ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರಿನ ಹುಡುಗನಿಗೆ ಪಿಯು ಪರೀಕ್ಷೆ ಬರೆಯಲು ಅಡ್ಡಿ!
ಎಲ್ಲರಿಗೂ ಶಿಕ್ಷಣ ಪಡೆಯುವ ಹಕ್ಕು ಇದೆ. ಕಾನೂನಿನ ಬಿಗಿ ಹಿಡಿತ ಸಡಿಲಗೊಳಿಸಿ ಮಕ್ಕಳಿಗೆ ಶಿಕ್ಷಣ ಪಡೆಯುವ ಮತ್ತು ಪರೀಕ್ಷೆ ಬರೆಯುವ ಅವಕಾಶವನ್ನು ನೀಡಬೇಕು. ಸರ್ಕಾರ ಕೂಡ ಅದನ್ನೇ ಹೇಳುತ್ತೆ. ಆದರೆ ಕಾನೂನು ಪುಸ್ತಕಗಳಂತೆ ವರ್ತಿಸುವ ಕೆಲ ಅಧಿಕಾರಿಗಳಿಂದ, ಖಾಸಗಿ ಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ರಾಜ್ಯದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅದು ಶಿಕ್ಷಣ ಸಚಿವರ ತವರು ನೆಲದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ.
ಉಡುಪಿ (ನ.3): ಅನುತ್ತೀರ್ಣಗೊಂಡು ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಲೆನೋವು ಸೃಷ್ಟಿಯಾಗಿದೆ. ವಾಸ ಸ್ಥಳದ ದಾಖಲೆಯ ನೆಪವೊಡ್ಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದನ್ನು ಕೆಲ ಕಾಲೇಜುಗಳಲ್ಲಿ ಅವಕಾಶ ನಿರಾಕರಿಸಲಾಗುತ್ತಿದೆ. ಸ್ವತಃ ಶಿಕ್ಷಣ ಸಚಿವರ ತಾಲೂಕಾಗಿರುವ ಸೊರಬದ ವಿದ್ಯಾರ್ಥಿಯೂ ಸೇರಿದಂತೆ, ಉಡುಪಿ ಜಿಲ್ಲೆಯಲ್ಲಿ ಅನೇಕ ಮಂದಿ ಸರಕಾರದ ಈ ನೀತಿಯಿಂದ ಹಾಗೂ ಕೆಲ ಪ್ರಾಂಶುಪಾಲರ ವರ್ತನೆಯಿಂದ ಶಿಕ್ಷಣ ವಂಚಿತರಾಗುವ ಅಪಾಯವಿದೆ.
ಎಲ್ಲರಿಗೂ ಶಿಕ್ಷಣ ಪಡೆಯುವ ಹಕ್ಕು ಇದೆ. ಕಾನೂನಿನ ಬಿಗಿ ಹಿಡಿತ ಸಡಿಲಗೊಳಿಸಿ ಮಕ್ಕಳಿಗೆ ಶಿಕ್ಷಣ ಪಡೆಯುವ ಮತ್ತು ಪರೀಕ್ಷೆ ಬರೆಯುವ ಅವಕಾಶವನ್ನು ನೀಡಬೇಕು. ಸರ್ಕಾರ ಕೂಡ ಅದನ್ನೇ ಹೇಳುತ್ತೆ. ಆದರೆ ಕಾನೂನು ಪುಸ್ತಕಗಳಂತೆ ವರ್ತಿಸುವ ಕೆಲ ಅಧಿಕಾರಿಗಳಿಂದ, ಖಾಸಗಿ ಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ರಾಜ್ಯದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಸರ್ಕಾರ ಬರಗಾಲ ಸಮರ್ಥವಾಗಿ ಎದುರಿಸಲಿದೆ: ಸಚಿವ ಮಧು ಬಂಗಾರಪ್ಪ
ಶೈಕ್ಷಣಿಕವಾಗಿ ಮಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ, ಟ್ಯುಟೋರಿಯಲ್ ಗಳಲ್ಲಿ ತರಬೇತಿ ಪಡೆದು, ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ನೋಂದಣಿಗೆ ಹೋದಾಗ, ವಾಸಸ್ಥಳದ ದಾಖಲಾತಿಯ ನೆಪ ಮಾಡಿ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಸೊರಬದ ವಿದ್ಯಾರ್ಥಿ ಶರತ್ ಕುಮಾರ್ ಕಳೆದ ಒಂದು ದಶಕದಿಂದ ಉಡುಪಿಯ ಚೇರ್ಕಾಡಿಯಲ್ಲಿ ತಾಯಿಯೊಂದಿಗೆ ನೆಲೆಸಿದ್ದಾರೆ. ಆಧಾರ್ ಕಾರ್ಡ್ ನಲ್ಲಿ ಸೊರಬದ ವಿಳಾಸವಿದೆ. ಅಭ್ಯರ್ಥಿಯು ತನ್ನ ವಾಸಸ್ಥಾನಕ್ಕೆ ಹತ್ತಿರವಾಗಿರುವ ಸರಕಾರಿ ಕಾಲೇಜಿನಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು ಎಂಬ ಸರಕಾರದ ಸುತ್ತೋಲೆಯ ನೆಪವೊಡ್ಡಲಾಗುತ್ತಿದೆ.
