ಪರಿಷ್ಕೃತ ಪಠ್ಯಪುಸ್ತಕದ ವಿರುದ್ಧ ಸ್ವಾಮೀಜಿಗಳು, ಸಾಹಿತಿಗಳು, ಕನ್ನಡಪರ ಕಾರ್ಯಕರ್ತರು ಒಕ್ಕೊರಲ ಆಕ್ರೋಶ ವ್ಯಕ್ತಪಡಿಸಿದ್ದು, ಒಂದೊಮ್ಮೆ ಸರ್ಕಾರ ನಿರ್ಧಾರ ಬದಲಿಸದಿದ್ದರೆ ಬೃಹತ್‌ ಪ್ರಮಾಣದಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾಮೂಹಿಕ ಎಚ್ಚರಿಕೆಯನ್ನೂ ನೀಡಿದ್ದಾರೆ.

ಬೆಂಗಳೂರು (ಜೂ.19): ಪರಿಷ್ಕೃತ ಪಠ್ಯಪುಸ್ತಕದ ವಿರುದ್ಧ ಸ್ವಾಮೀಜಿಗಳು, ಸಾಹಿತಿಗಳು, ಕನ್ನಡಪರ ಕಾರ್ಯಕರ್ತರು ಒಕ್ಕೊರಲ ಆಕ್ರೋಶ ವ್ಯಕ್ತಪಡಿಸಿದ್ದು, ಒಂದೊಮ್ಮೆ ಸರ್ಕಾರ ನಿರ್ಧಾರ ಬದಲಿಸದಿದ್ದರೆ ಬೃಹತ್‌ ಪ್ರಮಾಣದಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾಮೂಹಿಕ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪಠ್ಯ ಪುಸ್ತಕ ಕೇಸರೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಶ್ವ ಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕರೆ ನೀಡಿದ್ದ ಪ್ರತಿಭಟನಾ ಸಭೆಗೆ ನಿರೀಕ್ಷೆಗೂ ಮೀರಿ ಪಕ್ಷಾತೀತವಾಗಿ ಜನತೆ ಆಗಮಿಸಿದ್ದರು. ಪರಿಷ್ಕರಣ ಸಮಿತಿಯ ಮುಖ್ಯಸ್ಥರಾಗಿದ್ದ ರೋಹಿತ್‌ ಚಕ್ರತೀರ್ಥ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಹೊಸ ಪಠ್ಯಗಳನ್ನು ಮಕ್ಕಳಿಗೆ ನೀಡಬಾರದು. ಹಳೆಯ ಪಠ್ಯಗಳನ್ನೇ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪಠ್ಯ ಪರಿಷ್ಕರಣೆ: ದನಿ ಎತ್ತದ ಸ್ವಾಮೀಜಿಗಳ ಬಗ್ಗೆ ಡಿಕೆಶಿ ಬೇಸರ

ರಾರ‍ಯಲಿಗೆ ಪೊಲೀಸರು ಅನುಮತಿ ನೀಡದಿದ್ದರೂ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಚಿಂತಕರು, ಸಾಹಿತಿಗಳು, ಕನ್ನಡಪರ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ ಬೃಹತ್‌ ಸಂಖ್ಯೆಯಲ್ಲಿ ರಾರ‍ಯಲಿ ಮೂಲಕ ಫ್ರೀಡಂ ಪಾರ್ಕ್ಗೆ ಆಗಮಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೊಸ ಪಠ್ಯ ಪುಸ್ತಕಗಳನ್ನು ನೀಡಿದರೆ ಮುಂದಾಗುವ ಅನರ್ಥಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.

ನಗಾರಿ ಬಾರಿಸುವ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತಿತರರು ಸಭೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡ, ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಡ ಪ್ರತಿಭಟನೆಗೆ ಕಾಂಗ್ರೆಸ್‌ ಯಾವಾಗಲೂ ಬೆಂಬಲ ನೀಡುತ್ತದೆ ಎಂದು ಪ್ರಕಟಿಸಿದರು.

ಗಣ್ಯರ ದಂಡು: ನಂಜಾವಧೂತ ಸ್ವಾಮೀಜಿ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸೇವಾಲಾಲ್‌ ಸ್ವಾಮೀಜಿ, ಸುಪ್ರೀಂಕೋರ್ಚ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು, ವಕೀಲ ಸಿ.ಎಚ್‌.ಹನುಮಂತರಾಯಪ್ಪ, ಸಾಹಿತಿ ಬರಗೂರು ರಾಮಚಂದ್ರಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಎಂ.ಕೃಷ್ಣಪ್ಪ.

ಕನ್ನಡಪರ ಹೋರಾಟಗಾರರಾದ ಪ್ರವೀಣ್‌ ಕುಮಾರ್‌ ಶೆಟ್ಟಿ, ಶಿವರಾಮೇಗೌಡ, ಕರ್ನಾಟಕ ರಾಷ್ಟ್ರೀಯ ಸಮಿತಿಯ ರವಿಕೃಷ್ಣಾ ರೆಡ್ಡಿ, ಮುಖಂಡರಾದ ಮಾರಸಂದ್ರ ಮುನಿಯಪ್ಪ, ಮಾವಳ್ಳಿ ಶಂಕರ್‌, ಹೋರಾಟ ಸಮಿತಿಯ ಆಡಿಟರ್‌ ನಾಗರಾಜ್‌, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸೇರಿದಂತೆ ಶಾಸಕರು, ಮಾಜಿ ಶಾಸಕರು, ಮಾಜಿ ಮೇಯರ್‌ಗಳು, ಪಾಲಿಕೆ ಮಾಜಿ ಸದಸ್ಯರು, ಕಾರ್ಮಿಕ ಮುಖಂಡರು, ಶಿಕ್ಷಣ ತಜ್ಞರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತಿತರರು ಚಾಲನೆ ನೀಡಿದರು.

ರಾಜಭವನ ಚಲೋ: ರಸ್ತೆಯಲ್ಲೇ ಧರಣಿ ಕುಳಿತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಪೊಲೀಸ್‌ ವಶಕ್ಕೆ!

ಪಕ್ಷಾತೀತವಾಗಿ ರಣಕಹಳೆ: ಸ್ವಾಮೀಜಿಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ರಾಜಕೀಯ ಪಕ್ಷಗಳ ಮುಖಂಡರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ವಕೀಲರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಹಲವು ವರ್ಗಗಳಿಗೆ ಸೇರಿದ ಜನರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿ ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ರಣ ಕಹಳೆ ಮೊಳಗಿಸಿದರು. ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪುಸ್ತಕಗಳನ್ನು ಕೇಸರೀಕರಣಗೊಳಿಸುತ್ತಿದೆ. ಇತಿಹಾಸವನ್ನು ತಿರುಚುವ ಕೆಲಸವನ್ನು ಮಾಡುತ್ತದೆ. ಇದನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂಬ ಸಂದೇಶವನ್ನು ರವಾನಿಸಿದರು.