Asianet Suvarna News Asianet Suvarna News

ಅತಿಥಿ ಉಪನ್ಯಾಸಕರ ಹಿತ ಕಾಯಲು ಬದ್ಧ: ಸಚಿವ ಅಶ್ವತ್ಥ ನಾರಾಯಣ

ನಮ್ಮ ಸರ್ಕಾರ ಬಂದ ಮೇಲೆ ಗ್ರಂಥಪಾಲಕ, ದೈಹಿಕ ಶಿಕ್ಷಣದ ಉಪನ್ಯಾಸಕರನ್ನೂ ಅತಿಥಿಗಳಾಗಿ ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದ ಅಶ್ವತ್ಥ ನಾರಾಯಣ 

Minister CN Ashwathnarayan Talks Over Guest Lecturers grg
Author
First Published Dec 1, 2022, 2:55 PM IST

ಧಾರವಾಡ(ಡಿ.01):  ಶಿಕ್ಷಣ, ಶಿಕ್ಷಕರ ಕುರಿತು ಸರ್ಕಾರಕ್ಕೆ ಅಪಾರ ಕಾಳಜಿ ಇದ್ದು ಅತಿಥಿ ಉಪನ್ಯಾಸಕರ ಹಿತ ಕಾಯಲು ಬದ್ಧ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು. ಇಲ್ಲಿನ ಕೆಸಿಡಿ ಕಾಲೇಜಿನ ಆವರಣದಲ್ಲಿ ಬುಧವಾರ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಡೆದ ರಾಜ್ಯ ಮಟ್ಟದ ಅತಿಥಿ ಉಪನ್ಯಾಸಕರ ಶೈಕ್ಷಣಿಕ ಸಮಾವೇಶ ಹಾಗೂ ಅಭಿನಂದನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಶೀಘ್ರ ಅಧಿಕಾರಿಗಳ ಸಭೆ ನಡೆಸಿ, ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಲಾಗುವುದು. ಸರ್ಕಾರಿ ಕಾಲೇಜುಗಳನ್ನು ಸದೃಢಗೊಳಿಸಿ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ವಾರ್ಷಿಕ ಬಜೆಟ್‌ನಲ್ಲಿ ಅತಿಥಿ ಶಿಕ್ಷಕರಿಗಾಗಿ ಮೊದಲು 110 ಕೋಟಿ ಇಡಲಾಗುತ್ತಿತ್ತು. ಈ ವರ್ಷ ವೇತನ ಹೆಚ್ಚಳದಿಂದಾಗಿ 280 ಕೋಟಿ ಇಡಲಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ಗ್ರಂಥಪಾಲಕ, ದೈಹಿಕ ಶಿಕ್ಷಣದ ಉಪನ್ಯಾಸಕರನ್ನೂ ಅತಿಥಿಗಳಾಗಿ ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಿಇಟಿ ಅರ್ಜಿ ತಪ್ಪಿಲ್ಲದೆ ತುಂಬುವುದನ್ನು ಕಲಿಸಲು ಸಹಾಯಕೇಂದ್ರ: ಅಶ್ವತ್ಥನಾರಾಯಣ

