಗಳು. ಹಿಂದಿನ ಕಾಲದಲ್ಲಿ ಇದ್ದಂತಹ ಶಿಕ್ಷಣದ ಪಾವಿತ್ರ್ಯತೆ, ಶಿಕ್ಷಕರ ಮೇಲಿನ ಭಯ, ಭಕ್ತಿ, ಗೌರವ ಇವೆಲ್ಲವೂ ಮಾಯವಾಗಿವೆ. ಎಲ್ಲವೂ ನಾಟಕೀಯವಾಗಿ ಯಾಂತ್ರಿಕವಾಗಿ ನಡೆಯುತ್ತಿದೆ. ಗುರು ಶಿಷ್ಯರ ಸಂಬಂಧ ‘ಮೌಲ್ಯಾಧಾರಿತವಾಗಿ’ ಉಳಿಯದೆ ‘ಮೌಲ್ಯ’ ಆಧಾರಿತವಾಗಿ ಬದಲಾಗಿರುವುದು ವಿಪರ್ಯಾಸ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಆಗಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.

ಶಿಕ್ಷಕರ ದಿನಾಚರಣೆ ಹಿನ್ನೆಲೆ: ನಮ್ಮ ದೇಶ ಕಂಡ ಅತ್ಯಂತ ಸಜ್ಜನ ಮತ್ತು ಸಂಭಾವಿತ ಶಿಕ್ಷಕರೂ ಮತ್ತು ನಮ್ಮ ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಸರ್ವೇಪಳ್ಳಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಭಾರತದಾದ್ಯಂತ 1962ರಿಂದ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನ ಎಂದು ಆಚರಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಆಷಾಢ ಮಾಸದ ಹುಣ್ಣಿಮೆಯಂದು ಗುರುಪೂರ್ಣಿಮೆಯ ದಿನ ಗುರುಗಳ ದಿನ ಶಿಕ್ಷಕರಿಗೆ ಗೌರವಾರ್ಪಣೆ ಮಾಡುತ್ತಾರೆ.

ಮಕ್ಕಳನ್ನು ಮುದ್ದು ಮಾಡದೇ ಇರ್ಬೇಡಿ, ಆದರೆ, ಸಂಸ್ಕಾರ ಕಲಿಸೋದ ಮರೀಬೇಡಿ!

ಈ ದಿನ ಎಲ್ಲರೂ ತಮ್ನನ್ನು ತಿದ್ದಿ ತೀಡಿ, ಜೀವನದ ದಾರಿಯನ್ನು ತೋರಿಸಿದ ಗುರುಗಳನ್ನು ಸ್ಮರಿಸುತ್ತಾರೆ. ಒಬ್ಬ ಬಾಲಕನ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಗುರುಗಳು ದೀಪಸ್ತಂಭಗಳಿದ್ದಂತೆ. ತಮ್ಮ ಶಿಷ್ಯರಿಗೆ ಬೆಳಕು ನೀಡಿ ದಾರಿ ತೋರಿ, ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಮಾರ್ಗದರ್ಶಕರಾಗಿ ಇರುತ್ತಾರೆ. ಹೀಗೆ ಒಂದು ಸುಂದರ, ಆರೋಗ್ಯವಂತ ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಈ ಕಾರಣದಿಂದಲೇ ನೆಲ್ಸನ್‌ ಮಂಡೇಲಾ ಅವರು ‘ಶಿಕ್ಷಣ ಬಹಳ ಶಕ್ತಿಶಾಲಿ ಆಯುಧವಾಗಿದ್ದು, ಇಡೀ ಜಗತ್ತನ್ನೇ ಬದಲಾಯಿಸುವ ಶಕ್ತಿ ಅದಕ್ಕಿದೆ. 

