Asianet Suvarna News Asianet Suvarna News

ಮೇಷ್ಟ್ರು ಸಿಗದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ: ಶಿಕ್ಷಕರ ದಿನಕ್ಕೆ ಸಿದ್ದರಾಮಯ್ಯ ವಿಶೇಷ ಲೇಖನ

ಇತ್ತೀಚೆಗೆ ಇನ್ನೂ ಒಂದು ಬೆಳವಣಿಗೆಯನ್ನು ಕಾಣುತ್ತಿದ್ದೇನೆ. ಪಠ್ಯಪುಸ್ತಗಳ ರಚನೆಯೇ ವಿವಾದವನ್ನು ಸೃಷ್ಟಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಶಿಕ್ಷಣ ರಾಜಕಾರಣಿಗಳ ಕೈಯಲ್ಲಿನ ಆಯುಧವಾಗಬಾರದು. ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕೀಯದಿಂದ ದೂರ ಇಡಬೇಕೆಂದು ನಾನು ಬಯಸುತ್ತೇನೆ.

Special Article By CM Siddaramaiah Over Teachers Day 2023 gvd
Author
First Published Sep 5, 2023, 4:45 AM IST

ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ನಾನು ಸರ್ವರನ್ನೂ ಗೌರವಿಸುತ್ತೇನೆ. ಅದರಲ್ಲಿ ನಾಲ್ಕು ವರ್ಗದವರನ್ನು ಅತಿ ಹೆಚ್ಚು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಹೌದು! ರೈತರು, ಸೈನಿಕರು, ಶಿಕ್ಷಕರು ಮತ್ತು ವೈದ್ಯರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವ ಇದೆ. ಈ ನಾಲ್ಕು ವರ್ಗಗಳು ಒಂದು ಆದರ್ಶ ಸಮಾಜದ ನಾಲ್ಕು ಆಧಾರ ಸ್ತಂಭಗಳು. ಸಮಾಜದ ಅಭಿವೃದ್ಧಿ ಶಿಕ್ಷಣದ ಜೊತೆಗೆ ಬೆಸೆದುಕೊಂಡಿದೆ. ನಮ್ಮ ಸಮಾಜದಲ್ಲಿ ತಂದೆ ಹಾಗೂ ತಾಯಿಯ ನಂತರದ ಸ್ಥಾನ ಗುರುವಿಗೇ ಮೀಸಲು. ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮುಖ್ಯ. ಒಬ್ಬ ಶಿಕ್ಷಕ ತನ್ನ ಮೂರು ದಶಕಗಳ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಾನೆ. ಆದರೆ, ತಾನು ಪಾಠ ಮಾಡಿದ ಎಲ್ಲಾ ಮಕ್ಕಳನ್ನೂ ಆತ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. 

ಆದರೆ ಯಾವುದೇ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ, ತನಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ. ಮರೆಯಬಾರದೂ ಕೂಡಾ. ನನ್ನ ಬದುಕಿನಲ್ಲಿ ರಾಜಪ್ಪ ಮೇಷ್ಟು್ರ ಬರದೆ ಹೋಗಿದ್ದರೆ ಬಹುಶಃ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ನನ್ನ ಮೊದಲ ಶಿಕ್ಷಕ ನಂಜೇಗೌಡರು. ಅವರು ನನಗೆ ವೀರಮಕ್ಕಳ ಕುಣಿತ ಕಲಿಸುತ್ತಿದ್ದರು. ಆಗ ನಾನು ಮರಳಲ್ಲಿ ಅಕ್ಷರಾಭ್ಯಾಸ ಮಾಡುತ್ತಿದ್ದೆ. ಲೆಕ್ಕ, ಮಗ್ಗಿ ಎಲ್ಲವನ್ನೂ ಕಲಿಯುತ್ತಿದ್ದೆ. ಒಂದು ದಿನ ನಮ್ಮೂರಿನ ರಾಜಪ್ಪ ಮೇಷ್ಟ್ರ ಕಣ್ಣಿಗೆ ನಾನು ಬಿದ್ದೆ. ಅವರು ನನ್ನನ್ನು ಶಾಲೆಗೆ ಕರೆದುಕೊಂಡು ಹೋದರು, ಅಲ್ಲಿ ಹಲವಾರು ವಿಷಯಗಳ ಬಗ್ಗೆ ಉಕ್ತಲೇಖನ ಕೊಟ್ಟರು. ನಾನು ಸರಿಯಾಗಿ ಉತ್ತರಿಸಿ ಪಾಸಾದೆ. ಅವರು ಖುಷಿಪಟ್ಟು ನೇರವಾಗಿ ನನ್ನನ್ನು ಐದನೇ ತರಗತಿಗೆ ಸೇರಿಸಿದರು. ಅವರಿಂದಾಗಿ ನಾನು ಈಗಿನ ಸ್ಥಾನದಲ್ಲಿದ್ದೇನೆ, ಆ ಪುಣ್ಯಾತ್ಮನನ್ನು ನಾನು ಸದಾ ಗೌರವದಿಂದ ಸ್ಮರಿಸುತ್ತೇನೆ.

ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಗುರುವಿಗೆ ಅಸೂಯೆ ಎಂಬುದಿಲ್ಲ: ಕೆಲವು ಮಕ್ಕಳು ತಮ್ಮ ಪ್ರತಿಭೆಯಿಂದ, ಮತ್ತೆ ಕೆಲವು ಮಕ್ಕಳು ತಮ್ಮ ತುಂಟತನದಿಂದ ಮೇಷ್ಟ್ರ ಮನದಲ್ಲಿ ಸ್ಥಾನ ಗಿಟ್ಟಿಸುತ್ತಾರೆ. ತನ್ನ ವಿದ್ಯಾರ್ಥಿ ಮಂತ್ರಿಯಾಗಿದ್ದಾನೆ. ತನ್ನ ವಿದ್ಯಾರ್ಥಿನಿ ಚಿತ್ರನಟಿಯಾಗಿದ್ದಾಳೆ. ತನ್ನ ವಿದ್ಯಾರ್ಥಿ ಉನ್ನತ ಅಧಿಕಾರಿಯಾಗಿದ್ದಾನೆ. ತನ್ನ ವಿದ್ಯಾರ್ಥಿನಿ ಅತ್ಯುತ್ತಮ ಡಾಕ್ಟರ್‌ ಆಗಿದ್ದಾಳೆ ಎಂಬ ಸಂಗತಿ ತಿಳಿದರೆ ಸಾಕು, ಶಿಕ್ಷಕರು ಹೆಮ್ಮೆಪಡುತ್ತಾರೆ. ತಮಗಿಂತಲೂ ಎತ್ತರಕ್ಕೆ ಬೆಳೆದವರ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಸಹಜವಾಗಿಯೇ ಅಸೂಯೆ ಪಡುತ್ತಾರೆ. ಆದರೆ, ಶಿಕ್ಷಕನಾದವನು ಮಾತ್ರ ಅಸೂಯೆ ಪಡುವುದಿಲ್ಲ. ತಾನು ಅಕ್ಷರ ಕಲಿಸಿದ ವ್ಯಕ್ತಿ ಇಷ್ಟುಎತ್ತರಕ್ಕೆ ಬೆಳೆದನಲ್ಲಾ ಎಂದು ಅಭಿಮಾನ ಪಡುತ್ತಾನೆ, ಸಂಭ್ರಮಿಸುತ್ತಾನೆ. ಈ ಒಂದು ಕಾರಣಕ್ಕಾಗಿಯೇ, ಸಮಾಜದಲ್ಲಿ ಪೂಜ್ಯ ಸ್ಥಾನವನ್ನು ಶಿಕ್ಷಕ ಅಲಂಕರಿಸುತ್ತಾನೆ.

