ರಿಸಲ್ಟ್ ಇಲ್ಲದೆ 5, 8, 9ನೇ ಕ್ಲಾಸ್ ಮಕ್ಕಳು ಅತಂತ್ರ..!
ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ಈ ಪ್ರಕರಣದ ತುರ್ತು ಇತ್ಯರ್ಥಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳು ಒತ್ತಾಯಿಸುತ್ತಿವೆ.
ಲಿಂಗರಾಜು ಕೋರಾ
ಬೆಂಗಳೂರು(ಮೇ.18): ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆ ಸಂಬಂಧ ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವೆ ಕಾನೂನು ಹೋರಾಟದ ಬಿಕ್ಕಟ್ಟು ಮುಂದುವರೆದಿರುವ ಹಿನ್ನೆಲೆಯಲ್ಲಿ ಆ ಮೂರೂ ತರಗತಿ ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯ ಇಕ್ಕಟ್ಟಿಗೆ ಸಿಲುಕಿದೆ.
ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ಈ ಪ್ರಕರಣದ ತುರ್ತು ಇತ್ಯರ್ಥಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳು ಒತ್ತಾಯಿಸುತ್ತಿವೆ.
ಪ್ರೌಢಶಾಲಾ ಶಿಕ್ಷಕರ ಸಂಘದ ಬಿಗಿಪಟ್ಟಿಗೆ SSLC ವಿಶೇಷ ತರಗತಿ ಆದೇಶ ರದ್ದು: ಸಿಎಂ ಸಿದ್ದರಾಮಯ್ಯ!
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈ ಮೂರೂ ತರಗತಿಗಳಿಗೆ ನಡೆಸಿದ್ದ ಬೋರ್ಡ್ ಪರೀಕ್ಷಾ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿ ಏ.8ರಂದು ಮಧ್ಯಂತರ ಆದೇಶ ಮಾಡಿದೆ. ಒಂದು ವೇಳೆ ಯಾವುದೇ ಶಾಲೆಗಳು ಫಲಿತಾಂಶ ಪ್ರಕಟಿಸಿದ್ದರೆ ಅದನ್ನು ತಡೆಹಿಡಿಯಲೂ ಸೂಚಿಸಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಈ ಮಕ್ಕಳ ಮುಂದಿನ ದಾಖಲಾತಿ ವಿಚಾರವಾಗಿ ಸರ್ಕಾರ ಯಾವುದೇ ಮಧ್ಯಂತರ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ.
ಇದರಿಂದ ಈ ಮಕ್ಕಳ ಪೈಕಿ ವಸತಿ ಶಾಲೆಗಳಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸುವವರಿಗೆ, ಬೇರೆ ಶಾಲೆಗೆ ವರ್ಗಾವಣೆ ಬಯಸುವವರಿಗೆ ಹಾಗೂ ಮುಂದಿನ ತರಗತಿಗಾಗಿ ಬೇರೆ ಶಾಲೆಗೆ ಸೇರಬೇಕಿರುವವರಿಗೆ ಹಾಲಿ ತರಗತಿಯ ಫಲಿತಾಂಶದ ಪ್ರಶ್ನೆ ಅಡ್ಡ ಬರುತ್ತಿದೆ. ಆ ಮಕ್ಕಳು ಮತ್ತು ಅವರ ಪೋಷಕರು ತೀವ್ರ ಆತಂಕ, ಗೊಂದಲಕ್ಕೆ ಸಿಲುಕಿದ್ದಾರೆ.
9ನೇ ತರಗತಿವರೆಗೂ ಯಾವುದೇ ಮಕ್ಕಳನ್ನು ಫೇಲ್ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಪ್ರಕರಣ ಇತ್ಯರ್ಥವಾಗದ ಹೊರತು 5, 8 ಮತ್ತು 9ನೇ ತರಗತಿ ಮಕ್ಕಳು ಮುಂದಿನ ತರಗತಿ ದಾಖಲಾತಿಗೆ ಅರ್ಹರು ಎಂಬುದು ಅಧಿಕೃತವಾಗುವುದಿಲ್ಲ. ಅರ್ಥಾತ್ ಶಿಕ್ಷಣ ಇಲಾಖೆಯು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿನ ಆ ತರಗತಿ ಮಕ್ಕಳ ಯಾವುದೇ ಫಲಿತಾಂಶವನ್ನು ಇಲಾಖೆಯ ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲಿಸುವಂತಿಲ್ಲ. ಇದರಿಂದ ಯಾವುದೇ ಶಾಲೆಗಳು ಈ ತರಗತಿಯ ಮಕ್ಕಳಿಗೆ ಮುಂದಿನ ತರಗತಿಗೆ ದಾಖಲಾತಿ ನೀಡಲಾಗುತ್ತಿಲ್ಲ. ತಂತ್ರಾಂಶದಲ್ಲಿ ಫಲಿತಾಂಶ ದಾಖಲಾಗದ ಹೊರತು ಮುಂದಿನ ತರಗತಿಗೆ ಬೇರೆ ಶಾಲೆಗೆ ಸೇರಬೇಕಾದವರು, ಬೇರೆ ಶಾಲೆಗೆ ವರ್ಗಾವಣೆ ಬಯಸುವವರಿಗೆ ಶಾಲೆಗಳು ವರ್ಗಾವಣೆ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ.
ಎಸ್‌ಎಸ್‌ಎಲ್‌ಸಿ: ಮುಂಜಾನೆ ಪತ್ರಿಕೆ ವಿತರಣೆ ಮಾಡಿ ಕರ್ನಾಟಕಕ್ಕೆ 7ನೇ ಸ್ಥಾನ ಪಡೆದ ಶಂಕರ್
ಮತ್ತೊಂದೆಡೆ ಹಿಂದುಳಿದ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಮೊರಾರ್ಜಿ ದೇಸಾಯಿ, ರಾಣಿಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ನಾರಾಯಣಗುರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಏಕಲವ್ಯ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಮೇ 15ರಿಂದ ಪ್ರಕ್ರಿಯೆ ಆರಂಭವಾಗಿದ್ದು, ತಮ್ಮ ಮಕ್ಕಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಲಿಚ್ಛಿಸಿರುವ ಪೋಷಕರಿಗೆ ಮಗುವಿನ 5ನೇ ತರಗತಿ ಫಲಿತಾಂಶದ ಸಮಸ್ಯೆ ಎದುರಾಗಿದೆ.
ಕೋಟ್ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ವಿಚಾರ ನ್ಯಾಯಾಲಯದಲ್ಲಿದ್ದರೂ 9ನೇ ತರಗತಿವರೆಗೂ ಮಕ್ಕಳನ್ನು ಅನುತ್ತಿರ್ಣಗೊಳಿಸಲು ಈಗಿರುವ ಕಾನೂನಲ್ಲಿ ಅವಕಾಶವೇ ಇಲ್ಲದ ಕಾರಣ ಆ ಮಕ್ಕಳ ಮುಂದಿನ ತರಗತಿ ದಾಖಲಾತಿಗಾಗಲಿ, ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ಮುಂದಿನ ತರಗತಿಯ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆ ಆಗುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.