ಪುತ್ತೂರು: ಯಾರಿಗೂ ಮಾಹಿತಿ ನೀಡದೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಆತಂಕ ಸೃಷ್ಟಿಸಿದ ಶಿಕ್ಷಕಿ!
ಶಾಲಾ ಎಸ್‌ಡಿಎಂಸಿ, ಮುಖ್ಯಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡದೆ ಸಹ ಶಿಕ್ಷಕಿಯೊಬ್ಬರು ಶಾಲಾ ಅವಧಿಯಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಆತಂಕ ಸೃಷ್ಟಿದ ಘಟನೆ ಶನಿವಾರ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಪುತ್ತೂರು (ಫೆ.6) : ಶಾಲಾ ಎಸ್‌ಡಿಎಂಸಿ, ಮುಖ್ಯಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡದೆ ಸಹ ಶಿಕ್ಷಕಿಯೊಬ್ಬರು ಶಾಲಾ ಅವಧಿಯಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಆತಂಕ ಸೃಷ್ಟಿದ ಘಟನೆ ಶನಿವಾರ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈ ಪ್ರವಾಸದಿಂದಾಗಿ ಶಾಲೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಆಗಮಿಸಿ ಪರಿಶೀಲನೆ ನಡೆಸಿ ಪೊಲೀಸರಿಗೆ ಮೌಖಿಕ ಮಾಹಿತಿ ನೀಡಿದ ಘಟನೆಯೂ ನಡೆದಿದೆ.
ಶಾಲೆಯ ಸಹ ಶಿಕ್ಷಕಿಯೊಬ್ಬರು 28 ವಿದ್ಯಾರ್ಥಿಗಳನ್ನು ಬಸ್ಸೊಂದರಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರಿಗಾಗಲೀ, ಎಸ್‌ಡಿಎಂಸಿಗಾಗಲಿ ಮಾಹಿತಿ ಇರಲಿಲ್ಲ. ಇದೇ ದಿನ ಇಲ್ಲಿನ ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೆಯಿದ್ದರಿಂದ ಕೆಲವು ಮಕ್ಕಳು ಶಾಲೆಗೆ ಗೈರು ಹಾಜರಾಗಿದ್ದರು. ಈ ನಡುವೆ ವಿದ್ಯಾರ್ಥಿಗಳನ್ನು ಶಿಕ್ಷಕಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು ಒಟ್ಟು 38 ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗಿದ್ದರು. ಎಷ್ಟುಮಕ್ಕಳು ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಸಂಜೆಯ ತನಕವೂ ಸಂಬಂಧಿಸಿದವರಿಗೆ ಗೊತ್ತಾಗಿರಲಿಲ್ಲ. ಅಲ್ಲದೆ ಪ್ರವಾಸಕ್ಕೆ ಹೋಗಿರುವ ವಾಹನದ ಬಗ್ಗೆಯೂ ಮಾಹಿತಿ ಇರಲಿಲ್ಲ. ಈ ಬಗ್ಗೆ ತಿಳಿದುಕೊಳ್ಳಲು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಮತ್ತು ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ರಾಜೇಶ್ ಅವರು ನಿರಂತರ ಪ್ರಯತ್ನ ನಡೆಸಿದ್ದರೂ, ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಶಿಕ್ಷಕಿ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದೇ ಬರುತ್ತಿತ್ತು. ಇದರಿಂದಾಗಿ ಮತ್ತಷ್ಟುಗೊಂದಲ, ಆತಂಕಕ್ಕೆ ಕಾರಣವಾಗಿತ್ತು. ಶಿಕ್ಷಕಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಲಾಯಿತು.
ಕಾರವಾರ: ಬಾನಂಗಳದಲ್ಲಿ ಹಾರಾಡಿ ಮನಸೂರೆಗೊಳಿಸಿದ ಬಾಲಂಗೋಚಿಗಳು..!
ದೂರಿನ ಮೇರೆಗೆ ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಪೋಷಕರು, ಮುಖ್ಯ ಶಿಕ್ಷಕರು, ಎಸ್‌ಡಿಎಂಸಿಯಿಂದ ಮಾಹಿತಿ ಪಡೆದುಕೊಂಡು ಪೊಲೀಸರಿಗೆ ಮೌಖಿಕ ಮಾಹಿತಿ ನೀಡಿದರು.
ಈ ಎಲ್ಲ ಗೊಂದಲ, ಆತಂಕಗಳ ಬಳಿಕ ಸಂಜೆ ವೇಳೆಗೆ ಪ್ರವಾಸಕ್ಕೆ ಹೋಗಿದ್ದ ಮಕ್ಕಳು ಸುರಕ್ಷಿತವಾಗಿ ವಾಪಸ್ ಬಂದರು. ಪ್ರವಾಸಕ್ಕೆ ಹೋಗಲು ಯಾರಿಗೂ ಒಪ್ಪಿಗೆ ನೀಡಲಾಗಿಲ್ಲ. ಅನಧಿಕೃತವಾಗಿ ಶಿಕ್ಷಕಿಯು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು, ಅವರ ವಿರುದ್ಧ ದೂರು ನೀಡಲಾಗುವುದು ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ರಾಜೇಶ್ ಅವರು ತಿಳಿಸಿದ್ದಾರೆ.
ಬಿಲ್ ಕಟ್ಟದೇ ಲೀಲಾ ಪ್ಯಾಲೇಸ್‌ನಿಂದ ಎಸ್ಕೇಪ್ ಆದ ಪ್ರಕರಣ: ಪುತ್ತೂರು ವ್ಯಕ್ತಿಗೆ ಜಾಮೀನು
ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. 38 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶಾಲೆಯಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡದೆ ಸಹಶಿಕ್ಷಕಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ದೂರು ಶಾಲಾ ಮುಖ್ಯ ಶಿಕ್ಷಕಿಯಿಂದ ಬಂದಿದೆ. ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಶಿಕ್ಷಕಿ ಮಕ್ಕಳನ್ನು ಸಂಜೆಯ ವೇಳೆಗೆ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಈ ಒಟ್ಟು ವಿದ್ಯಮಾನದ ಕುರಿತು ಶಾಲೆಗೆ ನೋಟಿಸ್ ಜಾರಿಗೊಳಿಸಿ ಸೋಮವಾರ ವಿಚಾರಣೆ ನಡೆಸುತ್ತೇನೆ
- ಲೋಕೇಶ್ ಎಸ್.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು