Asianet Suvarna News Asianet Suvarna News

ಪಠ್ಯವಾಪ್ಸಿ ಪ್ರಶಸ್ತಿ ವಾಪ್ಸಿ ರೀತಿಯ ಹೋರಾಟ: ಸಾಹಿತಿ ಭೈರಪ್ಪ

ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಸಾಹಿತಿಗಳ ವಲಯದಿಂದ ನಡೆಯುತ್ತಿರುವ ಪಠ್ಯವಾಪಸಿ ಚಳವಳಿ ಕುರಿತು ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

literature sl bhyrappa react to text book revision in mysuru gvd
Author
Bangalore, First Published Jun 3, 2022, 3:25 AM IST

ಮೈಸೂರು (ಜೂ.03): ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಸಾಹಿತಿಗಳ ವಲಯದಿಂದ ನಡೆಯುತ್ತಿರುವ ಪಠ್ಯವಾಪಸಿ ಚಳವಳಿ ಕುರಿತು ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಪ್ರಧಾನಿಯಾದ ನಂತರ ನಡೆದಿದ್ದ ಪ್ರಶಸ್ತಿ ವಾಪಸ್‌ ಚಳವಳಿ ರೀತಿಯದ್ದೇ ಹೋರಾಟ ಇದು. ಹಲವು ದಿನಗಳ ನಂತರ ಆ ಚಳವಳಿ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತ್ಯವನ್ನು ಹುಡುಕಿ ಅದನ್ನು ಪಠ್ಯಕ್ರಮದಲ್ಲಿ ಅಳವಡಿಸಿ ಮಕ್ಕಳಿಗೆ ಕಲಿಸಬೇಕು. 

ಸಿದ್ಧಾಂತಗಳನ್ನು ಕಲಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರ ಪಠ್ಯಕ್ರಮ ಬದಲಾವಣೆಗೆ ಮುಂದಾದರೆ ಕೆಲವರು ನಾನಾ ರೀತಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಹೀಗೇಕೆ ಆಗುತ್ತಿದೆ ಎಂದು ಭೈರಪ್ಪ ಪ್ರಶ್ನಿಸಿದರು. ಪಠ್ಯ ವಾಪಸ್‌ ಚಳವಳಿ ಬಗ್ಗೆ ನಾನು ಕೆಲ ಅಭಿಪ್ರಾಯಗಳನ್ನು ತಡವಾಗಿ ಹೇಳುತ್ತಿದ್ದೇನೆ. ಕೆಲವರು ತೆಗೆದಿರುವ ತಗಾದೆಯಿಂದ ಮತ್ತು ಮಾಡುತ್ತಿರುವ ಗಲಾಟೆಯಿಂದ ಸರ್ಕಾರದ ಮೇಲೆ ಸಹಜವಾಗಿಯೇ ಒತ್ತಡ ಆಗುತ್ತದೆ. ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ಪ್ರಶಸ್ತಿ ವಾಪಸ್‌ ಚಳವಳಿ ಆರಂಭವಾಯಿತು. 

ರೋಹಿತ್‌ ಚಕ್ರತೀರ್ಥನ ವಕ್ರಬುದ್ಧಿ ಸರ್ಕಾರ ಸರಿ ಮಾಡಲಿ: ಬಸವಯೋಗಿಪ್ರಭು ಸ್ವಾಮೀಜಿ

ಆಗ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದವರು ಏನು ಮಾಡುವುದು ಎಂದು ಚರ್ಚಿಸಿದ್ದರು. ವಾಪಸ್‌ ಕೊಟ್ಟಿದ್ದನ್ನು ಸ್ವೀಕರಿಸಿ, ಹಾಗೆಯೇ ಪ್ರಶಸ್ತಿ ಜತೆ ಕೊಟ್ಟಿದ್ದ ಹಣವನ್ನೂ ವಾಪಸ್‌ಕೇಳಿ ಎಂದಿದ್ದೆ. ಪಠ್ಯಕ್ರಮ ವಾಪಸ್‌ ಗಲಾಟೆ ಪ್ರಶಸ್ತಿ ವಾಪಸ್‌ ಚಳವಳಿಯ ಇನ್ನೊಂದು ರೂಪ ಅಷ್ಟೆ. ವಿವಿಧ ಮಾದರಿಯಲ್ಲಿ ಗಲಾಟೆ ಮಾಡಿಸುವುದು ಹೊಸದೇನೂ ಅಲ್ಲ. ಚುನಾವಣೆ ಸಮೀಪಿಸಿದಾಗ ನಾವು ಏನು ಬೇಕಾದ್ರೂ ಮಾಡುತ್ತೇವೆ. ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟುಬಿಡುತ್ತೇವೆ ಎಂದರು.