ಆ ಶಕ್ತಿಯನ್ನು ನಿಸ್ವಾರ್ಥದಿಂದ ವಿದ್ಯಾರ್ಥಿಗಳಿಗೆ ಧಾರೆ ಎರೆಯುವವನೇ ನಿಜವಾದ ಶಿಕ್ಷಕ’ ಎಂದಿದ್ದರು. ಶಿಕ್ಷಕರ ದಿನ ಎನ್ನುವುದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಮಜಲುಗಳನ್ನು ಸಿಂಹಾವಲೋಕನ ಮಾಡಿಕೊಂಡು ತಮ್ಮ ತಪ್ಪು ಒಪ್ಪುಗಳನ್ನು ವಿಮರ್ಶಿಸಿ ಮಗದೊಮ್ಮೆ ತಮ್ಮನ್ನು ತಮ್ಮ ವೃತ್ತಿಗೆ ಪುನರ್‌ ಸಮರ್ಪಿಸಿಕೊಳ್ಳುವ ದಿನ ಎಂದರೂ ತಪ್ಪಲ್ಲ. ಒಬ್ಬ ವ್ಯಕ್ತಿ ಪ್ರಾಥಮಿಕ ಶಾಲೆಯಿಂದ ಪದವೀಧರನಾಗುವವರೆಗೆ ನೂರಾರು ಶಿಕ್ಷಕರಿಂದ ಪಾಠ ಕಲಿತಿರುತ್ತಾನೆ. ಅವರಲ್ಲಿ ಕನಿಷ್ಠ ಹತ್ತು ಮಂದಿ ಶಿಕ್ಷಕರನ್ನಾದರೂ ಸ್ಮರಿಸಲಾಗದಿದ್ದರೆ ಅದು ದೌರ್ಭಾಗ್ಯವೇ ಸರಿ.

ಎತ್ತ ಸಾಗುತ್ತಿದೆ ನಮ್ಮ ಶಿಕ್ಷಣ ವ್ಯವಸ್ಥೆ?: ಎಲ್ಲವೂ ವ್ಯಾಪಾರೀಕರಣವಾದಂತೆ ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣಗೊಂಡಿದೆ. ಶಿಕ್ಷಣ ಕ್ಷೇತ್ರ ಬಹುದೊಡ್ಡ ಉದ್ಯಮವಾಗಿ, ಆತಂಕಕಾರಿಯಾಗಿ ಬೆಳೆಯುತ್ತಿದೆ. ಹಿಂದೆ ಶಿಕ್ಷಣ ಒಂದು ಪವಿತ್ರ ಮಾಧ್ಯಮವಾಗಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಎಲ…ಕೆಜಿಗೆ ಸೇರಲು ಲಕ್ಷಗಟ್ಟಲೆ ಹಣ ನೀಡಬೇಕು. ಸರ್ಕಾರಿ ಶಾಲೆಗಳು ಯಾರಿಗೂ ಬೇಡವಾಗಿದೆ. ಪ್ರತಿಷ್ಠಿತ ಸ್ಕೂಲ…ಗಳಲ್ಲಿ ದುಬಾರಿ ಶುಲ್ಕ ತೆತ್ತು ಮಕ್ಕಳನ್ನು ಸೇರಿಸುವುದು ಹೆತ್ತವರಿಗೆ ಪ್ರತಿಷ್ಠೆಯಾಗಿದೆ. ಈಗಿನ ಶಾಲೆಗಳಲ್ಲಿ ಕಲಿತದ್ದಕ್ಕಿಂತ ಕಳೆದುಕೊಂಡದ್ದೇ ಜಾಸ್ತಿ. ಕಲಿಕೆಯನ್ನು ಸಂಭ್ರಮಿಸುವ ದಿನಗಳು ಈಗ ಇಲ್ಲ. 