ಕಲಿತ ಶಾಲೆಗೆ ಸಹಾಯ ಮಾಡಿ: ನಿಷ್ಕಲ್ಮಶ ಮನಸ್ಸಿನ ಶಿಕ್ಷಕ ವೃಂದವನ್ನು ಕಂಡಾಗ ನಾನೂ ಒಂದು ಕ್ಷಣ ಮಗುವಾಗಿ ಬಿಡುತ್ತೇನೆ. ನನ್ನ ಮೇಷ್ಟ್ರನ್ನೂ ಸ್ಮರಿಸಿಕೊಳ್ಳುತ್ತೇನೆ. ರಾಷ್ಟ್ರಪತಿಯೇ ಆಗಿರಲಿ, ಪ್ರಧಾನ ಮಂತ್ರಿಯೇ ಆಗಿರಲಿ, ರಾಜ್ಯಪಾಲರೇ ಆಗಿರಲಿ, ಮುಖ್ಯಮಂತ್ರಿಯೇ ಆಗಿರಲಿ, ಆ ಸ್ಥಾನ ಅಲಂಕರಿಸಿದಾಗ ತಮಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು. ತಾವು ಕಲಿತ ಶಾಲೆಗೆ ಒಮ್ಮೆ ಭೇಟಿ ನೀಡಬೇಕು. ಕೈಲಾದ ಸಹಾಯ ಮಾಡಬೇಕು. ನಮ್ಮ ಮೈಸೂರು ವಿಶ್ವವಿದ್ಯಾಲಯದಲ್ಲಿ ಸುಮಾರು ಒಂದು ನೂರು ವರ್ಷಗಳ ಹಿಂದೆ 1918ರಲ್ಲಿ ಆಯ್ಕೆಯಾಗಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ತಮ್ಮ ಜನ್ಮದಿನವಾದ ಸೆಪ್ಟೆಂಬರ್‌ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಕರೆ ಕೊಟ್ಟಿದ್ದರು. 

ನನಗೆ ಈ ಸಂದರ್ಭದಲ್ಲಿ ಇನ್ನೊಬ್ಬ ಶಿಕ್ಷಕಿ ತಾಯಿಯ ನೆನಪಾಗುತ್ತದೆ. ಅವರು ಪ್ರಸಿದ್ಧ ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರ ಪತ್ನಿ ಸಾವಿತ್ರಿ ಬಾಯಿ ಫುಲೆ. 1848ರಲ್ಲಿಯೇ ಪುಣೆಯಲ್ಲಿ ಬಾಲಕಿಯರ ಶಾಲೆ ಸ್ಥಾಪಿಸಿದ್ದ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಅವರು ಇದೇ ಕಾರಣಕ್ಕೆ ಸಂಪ್ರದಾಯವಾದಿಗಳಿಂದ ಬಗೆಬಗೆಯ ತೊಂದರೆಗಳನ್ನು ಅನುಭವಿಸಬೇಕಾಯಿತು. ದಾರಿಯಲ್ಲಿ ಹೋಗುವಾಗ ಅವರಿಗೆ ಕಲ್ಲು ಮತ್ತು ಸಗಣಿ ಬಿಸಾಡಿ ಅವಮಾನಿಸುತ್ತಿದ್ದರಂತೆ. ಮಹಿಳಾ ಶಿಕ್ಷಣದ ಅಭಿಯಾನದಲ್ಲಿ ಸಾವಿತ್ರಿ ಬಾಯಿ ಫುಲೆ ಅವರದ್ದು ಎಂದೂ ಅಳಿಯದ ಅಮರ ಹೆಸರು.

