ಬೋಧನೆಗೆ ಶಿಕ್ಷಕರಿಲ್ಲ: ಖಾಲಿ ಹುದ್ದೆಗಳು ಭರ್ತಿಯಾಗುತ್ತಿಲ್ಲ..!

*   ಅತಿಥಿ ಶಿಕ್ಷಕರ ಮೇಲೆಯೇ ಸರ್ಕಾರಿ ಶಾಲೆಗಳು ಅವಲಂಬನೆ
*   ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಗೆ ಪೆಟ್ಟು
*  ಮೂಲ ಸೌಕರ್ಯಕ್ಕೂ ಬರ
 

Lack of Teachers in Ballari grg

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜೂ.30):  ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರ ಕೊರತೆ ಮುಂದುವರಿದಿದ್ದು ನೂರಾರು ಸಂಖ್ಯೆಯಲ್ಲಿ ಶಿಕ್ಷಕರ ಅಭಾವ ಸೃಷ್ಟಿಯಾಗಿದೆ. ಇದು ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮಸ್ಯೆ ತಂದೊಡ್ಡಿದೆ. ಪ್ರತಿವರ್ಷದಂತೆ ಈ ಬಾರಿಯೂ ಬೋಧಕರ ಅಭಾವದಲ್ಲಿಯೇ ಸರ್ಕಾರಿ ಶಾಲೆಗಳು ಶುರುಗೊಂಡಿವೆ. ಖಾಲಿ ಇರುವ ಹುದ್ದೆಗಳಿಗೆ ಭಾಗಶಃ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಕೆಲವು ಕಡೆ ಅತಿಥಿ ಶಿಕ್ಷಕರ ನೇಮಕವೂ ಇಲ್ಲದೆ ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇದು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಿದೆ.

ಶಿಕ್ಷಕರ ಕೊರತೆ ಅಪಾರ:

ಜಿಲ್ಲೆಯ ಕುರುಗೋಡು, ಕಂಪ್ಲಿ, ಸಂಡೂರು, ಸಿರುಗುಪ್ಪ ಹಾಗೂ ಬಳ್ಳಾರಿ ಪೂರ್ವ ವಲಯಗಳ ಪೈಕಿ ಮುಖ್ಯಗುರುಗಳು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು ಸೇರಿದಂತೆ ಒಟ್ಟು 4661 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 2894 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನು 1767 ಶಿಕ್ಷಕರ ಕೊರತೆ ಇದೆ. ಖಾಲಿ ಹುದ್ದೆಗಳ ಪೈಕಿ ಸಿರುಗುಪ್ಪ ತಾಲೂಕಿನಲ್ಲಿ ಅತಿ ಹೆಚ್ಚು 542 ಹುದ್ದೆಗಳು ಖಾಲಿ ಇವೆ. ಜಿಲ್ಲೆಯ ಪೈಕಿ ಸಾಕ್ಷರತೆ ಪ್ರಮಾಣದಲ್ಲಿ ಕೆಳಸ್ತರದಲ್ಲಿರುವ ಸಿರುಗುಪ್ಪ ತಾಲೂಕು ಶಿಕ್ಷಕರ ಕೊರತೆ ಎದುರಿಸುತ್ತಿದೆ.

ಹೊಸಪೇಟೆ: ಪಾಸಾದರೂ ಡಿಗ್ರಿ ಅಂಕಪಟ್ಟಿ ಕೊಡುತ್ತಿಲ್ಲ, ವಿದ್ಯಾರ್ಥಿಗಳ ಪರದಾಟ

ಸಂಡೂರು ವಲಯದಲ್ಲಿ 422, ಬಳ್ಳಾರಿ ಪೂರ್ವ ವಲಯದಲ್ಲಿ 391, ಕುರುಗೋಡು ವಲಯದಲ್ಲಿ 307 ಹಾಗೂ ಕಂಪ್ಲಿ ವಲಯದಲ್ಲಿ 105 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಗಮನಾರ್ಹ ಸಂಗತಿ ಎಂದರೆ ಜಿಲ್ಲೆಯ ಐದು ವಲಯಗಳಲ್ಲಿ 101 ಮುಖ್ಯಗುರುಗಳು ಹುದ್ದೆಗಳು ಖಾಲಿ ಇದ್ದು, ಸಹ ಶಿಕ್ಷಕರೇ ದ್ವಿಪಾತ್ರ ನಿರ್ವಹಿಸುತ್ತಿದ್ದಾರೆ.

ಪ್ರೌಢಶಾಲೆಯಲ್ಲೂ ಶಿಕ್ಷಕರಿಲ್ಲ!

ಪ್ರೌಢಶಾಲೆಗಳಲ್ಲೂ ಶಿಕ್ಷಕರ ಕೊರತೆ ಹೆಚ್ಚಿದೆ. ಮಂಜೂರಾದ 1117 ಶಿಕ್ಷಕರ ಪೈಕಿ 889 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ 228 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರೌಢಶಾಲೆ ವಿಭಾಗದಲ್ಲೂ ಸಹ ಸಿರುಗುಪ್ಪ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಹೇರಳವಾಗಿದೆ. ಬಳ್ಳಾರಿ ಪೂರ್ವ ವಲಯದಲ್ಲಿ 45, ಕುರುಗೋಡು 44, ಕಂಪ್ಲಿ 14, ಸಂಡೂರು 46 ಹಾಗೂ ಸಿರುಗುಪ್ಪ ವಲಯದಲ್ಲಿ 79 ಶಿಕ್ಷಕರ ಅಭಾವವಿದೆ.

ಪ್ರಮುಖವಾಗಿ ಅನೇಕ ಶಾಲೆಗಳಲ್ಲಿ ಇಂಗ್ಲೀಷ್‌, ಗಣಿತ ಹಾಗೂ ವಿಜ್ಞಾನ ಬೋಧಿಸುವ ಶಿಕ್ಷಕರೇ ಇಲ್ಲ. ಇದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೇಲೂ ಪರಿಣಾಮ ಬೀರುತ್ತಿದ್ದು, ಶಿಕ್ಷಕರ ನೇಮಕದ ಹಿನ್ನಡೆ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮೇಲೆ ಪೆಟ್ಟು ಬಿದ್ದಿದೆ.

ಈ ಕುರಿತು ಕನ್ನಡಪ್ರಭ ಜೊತೆ ಮಾತನಾಡಿದ ಜಿಲ್ಲಾ ಶಿಕ್ಷಣಾಧಿಕಾರಿ ಮೈಲೇಶ್‌ ಬೇವೂರ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳು ಇದ್ದು, ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗಬಾರದು ಎಂದು ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. 994 ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆದಿದ್ದು, ಇನ್ನು 370 ಅತಿಥಿ ಶಿಕ್ಷಕರ ನೇಮಕದ ಬೇಡಿಕೆ ಇಡಲಾಗಿದೆ. ಈ ಸಂಬಂಧ ಇಲಾಖೆ ಸಚಿವರು ಹಾಗೂ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಫುಟ್‌ಪಾತ್‌ನಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಸಿವಿಲ್ ಎಂಜಿನಿಯರ್

ಮೂಲ ಸೌಕರ್ಯಕ್ಕೂ ಬರ

ವಿದ್ಯಾರ್ಥಿನಿಯರು ಶೌಚಾಲಯ ವ್ಯವಸ್ಥೆ ಒದ್ದಾಡುವಂತಾಗಿದೆ. ನೀರಿನ ಅಭಾವ ಹಾಗೂ ನಿರ್ವಹಣೆ ಮಾಡುವವರಿಲ್ಲ ಎಂಬ ಕಾರಣಕ್ಕೆ ಬಹುತೇಕ ಶಾಲೆಗಳ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಇನ್ನು ಕುಡಿವನೀರಿನ ಸಮಸ್ಯೆಯಿಂದಲೂ ಸರ್ಕಾರಿ ಶಾಲೆಗಳು ಮುಕ್ತವಾಗಿಲ್ಲ. ದೈಹಿಕ ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳು ದೈಹಿಕ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.

ಶಾಲೆಗಳಿಗೆ ಸರ್ಕಾರ ಪೂರ್ಣ ಪ್ರಮಾಣದ ಶಿಕ್ಷಕರನ್ನು ನೇಮಕ ಮಾಡುವುದು ಯಾವಾಗ? ಕನಿಷ್ಠ ಮೂಲ ಸೌಕರ್ಯ ಇಲ್ಲದ ಶಾಲೆಗಳ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾದರೆ ಸರ್ಕಾರಿ ಶಾಲೆಗೆ ಯಾವ ಧೈರ್ಯದ ಮೇಲೆ ಮಕ್ಕಳನ್ನು ಕಳಿಸಿಕೊಡಬೇಕು ಅಂತ ಕರ್ನಾಟಕ ಜನಸೈನ್ಯ ಸಂಸ್ಥಾಪಕ ಅಧ್ಯಕ್ಷ ಕೆ.ಎರಿಸ್ವಾಮಿ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios