ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ; ಪೋಷಕರ ಪಾಲಿಗೆ ನುಂಗಲಾರದ ತುತ್ತು!
2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಬೇಕಾಬಿಟ್ಟಿಯಾಗಿ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ ಮುಂದುವರೆಸಿವೆ. ಜೊತೆಗೆ ಒಂದು ಅಥವಾ ಎರಡು ಕಂತಿನಲ್ಲಿ ಶುಲ್ಕ ಪಾವತಿಗೂ ಶಾಲೆಗಳು ಒತ್ತಾಯಿಸುತ್ತಿವೆ. ಇದು ಪೋಷಕರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಬೆಂಗಳೂರು : 2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಬೇಕಾಬಿಟ್ಟಿಯಾಗಿ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ ಮುಂದುವರೆಸಿವೆ. ಜೊತೆಗೆ ಒಂದು ಅಥವಾ ಎರಡು ಕಂತಿನಲ್ಲಿ ಶುಲ್ಕ ಪಾವತಿಗೂ ಶಾಲೆಗಳು ಒತ್ತಾಯಿಸುತ್ತಿವೆ. ಇದು ಪೋಷಕರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮ ಮೂರೂ ಮಾದರಿಯ ಶಾಲೆಗಳಲ್ಲೂ ಈ ಶುಲ್ಕ ಹೆಚ್ಚಳ ಮಾಡಿರುವುದಾಗಿ ಪೋಷಕರು ಹೇಳುತ್ತಿದ್ದಾರೆ. ಮೊದಲು ಕನಿಷ್ಠ ಎರಡರಿಂದ ಗರಿಷ್ಠ ನಾಲ್ಕು, ಕೆಲ ವಿಶೇಷ ಪ್ರಕರಣಗಳಲ್ಲಿ ಇನ್ನು ಹೆಚ್ಚಿನ ಕಂತಿನ ಅವಕಾಶವನ್ನೂ ಶಾಲೆಗಳೂ ನೀಡುತ್ತಿದ್ದವು. ಆದರೆ, ಈ ಬಾರಿ ಹೆಚ್ಚಿನ ಶಾಲೆಗಳು ಒಂದೇ ಕಂತಿನಲ್ಲಿ ತಪ್ಪಿದರೆ ಎರಡು ಕಂತಿನಲ್ಲಿ ಶುಲ್ಕ ಕಟ್ಟಲೇಬೇಕು. ಅದಕ್ಕಿಂತ ಹೆಚ್ಚು ಅವಕಾಶ ನೀಡಲಾಗುವುದಿಲ್ಲ ಎನ್ನುತ್ತಿವೆ ಎಂಬುದು ಪೋಷಕರ ಅಳಲು.
ರಿಸಲ್ಟ್ ಇಲ್ಲದೆ 5, 8, 9ನೇ ಕ್ಲಾಸ್ ಮಕ್ಕಳು ಅತಂತ್ರ..!
ಬೆಂಗಳೂರಿನ ರಾಜಾಜಿನಗರ, ರಾಜರಾಜೇಶ್ವರಿ ನಗರ, ಗೊರಗುಂಟೆಪಾಳ್ಯ, ಬಾಗಲಗುಂಟೆ ಸೇರಿದಂತೆ ವಿವಿಧೆಡೆ ಇರುವ ಹಲವು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಹಾಗೂ ಪೋಷಕರು ನೀಡಿದ ಮಾಹಿತಿ ಗಮನಿಸಿದಾಗ ಶೇ.20ರಿಂದ 30ರಷ್ಟು ಶುಲ್ಕ ಹೆಚ್ಚಳ ಕಂಡುಬಂದಿದೆ. ಬಜೆಟ್ ಶಾಲೆಗಳು ಎಂದು ಹೇಳಿಕೊಳ್ಳುವ ಆಡಳಿತ ಮಂಡಳಿಗಳು ಕನಿಷ್ಠ 25 ರಿಂದ ಗರಿಷ್ಠ 30 ಸಾವಿರ ರುಪಾಯಿ ಇದ್ದ ಶುಲ್ಕವನ್ನು ಕನಿಷ್ಠ 30 ರಿಂದ ಗರಿಷ್ಠ 35 ಸಾವಿರ ರು.ವರೆಗೂ ಏರಿಕೆ ಮಾಡಿವೆ.
ಅದೇ ರೀತಿ ಸ್ವಲ್ಪ ಹೆಸರುವಾಸಿಯಾದ ಶಾಲೆಗಳಲ್ಲಿ 40 ರಿಂದ 50 ಸಾವಿರ ರು. ವರೆಗೆ ಇದ್ದ ಶುಲ್ಕವನ್ನು ಕನಿಷ್ಠ 50ರಿಂದ 65 ಸಾವಿರ ರು. ವರೆಗೆ ಏರಿಸಿವೆ.ಇನ್ನು ತಮ್ಮ ಶಾಲೆಗಳ ಸೀಟಿಗೆ ಭಾರೀ ಭೇಡಿಕೆ ಎಂದು ತೋರಿಸಿಕೊಳ್ಳುವ ಪ್ರತಿಷ್ಠಿತ ಶಾಲೆಗಳು 70ರಿಂದ 90 ಸಾವಿರ ರು. ವರೆಗೆ ಇದ್ದ ಶುಲ್ಕವನ್ನು 1 ಲಕ್ಷದಿಂದ 1.2 ಲಕ್ಷ ರು.ವರೆಗೂ ಹೆಚ್ಚಿಸಿವೆ. ಇದು ಬೋಧನಾ ಶುಲ್ಕ, ಕ್ರೀಡಾ ಶುಲ್ಕ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ಹಾಗೂ ಪಠ್ಯಪುಸ್ತಕ ಮತ್ತು ಸಮವಸ್ತ್ರಕ್ಕೆ ಸಂಬಂಧಿಸಿದ ಶುಲ್ಕ. ಇದನ್ನು ಹೊರತಾಗಿ ಶಾಲೆಯ ಸಮೀಪ ಮನೆ ಇಲ್ಲದೆ ಸಾರಿಗೆ ವ್ಯವಸ್ಥೆ ಬೇಕಾದ ಮಕ್ಕಳಿಗೆ ಪ್ರತ್ಯೇಕವಾಗಿ 10ರಿಂದ 20 ಸಾವಿರ ರು.ವರೆಗೂ ವ್ಯಾನ್ ಶುಲ್ಕ ವಿಧಿಸುತ್ತಿವೆ.
ಈ ಮಧ್ಯೆ, ಒಂದೇ ಕಂತಿನಲ್ಲಿ ಸಾಧ್ಯವಾಗದಿದ್ದರೆ ಎರಡು ಕಂತಿನಲ್ಲಾದರೂ ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಪ್ರತಿಷ್ಠಿತ ಶಾಲೆಗಳೇ ಹೆಚ್ಚು. ಶುಲ್ಕ ಹೆಚ್ಚಳ ಮತ್ತು ಒಂದೇ ಬಾರಿ ವಸೂಲಿ ಪದ್ಧತಿಯನ್ನು ಪ್ರಶ್ನಿಸಿದರೆ ನಮ್ಮ ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರ ಕೊಡುವುದಾಗಿ ಪ್ರಾಂಶುಪಾಲರ ಮೂಲಕ ಆಡಳಿತ ಮಂಡಳಿಗಳು ಬೆದರಿಕೆ ಹಾಕುತ್ತಿವೆ ಎಂದು ಪೋಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ಶುಲ್ಕ ಏರಿಕೆ ಬಿಸಿ ಅತಿ ಹೆಚ್ಚು ಖಾಸಗಿ ಶಾಲೆಗಳಿರುವ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಇತರೆ ಜಿಲ್ಲೆಗಳ ಶಾಲೆಗಳಲ್ಲೂ ಶುಲ್ಕ ಹೆಚ್ಚಳ ಪ್ರತೀ ವರ್ಷದ ಸಾಮಾನ್ಯ ಪದ್ಧತಿಯಾಗಿದೆ.
ಇದರ ನಡುವೆಯೂ ಕೆಲ ಶಾಲೆಗಳ ಮುಖ್ಯಸ್ಥರು ಬಡ ಮಕ್ಕಳಿಗೆ ಅನುಕೂಲ ಮಾಡಬೇಕೆಂಬ ಸಿದ್ಧಾಂತದ ಮೇಲೆ ನಡೆಯುತ್ತಿದ್ದು, ಶಾಲೆಯನ್ನುಲಾಭದಾಯಕ ಸಂಸ್ಥೆಯಾಗಿ ನೋಡದೆ ಸೇವಾ ಮನೋಭಾವದಿಂದ ನಡೆಸುತ್ತಿರುವವರನ್ನೂ ಅಲ್ಲೊಬ್ಬರು ಇಲ್ಲೊಬ್ಬರನ್ನು ಕಾಣಬಹುದು.ಪ್ರತೀ ವರ್ಷ ಖರ್ಚು ವೆಚ್ಚಗಳು ಹೆಚ್ಚುವುದರಿಂದ ವಾರ್ಷಿಕ ಶೇ.10ರಿಂದ 15ರಷ್ಟು ಶುಲ್ಕ ಹೆಚ್ಚಿಸಲು ಅವಕಾಶವಿದೆ, ಅದರಂತೆ ಶುಲ್ಕ ಹೆಚ್ಚಿಸುವುದು ತಪ್ಪಲ್ಲ. ಆದರೆ, ಪೋಷಕರಿಗೆ ಹೊರೆಯಾಗುವಂತೆ ಶೇ.20, 30ರಷ್ಟು ಹೆಚ್ಚಿಸುವುದನ್ನು ಒಪ್ಪುವುದಿಲ್ಲ. ಆದರೆ, ಅಂತಹ ನಿರ್ಧಾರ ಖಾಸಗಿ ಶಾಲಾ ಸಂಘಟನೆಗಳದ್ದಲ್ಲ. ಆಯಾ ಆಡಳಿತ ಮಂಡಳಿಗಳದ್ದು.
ದೇಶದಾದ್ಯಂತ ಬಾಂಬ್ ಬೆದರಿಕೆ ಬೆನ್ನಲ್ಲೇ ಬೆಂಗಳೂರಿನ ಖಾಸಗಿ ಶಾಲೆಗೆ ಮಧ್ಯರಾತ್ರಿ ಬಾಂಬ್ ಬೆದರಿಕೆ
-ಡಿ.ಶಶಿಕುಮಾರ್, ಕ್ಯಾಮ್ಸ್‌ನ ಪ್ರಧಾನ ಕಾರ್ಯದರ್ಶಿ.
ಈಗಾಗಲೇ ಹಲವು ರಾಜ್ಯಗಳಲ್ಲಿರುವಂತೆ ಶುಲ್ಕ ನಿಯಂತ್ರಣಾ ಕಾನೂನು ಜಾರಿಗೆ ತರಲು ಕರ್ನಾಟಕ ಸರ್ಕಾರವೂ ಮುಂದಾಗಬೇಕು. ಶಿಕ್ಷಕರ ವೇತನ ಸೇರಿದಂತೆ ಖರ್ಚು ವೆಚ್ಚಗಳು ಮಾಸಿಕ ಕಂತಿನಲ್ಲಿ ಬರುವುದರಿಂದ ಶಾಲೆಗಳು ಒಂದು ಅಥವಾ ಎರಡು ಕಂತಲ್ಲಿ ಶುಲ್ಕ ವಸೂಲಿ ಮಾಡುವುದೂ ಅವೈಜ್ಞಾನಿಕ, ಅಕ್ರಮ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು.
-ಬಿ.ಎನ್.ಯೋಗಾನಂದ, ಕರ್ನಾಟಕ ಖಾಸಗಿ ಶಾಲಾ, ಕಾಲೇಜು ಪೋಷಕರ ಸಂಘಟನಗಳ ಸಮನ್ವಯ ಸಮಿತಿ ಅಧ್ಯಕ್ಷ.