ಶಿಕ್ಷಕ ದಿನಾಚರಣೆಯೆಂದರೆ ಡಾ. ರಾಧಾಕೃಷ್ಣನ್‌ ಅವರ ಭಾವಚಿತ್ರ ಪೂಜಿಸಿ ಶಿಕ್ಷಕರಿಗೆ ಶುಭ ಕೋರಲು ಮಾತ್ರ ಸೀಮಿತವಲ್ಲ, ಅದಕ್ಕೂ ಮೀರಿ ಶಿಕ್ಷಕರ ಆತ್ಮ ಸಂತೃಪ್ತಿಯ ಕೆಲಸ ಮಾಡಬಹುದು ಎಂಬುದಕ್ಕೆ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳ ಕಾರ್ಯಕ್ರಮವೇ ಸಾಕ್ಷಿಯಾಯಿತು

ಮಹಾಲಿಂಗಪುರ (ಸೆ.9) : ಶಿಕ್ಷಕ ದಿನಾಚರಣೆಯೆಂದರೆ ಡಾ. ರಾಧಾಕೃಷ್ಣನ್‌ ಅವರ ಭಾವಚಿತ್ರ ಪೂಜಿಸಿ ಶಿಕ್ಷಕರಿಗೆ ಶುಭ ಕೋರಲು ಮಾತ್ರ ಸೀಮಿತವಲ್ಲ, ಅದಕ್ಕೂ ಮೀರಿ ಶಿಕ್ಷಕರ ಆತ್ಮ ಸಂತೃಪ್ತಿಯ ಕೆಲಸ ಮಾಡಬಹುದು ಎಂಬುದಕ್ಕೆ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳ ಕಾರ್ಯಕ್ರಮವೇ ಸಾಕ್ಷಿಯಾಯಿತು. ಶಿಕ್ಷಕರಿಗೆ ಸರಪ್ರೈಸ್‌ ನೀಡಲೆಂದು ಗೌಪ್ಯವಾಗಿ ತರಗತಿಯ ಕೊಠಡಿಯನ್ನು 3 ದಿನಗಳಿಂದ ಸ್ಚಚ್ಛಗೊಳಿಸಿ ಅಂದವಾಗಿ ಅಲಂಕರಿಸಿ ಕಂಗೊಳಿಸುವಂತೆ ಮಾಡಿ, ಸಾಂಪ್ರದಾಯಿಕ ಮನೆಯ ವರಾಂಡದಂತೆ ಮಾಡಿದ್ದರು. ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಿಸಿದಂತೆ ಒಬ್ಬೊಬ್ಬರಂತೆ ಶಿಕ್ಷಕರನ್ನು ಅದ್ಧೂರಿಯಾಗಿ ಪುಷ್ಪವೃಷ್ಠಿಯೊಂದಿಗೆ ಕೊಠಡಿಗೆ ಬರಮಾಡಿಕೊಂಡು ಅಚ್ಚರಿಯ ಅನುಭವ ನೀಡಿದರು. ವರ್ಗ ಕೊಠಡಿಯನ್ನೇ ಶಿಷ್ಯರ ಮನೆಯಾಗಿ ಪರಿವರ್ತಿಸಿದ್ದರು. ಶಿಷ್ಯರ ಮನೆಗೆ ಅತಿಥಿಯಾಗಿ ಬಂದ ಶಿಕ್ಷಕರಿಗೆ ಗೌರವದ ಗುಲಾಬಿ ಹೂ ನೀಡಿ ಹಾರ್ದಿಕವಾಗಿ ಸ್ವಾಗತಿಸಿದರು.

ಗುರು ಶಿಷ್ಯರು: ಖೋ ಖೋ ಆಟವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎಂದು ಬಹಿರಂಗಪಡಿಸಿದ ತರುಣ್ ಸುಧೀರ್

ವರಾಂಡದ ಸುತ್ತಲೂ ವಿದ್ಯಾರ್ಥಿಗಳು(Students) ಆವರಿಸಿ ನಿಂತು ಶಿಕ್ಷಕರ(Teachers)ನ್ನು ಮಧ್ಯದಲ್ಲಿ ಮಕ್ಕಳಂತೆ ಓಡಾಡಿಸಿ ಆಟ ಆಡಿಸಿದರು. ಲಿಂಬು ಚಮಚ, ಬಿಸ್ಕೇಟ್‌ ತಿನ್ನುವ, ಮ್ಯೂಜಿಕಲ್‌ ಚೇರ್‌, ಗ್ಲಾಸ್‌ ಜೋಡಣೆ ಸೇರಿದಂತೆ ನಾನಾ ಸ್ಪರ್ಧೆ ನಡೆಸಿ, ಶಿಕ್ಷಕರ ಹಾವಭಾವ ಕಂಡು ಕಚಗುಳಿಯಿಂದ ಕುಣಿದು ಕುಪ್ಪಳಿಸಿದರು.

ನಂತರ ನಡುಮನೆಯಲ್ಲಿ ಪದ್ಮಾಸನ ಹಾಕಿ ಕೂಡ್ರಿಸಿ ಬಾಳೆಲೆ ಹರಡಿ ಮನೆಯಿಂದ ತಂದಿದ್ದ ಜವಾರಿ ಮೃಷ್ಠಾನ್ನ ಭೋಜನ ಉಣಬಡಿಸಿದರು. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಗೋವಿನ ಜೋಳದ ರೊಟ್ಟಿ, ಜುನಕದ ವಡೆ, ಬಳ್ಳೊಳ್ಳಿ ಖಾರ, ಮೊಸರು ಹಿಂಡಿ, ಉಸುಳಿ, ಬದನೆಕಾಯಿ ಪಲ್ಯ, ಬೇಳೆ ಬಾಜಿ, ಹಾಲುಗ್ಗಿ, ಸ್ಯಾವಿಗೆ ಪಾಯಸಾ, ಶೇಂಗಾ ಹೋಳಿಗೆ, ಗುಲಾಬ ಜಾಮೂನು, ಜಿಲೇಬಿ, ಮಸಾಲೆ ಅನ್ನ, ಬಿಳಿ ಅನ್ನ ಸಾರು, ಕೋಸಂಬರಿ, ಉಪ್ಪಿನಕಾಯಿ, ಸಂಡಿಗೆ ಸೇರಿದಂತೆ ಒಂದೂವರೆ ಡಜನ್‌ ಪದಾರ್ಥಗಳ ಭರಪೂರ ಊಟದ ಔತಣ ಏರ್ಪಡಿಸಿದ್ದು ವಿಶೇಷವಾಗಿತ್ತು.

ನಂತರ ಹಾಡು, ನೃತ್ಯ ಭಾಷಣಗಳಂತ ಮನರಂಜನಾ ಕಾರ್ಯಕ್ರಮಗಳ ಮೂಲಕ ಗುರುಗಳನ್ನು ರಂಜಿಸಿದರು. ನಿತ್ಯ ಜ್ಞಾನದ ಹಸಿವು ನೀಗಿಸುವ ಶಿಕ್ಷಕರಿಗೆ ವಿದ್ಯಾರ್ಥಿಗಳು ಮನೆಯಿಂದ ಬುತ್ತಿ ತಂದು ಬಾಳೆಲೆಯಲ್ಲಿ ಜವಾರಿ ಊಟ ಬಡಿಸುವ ಮೂಲಕ ಹಸಿವು ನೀಗಿಸಿದ ಅಭಿಮಾನದ ಕಾರ್ಯಕ್ರಮ ಗಮನ ಸೆಳೆಯಿತು.ನಾವು ವಿದ್ಯೆ ಇಲ್ಲದೆ ಹೀರೋ ಆದ್ವಿ, ನೀವು ವಿದ್ಯಾವಂತ ಹೀರೋಗಳಾಗಿ; ದುನಿಯಾ ವಿಜಯ್

ನಾನಾ ಸ್ಪರ್ಧೆಗಳಲ್ಲಿ ವಿಜೇತ ಶಿಕ್ಷಕರಿಗೆ ಮಕ್ಕಳು ಪುಸ್ತಕ, ಪೆನ್ನು ಬಹುಮಾನ ನೀಡಿದರು. ಮನೆಯಿಂದ ಬುತ್ತಿ ತಂದು, ಪಾಕೇಟ್‌ ಮನಿಯಿಂದ ಹಣ ಸುರಿದು ಅದ್ಧೂರಿ ಕಾರ್ಯಕ್ರಮದ ಮೂಲಕ ಗುರು ಮಹೋದಯರ ಆತ್ಮ ಸಂತೃಪ್ತಿಗೊಳಿಸುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾದರು. ಇದಕ್ಕೂ ಮುನ್ನ ಕೇಕ್‌ ಕತ್ತರಿಸುವ ಮೂಲಕ ಡಾ. ರಾಧಾಕೃಷ್ಣನ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.