ರೋಹಿತ್ ಚಕ್ರತೀರ್ಥನ ವಕ್ರಬುದ್ಧಿ ಸರ್ಕಾರ ಸರಿ ಮಾಡಲಿ: ಬಸವಯೋಗಿಪ್ರಭು ಸ್ವಾಮೀಜಿ
* ನಾಡಗೀತೆಗೆ ಅವಮಾನ ಮಾಡಿದ ಚಕ್ರತೀರ್ಥ ಅವರನ್ನು ಪುಸ್ತಕ ಸಮಿತಿಯಿಂದ ವಜಾ ಮಾಡಬೇಕು
* ಕನ್ನಡ ಬಾವುಟ ಅವಮಾನಿಸುವ ನಾಡದ್ರೋಹಿಯನ್ನು ಪುಸ್ತಕ ಸಮಿತಿಯೊಳಗೆ ಇರಲು ಬಿಡಬಾರದು
* ಆ ಸಮಿತಿಗೆ ರೋಹಿತ್ ಚಕ್ರತೀರ್ಥ ಯೋಗ್ಯನಿಲ್ಲ
ನರಸಿಂಹರಾಜಪುರ(ಜೂ.02): ಚಕ್ರತೀರ್ಥನ ವಕ್ರಬುದ್ಧಿಯನ್ನು ಸರ್ಕಾರ ಸರಿ ಮಾಡಬೇಕು ಎಂದು ಮೆಣಸೂರು ಬಸವ ಕೇಂದ್ರದ ಬಸವಯೋಗಿಪ್ರಭು ಸ್ವಾಮೀಜಿ ಆಗ್ರಹಿಸಿದ್ದಾರೆ.
ನಾಡಗೀತೆಗೆ ಅವಮಾನ ಮಾಡಿದ ಚಕ್ರತೀರ್ಥ ಅವರನ್ನು ಪುಸ್ತಕ ಸಮಿತಿಯಿಂದ ವಜಾ ಮಾಡಬೇಕು. ಕನ್ನಡ ಬಾವುಟವನ್ನು ಅವಮಾನಿಸುವ ನಾಡದ್ರೋಹಿಯನ್ನು ಪುಸ್ತಕ ಸಮಿತಿಯೊಳಗೆ ಇರಲು ಬಿಡಬಾರದು. ಆ ಸಮಿತಿಗೆ ಅವರು ಯೋಗ್ಯನಿಲ್ಲ ಎಂದಿದ್ದಾರೆ.
Textbook Revision: ರಾಜಕೀಯಕ್ಕಾಗಿ ನನ್ನ ತೇಜೋವಧೆ: ರೋಹಿತ್ ಚಕ್ರತೀರ್ಥ
ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣನವರು ಉಪನಯನ ಮಾಡಿಕೊಂಡು ಶೈವ ಗುರುವಿನಿಂದ ಲಿಂಗದೀಕ್ಷೆ ಪಡೆದರೆಂಬ ಸುಳ್ಳನ್ನು ಹೇಳುವುದರ ಮೂಲಕ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶಗಳನ್ನು ರವಾನಿಸಿದ್ದಾರೆ. ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ನೈಜ ವಿಚಾರಗಳನ್ನು ಮರೆಮಾಚುವ ಪುರೋಹಿತಶಾಹಿ ಸಮಿತಿಯನ್ನು ಕೈ ಬಿಡಬೇಕು ಎಂದು ಶ್ರೀಗಳು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಬಸವಣ್ಣ ಪಠ್ಯ ವಿರುದ್ಧ ಶ್ರೀಗಳ ಹೋರಾಟ ಎಚ್ಚರಿಕೆ
ಬೆಂಗಳೂರು: ಲಿಂಗಾಯತ ಧರ್ಮ ಗುರು ಬಸವಣ್ಣನವರ ಬಗ್ಗೆ ಪಠ್ಯದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಮಠಾಧಿಪತಿಗಳು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಭಾಲ್ಕಿಯ ಡಾ.ಬಸವಲಿಂಗ ಸ್ವಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರನ್ನು ಕುರಿತ ಪಾಠದಲ್ಲಿ ಕೆಲ ಬದಲಾವಣೆ ಮಾಡಿ ಪ್ರಕಟಿಸಿರುವುದು ಕುಚೋದ್ಯದ ಸಂಗತಿಯಾಗಿದೆ. ಈ ಅನೈತಿಕ ತಪ್ಪುಗಳನ್ನು ಸರಿಪಡಿಸಿ ಪ್ರಕಟಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉಪನಯನದ ನಂತರ ಬಸವಣ್ಣ ಕೂಡಲ ಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ. ಇದು ತಪ್ಪು. ತಮ್ಮ ಸಹೋದರಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿ ಕೂಡಲ ಸಂಗಮಕ್ಕೆ ಹೋಗಿದ್ದು ಇದು ಐತಿಹಾಸಿಕ ಸಂಗತಿಯಾಗಿದೆ. ಶೈವ ಗುರುಗಳ ಸಾನಿಧ್ಯದಲ್ಲಿ ಬಸವಣ್ಣ ಲಿಂಗ ದೀಕ್ಷೆ ಪಡೆದರು ಎಂದಿದೆ. ಇದು ಸರಿಯಲ್ಲ. ಶೈವ ಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು. ಇವರು ಹೇಗೆ ಲಿಂಗ ದೀಕ್ಷೆ ಕೊಡುತ್ತಾರೆ? ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದ್ದು ಎಂದು ವಿವರಿಸಿದ್ದಾರೆ.
ಇಷ್ಟಲಿಂಗದ ಜನಕ:
ಬಸವಣ್ಣನವರು ಇಷ್ಟಲಿಂಗದ ಜನಕರಾಗಿದ್ದಾರೆ. ಅಲ್ಲಮಪ್ರಭು ಸೇರಿದಂತೆ ಎಲ್ಲ ಶರಣರು ತಮ್ಮ ವಚನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ‘ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ’ ಎಂದು ಚನ್ನಬಸವಣ್ಣನವರು ಉಲ್ಲೇಖಿಸಿದ್ದಾರೆ. ‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೆ ರೂಪಾದೆ’ ಎಂದು ಬಸವಣ್ಣನವರು ಸ್ವತಃ ತಮ್ಮ ವಚನದಲ್ಲಿ ಹೇಳಿದ್ದಾರೆ ಎಂದು ಸ್ಮರಿಸಿದ್ದಾರೆ.
ಬಸವಣ್ಣ ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂದು ಪಠ್ಯದಲ್ಲಿ ಈಗ ಸೇರಿಸಲಾಗಿದ್ದು, ಇದು ಸಹ ಶುದ್ಧ ತಪ್ಪು. ವೀರಶೈವವು ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಹೆಸರಿಸಲಾಗಿದೆ. ಸರ್ಕಾರದ ದಾಖಲೆಗಳಲ್ಲಿ ಕ್ರಿ.ಶ.1871 ರಿಂದಲೂ ಇದನ್ನು ಕಾಣಬಹುದಾಗಿದೆ. ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
Revised textbooks ರೋಹಿತ್ ಚಕ್ರತೀರ್ಥ ವಿರುದ್ಧ ಕರವೇ ಪ್ರತಿಭಟನೆ, ಬಂಧನಕ್ಕೆ ಜೆಡಿಎಸ್ ಆಗ್ರಹ!
ಶೈವದಲ್ಲಿ ವರ್ಣಾಶ್ರಮದ ಆಚರಣೆಯಿದೆ. ಲಿಂಗಾಯತರಲ್ಲಿ ವರ್ಣಾಶ್ರಮ ಭೇದಗಳಿಲ್ಲ. ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂಬುದು ಶುದ್ಧ ಅನೈತಿಕವಾಗಿದೆ. ಕಳೆದ ವರ್ಷ ಪಠ್ಯದಲ್ಲಿದ್ದ ವೈದಿಕ ಧರ್ಮದ ಆಚರಣೆಗಳ ನಿರಾಕರಣೆ, ಮಾನವೀಯ ಮೌಲ್ಯಗಳಿಂದ ಕೂಡಿದ ಸಿದ್ಧಾಂತದ ಪ್ರತಿಪಾದನೆ, ಅನಿಷ್ಟಪದ್ಧತಿಗಳ ವಿರುದ್ಧದ ಹೋರಾಟ, ಸ್ವಾವಲಂಬನೆ, ದೇಹವೇ ದೇಗುಲ ತತ್ವಗಳ ಬೋಧನೆ, ಕನ್ನಡ ಬಳಕೆ ಮಾಡಿದ್ದನ್ನೂ ತೆಗೆದು ಹಾಕಲಾಗಿದ್ದು ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಎಲ್ಲ ದೋಷಗಳನ್ನು ಸರಿಪಡಿಸಿ ಪಠ್ಯಪುಸ್ತಕ ಮುದ್ರಿಸಬೇಕು. ತಪ್ಪು ಸಂದೇಶ ನೀಡಿದರೆ ಲಿಂಗಾಯತ ಧರ್ಮಕ್ಕೆ ಮತ್ತು ಬಸವಣ್ಣನವರಿಗೆ ಅಪಚಾರ ಎಸಗಿದಂತಾಗುತ್ತದೆ. ಲಿಂಗಾಯತ ಧರ್ಮದ ಅನುಯಾಯಿ ಮತ್ತು ಬಸವಣ್ಣನವರ ಹೆಸರಿನವರಾದ ನೀವು ಮುಖ್ಯಮಂತ್ರಿಯಾಗಿದ್ದಾಗಲೇ ಇಂತಹ ಅಪಚಾರ ಆಗಿರುವುದು ಆಘಾತಕಾರಿಯಾಗಿದೆ. ಲಿಂಗಾಯತ ಮಠಾಧಿಪತಿಗಳು ಬೃಹತ್ ಪ್ರತಿಭಟನೆ ನಡೆಸುವ ಮುನ್ನ ತಪ್ಪುಗಳನ್ನು ಸರಿ ಪಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.