ಪಶ್ಚಿಮಘಟ್ಟಗಳ ಪರ್ವತ ಶ್ರೇಣಿ, ನರಸಿಂಹ ಪರ್ವತದ ತಪ್ಪಲು, ನಿಸರ್ಗ ರಮಣೀಯ ಮಲೆನಾಡಿನ ಪ್ರಸಿದ್ಧ ಮಳೆದೇವರು ಕಿಗ್ಗಾ ಶ್ರೀ ಋುಷ್ಯಶೃಂಗೇಶ್ವರ ಸ್ವಾಮಿ ನೆಲೆವೀಡು ತಾಲೂಕಿನ ಮರ್ಕಲ್‌ ಪಂಚಾಯಿತಿಯ ಕಿಗ್ಗಾದಲ್ಲಿರುವ ಶ್ರೀ ಅಭಿನವ ರಮಾನಂದ ಪ್ರೌಢಶಾಲೆ ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಾಲೆ ಮುಚ್ಚಿ ಇತಿಹಾಸದ ಪುಟ ಸೇರಿದೆ.

ನೆಮ್ಮಾರ್‌ ಅಬೂಬಕರ್‌

ಶೃಂಗೇರಿ (ಜ.2) : ಪಶ್ಚಿಮಘಟ್ಟಗಳ ಪರ್ವತ ಶ್ರೇಣಿ, ನರಸಿಂಹ ಪರ್ವತದ ತಪ್ಪಲು, ನಿಸರ್ಗ ರಮಣೀಯ ಮಲೆನಾಡಿನ ಪ್ರಸಿದ್ಧ ಮಳೆದೇವರು ಕಿಗ್ಗಾ ಶ್ರೀ ಋುಷ್ಯಶೃಂಗೇಶ್ವರ ಸ್ವಾಮಿ ನೆಲೆವೀಡು ತಾಲೂಕಿನ ಮರ್ಕಲ್‌ ಪಂಚಾಯಿತಿಯ ಕಿಗ್ಗಾದಲ್ಲಿರುವ ಶ್ರೀ ಅಭಿನವ ರಮಾನಂದ ಪ್ರೌಢಶಾಲೆ ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಾಲೆ ಮುಚ್ಚಿ ಇತಿಹಾಸದ ಪುಟ ಸೇರಿದೆ. ಈಗಾಗಲೇ ಶಿಕ್ಷಣ ಇಲಾಖೆ ಮಕ್ಕಳ ಶಿಕ್ಷಣ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಬೇರೆ ಶಾಲೆಗಳಿಗೆ ದಾಖಲಿಸಲು ಕ್ರಮ ಕೈಗೊಂಡಿದೆ. ಇಲ್ಲಿರುವ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

1972ರಲ್ಲಿ ಕಿಗ್ಗಾದಲ್ಲಿ ಹರಿಹರಪುರ(Hariharpur)ದ ಅಂದಿನ ಗುರುಗಳಾದ ಶ್ರೀ ಅಭಿನವ ರಮಾನಂದ ಸರಸ್ವತಿ ಸ್ವಾಮೀಜಿ(Sri abhinava ramananda saraswati swmiji)ಗಳ ಹೆಸರಿನಲ್ಲಿ ಪ್ರೌಢಶಾಲೆ(High school) ಆರಂಭವಾಗಿತ್ತು. ಶಾಲೆ ಈ ವರ್ಷ ಸುವರ್ಣ ಮಹೋತ್ಸವ ಆಚರಿಸಬೇಕಿತ್ತು. ಆದರೆ, ಶಾಲೆಗೆ ವಿದ್ಯಾರ್ಥಿ(Students)ಗಳ ಕೊರತೆ, ಶಾಲೆಯಲ್ಲಿ ಆಂಗ್ಲ ಮಾಧ್ಯಮ ಇಲ್ಲದೇ ಇರುವ ಸಮ​ಸ್ಯೆ​ಗ​ಳಿಂದಾಗಿ ಶಾಲೆಯನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರವಾಸಿ ತಾಣಗಳು ಮಾತ್ರವಲ್ಲ, ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು

ವಿದ್ಯಾರ್ಥಿಗಳ ಕೊರತೆ:

ಜಿಲ್ಲೆಯ ಪ್ರತಿಷ್ಠಿತ ಶಾಲೆ ಎಂದೇ ಹೆಸರಾಗಿದ್ದ ಕಿಗ್ಗಾ ಪ್ರೌಢಶಾಲೆ ಅತ್ಯುತ್ತಮ ಫಲಿತಾಂಶ ಬರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಹಿಂದೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿವರ್ಷ ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಾಲೆಯಲ್ಲಿ 8ನೇ ತರಗತಿಗೆ ಎರಡು ವಿಭಾಗಗಳನ್ನು ಹೊಂದಿದ್ದು, ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು 8ನೇ ತರಗತಿಗೆ ದಾಖಲಾಗುತ್ತಿದ್ದರು. ಈ ಸಾಲಿನಲ್ಲಿ 20 ಮಕ್ಕಳು ಮಾತ್ರ ದಾಖಲಾಗಿದ್ದು 8ನೇ ತರಗತಿಗೆ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ದಾಖಲಾಗಿದ್ದಾರೆ. ಸರ್ಕಾರಿ ನಿಯಮಗಳ ಅನುಸಾರ 25ಕ್ಕಿಂತ ಕಡಿಮೆ ಮಕ್ಕಳು ಹೊಂದಿರುವ ಶಾಲೆಯನ್ನು ಮುಚ್ಚಲಾಗುತ್ತದೆ. ಶಾಲೆಯಲ್ಲಿ 4-5 ತಿಂಗಳಿನಿಂದ ಶಿಕ್ಷಕರಿಗೆ ಸಂಬಳವಿಲ್ಲ, ಶಾಲೆಯಲ್ಲಿ ಮಕ್ಕಳ ದಾಖಲಾತಿ ಇಲ್ಲದೇ ಈ ಪರಿಸ್ಥಿತಿಗೆ ತಲುಪಿದೆ.

ಸುಸಜ್ಜಿತ ಶಾಲೆ:

ಶಾಲೆ ಸುಮಾರು 7 ಎಕರೆ ವಿಸ್ತೀರ್ಣದಲ್ಲಿ ವಿಸ್ತಾರವಾಗಿ, ಸುಸಜ್ಜಿತವಾಗಿ ವ್ಯವಸ್ಥಿತವಾದ ಆಟದ ಮೈದಾನ, ಸಭಾ ಭವನ, ಪ್ರಯೋಗಶಾಲೆ, ಗ್ರಂಥಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಉತ್ತಮ ಶಿಕ್ಷಕರನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲೊಂದು ಇಂತಹ ಸುಸಜ್ಜಿತ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ಪ್ರೌಢಶಾಲೆ ಸುತ್ತಲಿನ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಾದ ಸಿಂದೋಡಿ, ಕೋಗಿನಬೈಲ್‌, ಕಿಗ್ಗಾ ಹಾಗೂ ಗಂಡಘಟ್ಟದಲ್ಲಿ ಸರ್ಕಾರಿ ಶಾಲೆಗಳಿವೆ. ಕೋಗಿನಬೈಲ್‌ ಹಾಗೂ ಸಿಂದೋಡಿ ಶಾಲೆಯಲ್ಲಿ ಕನ್ನಡ ಮಾಧ್ಯಮವಿದೆ. ಇಲ್ಲಿಯೂ ವಿದ್ಯಾರ್ಥಿಗಳ ಕೊರತೆ ಇದೆ. ಆದರೆ, ಕಿಗ್ಗಾ ಹಾಗೂ ಗಂಡಘಟ್ಟಶಾಲೆಯಲ್ಲಿ 5ನೇ ತರಗತಿಯಿಂದ 7ರವರೆಗೆ ಆಂಗ್ಲ ಮಾಧ್ಯಮಕ್ಕೆ ಅನುಮತಿ ಇದೆ. ಶಾಲೆಯಲ್ಲಿ ಉತ್ತೀರ್ಣರಾದ ಮಕ್ಕಳು 8ನೇ ತರಗತಿಗೆ ಸೇರ್ಪಡೆಯಾಗಲು ಖಾಸಗಿ ಅಥವಾ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಕಿಗ್ಗಾ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧÜ್ಯಮಕ್ಕೆ ಅನುಮತಿ ಇಲ್ಲದೇ ಇರುವುದರಿಂದ ಕನ್ನಡ ಮಾಧ್ಯಮದಲ್ಲೆ ಶಾಲೆ ನಡೆಯುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳು ಇಲ್ಲಿಗೆ ಸೇರ್ಪಡೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಲು ಉತ್ಸುಕರಾಗಿರುವುದರಿಂದ ಈ ಶಾಲೆ ನೇಪಥ್ಯಕ್ಕೆ ಸರಿದಿದೆ.