ತಿಪ್ಪೆ ಸಾರಿಸೋ ಕೆಲಸ: ರಾಷ್ಟ್ರೀಯತೆ, ಐಕ್ಯತೆ ಎಂದರೇನು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಔರಂಗಜೇಬ್‌ ದೇವಸ್ಥಾನಗಳನ್ನು ಒಡೆದು ಹಾಕಿದ. ಅವನಲ್ಲಿ ಅತಿರೇಕಗಳು ಕೂಡ ಇದ್ದವು. ಅಂಥವರ ವಿಷಯದಲ್ಲಿ ಬರೆಯುವಾಗ ತಿಪ್ಪೆ ಸಾರಿಸುವ ಕೆಲಸವನ್ನಷ್ಟೆಮಾಡಿಕೊಂಡು ಬಂದಿದ್ದಾರೆ. ಇದನ್ನು ಪ್ರಶ್ನಿಸಿದರೆ ಕೋಮುವಾದಿ ಎನ್ನುತ್ತಾರೆ. ಪಠ್ಯ ಪರಿಷ್ಕರಣೆ ಅಥವಾ ಈಗ ಸೇರಿಸಿರುವ ಪಠ್ಯ ವಾಪಸ್‌ ಪಡೆಯಬೇಕೋ, ಬೇಡವೋ ಎಂಬ ವಿಷಯದಲ್ಲಿ ನಾನು ಯಾವ ಸಲಹೆಯನ್ನೂ ಕೊಡುವುದಿಲ್ಲ ಎಂದರು. ಹಿಂದೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (ಎನ್‌ಸಿಇಆರ್‌ಟಿ) ಸಂಬಂಧಿಸಿದ ಸಂಸ್ಥೆಯಲ್ಲಿ ನಾನು ಕೆಲಸ ಮಾಡುತ್ತಿದ್ದೆ. 

ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಪಠ್ಯಕ್ರಮ ಬದಲಾವಣೆ, ರಾಷ್ಟ್ರೀಯ ಐಕ್ಯತೆ ತರಲು ಮುಂದಾದರು. ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಪಾರ್ಥಸಾರಥಿ ಅವರನ್ನು ಅಧ್ಯಕ್ಷರು ಹಾಗೂ ನನ್ನನ್ನೂ ಸೇರಿಸಿ ಐವರು ಸದಸ್ಯರ ಸಮಿತಿ ರಚಿಸಿದ್ದರು. ದೇಶದ ಐಕ್ಯತೆಗಾಗಿ ಪಠ್ಯಕ್ರಮದಲ್ಲಿನ ಕಲ್ಮಶವನ್ನು ಸ್ವಚ್ಛಗೊಳಿಸಬೇಕಿದೆ ಎಂದು ಪಾರ್ಥಸಾರಥಿ ಹೇಳಿದರು. ಸ್ವಚ್ಛ ಮಾಡುವುದು ಅಂದರೇನರ್ಥ ಎಂದು ಅವರನ್ನು ಕೇಳಿದೆ. ಔರಂಗಜೇಬ್‌ ದೇಗುಲ ಕೆಡವಿದ, ಕಾಶಿಯಲ್ಲಿ ಮಸೀದಿ ಕಟ್ಟಿದ ಎಂದೆಲ್ಲಾ ಪಠ್ಯದಲ್ಲಿದೆ; ಅವನ್ನೆಲ್ಲ ತೆಗೆಯಬೇಕು. ಮಕ್ಕಳ ಮನಸ್ಸಿನಲ್ಲಿ ಅವೆಲ್ಲವನ್ನು ಬಿತ್ತುವುದು ಬೇಕಾ? ಅಂದ್ರು. 

