2020-2021 ಶೈಕ್ಷಣಿಕ ವರ್ಷದಲ್ಲಿ  ರಾಜ್ಯದ ಒಂದರಿಂದ 12ನೇ ತರಗತಿವರೆಗಿನ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯವಾಗಿ  ಕುಸಿದಿದೆ.

ಬೆಂಗಳೂರು (ಜು.1): ಕಳೆದ ಶೈಕ್ಷಣಿಕ ವರ್ಷದಲ್ಲಿ (2020-2021) ದೇಶದ ಒಂದರಿಂದ 12ನೇ ತರಗತಿವರೆಗಿನ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದರೂ ಕರ್ನಾಟಕದಲ್ಲಿ ಮಾತ್ರ ದಾಖಲಾತಿ ಪ್ರಮಾಣ ಕುಸಿದಿದೆ.

ಕರ್ನಾಟಕ ರಾಜ್ಯದಲ್ಲಿ ದಾಖಲಾತಿ ಪ್ರಮಾಣ ಈ ಅವಧಿಯಲ್ಲಿ ಶೇ.2.32ರಷ್ಟುಕುಸಿತವಾಗಿದೆ. ಆದರೆ, ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಿಗೆ ಹೋಲಿಸಿದಾಗ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಶೇ.1.25ರಷ್ಟುಏರಿಕೆಯಾಗಿದೆ. ಇತ್ತೀಚೆಗೆ ಪ್ರಕಟವಾಗಿರುವ 2020-21ನೇ ಸಾಲಿನ ಯುಡೈಸ್‌+ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಬಡಮಕ್ಕಳಿಗೆ ಗುಡ್ ನ್ಯೂಸ್ ಬೆಂಗಳೂರಿನಲ್ಲಿ ಸಂಜೆ ಶಾಲೆ ಆರಂಭ

ಕೇಂದ್ರ ಶಿಕ್ಷಣ ಇಲಾಖೆಯು ಯೂನಿಫೈಡ್‌ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್‌ ಸಿಸ್ಟಂ ಫಾರ್‌ ಎಜುಕೇಷನ್‌ ಪ್ಲಸ್‌ (ಯುಡೈಸ್‌+) ಅಪ್ಲಿಕೇಷನ್‌ ಮೂಲಕ ಪ್ರತಿ ವರ್ಷ ದೇಶ ಹಾಗೂ ರಾಜ್ಯವಾರು ಎಲ್ಲ ಮಾದರಿಯ ಶಾಲೆಗಳ ದಾಖಲಾತಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅನುಪಾತ, ಶಾಲೆ ಬಿಟ್ಟಮಕ್ಕಳ ಗಣತಿ, ಮೂಲಸೌಕರ್ಯ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಸಂಗ್ರಹಿಸಿ ವರದಿ ಬಿಡುಗಡೆ ಮಾಡುತ್ತದೆ. ಇತ್ತೀಚೆಗಷ್ಟೆ2020-21ನೇ ಸಾಲಿನ ವರದಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ವರದಿಯಲ್ಲಿ ಪ್ರಮುಖವಾಗಿ 2020-21ರಲ್ಲಿ ದೇಶಾದ್ಯಂತ ಶಾಲೆ, ಪಿಯು ಕಾಲೇಜುಗಳಲ್ಲಿ ಒಟ್ಟಾರೆ 25.38 ಕೋಟಿ ಮಕ್ಕಳು ದಾಖಲಾಗಿದ್ದಾರೆ. ಇದು 2019-20ರ ದಾಖಲಾತಿಗೆ ಹೋಲಿಸಿದರೆ 28 ಲಕ್ಷಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವುದು ಕಂಡುಬಂದಿದೆ. ಅದೇ ರೀತಿ ಕರ್ನಾಟಕದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಲ್ಲಿ 2020-21ನೇ ಸಾಲಿನಲ್ಲಿ 1ರಿಂದ 12ನೇ ತರಗತಿ ವರೆಗೆ ಒಟ್ಟು 1,18,56,736 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಇದು 2019-21ನೇ ಸಾಲಿನ ದಾಖಲಾತಿ 1,21,39,105ಕ್ಕೆ ಹೋಲಿಸಿದರೆ 2.82 ಲಕ್ಷದಷ್ಟುಮಕ್ಕಳ ದಾಖಲಾತಿ ಕಡಿಮೆಯಾಗಿದೆ. ಕೋವಿಡ್‌ ಸಾಂಕ್ರಾಮಿಕ ವರ್ಷದಲ್ಲಿ ಸಾಕಷ್ಟುಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸದ ಕಾರಣ ದಾಖಲಾತಿ ಕಡಿಮೆಯಾಗಿದೆ ಎಂಬುದು ತಜ್ಞರು ಹಾಗೂ ಅಧಿಕಾರಿಗಳ ವಿಶ್ಲೇಷಣೆಯಾಗಿದೆ.

ಬೋಧನೆಗೆ ಶಿಕ್ಷಕರಿಲ್ಲ: ಖಾಲಿ ಹುದ್ದೆಗಳು ಭರ್ತಿಯಾಗುತ್ತಿಲ್ಲ..!

ಸರ್ಕಾರಿ ಶಾಲೆಗೆ 1.25 ಲಕ್ಷ ಹೆಚ್ಚು ಮಕ್ಕಳು ದಾಖಲು: ರಾಜ್ಯದ ಒಟ್ಟಾರೆ ದಾಖಲಾತಿಗಳಲ್ಲಿ ಇಳಿಕೆ ಕಂಡು ಬಂದರೂ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಶೇ.1.25ರಷ್ಟುಏರಿಕೆಯಾಗಿದೆ. 2019-20ರಲ್ಲಿ ರಾಜ್ಯದ 79,905 ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ 1ರಿಂದ 12ನೇ ತರಗತಿಗೆ 49,06,231 ಮಕ್ಕಳು ದಾಖಲಾಗಿದ್ದರೆ, 2020-21ರಲ್ಲಿ 50,31,606 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸುಮಾರು 1.25 ಲಕ್ಷದಷ್ಟುಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಇನ್ನು 7,191 ಅನುದಾನಿತ ಶಾಲೆಗಳಲ್ಲಿ 15.06 ಲಕ್ಷ ಮಕ್ಕಳು, 19,915 ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 53.17 ಲಕ್ಷ ಮಕ್ಕಳು ದಾಖಲಾಗಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯದ ಶಾಲೆಗಳಲ್ಲಿ ದಾಖಲಾತಿ

ಶಾಲೆದಾಖಲಾತಿ2019-202020-21%
ಸರ್ಕಾರಿ49,06,23150,31,6061.25% ಏರಿಕೆ
ಅನುದಾನಿತ15,46,32615,06,7802.5%ಇಳಿಕೆ
ಅನುದಾನರಹಿತ56,85,87953,17,6406.47% ಇಳಿಕೆ
ಒಟ್ಟು1,21,39,1051,18,56,7362.32% ಏರಿಕೆ