ಪರಿಷ್ಕೃತ ಪಠ್ಯಪುಸ್ತಕ ವಾಪಸಿಲ್ಲ: ಸಚಿವ ಅಶೋಕ್
* 7-8 ತಪ್ಪಾಗಿದೆ, 10 ದಿನದಲ್ಲಿ ತಿದ್ದುಪಡಿ
* ಬರಗೂರು ಸಮಿತಿ 150 ತಪ್ಪು
* ಗೌಡರ ಪತ್ರಕ್ಕೆ ಸಿಎಂ ಉತ್ತರ
ಬೆಂಗಳೂರು(ಜೂ.24): ರಾಜ್ಯ ಬಿಜೆಪಿ ಸರ್ಕಾರ ರಚಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯಿಂದ ಏಳೆಂಟು ದೋಷಗಳು ಮಾತ್ರ ಆಗಿದ್ದು, ಅವುಗಳನ್ನು ಸರಿಪಡಿಸಿ ಹತ್ತು ದಿನಗಳಲ್ಲಿ ಹೊಸ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯವನ್ನು ಹಿಂಪಡೆಯುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ್ದ ಪಠ್ಯ ಪರಿಷ್ಕರಣೆಯಲ್ಲಿ 150 ದೋಷಗಳು ಇದ್ದವು. ಆದರೂ ಅವರು ಹೊಸ ಪಠ್ಯ ಮುದ್ರಿಸಿರಲಿಲ್ಲ. ಆ ಬಗ್ಗೆ ಯಾರೂ ಚಕಾರವನ್ನೂ ಎತ್ತಿರಲಿಲ್ಲ. ಇದೀಗ ಅಲ್ಪಸಂಖ್ಯಾತರನ್ನು ಓಲೈಸಿ ಹಿಂದೂಗಳನ್ನು ಕೀಳಾಗಿ ತೋರಿಸಿರುವ ಅಂಶಗಳನ್ನು ಕಿತ್ತು ಹಾಕಿದ್ದರಿಂದ ವಿರೋಧ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ದೇವೇಗೌಡ
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಸಚಿವರಾದ ಸಿ.ಸಿ.ಪಾಟೀಲ್, ಬೈರತಿ ಬಸವರಾಜು, ಶಿವರಾಮ ಹೆಬ್ಬಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಸ್ತುತ ಪಠ್ಯ ಪರಿಷ್ಕರಣೆ ಕುರಿತು ಟೀಕೆ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದರು. ಪರಿಷ್ಕೃತ ಪಠ್ಯವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವುದಿಲ್ಲ ಎಂದು ಹೇಳಿದರು.
200 ಪುಟಗಳ ಕೈಪಿಡಿ ಬಿಡುಗಡೆ:
ಇದೇ ವೇಳೆ ಪ್ರೊ.ಜಿ.ಎಸ್.ಮುಡಂಬಡಿತ್ತಾಯ, ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಗಳ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ಪಠ್ಯಗಳ ರಚನೆ, ಪರಿಷ್ಕರಣೆ, ಮರು ಪರಿಷ್ಕರಣೆ ವಿಷಯಗಳಿಗೆ ಸಂಬಂಧಪಟ್ಟಂತೆ ಹೋಲಿಕೆ ಮತ್ತು ವ್ಯತ್ಯಾಸಗಳ ವಿವರವುಳ್ಳ 200ಕ್ಕೂ ಹೆಚ್ಚು ಪುಟಗಳ ಕೈಪಿಡಿ ಬಿಡುಗಡೆ ಮಾಡಿದರು. ಆ ಮೂಲಕ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿನ ಪಠ್ಯಗಳಲ್ಲಿನ ಅವಾಂತರಗಳನ್ನು ಬಹಿರಂಗಗೊಳಿಸುವ ಪ್ರಯತ್ನ ಮಾಡಿದರು.
