Asianet Suvarna News Asianet Suvarna News

ಸಿಎ ಪರೀಕ್ಷೆ: ಮಂಗಳೂರಿನ ರಮ್ಯಶ್ರೀ ದೇಶಕ್ಕೇ ನಂ.2..!

ನವೆಂಬರ್‌ನಲ್ಲಿ ನಡೆದಿದ್ದ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ ಅಂತಿಮ ಪರೀಕ್ಷೆ, ದೆಹಲಿಯ ಹರ್ಷ ಚೌಧರಿ ಪ್ರಥಮ ರ‍್ಯಾಂಕ್,  ಮಂಗಳೂರಿನ ರಮ್ಯಶ್ರೀ, ಇಂಧೋರ್‌ನ ಶಿಖಾ 2ನೇ ರ‍್ಯಾಂಕ್

Mangaluru Based Ramyashri Got 2nd Rank in India in CA Final Exam grg
Author
First Published Jan 11, 2023, 9:31 AM IST

ನವದೆಹಲಿ/ಮಂಗಳೂರು(ಜ.11):  ‘ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ’ ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಮಂಗಳೂರಿನ ರಮ್ಯಶ್ರೀ ದೇಶಕ್ಕೆ ಎರಡನೇ ರ‍್ಯಾಂಕ್‌ಗಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸಿಎ ಇಂಟರ್‌ ಮೀಡಿಯೇಟ್‌ ಮತ್ತು ಅಂತಿಮ ಪರೀಕ್ಷೆ ನಡೆದಿತ್ತು. ಸಿಎ ಅಂತಿಮ ಪರೀಕ್ಷೆಯಲ್ಲಿ ದೆಹಲಿಯ ಹರ್ಷ ಚೌಧರಿ ಮೊದಲ ರ‍್ಯಾಂಕ್‌ ಗಳಿಸಿದ್ದರೆ, ರಮ್ಯಶ್ರೀ ಮತ್ತು ಇಂದೋರ್‌ನ ಶಿಖಾ ಜೈನ್‌ ಜಂಟಿಯಾಗಿ 2ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ದೆಹಲಿಯ ಮಾನ್ಸಿ ಅಗರವಾಲ್‌ 3ನೇ ರ‍್ಯಾಂಕ್‌ ಪಡೆದಿದ್ದಾರೆ.

ಇನ್ನು ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ದೀಕ್ಷಾ ಗೋಯಲ್‌ ಮೊದಲ ರ‍್ಯಾಂಕ್‌ಗಳಿಸಿದ್ದಾರೆ. ತುಲಿಕಾ ಶ್ರವಣ್‌ ಜಲನ್‌ ಮತ್ತು ಸಕ್ಷಮ್‌ ಜೈನ್‌ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಸಿಎ ಪರೀಕ್ಷೆ: ಮಂಗಳೂರಿನ ರುಥ್‌ ಕ್ಲೇರ್‌ ದೇಶದಲ್ಲೇ ಪ್ರಥಮ

617 ಅಂಕ: 

ಸುರತ್ಕಲ್‌ನ ಹೊಸಬೆಟ್ಟುವಿನ ರಮ್ಯಶ್ರೀ ಅವರು ಮಂಗಳೂರಿನ ಕಾಮತ್‌ ಆ್ಯಂಡ್‌ ರಾವ್‌ ಸಂಸ್ಥೆಯಲ್ಲಿ ದಯಾಕರ ರಾವ್‌ ಅವರಿಂದ ಮತ್ತು ಇತ್ತೀಚೆಗೆ ಎಂಆರ್‌ಪಿಎಲ್‌ನಲ್ಲಿ ತರಬೇತಿ ಪಡೆದಿದ್ದಾರೆ. ಅಂತಿಮ ಪರೀಕ್ಷೆಯಲ್ಲಿ 800 ಅಂಕಗಳಲ್ಲಿ 617 ಅಂಕ ಪಡೆದಿದ್ದಾರೆ.

ತಮ್ಮ ಸಾಧನೆಯ ಕುರಿತು ಮಾತನಾಡಿದ ಅವರು, ನನ್ನ ಕುಟುಂಬದ ಎಲ್ಲ ಸದಸ್ಯರ ಮತ್ತು ಹಿರಿಯಣ್ಣನ ಪ್ರೋತ್ಸಾಹ, ಗುರು, ಹಿರಿಯರ ಆಶೀರ್ವಾದದಿಂದ ರ‍್ಯಾಂಕ್‌ ಪಡೆಯಲು ಸಾಧ್ಯವಾಗಿದೆ. ಮುಂದೆ ಯಾವುದಾದರೂ ಸಂಸ್ಥೆಯಲ್ಲಿ ದುಡಿಯುತ್ತೇನೆ. ಪ್ರಾಕ್ಟೀಸ್‌ ಮಾಡಲು ನಿರ್ಧರಿಸಿಲ್ಲ ಎಂದು ಹೇಳಿದರು.

ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ನಂದಿನಿ, ಅಣ್ಣನಿಗೂ 18ನೇ ರ‍್ಯಾಂಕ್!

ಎಲ್‌ಐಸಿ ಉದ್ಯೋಗಿ ರಮೇಶ್‌ ರಾವ್‌ ಮತ್ತು ನ್ಯಾಷನಲ್‌ ಇನ್ಶೂರೆನ್ಸ್‌ ಉದ್ಯೋಗಿ ಮೀರಾ ಅವರ ಪುತ್ರಿಯಾಗಿರುವ ರಮ್ಯಶ್ರೀ, ಸುರತ್ಕಲ್‌ ವಿದ್ಯಾದಾಯಿನಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಮೂರನೇ ರ‍್ಯಾಂಕ್‌ ಮತ್ತು ಗೋವಿಂದದಾಸ್‌ ಕಾಲೇಜಿನಲ್ಲಿ ಪಿಯುಸಿಯಲ್ಲಿ ಐದನೇ ರ‍್ಯಾಂಕ್‌ ಪಡೆದಿದ್ದರು. ಪದವಿ ಜತೆಗೆ ಸಿಎ ಅಖಿಲ ಭಾರತ ಇಂಟರ್‌ ಪರೀಕ್ಷೆಯಲ್ಲಿ 16ನೇ ರ‍್ಯಾಂಕ್‌ ಗಳಿಸಿದ್ದರು.

2021ರಲ್ಲಿ ಮಂಗಳೂರಿನ ಹುಡುಗಿ ರುತ್‌ ಕ್ಲಾರಾ ಡಿಸಿಲ್ವ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios