ಕೊಡಗು: ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಚಿಕಿತ್ಸೆ, ರೋಗಿಗಳೇನು ಪ್ರಯೋಗಾಲದ ವಸ್ತುಗಳೇ ಎಂದ ಸಾರ್ವಜನಿಕರು

ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ರೋಗ ತಪಾಸಣೆ ಮಾಡುತ್ತಿದ್ದು ತಾತ್ಕಾಲಿಕ ಚಿಕಿತ್ಸೆ ಎನ್ನುವಂತೆ ಎಲ್ಲರಿಗೂ ಒಂದೇ ರೀತಿಯ ಮಾತ್ರೆಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಯಾರಿಗಾದರೂ ಆರೋಗ್ಯದಲ್ಲಿ ಸ್ವಲ್ಪವೇ ಗಂಭೀರ ಎಂದೆನಿಸಿದರೂ ಮಡಿಕೇರಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. 

Public Outrage For Treatment by MBBS Students Patients in Kodagu grg

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಸೆ.23):  ಕೊಡಗು ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿಂದಿನಿಂದಲೂ ನೂರಾರು ವೈದ್ಯರ ಕೊರತೆ ಇರುವುದು ಗೊತ್ತೇ ಇದೆ. ವೈದ್ಯರ ಕೊರತೆ ಇರುವುದರಿಂದ ಜನರ ಚಿಕಿತ್ಸೆಗೆ ಯಾವುದೇ ತೊಂದರೆ ಆಗದಂತೆ ವೈದ್ಯರ ನೇಮಿಸಿಕೊಳ್ಳಬೇಕಾಗಿರುವುದು ಸರ್ಕಾರ ಮತ್ತು ಇಲಾಖೆಗಳ ಜವಾಬ್ದಾರಿ. ಆದರೆ ಅದರ ಬಗ್ಗೆ ಯೋಚಿಸಬೇಕಾಗಿದ್ದ ಆರೋಗ್ಯ ಇಲಾಖೆ ಮೆಡಿಕಲ್ ಪದವಿ ಓದಿ ಇಂಟನ್ಷಿಪ್ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳುತ್ತಿವೆ. ಇದು ನೂರಾರು ಜನರು ಸಿಟ್ಟಿಗೇಳುವಂತೆ ಮಾಡಿದೆ. 

ಹೌದು, ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರೋಬ್ಬರಿ 21 ಸಾವಿರ ಜನ ಸಂಖ್ಯೆ ಇದೆ. ನಿತ್ಯ ಕನಿಷ್ಠ 250 ರಿಂದ 300 ರಷ್ಟು ರೋಗಿಗಳು ನಿತ್ಯ ಆಸ್ಪತ್ರೆಗೆ ಬರುತ್ತಾರೆ. ಆದರೂ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಒಬ್ಬರು ವೈದ್ಯರಿಲ್ಲ. ಜೊತೆಗೆ ರಾಷ್ಟ್ರೀಯ ಹೆದ್ದಾರಿ 275 ಇದೇ ಗ್ರಾಮದ ಮೂಲಕ ಹಾದು ಹೋಗಿದ್ದು ಸುಂಟಿಕೊಪ್ಪದ ಆಸುಪಾಸಿನಲ್ಲಿ ಯಾವುದೇ ಅಪಘಾತಗಳು ಆದರೂ ಕೂಡಲೇ ಇದೇ ಆಸ್ಪತ್ರೆಗೆ ಕರೆ ತರಬೇಕು. ಆದರೆ ಇಲ್ಲಿ ವೈದ್ಯರು ಇಲ್ಲದೆ ಇರುವುದರಿಂದ 16 ಕಿಲೋ ಮೀಟರ್ ದೂರದ ಮಡಿಕೇರಿಗೋ ಅಥವಾ ಕುಶಾಲನಗರಕ್ಕೋ ಪ್ರಥಮ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಇಂತ ಸಂದರ್ಭ ಪ್ರಾಥಮಿಕ ಚಿಕಿತ್ಸೆ ಇಲ್ಲದೆ ಎಷ್ಟೋ ಜನರು ಮೃತಪಟ್ಟ ಪ್ರಕರಣಗಳು ಇವೆ. 

ಮಡಿಕೇರಿಗೆ ಸ್ವಾಗತ ಕೋರುತ್ತವೆ ರಸ್ತೆ ಗುಂಡಿಗಳು, ಇಲ್ಲಿ ರೋಡ್‌ ಎಲ್ಲಿದೆ ಅಂತ ಹುಡುಕಬೇಕು..!

ಇದು ಇಂದು ಮೊನ್ನೆಯ ಸ್ಥಿತಿಯಲ್ಲ, ಕಳೆದ ಹಲವು ವರ್ಷಗಳಿಂದಲೂ ಈ ಆಸ್ಪತ್ರೆಗೆ ಶಾಶ್ವತ ವೈದ್ಯರೆಂಬುವವರೇ ಇಲ್ಲ. ಈಗ ಕಳೆದ ಎರಡು ತಿಂಗಳಿನಿಂದಲೂ ವೈದ್ಯರಿಲ್ಲದೆ ಜನರು ಪರದಾಡುತ್ತಿದ್ದಾರೆ. ಸದ್ಯ ಕೊಡಗು ಜಿಲ್ಲೆಯಲ್ಲಿ ಡೆಂಘಿ, ಮಲೇರಿಯಾದಂತಹ ವೈರಲ್ ಜ್ವರಗಳು ತೀವ್ರ ಸಂಖ್ಯೆಯಲ್ಲಿ ಹರಡುತ್ತಿವೆ. ಹೀಗಾಗಿ ಸುಂಟಿಕೊಪ್ಪ ಆಸ್ಪತ್ರೆಗೆ ನಿತ್ಯ 150 ರಿಂದ 200 ಮಕ್ಕಳೇ ಜ್ವರ ಎಂದು ಆಸ್ಪತ್ರೆಗೆ ಬರುತ್ತಿದ್ದರೆ, 150 ಕ್ಕೂ ಹೆಚ್ಚು ಜನರು ಇದೇ ಆರೋಗ್ಯದ ಸಮಸ್ಯೆಯಿಂದ ಬರುತ್ತಿದ್ದಾರೆ. 

ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ರೋಗ ತಪಾಸಣೆ ಮಾಡುತ್ತಿದ್ದು ತಾತ್ಕಾಲಿಕ ಚಿಕಿತ್ಸೆ ಎನ್ನುವಂತೆ ಎಲ್ಲರಿಗೂ ಒಂದೇ ರೀತಿಯ ಮಾತ್ರೆಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಯಾರಿಗಾದರೂ ಆರೋಗ್ಯದಲ್ಲಿ ಸ್ವಲ್ಪವೇ ಗಂಭೀರ ಎಂದೆನಿಸಿದರೂ ಮಡಿಕೇರಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ನಮ್ಮ ಪರಿಚಯಸ್ಥರೊಬ್ಬರ ತಂದೆಗೆ ಇಲ್ಲಿ ಚಿಕಿತ್ಸೆ ಸಿಗಲಿಲ್ಲ. ಅವರನ್ನು ಮಡಿಕೇರಿಗೆ ಕರೆದೊಯ್ಯುವರಷ್ಟರಲ್ಲಿ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದರು. ಈ ವ್ಯಾಪ್ತಿಯ ರೋಗಿಗಳನ್ನು ಆರೋಗ್ಯ ಇಲಾಖೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ತರಬೇತಿಗೆ ಬಳಸಿಕೊಳ್ಳುತ್ತಿದೆ. ಆಸ್ಪತ್ರೆಯಲ್ಲಿರುವ ಸಮಸ್ಯೆಗಳನ್ನು ಪ್ರಶ್ನಿಸಿದರೆ ಕರ್ತವ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ನಮ್ಮ ಮೇಲೆ ಪ್ರಕರಣ ದಾಖಲಿಸಿ ಸಮಸ್ಯೆಗಳನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೊಡಗಿನಲ್ಲೊಬ್ಬ ಹೆಣದಲ್ಲೂ ಹಣ ಕಿತ್ತು ತಿನ್ನುವ ವೈದ್ಯ: ನೋಟಿಸ್ ಜಾರಿ ಮಾಡಿದ ಡಿಎಚ್ಓ

ಇನ್ನು ಆಸ್ಪತ್ರೆಗೆ ಇಬ್ಬರು ವೈದ್ಯರ ಅಗತ್ಯವಿದೆ. ಕನಿಷ್ಠ ಒಬ್ಬ ವೈದ್ಯರನ್ನಾದರೂ ಇಲ್ಲಿಗೆ ನೇಮಿಸಿದರೆ ಎಷ್ಟೋ ಅನುಕೂಲ ಆಗಲಿದೆ. ಆದರೂ ಶೀಘ್ರವೇ ವೈದ್ಯರನ್ನು ನೇಮಿಸಬೇಕು. ಇಲ್ಲದಿದ್ದರೆ ಒಂದೆರಡು ದಿನಗಳು ಕಾದು ಧರಣಿ ಕುಳಿತು ಪ್ರತಿಭಟನೆ ನಡೆಸುವುದಕ್ಕೆ ಸಿದ್ಧರಾಗಿದ್ದೇವೆ ಎಂದು ಆಲಿಕುಟ್ಟಿ ಎಚ್ಚರಿಸಿದ್ದಾರೆ. 

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಡೆಂಘೀ, ಮಲೇರಿಯಾ ಜ್ವರಗಳು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳನ್ನು ಇಲ್ಲಿಗೆ ನೇಮಿಸಿ ಈ ರೀತಿ ನಿರ್ಲಕ್ಷ್ಯ ತೋರಿಸುತ್ತಿರುವುದಕ್ಕೆ ಜನರು ಅಸಮಾಧಾನ ಹೊರಹಾಕಿದ್ದಾರೆ.

Latest Videos
Follow Us:
Download App:
  • android
  • ios