Chikkamagaluru: ಶೃಂಗೇರಿ ಕ್ಷೇತ್ರದ ಹುತ್ತಿನಮಕ್ಕಿಯಲ್ಲಿ ಸ್ಮಶಾನ ಇಲ್ಲ: ಶವವಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು

ಸತಿ, ವಾಹನ ಸೌಲಭ್ಯವೇ ಇಲ್ಲ

ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ವಸತಿ ಸೌಲಭ್ಯವಿದೆ. ಆದರೆ, ಗಂಡುಮಕ್ಕಳಿಗೆ ವಸತಿ ಸೌಲಭ್ಯವಿಲ್ಲ. ಗ್ರಾಮೀಣ ಭಾಗದ ಆಗಿರುವುದರಿಂದ ಶಾಲೆಗೆ ಎಸ್‌ಸಿ ಹಾಗೂ ಎಸ್‌ಟಿ ಮಕ್ಕಳೇ ಹೆಚ್ಚು ಸೇರ್ಪಡೆ ಆಗುತ್ತಾರೆ. ಇಲ್ಲಿ ವಸತಿ ಸೌಲಭ್ಯವಿಲ್ಲದೆ ಇರುವುದರಿಂದ ತಾಲೂಕಿನಲ್ಲಿರುವ ಬೇಗಾರ್‌, ಮೊರಾರ್ಜಿ ವಸತಿ ಶಾಲೆ, ಅಂಬೇಡ್ಕರ್‌ ವಸತಿ ಶಾಲೆಗೆ ಪೋಷಕರು ಮಕ್ಕಳನ್ನು ಸೇರಿಸುತ್ತಾರೆ ಹೆಚ್ಚಾಗಿ ಈ ಭಾಗದಲ್ಲಿ ಕಾರ್ಮಿಕ ವರ್ಗದ ಮಕ್ಕಳೇ ಇರುವುದರಿಂದ ಶಾಲೆಯಲ್ಲಿ ವಸತಿ ಸೌಲಭ್ಯ ಇಲ್ಲದೇ ಇರುವುದು ಒಂದು ಮುಖ್ಯ ಕಾರಣವಾಗಿದೆ. ತಾಲೂಕಿನಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ವಾಹನ ಸೌಲಭ್ಯ ಇರುವುದರಿಂದ ಆ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದ ಶಾಲೆಯಾದ ಇಲ್ಲಿ ವಾಹನ ಸೌಲಭ್ಯ ಇಲ್ಲದಿರುವುದು ಶಾಲೆ ಮುಚ್ಚಲು ಮತ್ತೊಂದು ಕಾರಣವಾಗಿದೆ. ಕೊನೆಗೂ ಸಮಾಜದ ವಿವಿಧ ಕ್ಷೇತ್ರಗಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ಸಲ್ಲಿಸಿದ ಪ್ರಸಿದ್ದ ಶಾಲೆಯೊಂದು ಇತಿಹಾಸದ ಪುಟ ಸೇರಿದ್ದು ವಿಪರ್ಯಾಸವೇ ಸರಿ.