Asianet Suvarna News Asianet Suvarna News

ಬಿಜೆಪಿ ಅವಧಿಯ 40% ಕಮಿಷನ್‌ ಬಗ್ಗೆ ತನಿಖೆ ಖಚಿತ: ಸಿಎಂ ಸಿದ್ದರಾಮಯ್ಯ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಪಿಎಸ್‌ಐ ಹಗರಣ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಜೊತೆಗೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದ 40% ಕಮಿಷನ್‌ ಆರೋಪ ಕುರಿತಾಗಿಯೂ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

Investigation on 40 Percent commission of BJP period is certain Says CM Siddaramaiah gvd
Author
First Published Jun 11, 2023, 5:24 AM IST

ಮೈಸೂರು (ಜೂ.11): ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಪಿಎಸ್‌ಐ ಹಗರಣ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಜೊತೆಗೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದ 40% ಕಮಿಷನ್‌ ಆರೋಪ ಕುರಿತಾಗಿಯೂ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಂಜನಗೂಡು ತಾಲೂಕಿನ ಬಿಳಿಗೆರೆ ಬೋರೆಯಲ್ಲಿ ಶನಿವಾರ ನಡೆದ ವರುಣ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಮಾರಂಭಕ್ಕೆ ತೆರಳುವುದಕ್ಕೂ ಮುನ್ನ ಮೈಸೂರಿನ ಸುತ್ತೂರು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಪಿಎಸ್‌ಐ ಹಗರಣ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಎಡಿಜಿಪಿ ಅಮೃತ್‌ ಪೌಲ್‌ ಅವರು ಈಗಾಗಲೇ ಜೈಲಿನಲ್ಲಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು.

ಹಿಂದಿನ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದ 40% ಕಮಿಷನ್‌ ಆರೋಪ ಕುರಿತಾಗಿಯೂ ತನಿಖೆ ನಡೆಸುತ್ತೇವೆ ಎಂದರು. ‘ಈ ಕುರಿತು ನನ್ನ ಇಲಾಖೆಯಿಂದಲೇ ತನಿಖೆ ಆರಂಭಿಸಿ’ ಎಂಬ ಮಾಜಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಯಾರೋ ಹೇಳಿದರು ಎಂದು ತನಿಖೆ ಮಾಡಲು ಸಾಧ್ಯವಿಲ್ಲ. ನಾವು ಶ್ರೀನಿವಾಸ ಪೂಜಾರಿ ಅಥವಾ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿಕೊಂಡು ತನಿಖೆ ಮಾಡಬೇಕಿಲ್ಲ ಎಂದರು. ಅಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮಗೆ ಬೇಕಾದವರಿಗೆ ಭೂಮಿ ಕೊಟ್ಟಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಮಾಹಿತಿ ಕಲೆ ಹಾಕಲು ಸಚಿವ ಕೃಷ್ಣ ಬೈರೇಗೌಡರಿಗೆ ಸೂಚನೆ ನೀಡಿದ್ದೇನೆ ಎಂದರು.

ಸಂವಿಧಾನ ಬದಲಿಸುತ್ತೇವೆ ಎಂದಿದ್ದವರನ್ನೇ ಬದಲಾಯಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ಜನ ಕೇಳಿದರೆ ವರುಣ ತಾಲೂಕು ಮಾಡುತ್ತೇವೆ: ಜನ ಕೇಳಿದರೆ ಮಾತ್ರ ವರುಣವನ್ನು ತಾಲೂಕು ಕೇಂದ್ರವಾಗಿ ಮಾಡುತ್ತೇವೆ. ಬೊಮ್ಮಾಯಿ ಕೇಳಿದ್ದಕ್ಕೆಲ್ಲ ಮಾಡಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ವರುಣ ಕ್ಷೇತ್ರಕ್ಕೆ ಆಗಮಿಸಿದ ಅವರು ಸುತ್ತೂರು ಹ್ಯಾಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ನಂಜನಗೂಡಲ್ಲಿ ಮಾತನಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯನವರು ಇಷ್ಟು ವರ್ಷ ವರುಣವನ್ನು ಪ್ರತಿನಿಧಿಸಿದ್ದಾರೆ. ಆದರೆ, ಈವರೆಗೂ ವರುಣವನ್ನು ತಾಲೂಕು ಮಾಡಲು ಅವರಿಂದ ಆಗಲಿಲ್ಲ ಎಂದು ಟೀಕಿಸಿದ್ದರು. ಶನಿವಾರ ಈ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ನಾನು ಚುನಾವಣಾ ಪ್ರಚಾರಕ್ಕೆ ಹೋದಾಗ ಜನ ಯಾರೂ ಕೂಡ ವರುಣವನ್ನು ತಾಲೂಕು ಕೇಂದ್ರ ಮಾಡಿ ಎಂದು ಕೇಳಲಿಲ್ಲ. ಇದನ್ನು ಬಿಜೆಪಿಯ ಬೊಮ್ಮಾಯಿ ಹೇಳಿದ್ದು. ಜನ ಕೇಳಿದರೆ ಮಾಡುತ್ತೇವೆ. ಬೊಮ್ಮಾಯಿ ಹೇಳಿದರೆ ಕೇಳುವುದಿಲ್ಲ’ ಎಂದರು.

ಆ.1ರಿಂದ ಗೃಹಜ್ಯೋತಿ ಯೋಜನೆ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಬಿಜೆಪಿ ಸರ್ಕಾರದ ಅವಧಿಯ ಪಿಎಸ್‌ಐ ಹಗರಣ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಜೊತೆಗೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದ 40% ಕಮಿಷನ್‌ ಆರೋಪ ಕುರಿತಾಗಿಯೂ ತನಿಖೆ ನಡೆಸುತ್ತೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮಗೆ ಬೇಕಾದವರಿಗೆ ಭೂಮಿ ಕೊಟ್ಟಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಮಾಹಿತಿ ಕಲೆ ಹಾಕಲು ಸಚಿವ ಕೃಷ್ಣ ಬೈರೇಗೌಡರಿಗೆ ಸೂಚನೆ ನೀಡಿದ್ದೇನೆ.
- ಸಿದ್ದರಾಮಯ್ಯ ಮುಖ್ಯಮಂತ್ರಿ

Follow Us:
Download App:
  • android
  • ios