Asianet Suvarna News Asianet Suvarna News

ಕರ್ನಾಟಕಕ್ಕೆ ಮೆಡಿಕಲ್‌ ಶಾಕ್: ಹೊಸ ವೈದ್ಯಕೀಯ ಕಾಲೇಜಿಗೆ ಬ್ರೇಕ್‌?

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ತೆಲಂಗಾಣವನ್ನು ಒಳಗೊಂಡ ದಕ್ಷಿಣ ಭಾರತದಲ್ಲಿ ಈಗಾಗಲೇ ಈ ಮಿತಿಗಿಂತ ಹೆಚ್ಚು ಮೆಡಿಕಲ್‌ ಸೀಟುಗಳಿವೆ. ಹೀಗಾಗಿ ಇನ್ನು ಕೆಲವು ವರ್ಷಗಳ ಕಾಲ ಈ ರಾಜ್ಯಗಳಲ್ಲಿ ಹೊಸ ಮೆಡಿಕಲ್‌ ಕಾಲೇಜು ಆರಂಭಿಸುವುದು ಹಾಗೂ ಈಗಿರುವ ಕಾಲೇಜುಗಳಲ್ಲಿ ಮೆಡಿಕಲ್‌ ಸೀಟುಗಳ ಪ್ರವೇಶವನ್ನು ಹೆಚ್ಚಿಸುವುದು ಸಾಧ್ಯವಾಗುವುದಿಲ್ಲ.

Central Government Break for New Medical Colleges in Start in Karnataka grg
Author
First Published Sep 28, 2023, 5:45 AM IST

ನವದೆಹಲಿ(ಸೆ.28):  ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಹೊಸ ವೈದ್ಯಕೀಯ ಕಾಲೇಜು ತೆರೆಯಲು ಅಥವಾ ಈಗಿರುವ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಿಲ್ಲದಂತೆ ಮಾಡುವ ನೂತನ ನಿಯಮವೊಂದನ್ನು ಕೇಂದ್ರ ಸರ್ಕಾರ ತಂದಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಆಗಸ್ಟ್‌ 16ರಂದು ಹೊರಡಿಸಿರುವ ಆದೇಶದ ಪ್ರಕಾರ, ಯಾವುದೇ ರಾಜ್ಯದಲ್ಲಿ ತಲಾ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್‌ ಸೀಟುಗಳು ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರಬೇಕು ಎಂಬ ನಿಯಮವಿದೆ. ಆದರೆ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ತೆಲಂಗಾಣವನ್ನು ಒಳಗೊಂಡ ದಕ್ಷಿಣ ಭಾರತದಲ್ಲಿ ಈಗಾಗಲೇ ಈ ಮಿತಿಗಿಂತ ಹೆಚ್ಚು ಮೆಡಿಕಲ್‌ ಸೀಟುಗಳಿವೆ. ಹೀಗಾಗಿ ಇನ್ನು ಕೆಲವು ವರ್ಷಗಳ ಕಾಲ ಈ ರಾಜ್ಯಗಳಲ್ಲಿ ಹೊಸ ಮೆಡಿಕಲ್‌ ಕಾಲೇಜು ಆರಂಭಿಸುವುದು ಹಾಗೂ ಈಗಿರುವ ಕಾಲೇಜುಗಳಲ್ಲಿ ಮೆಡಿಕಲ್‌ ಸೀಟುಗಳ ಪ್ರವೇಶವನ್ನು ಹೆಚ್ಚಿಸುವುದು ಸಾಧ್ಯವಾಗುವುದಿಲ್ಲ.

ಮಂಗಳೂರು ಕಾಲೇಜಿನಲ್ಲಿ ಎಂಬಿಬಿಎಸ್‌ ಪ್ರವೇಶ ವಿವಾದ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕರ್ನಾಟಕದಲ್ಲಿ ದೇಶದಲ್ಲೇ ಅತಿಹೆಚ್ಚು ಸೀಟು:

ಕರ್ನಾಟಕದ ಸದ್ಯದ ಜನಸಂಖ್ಯೆ 6.76 ಕೋಟಿ. ರಾಜ್ಯದಲ್ಲಿರುವ ಮೆಡಿಕಲ್‌ ಸೀಟುಗಳು 11,695. ಹತ್ತು ಲಕ್ಷಕ್ಕೆ 100 ವೈದ್ಯಕೀಯ ಸೀಟಿನ ನಿಯಮ ಅನ್ವಯಿಸಿದರೆ ರಾಜ್ಯದಲ್ಲಿ 6,770 ಮೆಡಿಕಲ್‌ ಸೀಟುಗಳು ಮಾತ್ರ ಇರಬೇಕು. ಈಗಾಗಲೇ ಇಲ್ಲಿ 5000 ಸೀಟುಗಳು ಹೆಚ್ಚುವರಿ ಇವೆ. ಅಲ್ಲದೆ, ಕರ್ನಾಟಕದ ಮೆಡಿಕಲ್‌ ಕಾಲೇಜುಗಳಲ್ಲಿ ನಮ್ಮ ದೇಶದಲ್ಲೇ ಅತಿಹೆಚ್ಚು ಸೀಟುಗಳು ಲಭ್ಯವಿವೆ.

ಇಡೀ ದಕ್ಷಿಣ ಭಾರತದಲ್ಲಿ ಇದೇ ಕತೆ:

5.34 ಕೋಟಿ ಜನಸಂಖ್ಯೆಯ ಆಂಧ್ರದಲ್ಲಿ 5346 ಮೆಡಿಕಲ್‌ ಸೀಟುಗಳಿರಬೇಕಿತ್ತು. ಆದರೆ 6435 ಇದೆ. 3.57 ಕೋಟಿ ಜನಸಂಖ್ಯೆಯ ಕೇರಳದಲ್ಲಿ 3577 ಮೆಡಿಕಲ್‌ ಸೀಟುಗಳಿರಬೇಕಿತ್ತು. ಆದರೆ 4655 ಇದೆ. 7.68 ಕೋಟಿ ಜನಸಂಖ್ಯೆಯ ತಮಿಳುನಾಡಿನಲ್ಲಿ 7686 ಮೆಡಿಕಲ್‌ ಸೀಟುಗಳಿರಬೇಕಿತ್ತು. ಆದರೆ 11,600 ಸೀಟುಗಳಿವೆ. 3.8 ಕೋಟಿ ಜನಸಂಖ್ಯೆಯ ತೆಲಂಗಾಣದಲ್ಲಿ 3809 ಮೆಡಿಕಲ್‌ ಸೀಟುಗಳಿರಬೇಕಿತ್ತು. ಆದರೆ ಈಗಾಗಲೇ 8540 ಸೀಟುಗಳಿವೆ.

ಬೇರೆ ರಾಜ್ಯಗಳ ಕತೆ ಏನು:

ಸಣ್ಣ ರಾಜ್ಯಗಳಾದ ಹಿಮಾಚಲ ಪ್ರದೇಶ, ಮಣಿಪುರ, ಪುದುಚೇರಿ, ಸಿಕ್ಕಿಮ್‌ನಂತಹ ರಾಜ್ಯಗಳಲ್ಲೂ ನಿಯಮಕ್ಕಿಂತ ಹೆಚ್ಚು ಮೆಡಿಕಲ್‌ ಸೀಟುಗಳಿವೆ. ಇದಕ್ಕೆ ವ್ಯತಿರಿಕ್ತವಾಗಿ, ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ 23.5 ಕೋಟಿ ಜನಸಂಖ್ಯೆಯಿದ್ದು, ಕೇವಲ 9703 ಮೆಡಿಕಲ್‌ ಸೀಟುಗಳಿವೆ. ಅಲ್ಲಿ 23,568 ಮೆಡಿಕಲ್‌ ಸೀಟುಗಳಿರಬೇಕಿತ್ತು.

Follow Us:
Download App:
  • android
  • ios