5, 8, 9ನೇ ಕ್ಲಾಸ್‌ಗೆ ಶಾಲಾ ಮಟ್ಟದಲ್ಲೇ ರಿಸಲ್ಟ್
ರಾಜ್ಯಮಟ್ಟದಲ್ಲಿ ನಡೆಸಿದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದ ವಿದ್ಯಾರ್ಥಿಗಳು ಮತ್ತು ಪಾಲಕರು ಈ ಆದೇಶದಿಂದ ನಿರಾಳರಾಗಿದ್ದಾರೆ.
ಬೆಂಗಳೂರು(ಮೇ.21): ರಾಜ್ಯ ಪಠ್ಯಕ್ರಮದ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ‘ಮುಂದಿನ ತರಗತಿಗೆ ಪ್ರವೇಶ’ ಪಡೆಯಲು ಅವಕಾಶ ಕಲ್ಪಿಸಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ರಾಜ್ಯಮಟ್ಟದಲ್ಲಿ ನಡೆಸಿದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದ ವಿದ್ಯಾರ್ಥಿಗಳು ಮತ್ತು ಪಾಲಕರು ಈ ಆದೇಶದಿಂದ ನಿರಾಳರಾಗಿದ್ದಾರೆ.
ರೂಪಣಾತ್ಮಕ ಪರೀಕ್ಷೆ (ಎಫ್‌ಎ) -1, 2, 3, 4 ಮತ್ತು ಸಂಕಲನಾತ್ಮಕ ಮೌಲ್ಯಮಾಪನ (ಎಸ್‌ಎ)-1ರ ಮೌಲ್ಯಾಂಕನ ಆಧರಿಸಿ ಫಲಿತಾಂಶ ಪ್ರಕಟಿಸುವಂತೆ ಎಲ್ಲಾ ಶಾಲೆಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ; ಪೋಷಕರ ಪಾಲಿಗೆ ನುಂಗಲಾರದ ತುತ್ತು!
2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನದ ಫಲಿತಾಂಶವನ್ನು ಏ.8ರಂದು ಶಾಲೆಗಳಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿತ್ತು. ಆದರೆ, ಪರೀಕ್ಷೆ ಮತ್ತು ಫಲಿತಾಂಶಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಲವು ಖಾಸಗಿ ಶಾಲೆಗಳ ಸಂಘಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡಲಾಗಿದೆ. ಆದರೆ, ಮೇ 29ರಿಂದ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ಫಲಿತಾಂಶ ನೀಡದಿದ್ದರೆ ಮಕ್ಕಳು ಮುಂದಿನ ತರಗತಿಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ.
ರಿಸಲ್ಟ್ ಇಲ್ಲದೆ 5, 8, 9ನೇ ಕ್ಲಾಸ್ ಮಕ್ಕಳು ಅತಂತ್ರ..!
ಅಲ್ಲದೇ ಶುಲ್ಕ ಪಾವತಿ, ಬೇರೆ ಶಾಲೆಗೆ ಪ್ರವೇಶ ಪಡೆಯಲು ವರ್ಗಾವಣೆ ಪ್ರಮಾಣಪತ್ರ ಪಡೆಯುವುದು ಮತ್ತು ವ್ಯಾಸಂಗ ಪ್ರಮಾಣಪತ್ರವನ್ನು ಪಡೆಯುವ ಶೈಕ್ಷಣಿಕ ಕೆಲಸಗಳಿಗೆ ಅಡ್ಡಿಯಾಗಿತ್ತು. ಫಲಿತಾಂಶ ನೀಡುವುದರೊಂದಿಗೆ ಇನ್ನು ಮುಂದೆ ಎಲ್ಲಾ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಲಿವೆ.
ವಿಶೇಷ ವರದಿ ಪ್ರಕಟಿಸಿದ್ದ ಕನ್ನಡಪ್ರಭ:
ಫಲಿತಾಂಶ ಪ್ರಕಟವಾಗದ ಕಾರಣ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತು ಮೇ 18ರಂದು ‘ರಿಸಲ್ಟ್ ಇಲ್ಲದೇ 5,8 ಮತ್ತು 9ನೇ ತರಗತಿ ಮಕ್ಕಳು ಅತಂತ್ರ’ ಶೀರ್ಷಿಕೆಯಡಿ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಫಲಿತಾಂಶ ವಿಳಂಬದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ವರದಿ ಬೆಳಕು ಚೆಲ್ಲಿತ್ತು.