ಶಿಕ್ಷಕ ಹುದ್ದೆ ವೃತ್ತಿಯಲ್ಲ, ಸೇವೆ: ಈ ರೀತಿ ಸಮಾಜ ಹೆಮ್ಮೆಪಡುವಂತಹ ಶಿಕ್ಷಕ-ಶಿಕ್ಷಕಿಯರ ದೊಡ್ಡ ಪರಂಪರೆಯೇ ಇದೆ. ಶಿಕ್ಷಕರ ಹುದ್ದೆ ಕೇವಲ ವೃತ್ತಿ ಅಲ್ಲ, ಅದೊಂದು ಸೇವೆ. ಇದು ಸೇವೆ ಎನ್ನುವ ಕಾರಣಕ್ಕಾಗಿಯೇ ಸಮಾಜ ಯಾರಿಗೂ ನೀಡದ ಗೌರವವನ್ನು ಶಿಕ್ಷಕರಿಗೆ ನೀಡುತ್ತದೆ. ಆ ಗೌರವವನ್ನು ನಮ್ಮ ಶಿಕ್ಷಕರು ಉಳಿಸಿಕೊಳ್ಳಬೇಕು. ಇದೇ ವೇಳೆ ಕರ್ತವ್ಯಭ್ರಷ್ಟಶಿಕ್ಷಕರೂ ನಮ್ಮ ನಡುವೆ ಇದ್ದಾರೆ. ಶಿಕ್ಷಕರಿಗೆ ಬುದ್ಧಿ ಹೇಳುವಷ್ಟುದೊಡ್ಡವನು ನಾನಲ್ಲ. ಆದರೆ, ಸಾಂದರ್ಭಿಕವಾಗಿ ಎರಡು ಅಂಶವನ್ನು ಪ್ರಸ್ತಾಪಿಸುತ್ತೇನೆ. ನಾನು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತರಗತಿಗಳ ಪರೀಕ್ಷಾ ಫಲಿತಾಂಶವನ್ನು ಗಮನಿಸುತ್ತಿರುತ್ತೇನೆ. 

ಈ ಬಾರಿ ಕೂಡ 11 ಅನುದಾನಿತ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೂನ್ಯವಾಗಿದೆ. 78 ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಪಿಯುಸಿ ತರಗತಿಗಳ ಫಲಿತಾಂಶವೂ ಶೂನ್ಯವಾಗಿದೆ. ಈ ಎಲ್ಲಾ ಶಾಲೆಗಳು ಹಾಗೂ ಈ ಎಲ್ಲಾ ಕಾಲೇಜುಗಳಲ್ಲಿ ದಾಖಲಾದ ಎಲ್ಲಾ ಮಕ್ಕಳೂ ದಡ್ಡರೇ? ಅಂತೆಯೇ, ಈ ಎಲ್ಲಾ ಶಾಲಾ- ಕಾಲೇಜುಗಳಲ್ಲಿರುವ ಎಲ್ಲಾ ಶಿಕ್ಷಕರೂ ಅಪ್ರಯೋಜಕರೇ? ಇದಕ್ಕೆ ಯಾರನ್ನು ದೂಷಿಸುವುದು? ಇದೇ ರೀತಿ ಪ್ರತಿ ಬಾರಿ ಫಲಿತಾಂಶವನ್ನು ನೋಡಿದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಅತ್ಯಂತ ಹಿಂದಿನ ಸ್ಥಾನದಲ್ಲಿ ಮತ್ತು ಕರಾವಳಿಯ ಜಿಲ್ಲೆಗಳು ಮೊದಲ ಸ್ಥಾನದಲ್ಲಿರುತ್ತವೆ. ಎಲ್ಲ ಶಿಕ್ಷಕರಿಗೆ ಒಂದೇ ರೀತಿಯ ತರಬೇತಿ ನೀಡಿದರೂ ಏಕೆ ಹೀಗೆ?

ತರಗತಿಗಳಲ್ಲಿದೆ ದೇಶದ ಭವಿಷ್ಯ: ಕೊಠಾರಿ ವರದಿ ಎಂದೇ ಹೆಸರಾಗಿರುವ ‘ಭಾರತದ ರಾಷ್ಟ್ರೀಯ ಶಿಕ್ಷಣ ಆಯೋಗ’ದ ವರದಿ ಸಲ್ಲಿಕೆಯಾಗಿ ಕಳೆದ ತಿಂಗಳು 29ಕ್ಕೆ ಸರಿಯಾಗಿ 50 ವರ್ಷಗಳಾದವು. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದವರಾಗಿದ್ದ ದೌಲತ್‌ ಸಿಂಗ್‌ ಕೊಠಾರಿ ಅಹಿಂಸೆ, ಸರ್ವಧರ್ಮ ಸಮಾನತೆಯಲ್ಲಿ ಅಪಾರ ನಂಬಿಕೆಯುಳ್ಳವರಾಗಿದ್ದರು. ಭಾರತದ ಭವಿಷ್ಯ ಶಾಲಾ ತರಗತಿಗಳಲ್ಲಿ ರೂಪಿಸಲ್ಪಡುತ್ತದೆ ಎಂದು ನಾವು ನಂಬಿಕೊಂಡಿದ್ದೇವೆ. ಇದು ಕೇವಲ ನಮ್ಮ ಕಲ್ಪನೆಯ ಮಾತಲ್ಲ, ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಪ್ರಪಂಚದಲ್ಲಿ ಜನರ ಕಲ್ಯಾಣ, ಅಭ್ಯುದಯ ಮತ್ತು ಭದ್ರತೆಯ ಮಟ್ಟವನ್ನು ಶಿಕ್ಷಣ ನಿರ್ಧರಿಸುತ್ತದೆ. 