ಪ್ರಥಮ ಪಿಯುಸಿ ಕಲಿತಿರುವ, ಸರಕಾರಿ ಕಾಲೇಜಿನವರೇ ಈತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಬೇಕಿದ್ದರೆ ಆಧಾರ್ ಕಾರ್ಡ್ ನಲ್ಲಿರುವ ವಿಳಾಸಕ್ಕೆ ಹತ್ತಿರದ ಕಾಲೇಜಿಗೆ ಹೋಗಿ ಪರೀಕ್ಷೆ ಬರಿ ಎಂದು ಹೇಳಿರುವುದು, ಈ ವಿದ್ಯಾರ್ಥಿಗೆ ಶಾಕ್ ನೀಡಿದೆ. ಚೇರ್ಕಾಡಿ ಪಂಚಾಯತ್ ನವರು ವಾಸದ ದೃಢೀಕರಣ ಪತ್ರ ನೀಡಿದರೂ ಪರಿಗಣಿಸಿಲ್ಲ. ಸದ್ಯ ಉಡುಪಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳಿಗೆ ಈ ರೀತಿ ಸಮಸ್ಯೆಯಾಗಿದ್ದು, ನೂರಾರು ವಿದ್ಯಾರ್ಥಿಗಳಿಗೆ ಅಡ್ಡಿಯಾಗಿರುವ ಸಾಧ್ಯತೆ ಇದೆ.
ಉಡುಪಿ ಜಿಲ್ಲೆಯಲ್ಲಿ ಅನೇಕ ಮಂದಿ ವಲಸೆ ಕಾರ್ಮಿಕರು ನೆಲೆಸಿದ್ದಾರೆ. ದಶಕಗಳಿಂದ ಅವರು ಉಡುಪಿಯಲ್ಲಿ ಬೀಡುಬಿಟ್ಟು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ದುರದೃಷ್ಟವಶಾತ್ ಅವರ ಮಕ್ಕಳು ಅನುತ್ತೀರ್ಣಗೊಂಡು, ಬಳಿಕ ಖಾಸಗಿಯಾಗಿ ಪರೀಕ್ಷೆ ಬರೆಯಲು ಹೊರಟರೆ ಸರ್ವರಿಗೂ ಶಿಕ್ಷಣ ನೀಡಬೇಕಾದ ಸರಕಾರ ಅವಕಾಶ ಕಲ್ಪಿಸಬೇಕಲ್ಲವೇ?! ಸರಕಾರ ತನ್ನ ಸುತ್ತೋಲೆಯಲ್ಲಿ ವಾಸ ಸ್ಥಳ ಎಂದು ಹೇಳಿದೆಯೇ ಹೊರತು, ವಿದ್ಯಾರ್ಥಿಯ ಶಾಶ್ವತ ವಿಳಾಸದ ಸಮೀಪವಿರುವ ಶಾಲೆಯಲ್ಲಿ ಪರೀಕ್ಷೆ ಬರೆಯಬೇಕು ಎಂದು ಹೇಳಿಲ್ಲ. ಒಂದು ವೇಳೆ ಕಾನೂನಿನಲ್ಲಿ ಅವಕಾಶ ಇಲ್ಲವಾದರೂ ವಿದ್ಯಾರ್ಥಿಗಳಿಗೆ ವಿನಾಯಿತಿ ಕೊಟ್ಟು ಪರೀಕ್ಷೆ ಬರೆಯುವ ಅವಕಾಶ ನೀಡುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ. ಸರಕಾರ ಈ ಕಾನೂನನ್ನು ಕಠಿಣ ಮಾಡಿದರೆ, ಬಡ ಮಕ್ಕಳಿಗೆ ಶಿಕ್ಷಣ ವಂಚಿಸಿದಂತಾಗುತ್ತದೆ. ಈಗಾಗಲೇ ಪರೀಕ್ಷೆಗೆ ನೊಂದಾಯಿಸಿಕೊಳ್ಳುವ ಅವಧಿ ಮುಗಿದಿದೆ. ದಂಡ ಸಹಿತ ಪರೀಕ್ಷೆಗೆ ಅರ್ಜಿ ಹಾಕಲು ಇನ್ನು 15 ದಿನಗಳ ಅವಕಾಶ ಇದೆ. ರಾಜ್ಯದ ಯಾವುದೇ ಸರಕಾರಿ ಕಾಲೇಜಿನಲ್ಲಿ ತಮ್ಮ ಸೂಕ್ತ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳಲು ಸರಕಾರ ಸುತ್ತೋಲೆ ಹೊರಡಿಸಬೇಕು.
ಶಾಲಾ ಮಕ್ಕಳಿಗೆ ಮೊಟ್ಟೆಯ ಜತೆ ವಿಶೇಷ ಪೌಷ್ಠಿಕ ಆಹಾರ: ಸಚಿವ ಮಧು ಬಂಗಾರಪ್ಪ
ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎಂಬ ಕಾರಣಕ್ಕೆ ಸಚಿವರು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಸೊರಬದ ವಿದ್ಯಾರ್ಥಿಯ ಸಂಕಷ್ಟವನ್ನು ಇಲ್ಲಿ ಸಾಂಕೇತಿಕವಾಗಿ ಹೇಳಲಾಗಿದೆ. ಈ ಕಾನೂನಿನಲ್ಲಿ ಬದಲಾವಣೆ ತಂದರೆ ಸಾವಿರಾರು ವಿದ್ಯಾರ್ಥಿಗಳಿಗೆ ಅದರಲ್ಲೂ ವಲಸೆ ಕಾರ್ಮಿಕ ಮಕ್ಕಳಿಗೆ ಅನುಕೂಲವಾಗಲಿದೆ.