ಉನ್ನತ ಶಿಕ್ಷಣಕ್ಕೆ ಹೊಸ ರೂಪ, ಉದ್ಯೋಗಾಧಾರಿತ ಪಠ್ಯಕ್ರಮ ಅಳವಡಿಕೆ: ಸಚಿವ ಸುಧಾಕರ್
ಉದ್ಯಮಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲ ಸೃಷ್ಟಿಸಲು ಉನ್ನತ ಶಿಕ್ಷಣ ಇಲಾಖೆಗೆ ಹೊಸ ರೂಪ ನೀಡಲಾಗುವುದು. ಇದಕ್ಕಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬದಲಾವಣೆ ತರಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಬೆಂಗಳೂರು (ಜೂ.11): ಉದ್ಯಮಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲ ಸೃಷ್ಟಿಸಲು ಉನ್ನತ ಶಿಕ್ಷಣ ಇಲಾಖೆಗೆ ಹೊಸ ರೂಪ ನೀಡಲಾಗುವುದು. ಇದಕ್ಕಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬದಲಾವಣೆ ತರಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರದ ನ್ಯಾಷನಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 9ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟುಬದಲಾವಣೆ ಆಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಪದವೀಧರ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಉದ್ಯಮಗಳಿಗೆ ಅಗತ್ಯವಾದ ಶಿಕ್ಷಣ ನೀಡಬೇಕು. ಇದಕ್ಕಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಹಂತ ಹಂತವಾಗಿ ಇಲಾಖೆಯಲ್ಲಿ ಬದಲಾವಣೆ ತರಲಿದೆ ಎಂದರು.
ಆತ್ಮಹತ್ಯೆ ಯೋಚನೆ ಬಂದರೆ ಒಳಮನಸ್ಸು ಕೇಳಿ: ಜೋಗತಿ ಮಂಜಮ್ಮ
ಪಠ್ಯದಲ್ಲಿ ಉದ್ಯಮಗಳಿಗೆ ಬೇಕಾದ ಕೌಶಲವನ್ನು ಕಲಿಸಲಾಗುತ್ತಿಲ್ಲ. ಆದ್ದರಿಂದ ಕ್ಯಾಂಪಸ್ ಆಯ್ಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆಯುತ್ತಿಲ್ಲ. ಆದ್ದರಿಂದ ಉನ್ನತ ಶಿಕ್ಷಣದಲ್ಲಿ ಉದ್ಯೋಗಾಧಾರಿತ ಪಠ್ಯಕ್ರಮ ಅಳವಡಿಸುವ ಕಾರ್ಯ ನಡೆಯುತ್ತಿದೆ. ನೂತನ ರಾಷ್ಟ್ರೀಯ ನೀತಿಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲು ತಜ್ಞರು, ನಿವೃತ್ತ ಉಪ ಕುಲಪತಿಗಳ ಸಲಹೆ ಪಡೆಯಲಾಗುತ್ತಿದೆ. ವಿದ್ಯಾರ್ಥಿಗಳ ಹಿತ ಗಮನದಲ್ಲಿ ಇಟ್ಟುಕೊಂಡು ಬದಲಾವಣೆ ತರಲಾಗುವುದು ಎಂದು ತಿಳಿಸಿದರು.
ಡಾ.ಎಚ್.ಎನ್.ನರಸಿಂಹಯ್ಯ ಅವರ ನೇತೃತ್ವದಲ್ಲಿ ನ್ಯಾಷನಲ್ ಕಾಲೇಜು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ನರಸಿಂಹಯ್ಯ ಅವರ ನೇತೃತ್ವದಲ್ಲೇ ತಾವು ವಿದ್ಯಾಭ್ಯಾಸ ಪೂರೈಸಿದ್ದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿ ನಿಲಯದಲ್ಲೇ ವಾಸವಾಗಿದ್ದು ಅವರೊಂದಿಗಿನ ಒಡನಾಟ ಇಂದಿಗೂ ತಮ್ಮ ಕಣ್ಣ ಮುಂದಿದೆ. ಇಲ್ಲಿ ಕಲಿತ ಸಂಸ್ಕಾರ ಮರೆಯಲು ಸಾಧ್ಯವಿಲ್ಲ ಎಂದು ಸಚಿವರು ನೆನಪಿಸಿಕೊಂಡರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಎನ್‌ಇಎಸ್ ಅಧ್ಯಕ್ಷ ಡಾ.ಎಚ್.ಎನ್.ಸುಬ್ರಹ್ಮಣ್ಯ, ಕಾರ್ಯದರ್ಶಿಗಳಾದ ವಿ.ವೆಂಕಟಶಿವಾರೆಡ್ಡಿ, ಬಿ.ಎಸ್.ಅರುಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಅವಧಿಯ 40% ಕಮಿಷನ್ ಬಗ್ಗೆ ತನಿಖೆ ಖಚಿತ: ಸಿಎಂ ಸಿದ್ದರಾಮಯ್ಯ
ರಾಜ್ಯದ 32 ಸರ್ಕಾರಿ ವಿವಿಗಳಿಗೆ ಶೀಘ್ರದಲ್ಲೇ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಸದಸ್ಯರನ್ನು ನೇಮಿಸಲಾಗುವುದು. ಶೀಘ್ರ ನೇಮಕಕ್ಕೆ ತಜ್ಞರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬಜೆಟ್‌ನಲ್ಲಿ ಇಲಾಖೆಗೆ ನೀಡುವ ಅನುದಾನವನ್ನು ಆಧರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು.
-ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