Asianet Suvarna News Asianet Suvarna News

Chikkamagaluru: ಶೃಂಗೇರಿ ಕ್ಷೇತ್ರದ ಹುತ್ತಿನಮಕ್ಕಿಯಲ್ಲಿ ಸ್ಮಶಾನ ಇಲ್ಲ: ಶವವಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೆರೂರು ಗ್ರಾಮದ ಬಳಿಯ ಹುತ್ತಿನಮಕ್ಕಿ ಗ್ರಾಮದಲ್ಲಿ ಸ್ಮಶಾನ ಮಂಜೂರಾತಿಗೆ ಆಗ್ರಹಿಸಿ ಜಯಪುರ ನಾಡ ಕಛೇರಿ ಎದುರು ಗ್ರಾಮಸ್ಥರು ಶವವನ್ನಿಟ್ಟು ಪ್ರತಿಭಟನೆ  ನಡೆಸಿದ್ದಾರೆ.

No graveyard at Huttinamakki in Sringeri Constituency Villagers protested with corpses sat
Author
First Published Dec 21, 2022, 8:01 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.21): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೆರೂರು ಗ್ರಾಮದ ಬಳಿಯ ಹುತ್ತಿನಮಕ್ಕಿ ಗ್ರಾಮದಲ್ಲಿ ಸ್ಮಶಾನ ಮಂಜೂರಾತಿಗೆ ಆಗ್ರಹಿಸಿ ಜಯಪುರ ನಾಡ ಕಛೇರಿ ಎದುರು ಗ್ರಾಮಸ್ಥರು ಶವವನ್ನಿಟ್ಟು ಪ್ರತಿಭಟನೆ  ನಡೆಸಿದ್ದಾರೆ.

ಈ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು ಊರಿನಲ್ಲಿ ರುದ್ರಭೂಮಿ ಇಲ್ಲವಾಗಿದ್ದು ಕಳೆದ ಹತ್ತಾರು ವರ್ಷಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅಂತ್ಯಸಂಸ್ಕಾರಕ್ಕೆ ಜಾಗವನ್ನು ನೀಡುವಂತೆ  ಒತ್ತಾಯಿಸಿ ಮನವಿ ಮಾಡಿಕೊಂಡು ಬಂದಿದ್ದರೂ ಸಹ ಇದುವರೆಗೂ ಈ ಗ್ರಾಮಕ್ಕೆ ಸ್ಮಶಾನ ಮಂಜೂರಾತಿ ಆಗಿಲ್ಲ ಎನ್ನುವ ನೋವು ಗ್ರಾಮಸ್ಥರದ್ದಾಗಿದೆ.

ಚುನಾವಣೆ ಬಹಿಷ್ಕರಿಸಿದರೂ ಪ್ರಯೋಜನವಿಲ್ಲ: ಈ ಬೇಡಿಕೆ ಮುಂದಿಟ್ಟು ಕಳೆದ ಸಲ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸಹ ಬಹಿಷ್ಕರಿಸಲು ಕರೆ ಕೊಟ್ಟಿದ್ದರು, ಆದರೆ ತಾಲ್ಲೂಕು ಆಡಳಿತವು ಆ ಸಂದರ್ಭದಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಇಲ್ಲಿನ ಜನರು ವಾಸವಿರುವ ಭೂಮಿಯ ಸರ್ವೇನಂ 166 ರಲ್ಲಿ ಸುಮಾರು 40ಕ್ಕೂ ಹೆಚ್ಚು ಎಕರೆ ಭೂಮಿ ಕಂದಾಯ ಇಲಾಖೆಗೆ ಸೇರಿದ್ದು ಸದರಿ ಭೂಮಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ ನಮ್ಮ ಮೂಲಭೂತ ಅಗತ್ಯವಾದ ಕನಿಷ್ಠ 3 ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಬೇಕೆಂದು ಈ ಹಿಂದೆ ಸಹ ಒತ್ತಾಯಿಸಿದ್ದರು.

Chikkamagaluru: ರಸ್ತೆ, ಸೇತುವೆ ದುರಸ್ತಿ ಮಾಡದ್ದಕ್ಕೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ

ಮನವಿಗೂ ಜಗ್ಗದ ಅಧಿಕಾರಿಗಳು: ಆದರೆ, ಜನರ ಮನವಿಗೆ ಕ್ಯಾರೆ ಎನ್ನದ ಜಿಲ್ಲಾಡಳಿತದ ವಿರುದ್ಧ ಇಂದು ಗ್ರಾಮಸ್ಥರ ಆಕ್ರೋಶವನ್ನು ಹೊರಹಾಕಿದ್ದಾರೆ. ಗ್ರಾಮದಲ್ಲಿ ಮೃತಪಟ್ಟಿರುವ ಮಂಜುನಾಥ್ ( 62) ಎನ್ನುವರ ಶವವನ್ನು  ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಯಪುರ ನಾಡ ಕಛೇರಿ ಎದುರು ಶವವನ್ನಿಟ್ಟು ಪ್ರತಿಭಟನೆ ನಡೆಸಿದರು.ತದನಂತರ ಸ್ಥಳಕ್ಕೆ ಆಗಮಿಸಿದ ಎನ್ ಆರ್ ಪುರ ತಾಲ್ಲೂಕಿನ ತಹಸಿಲ್ದಾರ್ ರಮೇಶ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ಸು ಪಡೆದು ಗ್ರಾಮಸ್ಥರು  ಗ್ರಾಮದಲ್ಲೇ ಒತ್ತುವರಿ ಮಾಡಿರುವ ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ವನ್ನು ನೆರವೇರಿಸಿದರು.

Follow Us:
Download App:
  • android
  • ios