ನಮ್ಮ ಜನರ ಜೀವನ ಮಟ್ಟವನ್ನು ಎತ್ತರಿಸುವ, ನಮ್ಮ ರಾಷ್ಟ್ರದ ನವನಿರ್ಮಾಣದ ಯಶಸ್ಸು ಶಾಲಾ- ಕಾಲೇಜುಗಳಿಂದ ಗುಣಮಟ್ಟದ ಶಿಕ್ಷಣವನ್ನು ಪಡೆದು ಹೊರಬರುವ ಜನರ ಸಂಖ್ಯೆಯನ್ನು ಅವಲಂಬಿಸಿದೆ ಎಂದಿದ್ದರು ದೌಲತ್‌ ಸಿಂಗ್‌ ಕೊಠಾರಿ. ಕೊಠಾರಿ ಅವರ ಈ ಹೇಳಿಕೆ ಸಾರ್ವಕಾಲಿಕವಾದದ್ದು. ಒಂದು ರಾಷ್ಟ್ರಕ್ಕೆ ಪ್ರಾಕೃತಿಕ ಸಂಪನ್ಮೂಲದೊಂದಿಗೆ ಮಾನವ ಸಂಪನ್ಮೂಲವು ಮುಖ್ಯವಾಗಿರುತ್ತದೆ. ಇಂತಹ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು ನಮ್ಮ ಶಿಕ್ಷಣ ಇಲಾಖೆ. ಇಂತಹ ಶಿಕ್ಷಣವನ್ನು ನೀಡುವ ಗುರುವಿಗೆ ಸಮಾಜದ ಎಲ್ಲಾ ವರ್ಗಗಳೂ ಗೌರವ ನೀಡುತ್ತವೆ.

ರಾಜಕೀಯದಿಂದ ಶಿಕ್ಷಣ ದೂರ ಇರಲಿ: ಇತ್ತೀಚೆಗೆ ಇನ್ನೂ ಒಂದು ಬೆಳವಣಿಗೆಯನ್ನು ಕಾಣುತ್ತಿದ್ದೇನೆ. ಪಠ್ಯಪುಸ್ತಗಳ ರಚನೆಯೇ ವಿವಾದವನ್ನು ಸೃಷ್ಟಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಶಿಕ್ಷಣ ರಾಜಕಾರಣಿಗಳ ಕೈಯಲ್ಲಿನ ಆಯುಧವಾಗಬಾರದು. ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕೀಯದಿಂದ ದೂರ ಇಡಬೇಕೆಂದು ನಾನು ಬಯಸುತ್ತೇನೆ. ನಮ್ಮ ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ಮಕ್ಕಳು ಬಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಶಿಕ್ಷಕರು ಇವರನ್ನು ಹೆಚ್ಚಿನ ಪ್ರೀತಿ ಮತ್ತು ಕಾಳಜಿಯಿಂದ ನೋಡಬೇಕಾಗುತ್ತದೆ. ಇದೇ ಕಾರಣಕ್ಕಾಗಿ ನಮ್ಮ ಸರ್ಕಾರ ಮಕ್ಕಳಿಗೆ ಪ್ರೋತ್ಸಾಹಕ ಯೋಜನೆಗಳಾದ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ಹಾಗೂ ಬೂಟು ಮತ್ತು ಕಾಲು ಚೀಲ ವಿತರಣೆ ನೀಡುತ್ತಿದೆ. ಮಧ್ಯಾಹ್ನದ ಬಿಸಿಯೂಟ, ಕುಡಿಯಲು ಹಾಲು, ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್‌ ಒದಗಿಸುತ್ತಿದೆ. ಕಾಕತಾಳೀಯ ಎಂಬಂತೆ ವಿದ್ಯಾರ್ಥಿಗಳಿಗೆ ಕುಡಿಯಲು ಹಾಲು ನೀಡುವ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮವನ್ನು ನಾವು ಇಂದು ಆಚರಿಸುತ್ತಿದ್ದೇವೆ.