ಈ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯನವರ ಸರಕಾರವಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ಪಠ್ಯದಲ್ಲಿ ಮೈಸೂರು ಅರಸರಿಗೆ ಸಂಬಂಧಪಟ್ಟವಿಚಾರಗಳನ್ನು ಕಡೆಗಣಿಸಿ ಟಿಪ್ಪುವಿನ ವೈಭವೀಕರಣ ಮಾಡಲಾಗಿತ್ತು. ಭಾರತೀಯ ಸಂಸ್ಕೃತಿ, ರಾಜರ ಆಳ್ವಿಕೆ, ಪರಾಕ್ರಮ, ಔದಾರ್ಯಗಳನ್ನು ಮರೆಮಾಚಿ ಮೊಘಲರು, ಟಿಪ್ಪು ಸೇರಿದಂತೆ ಇತರರನ್ನು ವೈಭವೀಕರಿಸಿರುವುದು ಸ್ಪಷ್ಟವಾಗಿದೆ. ಜತೆಗೆ ಕಮ್ಯುನಿಸ್ಟ್ ಸಿದ್ಧಾಂತವನ್ನು ಹೇರಿದ್ದು ಕಾಣುತ್ತದೆ ಎಂದು ಟೀಕಿಸಿದರು.
Textbook Revision Committeeಯ ಮತ್ತೊಂದು ಎಡವಟ್ಟು ಬಹಿರಂಗ
ಪಠ್ಯದಲ್ಲಿ ಸಿದ್ದು ಕಮ್ಯುನಿಸ್ಟ್ ಪ್ರೇಮ:
ಸಿದ್ದರಾಮಯ್ಯನವರು ಹಿಂದೆ ಬರಗೂರು ರಾಮಚಂದ್ರಪ್ಪ ಸಮಿತಿ ಮೂಲಕ ಪಠ್ಯ ವಿಷಯಗಳಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಹೇರಿದ್ದರು. ಸಮತಾವಾದದ ಹೆಸರಿನಲ್ಲಿ ಕಮ್ಯುನಿಸಂ ಅತ್ಯುತ್ತಮ ಪ್ರಭುತ್ವ ವ್ಯವಸ್ಥೆ ಎಂದು ಬಿಂಬಿಸುವ ಯತ್ನ ಕೂಡ ನಡೆದಿತ್ತು. ಕಮ್ಯುನಿಸ್ಟ್ ಸರ್ವಾಧಿಕಾರ ಆಡಳಿತದಿಂದ ಶಿಸ್ತು ಬರುತ್ತದೆ ಎಂದು ಸೇರಿಸಲಾಗಿತ್ತು. ಹಿಂದೂ ಧರ್ಮ, ಹಿಂದೂ ಪದ, ರಾಮಾಯಣ, ಮಹಾಭಾರತದ ಅಂಶಗಳು, ಶಿವ, ರಾಮ, ಕೃಷ್ಣರ ಕುರಿತಾದ ಅಂಶಗಳನ್ನೂ ಪಠ್ಯದಿಂದ ತೆಗೆಯಲಾಗಿತ್ತು. ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಿಸಿದ ಪಠ್ಯದಲ್ಲಿ ಇಷ್ಟೆಲ್ಲಾ ಲೋಪದೋಷಗಳಿದ್ದರೂ ಆ ಬಗ್ಗೆ ದನಿ ಎತ್ತದ ಕೆಲ ಸಾಹಿತಿಗಳು ಇದೀಗ ಪಠ್ಯ ಪರಿಷ್ಕರಣೆ ಬಗ್ಗೆ ಅಪಸ್ವರ ತೆಗೆಯುತ್ತಿರುವುದಕ್ಕೆ ಏಕೆ ಎಂದು ಕಿಡಿಕಾರಿದರು.
ಮುಸ್ಲಿಮರ ದೌರ್ಜನ್ಯ ಮರೆಮಾಚಲು ಯತ್ನ:
ಹಿಂದೂ ದೇವಾಲಯಗಳನ್ನು ಮುಸ್ಲಿಂ ಆಕ್ರಮಣಕಾರರು ನಾಶಪಡಿಸಿದರು ಎಂಬ ಅಂಶಗಳನ್ನು ಮಕ್ಕಳು ತಿಳಿದುಕೊಳ್ಳಬಾರದು ಎಂಬುದು ಸಿದ್ದರಾಮಯ್ಯನವರ ಆಶಯವಾಗಿತ್ತು. ಇದಕ್ಕಾಗಿಯೇ ಬಿಜೆಪಿ ಸರಕಾರದ ಅವಧಿಯಲ್ಲಿ 7ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ‘ದಿಲ್ಲಿಯ ಸುಲ್ತಾನರು’ ಪಾಠದಲ್ಲಿ ಟರ್ಕರ ದಾಳಿ ಎಂಬ ಉಪಶೀರ್ಷಿಕೆಯಡಿ ಮಹಮದ್ ಘಜನಿ ಭಾರತದ ಮೇಲೆ ದಾಳಿ ಮಾಡಿ ದೇವಾಲಯಗಳನ್ನು ನಾಶ ಪಡಿಸಿದ ವಿಚಾರಗಳನ್ನು ತೆಗೆದು ಹಾಕಿದ್ದಾರೆ. ವಿಜಯನಗರ ಸಾಮ್ರಾಜ್ಯ, ಶಿವಾಜಿ ಕುರಿತ ವಿಚಾರಗಳನ್ನೂ ತೆಗೆದಿದ್ದಾರೆ ಎಂದು ದೂರಿದರು.