ಆ ಪಠ್ಯದಲ್ಲಿರುವುದೆಲ್ಲವೂ ನಿಜ. ಮಸೀದಿಯೊಂದರ ಬಳಿ ಕಲ್ಲಿನ ಬಸವಣ್ಣ ಮೂರ್ತಿ ಇದೆ. ಅದು ಮಸೀದಿ ನೋಡುತ್ತಾ ಕುಳಿತಿದೆ ಎಂದರೆ ಅಲ್ಲಿ ದೇವಸ್ಥಾನವಿತ್ತು ಎನ್ನುವುದನ್ನು ತೋರಿಸುತ್ತದೆ ಅಂದೆ. ಅವರಿಂದ ಉತ್ತರ ನೀಡಲಾಗಲಿಲ್ಲ. ಪ್ರತ್ಯೇಕವಾಗಿ ಕರೆದೊಯ್ದು ನನ್ನೊಂದಿಗೆ ಚರ್ಚಿಸಿದ್ದರು; ಅಸಹಾಯಕತೆ ವ್ಯಕ್ತಪಡಿಸಿದರು. ಇದಾದ 15 ದಿನಗಳಲ್ಲಿ ಸಮಿತಿಯಿಂದ ನನ್ನನ್ನು ತೆಗೆದು ಕಮಿಟೆಡ್‌ ಕಮ್ಯುನಿಸ್ಟ್‌ ಒಬ್ಬರನ್ನು ಹಾಕಿದ್ದರು. ಬಳಿಕ ಹಲವು ಪಠ್ಯ ಪರಿಷ್ಕರಿಸಲಾಯಿತು. ಅದನ್ನು ಕಾಂಗ್ರೆಸ್‌ ಆಡಳಿತ ರಾಜ್ಯಗಳಲ್ಲಿ ಜಾರಿಗೊಳಿಸಲಾಯಿತು. ಪಠ್ಯಕ್ರಮವನ್ನು ಯಾರು ಮಾಡಿರುವವರು ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರೂ ಪ್ರಯತ್ನಿಸಿದ್ದರು. ಆದರೆ, ಆಗಿರಲಿಲ್ಲ ಎಂದು ತಿಳಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಸಚಿವ ನಾಗೇಶ್‌ ಮನೆಗೆ ಮುತ್ತಿಗೆ

ಬಳಿಕ ನಾಲ್ಕೈದು ವರ್ಷ ಬಹಳಷ್ಟು ಪುಸ್ತಕಗಳನ್ನು ಓದಿ, ಆವರಣ ಕಾದಂಬರಿ ಬರೆದೆ. ಓದಿದ್ದ ಎಲ್ಲ ಪುಸ್ತಕಗಳನ್ನೂ ಅಲ್ಲಿ ನಮೂದಿಸಿದ್ದೇನೆ. ಆ ಪುಸ್ತಕ ಓದಿ ದಿವಂಗತ ಯು.ಆರ್‌.ಅನಂತಮೂರ್ತಿ ಸೇರಿ ಹಲವರು ತಗಾದೆ ತೆಗೆದರು. ಸುಳ್ಳು ಬರೆದಿದ್ದಾರೆ ಎಂದು ಗಲಾಟೆ ಮಾಡಿದರು. ವಿಚಾರಸಂಕಿರಣ ನಡೆಸಿದರು. ಆ ಪರಿಣಾಮ ನನ್ನ ಪುಸ್ತಕವನ್ನು ಬಹಳಷ್ಟುಮಂದಿ ಓದಿದರು. ಅದು ರಾಜ್ಯವೊಂದರಲ್ಲೇ 65ನೇ ಮುದ್ರಣವನ್ನು ಕಂಡಿದೆ ಎಂದು ಭೈರಪ್ಪ ವಿವರಿಸಿದರು.

Follow Us:
Download App:
  • android
  • ios