ವರ್ಗಾವಣೆ ದಂಧೆ ಆರೋಪಕ್ಕೆ ಸಿಎಂ ಬ್ರೇಕ್: ಇನ್ನು ಸಿಎಂ ಅನುಮತಿ ಇಲ್ಲದೆ ಟ್ರಾನ್ಸ್​​ಫರ್ ಮಾಡುವಂತಿಲ್ಲ

ಶಿಕ್ಷಕರಿಗೆ ತಲೆಬಾಗಿ ನಮಸ್ಕರಿಸುವೆ: ಹಿಂದಿನ ತಲೆಮಾರಿನ ಶಿಕ್ಷಕರಿಗೆ ಹೋಲಿಸಿದರೆ ಇಂದಿನ ತಲೆಮಾರಿನ ಶಿಕ್ಷಕರಿಗೆ ವೃತ್ತಿಪರತೆ ಮತ್ತು ಬದ್ಧತೆ ಕಡಿಮೆ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಶಿಕ್ಷಕರ ವಿರುದ್ಧ ಬರುವ ಕಳಂಕದ ಪ್ರಕರಣಗಳನ್ನು ಸವಾಲಾಗಿ ತೆಗೆದುಕೊಂಡು, ಶಾಲಾ ಪರಿಸರವನ್ನು ಮಕ್ಕಳ ಸ್ನೇಹಿಯಾಗಿ ಮಾರ್ಪಡಿಸುವ ಅಗತ್ಯ ಶಿಕ್ಷಕರ ಮುಂದಿದೆ. ಸಾರಿಗೆ ಸೌಲಭ್ಯಗಳಿಲ್ಲದ ಕಾಡುಹಳ್ಳಿಗಳು, ನಗರಗಳ ಕೊಳಚೆ ಪ್ರದೇಶಗಳು ಹಾಗೂ ಉತ್ತಮ ಸೌಲಭ್ಯಗಳನ್ನು ಹೊಂದಿದ ಅಸಂಖ್ಯಾತ ಶಾಲೆಗಳಲ್ಲಿ ಅನೇಕ ಇತಿಮಿತಿಗಳ ನಡುವೆ ನಮ್ಮ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಯಾವುದೇ ಪ್ರಶಂಸೆ, ಪ್ರಶಸ್ತಿ, ಪುರಸ್ಕಾರಗಳ ಗೊಡವೆಯಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ಶಿಕ್ಷಕರಿಗೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ. ನಮ್ಮ ಸಂವಿಧಾನದ ಶ್ರೇಷ್ಠ ತತ್ವಗಳಾದ ಸಮಾನತೆ, ಸಹೋದರತೆ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಇವುಗಳನ್ನು ಶಿಕ್ಷಕರು ಮೊದಲು ಅಳವಡಿಸಿಕೊಳ್ಳಬೇಕು. ಅಲ್ಲದೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಲ್ಲಿಯೂ ಸೃಜನಶೀಲತೆ, ಕ್ರಿಯಾಶೀಲತೆಯ ಜೊತೆ ಜೊತೆಗೆ ಮೌಲ್ಯಗಳನ್ನು ಬೆಳೆಸಲು ಶಿಕ್ಷಕರು ಶ್ರಮಿಸಬೇಕು.

Latest Videos
Follow Us:
Download App:
  • android
  • ios