ಗೌಡರ ಪತ್ರಕ್ಕೆ ಸಿಎಂ ಉತ್ತರ- ಅಶೋಕ್:
ಪಠ್ಯ ಪರಿಷ್ಕರಣೆ ಕುರಿತ ದೇವೇಗೌಡರ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜನಾಂಗದ ಹಿರಿಯರಾಗಿದ್ದು, ಅವರ ಪತ್ರ ಸಂಬಂಧ ಮುಖ್ಯಮಂತ್ರಿಗಳು ಶುಕ್ರವಾರ ಉತ್ತರ ನೀಡಲಿದ್ದಾರೆ. ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ವಿಚಾರದಲ್ಲಿ ಹಿಂದಿನ ಸಚಿವರು ಯಾವುದೇ ಪೂರ್ವಾಗ್ರಹವಿಲ್ಲದೆ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ನನ್ನ ಭಾವನೆ ಎಂದು ಸಮರ್ಥಿಸಿಕೊಂಡರು.
ಪಠ್ಯ ಪರಿಷ್ಕರಣೆ ವಿಚಾರವಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಎಚ್.ಡಿ.ದೇವೇಗೌಡರನ್ನೂ ಸಚಿವ ಬಿ.ಸಿ. ನಾಗೇಶ್ ಅವರು ಭೇಟಿಯಾಗಿ ವಿವರಣೆ ನೀಡಿದ್ದಾರೆ ಎಂದರು.
ಪಠ್ಯ ಪರಿಷ್ಕರಣೆ ವಿರುದ್ಧ ಗಣ್ಯರ ರಣಕಹಳೆ: ದೇವೇಗೌಡ, ಡಿಕೆಶಿ ಭಾಗಿ
ಕೆಂಪೇಗೌಡರ ಪಠ್ಯವಿರುವ ಪ್ರತಿಯನ್ನು ಡಿಕೆಶಿ ಹರಿದಿದ್ದು ಖಂಡನೀಯ: ಅಶೋಕ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೆಂಪೇಗೌಡರ ಕುರಿತು ವಿಚಾರವಿರುವ ಪಠ್ಯದ ಪ್ರತಿಯನ್ನು ಹರಿದು ಹಾಕಿದ್ದು ಖಂಡನೀಯ. ಹಿಂದೆ ಕೆಂಪೇಗೌಡರ ವಿಚಾರ, ಚಿತ್ರವನ್ನೇ ಸೇರಿಸದ ಬರಗೂರು ರಾಮಚಂದ್ರ ಸಮಿತಿ ಪರಿಷ್ಕರಿಸಿದ ಪಠ್ಯವನ್ನು ಬೇಕಿದ್ದರೆ ಅವರು ಹರಿಯಬೇಕಿತ್ತು. ಕೆಂಪೇಗೌಡರ ವಿಚಾರವಿರುವ ಪಠ್ಯ ಹರಿದಿದ್ದು ಎಷ್ಟುಸರಿ? ಎಂದು ಆರ್. ಅಶೋಕ್ ಪ್ರಶ್ನಿಸಿದರು.
ಇನ್ನು ಕುವೆಂಪು ಅವರು ‘ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂಬ ಸಾಲುಗಳನ್ನು ಬರಗೂರು ರಾಮಚಂದ್ರ ಸಮಿತಿ ಸೇರಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ವೇಳೆಯೂ ಅದೇ ಉಳಿದಿದೆ. ಈ ಕುರಿತು ಸದ್ಯ ತಕರಾರು ತೆಗೆದವರು ಸಿದ್ದರಾಮಯ್ಯನವರ ಕಾಲದಲ್ಲಿ ಬಾಯಿ ಮುಚ್ಚಿಕೊಂಡಿದ್ದು ಏಕೆ ಎಂದೂ ವಾಗ್ದಾಳಿ ನಡೆಸಿದರು.