ನಾವೀಗ ಫಲಿತಾಂಶವನ್ನು ಸಂಭ್ರಮಿಸಿ ರಾರ‍ಯಂಕ್‌ಗಳನ್ನು ವೈಭವೀಕರಿಸಿ ಶಿಕ್ಷಣದ ಮೂಲ ಉದ್ದೇಶವನ್ನು ಮರೆತಿದ್ದೇವೆ. ಯಾವಾಗ ಶಿಕ್ಷಣ ಉದ್ಯಮವಾಗಿ ಬದಲಾಯಿತೋ ಆಗಲೇ ವಿದ್ಯಾರ್ಥಿಗಳು ಆ ವ್ಯಾಪಾರ ವ್ಯವಸ್ಥೆಯ ಗ್ರಾಹಕರಾಗಿ ಬದಲಾಗಿಬಿಟ್ಟರು. ಎಲ್ಲಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ರಾರ‍ಯಂಕ್‌ ಪಡೆಯುವ ವಿದ್ಯಾರ್ಥಿಗಳನ್ನು ಸೃಷ್ಟಿಮಾಡುವ ಕಾರ್ಖಾನೆಗಳಾಗಿ ಮಾರ್ಪಟ್ಟವು. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಮೂಲ ಉದ್ದೇಶವನ್ನು ಮರೆತು ಬರೀ ರಾರ‍ಯಂಕ್‌ ಪಡೆಯುವ ಕಚ್ಚಾ ಸರಕಾಗಿ ಮಾರ್ಪಟ್ಟಿರುವುದು ಆಘಾತಕಾರಿ ವಿಚಾರ. ಇನ್ನಾದರೂ ಹೆತ್ತವರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕು. 

ರಾರ‍ಯಂಕ್‌ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ನಿಷೇಧಿಸಬೇಕು. ಒಂದು ಶಿಕ್ಷಣ ಸಂಸ್ಥೆಯ ಸಾಮರ್ಥ್ಯವನ್ನು ಅದು ಎಷ್ಟುಪ್ರಜ್ಞಾವಂತ ನಾಗರಿಕರನ್ನು ಸ್ಪಷ್ಟಿಸಿದೆ ಎಂಬ ಮಾನದಂಡದಿಂದ ಅಳೆಯುವ ವ್ಯವಸ್ಥೆಗೆ ತೆರೆದುಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಒರೆಗೆ ಹಚ್ಚಿ ಆತನ ನೈಜ ಸಾಮರ್ಥ್ಯವನ್ನು ತೋರ್ಪಡಿಸುವ ವ್ಯವಸ್ಥೆಗೆ ನಾಂದಿ ಹಾಡಬೇಕು. ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಹೆಚ್ಚು ಗಮನ ನೀಡಬೇಕು. ಅದು ಬಿಟ್ಟು ಬರೀ ರಾರ‍ಯಂಕ್‌ ಬಗ್ಗೆ ತಲೆಕೆಡಿಸಿಕೊಂಡು ವಿದ್ಯಾರ್ಥಿಯ ನೈಜ ಸಾಮರ್ಥ್ಯವನ್ನು ಕಡೆಗಣಿಸಿದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಅಂತಹ ರಾರ‍ಯಂಕ್‌ ಪಡೆದ ವಿದ್ಯಾರ್ಥಿಗಳೇ ಮುಂದೆ ಜೀವನದ ಪರೀಕ್ಷೆಯಲ್ಲಿ ಹೀನಾಯವಾಗಿ ಸೋತು ಜೀವಕ್ಕೆ ಹೆಚ್ಚುಕಮ್ಮಿ ಮಾಡಿಕೊಳ್ಳಬಹುದು.

ನಮ್ಮಲ್ಲೀಗ ಉನ್ನತ ಶಿಕ್ಷಣದ ವ್ಯವಸ್ಥೆಯೂ ಹದಗೆಟ್ಟಿದೆ. ಇಲ್ಲಿ ಕ್ಯಾಪಿಟೇಷನ್‌ ಹಾವಳಿ ಮುಗಿಲು ಮುಟ್ಟಿದೆ. ಅರ್ಹರಿಗೆ, ಪ್ರತಿಭಾವಂತರಿಗೆ ಅವಕಾಶವಿಲ್ಲ. ದುಡ್ಡಿದ್ದವನಿಗೆ ಅರ್ಹತೆ ಇಲ್ಲದಿದ್ದರೂ ಅವಕಾಶಗಳು ಸದಾ ತೆರೆದಿರುತ್ತವೆ. ನಾಯಿ ಕೊಡೆಗಳಂತೆ ಪರಿಗಣಿತ ವಿಶ್ವವಿದ್ಯಾಲಯಗಳು ಹುಟ್ಟಿಕೊಂಡಿವೆ. ಅವು ಮಾಡಿದ್ದೇ ಶಿಕ್ಷಣದ ವ್ಯವಸ್ಥೆ. ಅವರೇ ಪರೀಕ್ಷೆ ಮಾಡಿ ಅವರೇ ಫಲಿತಾಂಶ ನೀಡಿ ಬೆನ್ನುತಟ್ಟಿಕೊಳ್ಳುವ ವ್ಯವಸ್ಥೆ. ಅಲ್ಲಿ ಅತಿಯಾದ ವಿದ್ಯಾರ್ಥಿಸ್ನೇಹಿ ವಾತಾವರಣ. ಅಲ್ಲಿ ಶಿಕ್ಷಕರಿಗೆ ಸ್ವಾತಂತ್ರ್ಯವಿಲ್ಲ. ವಿದ್ಯಾರ್ಥಿಗಳನ್ನು ಬಯ್ಯುವಂತಿಲ್ಲ. ಯಾವುದೇ ವಿದ್ಯಾರ್ಥಿಯನ್ನು ಶಿಕ್ಷಿಸಿದರೆ ಆ ಶಿಕ್ಷಕನ ಉದ್ಯೋಗಕ್ಕೆ ಕುತ್ತು ಬರುತ್ತದೆ. ಯಾಕೆಂದರೆ ಆ ವಿದ್ಯಾರ್ಥಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ದುಡ್ಡು ಸುರಿದು ದುಬಾರಿ ಸೀಟು ಗಿಟ್ಟಿಸಿರುತ್ತಾನೆ. ಅವರಿಂದಾಗಿಯೇ ಆ ವಿಶ್ವವಿದ್ಯಾಲಯ ನಡೆಯುತ್ತಿರುತ್ತದೆ. ಅಲ್ಲಿ ಶಿಕ್ಷಣ ಸಂಸ್ಥೆಯ ಒಡೆಯರು ಹೇಳಿದಂತೆ ಎಲ್ಲವೂ ತೆರೆಮರೆಯಲ್ಲಿ ನಡೆಯುತ್ತದೆ. ಇಂತಹ ವ್ಯವಸ್ಥೆಯಲ್ಲಿ ಶಿಕ್ಷಣ ನೀಡುವುದು ಶಿಕ್ಷಕರಿಗೆ ಶಿಕ್ಷೆಯೇ ಸರಿ. ಇಂತಹ ಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ಪುನರ್‌ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ.

ಗುರುವೆಂದರೆ ಶಿಕ್ಷಕರು ಮಾತ್ರವಲ್ಲ: ಗುರು ಎಂದರೆ ನಮಗೆ ಕಲಿಸಿರಲೇಬೇಕು ಎಂದು ಅರ್ಥವಲ್ಲ. ಯಾರು ನಮ್ಮ ನಡವಳಿಕೆ, ಆಚಾರ-ವಿಚಾರ, ಸಂಸ್ಕಾರಗಳಿಂದ ಇತರರಿಗೆ ಮಾರ್ಗದರ್ಶಕರಾಗಿ ಆದರ್ಶಪ್ರಾಯರಾಗಿ ಬದುಕುತ್ತಾರೋ ಅವರೇ ನಮ್ಮ ನಿಜವಾದ ಗುರು. ‘ಗು’ ಎಂದರೆ ಅಜ್ಞಾನ ‘ರು’ ಎಂದರೆ ಹೋಗಲಾಡಿಸುವವವನು. ಯಾರು ನಮ್ಮ ಮನಸ್ಸಿನ ಅಂಧಕಾರವನ್ನು ಮತ್ತು ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ಧಾರೆ ಎರೆಯುತ್ತಾರೋ ಅವರೆಲ್ಲರೂ ಗುರು. ವಾಸ್ತವವಾಗಿ ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ, ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯದು.

ಬದಲಾಗಬೇಕಿರುವುದು ಏನು?: ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ವ್ಯಾವಹಾರಿಕ ಜಗತ್ತಿನಲ್ಲಿ ಆಧುನಿಕತೆಯ ನೆಪದಲ್ಲಿ ತತ್ವ ಮೌಲ್ಯಗಳು ಮತ್ತು ಸಂಸ್ಕಾರಗಳು ವೇಗವಾಗಿ ಬದಲಾಗುತ್ತಿದೆ. ಜೀವನ ಶೈಲಿಯೂ ಬದಲಾಗುತ್ತದೆ. ಗುರು-ಶಿಷ್ಯರ ಸಂಬಂಧವೂ ಬದಲಾಗುತ್ತಿರುತ್ತದೆ. ಹಿಂದಿನ ಕಾಲದಲ್ಲಿದ್ದ ಗುರುಕುಲ ಪದ್ಧತಿ ನಿರ್ನಾಮವಾಗಿದೆ. ಹಿಂದಿನ ಕಾಲದಲ್ಲಿ ಇದ್ದಂತಹ ಭಯ ಭಕ್ತಿ, ಪ್ರೀತಿ, ಗೌರವಗಳು ಕೇವಲ ಹೊರಜಗತ್ತಿಗೆ ತೋರಿಸುವ ಡಾಂಭಿಕತೆಯ ವಸ್ತುವಾಗಿ ಪರಿವರ್ತನೆಯಾಗಿದೆ. ಈ ನಿಟ್ಟಿನಲ್ಲಿ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಮಾಜ ತಮ್ಮನ್ನು ತಾವು ಪುನರ್ವಿಮರ್ಶಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಶಿಕ್ಷಕರ ದಿನಾಚರಣೆ ಕೇವಲ ಒಂದು ದಿನದ ಸಾಂಕೇತಿಕ ಆಚರಣೆಯಾಗಿ ಉಳಿಯಬಾರದು. ಶಿಕ್ಷಣದ ನಿಜವಾದ ಮೌಲ್ಯಗಳನ್ನು ಅಳವಡಿಸಿಕೊಂಡು ಗುರು ಶಿಷ್ಯರ ಸಂಬಂಧವನ್ನು ಪುನರ್‌ ಪ್ರತಿಷ್ಠಾಪಿಸಬೇಕಾದ ಅನಿವಾರ್ಯತೆ ಇದೆ. ಹಾಗಾದರೆ ಮಾತ್ರ ಶಿಕ್ಷಕರ ದಿನಾಚರಣೆಯು ಹೆಚ್ಚು ಅರ್ಥಪೂರ್ಣವಾದೀತು.

ಪ್ರೀತಿಯೇ ತೋರದ ಅಪ್ಪನಿಗೆ ಮಗಳು ಮನೆ ಕಟ್ಟಿಸಿಕೊಟ್ಟಾಗ?

ವಿದ್ಯಾರ್ಥಿಗಳ ಒಳಿತಿಗಾಗಿ ಚಿಂತಿಸುವ, ಸರ್ವತ್ಯಾಗ ಮಾಡುವ ಶಿಕ್ಷಕರು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಅಂತಹ ಗುರುವರೇಣ್ಯರಿಗೆ ಪರಮ ಪೂಜ್ಯ ಗುರುಗಳಿಗೆ ಮತ್ತು ಗಂಧದ ಕೊರಡಿನಂತಹ ನಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ತಮ್ಮ ಜೀವನವನ್ನು ತೇಯುವ ಎಲ್ಲ ಗುರು ಪರಂಪರೆಗೆ ನಮೋ ನಮಃ. ‘ಹಿಂದೆ ಗುರು ಇರಲಿ, ಮುಂದೆ ಗುರಿ ಇರಲಿ’ ಎಂಬ ಕುವೆಂಪು ಉಕ್ತಿಯಂತೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಂಡಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಆಗಬಹುದು. ಜಾತಿ, ಧರ್ಮ, ಕುಲಗೋತ್ರ, ಮತಪಂಥ, ಮೇಲುಕೀಳು, ಹೆಣ್ಣು-ಗಂಡು ಹೀಗೆ ಎಲ್ಲವನ್ನು ಮೀರಿದ್ದು ಗುರುಪಂಥ ಹಾಗೂ ಗುರುಪರಂಪರೆ. ಅಂತಹ ಗುರುಪರಂಪರೆಗೆ ಸೇರಿದ ಎಲ್ಲಾ ಗುರುವರೇಣ್ಯರಿಗೆ ಸಾವಿರ ಪ್ರಣಾಮಗಳು.

Follow Us:
Download App:
  • android
  • ios