Asianet Suvarna News Asianet Suvarna News

10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್‌ ಸೀಟ್‌: ಎನ್‌ಎಂಸಿ ಷರತ್ತಿಗೆ ಸಚಿವ ಶರಣಪ್ರಕಾಶ ಪಾಟೀಲ್‌ ವಿರೋಧ

ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣದ ಉತ್ತಮ ವಾತಾವರಣವಿದೆ, ಬಡವರೂ ವೈದ್ಯರಾಗಬೆಕೆಂಬ ಪರಿಕಲ್ಪನೆಯಲ್ಲಿ ನಾವು ಜಿಲ್ಲೆಗೊಂದು ವೈದ್ಯ ಕಾಲೇಜು ಸ್ಥಾಪನೆಗೆ ಮುಂದಾಗಿದ್ದೇವೆ. ಈಗಾಗಲೇ 22 ಜಿಲ್ಲೆಗಳಲ್ಲಿ ಸರಕಾರಿ ವೈದ್ಯ ಕಾಲೇಜುಗಳಿವೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜಿಲ್ಲೆಗಳಲ್ಲಿ ವೈದ್ಯ ಕಾಲೇಜುಗಳ ಮಂಜೂರಿಗೆ ನಾವು ಯೋಜನೆ ರೂಪಿಸುತ್ತಿರುವಾಗಲೇ ಪ್ರಗತಿ ವಿರೋಧಿ ಇಂತಹ ನಿಯಮಗಳನ್ನ ರಾಷ್ಟ್ರೀಯ ವೈದ್ಯಕೀಯ ಆಯೋಗದವರು ರೂಪಿಸಿರೋದು ಅದೆಷ್ಟು ಸರಿ?: ಡಾ. ಶರಣಪ್ರಕಾಶ ಪಾಟೀಲ್‌

Minister Dr. Sharan Prakash Patil React to 100 MBBS Seats per 10 lakh Population grg
Author
First Published Oct 1, 2023, 8:31 AM IST

ಕಲಬುರಗಿ(ಅ.01):  ಹತ್ತು ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್‌ ಸೀಟುಗಳ ಅನುಪಾತದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರೂಪಿಸಿರುವ ಹೊಸ ಷರತ್ತನ್ನು ಪ್ರತಿಗಾಮಿ ಧೋರಣೆ ಎಂದು ಬಣ್ಣಿಸಿರುವ ರಾಜ್ಯ ಸರ್ಕಾರ ಇದನ್ನು ಕಟುವಾಗಿ ಟೀಕಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ. 

ಶನಿವಾರ ಕಲಬುರಗಿ ಜಿಲ್ಲೆಯಲ್ಲಿ ಸಂಧಿವಾತ ಶಾಸ್ತ್ರಜ್ಞರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯ ಕಾಲೇಜುಗಳ ಅನುಮತಿಗೆ ಎನ್‌ಎಂಸಿ ವಿಧಿಸಿರುವ ಈ ಹೊಸ ಮಾನದಂಡದಿಂದ ರಾಜ್ಯದಲ್ಲಿನ ವೈದ್ಯಕೀಯ ಶಿಕ್ಷಣದ ವಾತಾವರಣವನ್ನೇ ಹಾಳುಗೆಡುವಲಿದೆ ಎಂದು ಆತಂಕ ಹೊರಹಾಕಿದರು.

ಕರ್ನಾಟಕಕ್ಕೆ ಮೆಡಿಕಲ್‌ ಶಾಕ್: ಹೊಸ ವೈದ್ಯಕೀಯ ಕಾಲೇಜಿಗೆ ಬ್ರೇಕ್‌?

ವೈದ್ಯ ಶಿಕ್ಷಣ ಕೇಂದ್ರ ಹಾಗೂ ರಾಜ್ಯದ ಪಟ್ಟಿಯಲ್ಲಿರೋದರಿಂದ ಯಾವುದೇ ಇಂತಹ ನಿಯಮಗಳನ್ನು ರೂಪಿಸುವ ಮುಂಚೆ ರಾಜ್ಯಗಳ ಅಭಿಪ್ರಾಯ ಆಲಿಸುವುದು ವಾಡಿಕೆ. ಆದರೆ ಇಲ್ಲೀಗ ಎನ್‌ಎಂಸಿಯವರು ಯಾರ ಅಭಿಪ್ರಾಯಗಳನ್ನು ಕೇಳದೆ ಇಂತಹ ಪ್ರತಿಗಾಮಿ ಹಾಗೂ ಪ್ರಗತಿ ವಿರೋಧಿ ಧೋರಣೆಯ ಷರತ್ತು ರೂಪಿಸಿ ಜಾರಿಗೆ ತರಲು ಮುಂದಾಗಿರೋದನ್ನ ತಾವು ಪ್ರಶ್ನಿಸೋದಾಗಿ ಹೇಳಿದರು.

ಎನ್‌ಎಂಸಿ ಮಾನಂದ ಒಪ್ಪಿಕೊಳ್ಳಲಾಗದು:

ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣದ ಉತ್ತಮ ವಾತಾವರಣವಿದೆ, ಬಡವರೂ ವೈದ್ಯರಾಗಬೆಕೆಂಬ ಪರಿಕಲ್ಪನೆಯಲ್ಲಿ ನಾವು ಜಿಲ್ಲೆಗೊಂದು ವೈದ್ಯ ಕಾಲೇಜು ಸ್ಥಾಪನೆಗೆ ಮುಂದಾಗಿದ್ದೇವೆ. ಈಗಾಗಲೇ 22 ಜಿಲ್ಲೆಗಳಲ್ಲಿ ಸರಕಾರಿ ವೈದ್ಯ ಕಾಲೇಜುಗಳಿವೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜಿಲ್ಲೆಗಳಲ್ಲಿ ವೈದ್ಯ ಕಾಲೇಜುಗಳ ಮಂಜೂರಿಗೆ ನಾವು ಯೋಜನೆ ರೂಪಿಸುತ್ತಿರುವಾಗಲೇ ಪ್ರಗತಿ ವಿರೋಧಿ ಇಂತಹ ನಿಯಮಗಳನ್ನ ರಾಷ್ಟ್ರೀಯ ವೈದ್ಯಕೀಯ ಆಯೋಗದವರು ರೂಪಿಸಿರೋದು ಅದೆಷ್ಟು ಸರಿ? ಎಂದು ಡಾ. ಶರಣಪ್ರಕಾಶ ಪಾಟೀಲ್‌ ಖಾರವಾಗಿ ಪ್ರಶ್ನಿಸಿದರು.

ಇಡೀ ದೇಶವನ್ನು ಗಮನಿಸಿದಾಗ ವೈದ್ಯ ಶಿಕ್ಷಣದಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉತ್ತಮ ವಾತಾವರಣವಿದೆ. ಇಲ್ಲಿನ ವೈದ್ಯ ಶಿಕ್ಷಣ ತುಂಬ ಪ್ರಗತಿ ಸಾಧಿಸುತ್ತ ಹೊರಟಿರುವಾಗಲೇ ಇಂತಹ ನಿಯಮ ಜಾರಿಯಾದಲ್ಲಿ ಅದು ದಕ್ಷಿಣ ಬಾರತದಲ್ಲಿನ ರಾಜ್ಯಗಳಲ್ಲಿನ ವೈದ್ಯ ಶಿಕ್ಷಣದ ಪ್ರಗತಿಗೇ ಪೆಟ್ಟು ನೀಡುವ ಆತಂಕವಿದೆ ಎಂದು ಸಚಿವರು ಕಳವಳ ಹೊರಹಾಕಿದರು.

ಉತ್ತರ ಭಾರತದಲ್ಲಿ ವೈದ್ಯ ಶಿಕ್ಷಣ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ, ಅಲ್ಲಿನ ಜನಸಂಖ್ಯೆ, ವೈದ್ಯ ಸೀಟುಗಳ ಮಧ್ಯೆ ಭಾರಿ ಕೊರತೆ ಕಾಡುತ್ತಿದೆ. ಅಲ್ಲಿ ಅನೇಕ ನಿಯಮಗಳನ್ನು ರೂಪಿಸಿ ವೈದ್ಯ ಶಿಕ್ಷಣ ಸರಿ ದಾರಿಯಲ್ಲಿ ಸಾಗುವಂತೆ ಮಾಡೋದನ್ನ ಬಿಟ್ಟು ಎನ್‌ಎಂಸಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿನ ಹಲವು ರಾಜ್ಯಗಳಲ್ಲಿ ವೈದ್ಯ ಶಿಕ್ಷಣ ಉತ್ತಮ ಭವಿಷ್ಯ ಕಂಡುಕೊಂಡಿರುವಾಗಲೇ ಪ್ರತಿಗಾಮಿ ನಿಯಮಗಳನ್ನು ರೂಪಿಸಿ ಅದರ ಕತ್ತು ಹಿಸುಕುವ ಧೋರಣೆ ಅನುಸರಿಸುತ್ತಿರೋದನ್ನ ನಾವೆಲ್ಲರೂ ಪ್ರಶ್ನಿಸಲೇಬೇಕಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಆ. 16 ರಂದು ಹೊರಡಿಸಿರುವ ತನ್ನ ಗೆಜೆಟ್‌ ನೋಟಿಫಿಕೇಷನ್‌ನಲ್ಲಿ 2024- 25 ರಿಂದ ತಲೆ ಎತ್ತಲಿರುವ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಪರವಾನಗಿ ನೀಡಲು ಅಗತ್ಯವಾಗಿ ಬೇಕಾಗುವ ಸಿಬ್ಬಂದಿ, ಕಾಲೇಜು ಕಟ್ಟಡ,, ಇತ್ಯಾದಿಗಳೆಲ್ಲದರ ನಿಯಮ, ಷರತ್ತು ರೂಪಿಸುತ್ತ 1 ವೈದ್ಯ ವಿದ್ಯಾಲಯ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟಿನಂತೆ ಅನುಪಾತ ಪಾಲನೆ ಮಾಡಲೇಬೇಕು ಎಂದು ವಿಧಿಸಿರುವ ಷರತ್ತೇ ಇದೀಗ ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಷರತ್ತು ಅನ್ವಯವಾದಲ್ಲಿ ರಾಜ್ಯದ ಅನೇಕ ಜಿಲ್ಲೆಗಳು ಹೊಸ ವೈದ್ಯಕೀಯ ಕಾಲೇಜು ಹೊಂದುವುದು ಅಸಾಧ್ಯವಾಗಲಿದೆ. ಜಿಲ್ಲೆಗೊಂದು ವೈದ್ಯ ವಿದ್ಯಾಲಯ ಆರಂಭಿಸುವ ದಿಶೆಯಲ್ಲಿ ದಾಪುಗಾಲು ಹಾಕುತ್ತಿದ್ದ ರಾಜ್ಯ ಸರಕಾರದ ವೇಗಕ್ಕೆ ಎನ್‌ಎಂಸಿಯ ಈ ಷರತ್ತು ಬ್ರೆಕ್‌ ಹಾಕಿದಂತಾಗಲಿದೆ.

ಬಿಎಂಸಿಯಲ್ಲಿ ಶೀಘ್ರ ಸಂಧಿವಾತ ಶಾಸ್ತ್ರದ ವಿಭಾಗ

ಸಂಧಿವಾತ ಶಾಸ್ತ್ರಜ್ಞರ ಆಗ್ರಹದಂತೆ ಶೀಘ್ರದಲ್ಲೇ ಬೆಂಗಳೂರು ವೈದ್ಯಕೀಯ ವಿದ್ಯಾಲಯದಲ್ಲಿ ಸಂಧಿವಾತ ಶಾಸ್ತ್ರ ಅಧ್ಯಯನ ವಿಭಾಗ ಆರಂಭಿಸಲಾಗುವುದು, ರಾಜ್ಯದ ಎಲ್ಲಾ ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆಗಳಲ್ಲಿ ಸಂಧಿವಾತ ಶಾಸ್ತ್ರ ವಿಭಾಗ, ಅಲ್ಲೊಬ್ಬರು ಸಂಧಿವಾತ ಶಾಸ್ತ್ರಜ್ಞರ ನೇಮಕಕ್ಕೆ ಒತ್ತು ನೀಡಲಾಗುತ್ತದೆ ಎಂದೂ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಕೊಡಗು: ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಚಿಕಿತ್ಸೆ, ರೋಗಿಗಳೇನು ಪ್ರಯೋಗಾಲದ ವಸ್ತುಗಳೇ ಎಂದ ಸಾರ್ವಜನಿಕರು

ಸಂಧಿವಾತ ಶಾಸ್ತ್ರದ ಅಧ್ಯಯನ ವಿಭಾಗಗಳೇ ಯಾಕೆಂದು ಅವುಗಳ ಅಸ್ತಿತ್ವವೇ ಇರದಂತೆ ಮಾಡುವ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾದ ನಿಯಮಗಳು ಬರುತ್ತಿವೆ. ಹೀಗಿದ್ದರೂ ನಾವು ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ಸಂಧಿವಾತ ಶಾಸ್ತ್ರದ ಜರೂರತ್ತು ಗಮನಿಸಿ ಇಂತಹ ವಿಭಾಗಗಳನ್ನು ಸ್ಥಾಪಿಸಲು ಚಿಂತನೆ ನಡೆಸುತ್ತೇವೆ ಎಂದೂ ಅವರು ಭರವಸೆ ನೀಡಿದ್ದಾರೆ.

ಕಲಬುರಗಿ, ಮೈಸೂರು, ಮಂಗಳೂರು, ಶಿವಮೊಗ್ಗಗಳಲ್ಲಿ ಬರುವ ದಿನಗಳಲ್ಲಿ ತಲೆ ಎತ್ತಿಲರುವ ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆಗಳಲ್ಲೆಲ್ಲಾ ಸಂಧಿವಾತ್ ಶಾಸ್ತ್ರ, ಸಂಧಿವಾತ ರೋಗದ ಚಿಕಿತ್ಸಾ ವಿಭಾಗಗಗಳನ್ನು ಸ್ಥಾಪಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ವೈದ್ಯ ಲೋಕಕ್ಕೆ ಭರವಸೆ ನೀಡಿದ್ದಾರೆ.

Follow Us:
Download App:
  • android
  • ios