ಬೇಡಿಕೆ ಕಳೆದುಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದಲಾದ ನಿಯಮದಿಂದಾಗಿ ಸೀಟು ಕೇಳುವವರೇ ಇಲ್ಲ!
ಬಡ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಸದುದ್ದೇಶದಿಂದ ಜಾರಿಗೊಳಿಸಿದ ಆರ್‌ಟಿಇ (ಶಿಕ್ಷಣ ಹಕ್ಕು ಕಾಯಿದೆ) ಅಡಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ನಿರಾಸಕ್ತಿ ತೋರಿರುವುದು ಬೆಳಕಿಗೆ ಬಂದಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜೂ.16): ಬಡ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಸದುದ್ದೇಶದಿಂದ ಜಾರಿಗೊಳಿಸಿದ ಆರ್‌ಟಿಇ (ಶಿಕ್ಷಣ ಹಕ್ಕು ಕಾಯಿದೆ) ಅಡಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ನಿರಾಸಕ್ತಿ ತೋರಿರುವುದು ಬೆಳಕಿಗೆ ಬಂದಿದೆ. ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯಲು ಒಂದು ಕಾಲಕ್ಕೆ ಅಪಾರ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದವು. ಸೀಟು ಪಡೆಯಲು ಸ್ಪರ್ಧೆ ಏರ್ಪಡುತ್ತಿತ್ತು. ಆದರೆ, ಬದಲಾದ ನಿಯಮದ ಕಾರಣ ಈಗ ಸೀಟುಗಳಿಗೆ ಯಾರೂ ಕೇಳುವವರೇ ಇಲ್ಲದಂತಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಆರ್‌ಟಿಇ ಅಡಿ 176 ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಆಶ್ಚರ್ಯದ ಸಂಗತಿ ಎಂದರೆ 176 ಸೀಟುಗಳಿಗೆ ಕೇವಲ 5 ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ ಸೀಟು ಪಡೆದುಕೊಂಡಿದ್ದಾರೆ. ಆರ್‌ಟಿಇ ಅಡಿ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಶೇಕಡ 25ರಷ್ಟುಸೀಟುಗಳನ್ನು ಕಾಯ್ದಿರಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 20 ಅನುದಾನಿತ ಹಾಗೂ 03 ಅನುದಾನ ರಹಿತ ಶಾಲೆಗಳು ಆರ್ ಟಿಇ ವ್ಯಾಪ್ತಿಗೆ ಒಳಪಡುತ್ತವೆ. ಮಾಗಡಿ ತಾಲೂಕಿನಲ್ಲಿ 2 ಅನುದಾನಿತ, ರಾಮನಗರ ತಾಲೂಕಿನಲ್ಲಿ 6 ಅನುದಾನಿತ, ಚನ್ನಪಟ್ಟಣ ತಾಲೂಕಿನಲ್ಲಿ 2 ಅನುದಾನಿತ, 1 ಅನುದಾನ ರಹಿತ ಹಾಗೂ ಕನಕಪುರ ತಾಲೂಕಿನಲ್ಲಿ 10 ಅನುದಾನಿತ, 02 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 23 ಶಾಲೆಗಳನ್ನು ಆರ್‌ಟಿಇ ಅಡಿ ಪ್ರವೇಶಾತಿಗೆ ಗುರುತಿಸಲಾಗಿದೆ.
ಟೋಲ್ ದರ ಏರಿಕೆ ಅನ್ಯಾಯದ ಪರಮಾವಧಿ: ಎಚ್.ಡಿ.ಕುಮಾರಸ್ವಾಮಿ
2018 ರಿಂದ ಆರ್ ಟಿಇ ಅಡಿಯಲ್ಲಿ ಸೀಟುಗಳಿಗೆ ಬೇಡಿಕೆ ಕುಸಿಯುತ್ತಿದೆ. ಈಗ ಇದರ ಅಡಿಯಲ್ಲಿ ಬೆರಳಕೆಯಷ್ಟುಮಕ್ಕಳು ಓದುತ್ತಿದ್ದಾರೆ. ಇನ್ನೆರಡು ವರ್ಷದಲ್ಲಿ ಇದು ಶೂನ್ಯಕ್ಕೆ ಬರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ಗ್ರಾಮ ಭೌಗೋಳಿಕ ಗಡಿ , ನಗರಸಭೆ, ಟೌನ್ ಮುನಿಸಿಪಲ್ ಕೌನ್ಸಿಲ್ ಮತ್ತು ಪಟ್ಟಣ ಪಂಚಾಯಿತಿ ಭೌಗೋಳಿಕ ಗಡಿ ಹಾಗೂ ಮಹಾನಗರ ಪಾಲಿಕೆಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿ ವಾರ್ಡಿನ ಭೌಗೋಳಿಕ ಗಡಿಯೊಳಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿದ್ದಲ್ಲಿ ಅನುದಾನ ರಹಿತ (ಖಾಸಗಿ)ಶಾಲೆಗಳಿಗೆ ಪ್ರವೇಶ ಬಯವಂತಿಲ್ಲ ಎಂಬ ನಿಯಮವೇ ಆರ್‌ಟಿಇ ಗೆ ಬೇಡಿಕೆ ಕುಸಿಯಲು ಕಾರಣವಾಗಿದೆ.
ಆರ್‌ಟಿಇ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಮತ್ತು ಮತ್ತು ಅನುದಾನಿತ ಶಾಲೆಗಳು ಕನ್ನಡ ಮಾಧ್ಯಮ ಶಾಲೆಗಳಾಗಿವೆ. ಜೊತೆಗೆ ಪ್ರತಿ ಕಂದಾಯ ಗ್ರಾಮ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳು ಇವೆ. ಮಕ್ಕಳಿಗೆ ತಮ್ಮಗೆ ಇಷ್ಟದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಆರ್ ಟಿಇ ಪ್ರವೇಶ ಇಲ್ಲದಿರುವ ಕಾರಣ ಪೋಷಕರು ಅತ್ತ ಸುಳಿಯುತ್ತಿಲ್ಲ. ಈ ಮೊದಲು ಜಿಲ್ಲಾದ್ಯಂತ ಇರುವ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ ಟಿಇಗೆ ಒಳ ಪಡಿಸಲಾಗಿತ್ತು. ಆದರೆ, ಇತ್ತೀಚೆಗೆ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಜ ಸರ್ಕಾರ ಕೈ ಬಿಟ್ಟಿದೆ. ಅನುದಾನಿತ ಶಾಲೆಗಳಿಗೆ ಮಾತ್ರ ಆರ್ ಟಿಇ ಪ್ರವೇಶಾತಿಗೆ ಅವಕಾಶ ಕಲ್ಪಿಸಿರುವುದರಿಂದ ಪೋಷಕರು ಮಕ್ಕಳನ್ನು ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಹಿಂದಿನ ಪದ್ಧತಿಯಲ್ಲಿ ಏನಿತ್ತು?: ಖಾಸಗಿ ಶಾಲೆಗಳಲ್ಲಿ ಶೇ.25 ಸೀಟು ಮಕ್ಕಳಿಗೆ ನಿಗದಿ ಮಾಡಲಾಗಿತ್ತು. ವಾರ್ಡ್, ಗ್ರಾಮ, ನಗರ ವ್ಯಾಪ್ತಿಯ ಒಂದು ಕಿಲೋಮೀಟರ್ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಬಡ ಮಕ್ಕಳಿಗೆ ಕಡ್ಡಾಯವಾಗಿ ಶೇ.25 ಸೀಟು ನೀಡಬೇಕಿತ್ತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರವೇ ಖಾಸಗಿ ಶಾಲೆಗಳಿಗೆ ಹಣ ನೀಡುತ್ತಿತ್ತು. ಹೀಗಾಗಿ ಪೋಷಕರು ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದರು.