ಈ ವರೆಗೆ ಸರ್ಕಾರಿ ಖಜಾನೆ ಸೇರುತ್ತಿದ್ದ ಪ್ರವೇಶಾತಿ ಶುಲ್ಕ ಈಗ ಕಾಲೇಜಿನ ಖಾತೆಗೆ ಹೋಗುತ್ತಿದೆ. ಸ್ಮಾರ್ಟ್‌ಕ್ಲಾಸ್‌ ಮೂಲಕ ಕಲಿಕೆಯಲ್ಲಿ ಸುಧಾರಣೆ ಕ್ರಮ ಜಾರಿಗೆ ತರಲಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು ದಾಖಲಾತಿ ಅನುಪಾತ ಈ ಹಿಂದೆ ಶೇ. 28 ಇತ್ತು. ನಮ್ಮ ಸರ್ಕಾರ ಬಂದ ಮೇಲೆ 35ಕ್ಕೆ ಹೆಚ್ಚಳವಾಗಿದೆ. ಅದನ್ನು ಶೇ. 50ಕ್ಕೆ ಏರಿಸುವ ಗುರಿ ಇದೆ. ಸರ್ಕಾರಿ ಕಾಲೇಜುಗಳ ಫಲಿತಾಂಶ ಸುಧಾರಿಸುವುದು, ಪೂರಕ ಪರೀಕ್ಷೆಯನ್ನು ಶೀಘ್ರ ನಡೆಸಿ ತಕ್ಷಣ ಫಲಿತಾಂಶ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಶಿಕ್ಷಣ ತಜ್ಞ ಡಾ. ಆರ್‌.ಎಂ. ಕುಬೇರಪ್ಪ ಮಾತನಾಡಿ, ಇಂದು ಶಿಕ್ಷಕ ಸಮುದಾಯದ ಚಳವಳಿಗಳು ನಿಂತ ನೀರಾಗಿವೆ. ಹೋರಾಟ ಹಾಗೂ ರಾಜಕೀಯ ಇಚ್ಛಾಶಕ್ತಿ ಇದ್ದರೆ ಮಾತ್ರ ಶಿಕ್ಷಕ ಸಮುದಾಯದ ಪರಿಹಾರ ಸಾಧ್ಯ. ಶಿಕ್ಷಕರ ಸಮಸ್ಯೆ ಬಗ್ಗೆ ಅಧಿಕಾರಿಗಳ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾವುದೇ ಸರ್ಕಾರ ಇರಲಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ವಿಪ ಸದಸ್ಯ ಅರುಣ ಶಹಾಪುರ, ಕರ್ನಾಟಕ ರಾಜ್ಯ ಮಹಾವಿದ್ಯಾಲಯದ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ರಘ ಅಕಮಂಚಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿದರು. ಇದೇ ವೇಳೆ ಸಚಿವರಿಗೆ ಅಭಿನಂದನಾ ಪತ್ರ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕವಿವಿ ಸಿಂಡಿಕೇಟ್‌ ಸದಸ್ಯ ಸಂದೀಪ್‌ ಬೂದಿಹಾಳ, ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಪೀಟರ್‌ ವಿನೋದಚಂದ ಇದ್ದರು. ಭಾಷಾ ಹಿರೇಮನಿ, ಶರಾವತಿ ಪ್ರಾರ್ಥಿಸಿದರು. ಡಾ. ಶಶಿಕಲಾ ಜೋಳದ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷ ಡಾ. ಟಿ. ದುರಗಪ್ಪ ಸ್ವಾಗತಿಸಿದರು. ಸಂಘದ ಎಲ್ಲ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿ ನೂರಾರು ಅತಿಥಿ ಉಪನ್ಯಾಸಕರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಪ್ರತಿ 2 ವರ್ಷಕ್ಕೊಮೆ ನೇಮಕ ಪ್ರಕ್ರಿಯೆ

ರಾಜ್ಯ ಅನೇಕ ವಿಶ್ವವಿದ್ಯಾಲಯಗಳಲ್ಲಿ 2,200 ಹುದ್ದೆ ಖಾಲಿ ಇವೆ. ಪ್ರತಿ ಎರಡು ವರ್ಷಕೊಮ್ಮೆ ನೇಮಕ ಪ್ರಕ್ರಿಯೆ ನಡೆಸಲು ಕ್ರಮಕೈಗೊಳ್ಳಲಾಗುತ್ತಿದೆ. ರಾಜ್ಯದ 430 ಡಿಗ್ರಿ ಕಾಲೇಜುಗಳಲ್ಲಿ 150 ಕಾಲೇಜುಗಳನ್ನು ಮಾನ್ಯತೆಗೊಳಪಡಿಸಲಾಗಿದೆ. ಉಳಿದ ಕಾಲೇಜುಗಳ ಮಾನ್ಯತೆಗೆ ಹಂತ-ಹಂತವಾಗಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದರು.

ಸಕಾರಾತ್ಮಕ ಬದಲಾವಣೆಯೇ ಬಿಜೆಪಿ ಧ್ಯೇಯ: ಅಶ್ವತ್ಥನಾರಾಯಣ

ಆಡಳಿತ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ಭಾರತದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಇದು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 12000ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಲಿ ಇರುವ 1500 ಹುದ್ದೆ ಪೈಕಿ 1300 ನೇಮಕ ನಡೆಯುತ್ತಿದೆ. ಖಾಲಿ ಹುದ್ದೆ ಭರ್ತಿಯಾದರೆ ಅತಿಥಿ ಉಪನ್ಯಾಸಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಉದ್ಯೋಗದ ಭದ್ರತೆ ನೀಡಲು ಮನವಿ

ಸಚಿವ ಅಶ್ವತ್ಥ ನಾರಾಯಣರು ವೇತನ ಹೆಚ್ಚಳದ ಮೂಲಕ ಸಾವಿರಾರು ಉಪನ್ಯಾಸಕರ ಬಾಳಿಗೆ ಬೆಳಕು ನೀಡಿದ್ದಾರೆ. ಪಿಯು ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕರಿಗೆ ಗೌರವಯುತ ಬದುಕು ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು. 3 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ ಉದ್ಯೋಗ ಭದ್ರತೆ ನೀಡಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್‌. ಕಲ್ಮನಿ ಮನವಿ ಮಾಡಿದರು. ಎಂಫಿಲ್‌ ಮಾಡಿದ ಉಪನ್ಯಾಸಕರ ವೇತನ ಹೆಚ್ಚಳಕ್ಕೂ ಕ್ರಮಕೈಗೊಳ್ಳಬೇಕು. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು ಎಂದರು.
 

Follow Us:
Download App:
  • android
  • ios