ವೈದ್ಯಕೀಯ, ದಂತ ವೈದ್ಯಕೀಯ ಖಾಲಿ ಸೀಟುಗಳ ಹಂಚಿಕೆಗೆ ವಿಶೇಷ ಸುತ್ತು
ಈಗಾಗಲೇ ನಡೆದಿರುವ ಸೀಟು ಹಂಚಿಕೆಯಲ್ಲಿ ದಂತ ವೈದ್ಯಕೀಯ, ಆಯುಷ್ ಮತ್ತು ಇಂಜಿನಿಯರಿಂಗ್ ಸೀಟು ಪಡೆದುಕೊಂಡಿರುವವರು ಕೂಡ ಭಾಗವಹಿಸಬಹುದು. ಈ ವಿಶೇಷ ಸುತ್ತಿನಲ್ಲಿ ಒಂದು ವೇಳೆ ಸೀಟು ಲಭ್ಯವಾದರೆ, ಅಂಥವರಿಗೆ ಹಿಂದಿನ ಸುತ್ತುಗಳಲ್ಲಿ ಹಂಚಿಕೆಯಾಗಿರುವ ಸೀಟುಗಳು ರದ್ದಾಗುತ್ತವೆ. ಜೊತೆಗೆ ಅವುಗಳಿಗೆ ಪಾವತಿಸಿರುವ ಶುಲ್ಕವನ್ನು ಕೂಡ ಹಿಂದಿರುಗಿಸಲಾಗುವುದಿಲ್ಲ: ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ
ಬೆಂಗಳೂರು(ನ.04): ಇದುವರೆಗಿನ ಹಂಚಿಕೆಯ ನಂತರವೂ ಉಳಿದಿರುವ 133 ವೈದ್ಯಕೀಯ ಸೀಟುಗಳು ಮತ್ತು ದಂತ ವೈದ್ಯಕೀಯ ಸೀಟುಗಳನ್ನು `ಸ್ಟ್ರೇ ವೇಕೆನ್ಸಿ ರೌಂಡ್’ ಮೂಲಕ ಆನ್ಲೈನ್ ವಿಧಾನದಲ್ಲಿ ಹಂಚಲಾಗುವುದು. ಇದುವರೆಗಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಸೀಟುಗಳನ್ನು ಪಡೆದುಕೊಳ್ಳದೆ ಇರುವ ಆಸಕ್ತರು ಮಾತ್ರ ಇದರಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಈಗಾಗಲೇ ನಡೆದಿರುವ ಸೀಟು ಹಂಚಿಕೆಯಲ್ಲಿ ದಂತ ವೈದ್ಯಕೀಯ, ಆಯುಷ್ ಮತ್ತು ಇಂಜಿನಿಯರಿಂಗ್ ಸೀಟು ಪಡೆದುಕೊಂಡಿರುವವರು ಕೂಡ ಭಾಗವಹಿಸಬಹುದು. ಈ ವಿಶೇಷ ಸುತ್ತಿನಲ್ಲಿ ಒಂದು ವೇಳೆ ಸೀಟು ಲಭ್ಯವಾದರೆ, ಅಂಥವರಿಗೆ ಹಿಂದಿನ ಸುತ್ತುಗಳಲ್ಲಿ ಹಂಚಿಕೆಯಾಗಿರುವ ಸೀಟುಗಳು ರದ್ದಾಗುತ್ತವೆ. ಜೊತೆಗೆ ಅವುಗಳಿಗೆ ಪಾವತಿಸಿರುವ ಶುಲ್ಕವನ್ನು ಕೂಡ ಹಿಂದಿರುಗಿಸಲಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರಿನ ಹುಡುಗನಿಗೆ ಪಿಯು ಪರೀಕ್ಷೆ ಬರೆಯಲು ಅಡ್ಡಿ!
ಆಸಕ್ತ ಅಭ್ಯರ್ಥಿಗಳು ನ.7ರ ಬೆಳಿಗ್ಗೆ 10 ಗಂಟೆಯಿಂದ ನ.8ರ ಮಧ್ಯಾಹ್ನ 2 ಗಂಟೆಯ ಒಳಗೆ ನಿಗದಿತ ಮೊತ್ತದ ಡಿ.ಡಿ., ವೆರಿಫಿಕೇಶನ್ ಸ್ಲಿಪ್ ಮತ್ತು ಎಲ್ಲ ಮೂಲ ದಾಖಲಾತಿಗಳೊಂದಿಗೆ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಗೆ ಹಾಜರಾಗಬೇಕು. ಬಳಿಕ, ಅಭ್ಯರ್ಥಿಗಳಿಗೆ `ಆಪ್ಶನ್ಸ್’ ದಾಖಲಿಸಲು ಪೋರ್ಟಲ್ ತೆರೆದು, ನ.9ರ ಬೆಳಿಗ್ಗೆ 9 ಗಂಟೆಯವರೆಗೂ ಅವಕಾಶ ಕಲ್ಪಿಸಲಾಗುವುದು. ಇದೇ ರೀತಿಯಲ್ಲಿ ದಂತ ವೈದ್ಯಕೀಯ ಸೀಟುಗಳಿಗಾಗಿ ನ.10ರಂದು ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.
ವೈದ್ಯಕೀಯ/ದಂತ ವೈದ್ಯಕೀಯ ಸೀಟುಗಳು ಖಾಲಿ ಇರುವ ಕಾಲೇಜುಗಳಲ್ಲಿ ನಿಗದಿಪಡಿಸಿರುವ ಶುಲ್ಕ, ಸೀಟು ಹಂಚಿಕೆ ಫಲಿತಾಂಶ, ಪ್ರವೇಶ ಪ್ರಕ್ರಿಯೆ ಮುಗಿಸಲು ಇರುವ ಗಡುವು ಇತ್ಯಾದಿಗಳಿಗಾಗಿ ಪ್ರಾಧಿಕಾರದ ಜಾಲತಾಣ http://kea.kar.nic.in ನೋಡಬಹುದು ಎಂದು ಅವರು ಹೇಳಿದ್ದಾರೆ.