ಹೊಸ ತಿದ್ದುಪಡಿಯಲ್ಲಿ ಏನಿದೆ?: ಕಡ್ಡಾಯವಾಗಿ ಮಗುವಿಗೆ 6-14 ವರ್ಷ ಶಿಕ್ಷಣ ನೀಡಬೇಕು. ಮಗು ವಾಸಿಸುವ 1 ಕಿಲೋಮೀಟರ್ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಮೊದಲ ಆದ್ಯತೆ ಮೇಲೆ ದಾಖಲಾಗಿ ಶಿಕ್ಷಣ ಪಡೆಯಬೇಕು. ಸರ್ಕಾರಿ ಶಾಲೆ ಇಲ್ಲದೆ ಇದ್ದರೆ 3-5 ಕಿಲೋಮೀಟರ್ ವ್ಯಾಪ್ತಿಯ ಅನುದಾನಿತ ಶಾಲೆಯಲ್ಲಿ ಮಗುವಿಗೆ ಶಿಕ್ಷಣ ಕೊಡಿಸಬೇಕು. ಒಂದು ವೇಳೆ ಅನುದಾನಿತ ಶಾಲೆಯೂ ಇಲ್ಲದೆ ಹೋದರೆ ಖಾಸಗಿ ಶಾಲೆಯಲ್ಲಿ ಶೇ.25 ಸೀಟು ಕೊಡಿಸಿ ಮಗುವಿಗೆ ಶಿಕ್ಷಣ ಕೊಡಿಸಬೇಕು. ಖಾಸಗಿ ಶಾಲೆಯ ಶಿಕ್ಷಣಕ್ಕೆ ಸರ್ಕಾರವೇ ಹಣ ನೀಡುತ್ತದೆ. ಆರ್ ಟಿಇ ಕಾಯ್ದೆ ತಿದ್ದುಪಡಿಯಿಂದ ಸರ್ಕಾರಕ್ಕೆ ಕೋಟಿ ಕೋಟಿ ಹಣ ಉಳಿಯುತ್ತದೆ. ಜೊತೆಗೆ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಹೆಚ್ಚಿಸಲು ಈ ನಿರ್ಧಾರಕ್ಕೆ ಬರಲಾಗಿದೆ.
ರಾಮನಗರದಲ್ಲಿ ಶಕ್ತಿ ಯೋಜನೆ ಲಾಭ ಪಡೆದ 1.35 ಲಕ್ಷ ಮಹಿಳೆಯರು: ನಾರಿ ಶಕ್ತಿಯ ಎದುರು ಖಾಸಗಿ ಬಸ್‌ಗಳು ನಿಶ್ಯಕ್ತಿ
ಹಾರೋಹಳ್ಳಿ ತಾಲೂಕು ಮರಳವಾಡಿ ಹೋಬಳಿಯ ಸ್ಪೂರ್ತಿ ವಿದ್ಯಾನಿಕೇತನ ಅನುದಾನ ರಹಿತ ಶಾಲೆಯಾಗಿದ್ದು, ಇದು ಆರ್‌ಟಿಇ ಅಡಿಯಲ್ಲಿ ಬರುತ್ತದೆ. ಈ ಶಾಲೆಯಲ್ಲಿ ಆರ್‌ಟಿಇ ಅಡಿಯಲ್ಲಿ ಗುರುತಿಸಿದ್ದ 10 ಸೀಟುಗಳ ಪೈಕಿ 5 ಸೀಟುಗಳು ಮಾತ್ರ ಭರ್ತಿಯಾಗಿವೆ. ಪೋಷಕರು ಆರ್‌ಟಿಇ ಅಡಿಯಲ್ಲಿ ಅರ್ಜಿ ಹಾಕಲು ಒಲವು ತೋರುತ್ತಿಲ್ಲ.
- ಗಂಗಣ್ಣಸ್ವಾಮಿ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ.