ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ನಂದಿನಿ, ಅಣ್ಣನಿಗೂ 18ನೇ ರ‍್ಯಾಂಕ್!
* ಸಿಎ ಹೊಸ ಕೋರ್ಸ್ನಲ್ಲಿ ಮಧ್ಯಪ್ರದೇಶದ ಮೊರಿನಾದ ನಂದಿನಿ ಅಗರ್ವಾಲ್ ದೇಶಕ್ಕೇ ಟಾಪರ್
* 800ಕ್ಕೆ 614 ಅಂಕ ಗಳಿಸಿದ ನಂದಿನಿ ಮೊದಲ ಸ್ಥಾನ
* 21 ವರ್ಷದ ಅಣ್ಣ ಸಚಿನ್ ಅಗರ್ವಾಲ್ 18ನೇ ಸ್ಥಾನ
ಭೋಪಾಲ್(ಸೆ.14): ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾದ ಅಖಿಲ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟ್ಸ್ (ಸಿಎ) ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಮಂಗಳೂರಿನ ರುಥ್ ಕ್ಲೇರ್ ಡಿಸಿಲ್ವ ಅವರು ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಹೊಸ ಕೋರ್ಸ್ನಲ್ಲಿ ಮಧ್ಯಪ್ರದೇಶದ ಮೊರಿನಾದ ನಂದಿನಿ ಅಗರ್ವಾಲ್ ದೇಶಕ್ಕೇ ಟಾಪರ್ ಆಗಿದ್ದಾರೆ. 800ಕ್ಕೆ 614 ಅಂಕ ಗಳಿಸಿದ ನಂದಿನಿ ಮೊದಲ ಸ್ಥಾನ ಗಳಿಸಿದ್ದರೆ, ಆಕೆಯ 21 ವರ್ಷದ ಅಣ್ಣ ಸಚಿನ್ ಅಗರ್ವಾಲ್ 18ನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಅಣ್ಣ ತಂಗಿಯ ಈ ಜೋಡಿ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ.
ಇನ್ನು ಈ ಸಹೋದರ ಸಹೋದರಿಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಶುಭ ಕೋರಿದ್ದು, ನಿಮ್ಮಿಬ್ಬರ ಬಗ್ಗೆ ಹೆಮ್ಮೆ ಇದೆ. ನಿಮ್ಮ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಈ ಅಣ್ಣ-ತಂಗಿಯ ಕಜೋಡಿ ಯಾವತ್ತೂ ಒಟ್ಟಿಗೆ ಟಾಪರ್ ಆಗುವ ದಾಖಲೆ ಹೊಂದಿದೆ. ಮೊರೆನಾ ಜಿಲ್ಲೆಯ ವಿಕ್ಟರ್ ಕಾನ್ವೆಂಟ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದ ಈ ಜೋಡಿ, 2017ರಲ್ಲಿ 12ನೇ ತರಗತಿಯಲ್ಲಿ ಶೇ. 94.5 ರಷ್ಟು ಅಂಕ ಗಳಿಸಿ ಟಾಪರ್ ಆಗಿತ್ತು.
ಇನ್ನು ಅಣ್ಣ ತಂಗಿ ಇಬ್ಬರೂ ಒಂದೇ ತರಗತಿಯಲ್ಲಿ ಇರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರಿಸಿರುವ ನಂದಿನಿ ಅಗರ್ವಾಲ್ ಬಾಲ್ಯದಲ್ಲಿ ನಾನು ಎರಡು ತರಗತಿಗಳನ್ನು ಸ್ಕಿಪ್ ಮಾಡಿದ್ದೆ. ಹೀಗಾಗಿ ಎರಡನೇ ತರಗತಿಯಿಂದಲೇ ನಾವಿಬ್ಬರೂ ಸಹಪಾಠಿಗಳಾಗಿದ್ದೇವೆ ಎಂದಿದ್ದಾರೆ.
ಪೈಪೋಟಿಗಿಂತ ಒಡಹುಟ್ಟಿದವರ ನಡುವಿನ ಪ್ರೀತಿ ಹಾಗೂ ಬೆಂಬಲವಿತ್ತು. "ವಾಸ್ತವವಾಗಿ, ನನ್ನ ಯಶಸ್ಸಿನಲ್ಲಿ ನನ್ನ ಸಹೋದರನ ಪಾತ್ರ ಬಹಳ ಪ್ರಮುಖ" ಎಂದು ನಂದಿನಿ ತಿಳಿಸಿದ್ದಾರೆ.
"ನನ್ನ ಅಣಕು ಪರೀಕ್ಷೆಯಲ್ಲಿ, ನಾನು ಕಳಪೆ ಅಂಕಗಳನ್ನು ಪಡೆಯುತ್ತಿದ್ದೆ. ಅದು ತುಂಬಾ ನಿರಾಶಾದಾಯಕವಾಗಿತ್ತು. ನಾನು ಹತಾಶಳಾಗಿದ್ದೆ ಮತ್ತು ಅಣಕು ಪರೀಕ್ಷೆಗಳಲ್ಲಿ ನಾನು ಕಳಪೆ ಸಾಧನೆ ಮಾಡಿದರೆ ನಿಜವಾದ ಪರೀಕ್ಷೆಯಲ್ಲಿ ನಾನು ಹೇಗೆ ಉತ್ತೀರ್ಣಳಾಗುವುದು ಎಂದು ಚಿಂತಿಸುತ್ತಿದ್ದೆ. ನನ್ನ ಸಹೋದರನ ಬೆಂಬಲವು ಮ್ಯಾಜಿಕ್‌ನಂತೆ ಕೆಲಸ ಮಾಡಿದೆ. ಆತ ಯಾವಾಗಲೂ ಅಭ್ಯಾಸ ಮಾಡು ಎಂದು ಪ್ರೋತ್ಸಾಹಿಸುತ್ತಿದ್ದ ಮತ್ತು ಅಣಕು ಪರೀಕ್ಷೆಯ ಫಲಿತಾಂಶಗಳ ಬಗ್ಗೆ ಯೋಚಿಸದಂತೆ ಹೇಳುತ್ತಿದ್ದ "ಎಂದು ನಂದಿನಿ ಹೇಳಿದ್ದಾರೆ.
ಇನ್ನು ಅತ್ತ ಅಣ್ಣ ಸಚಿನ್ ಈ ಬಗ್ಗೆ ಮಾತನಾಡುತ್ತಾ ನಂದಿನಿ ಶಾಲಾ ದಿನಗಳಿಂದಲೂ ಬಹಳ ಪರಿಶ್ರಮಪಟ್ಟು ಓದುತ್ತಿದ್ದಳು. ಆಕೆಯೇ ನನಗೆ ಸ್ಫೂರ್ತಿ. ಆಕೆಯನ್ನು ನೋಡಿಯೇ ನಾನು ಓದಿನ ಕಡೆ ಗಮನಹರಿಸಿದೆ. ನನಗೆ ಪ್ರೋತ್ಸಾಹ ಕೊಟ್ಟ ಶ್ರೇಯಸ್ಸು ಆಕೆಗೆ ಲಭಿಸುತ್ತದೆ ಎಂದಿದ್ದಾರೆ.
ಇನ್ನು ಕಷ್ಟದ ಪ್ರಶ್ನೆಗಳು ಬಂದಾಗ ಇಬ್ಬರೂ ಒಟ್ಟಿಗೆ ಕುಳಿತು ಉತ್ತರ ಕಂಡುಕೊಳ್ಳುತ್ತಿದ್ದೆವು. ಹೀಗೆ ಪರಸ್ಪರ ಸಹಾಯ ಮಾಡಿ ಈ ಹಂತಕ್ಕೆ ತಲುಪಿದ್ದೇವೆ. ಈ ಪರೀಕ್ಷೆ ಪಾಸಾಗಬೇಕೆಂಬುವುದು ನನ್ನ ತಾಯಿಯ ಕನಸಾಗಿತ್ತು. ಸದ್ಯ ನಾವಿಬ್ಬರೂ ಆ ಕನಸು ಈಡೇರಿಸಿದ್ದೇವೆ ಎಂದಿದ್ದಾರೆ.