ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಸಚಿವ ನಾಗೇಶ್ ಮನೆಗೆ ಮುತ್ತಿಗೆ
* ಸಚಿವರ ತಿಪಟೂರು ಮನೆಗೆ ಮುಂದೆ ಎನ್‌ಎಸ್‌ಯುಐ ದಿಢೀರ್ ಪ್ರತಿಭಟನೆ
* ಖಾಕಿ ಚೆಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ
* ಮುತ್ತಿಗೆಗೆ ಸಿಎಂ ಬೊಮ್ಮಾಯಿ, ಕಟೀಲ್ ಖಂಡನೆ
ತಿಪಟೂರು(ತುಮಕೂರು)(ಜೂ.02): ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನೇ ದಿನೆ ಕಾವೇರುತ್ತಿರುವ ನಡುವೆಯೇ ಅಖಿಲ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ)ದ ಕಾರ್ಯಕರ್ತರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಲ್ಲದೆ, ಖಾಕಿ ಚಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.
ಘಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಹಲವು ಮುಖಂಡರು ಖಂಡಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಘಟನೆಗೆ ಸಂಬಂಧಿಸಿ ಪೊಲೀಸರು 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರೂ ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಪೊಲೀಸರು ಅವರಲ್ಲಿ ಹೆಚ್ಚಿನವರು ತಪ್ಪಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗುವಾಗ ಒಂದಿಬ್ಬರ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ಪೊಲೀಸ್ ಠಾಣೆ ಸಮೀಪವೇ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪಠ್ಯಪುಸ್ತಕ ವಿವಾದ, ಚುನಾವಣಾ ಗಿಮಿಕ್: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ದಿಢೀರ್ ಪ್ರತಿಭಟನೆ: ತಿಪಟೂರಿನ ಕೆ.ಆರ್.ಬಡಾವಣೆಯಲ್ಲಿರುವ ಸಚಿವರ ಮನೆಗೆ ಎನ್‌ಎಸ್‌ಯುಐನ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಸುಮಾರು 20-30 ಕಾರ್ಯಕರ್ತರು ಯಾವುದೇ ಅನುಮತಿ ಪಡೆಯದೆ ಸಂಜೆ ವೇಳೆ ದಿಢೀರ್ ಮುತ್ತಿಗೆ ಹಾಕಲು ಯತ್ನಿಸಿದರು. ‘ಪಠ್ಯ ಬದಲಾವಣೆ ರೂವಾರಿ, ಸಂವಿಧಾನ ವಿರೋಧಿ ಶಿಕ್ಷಣ ಸಚಿವ ಹಾಗೂ ಕೋಮುವಾದಿ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಮತ್ತು ಶಿಕ್ಷಣ ವ್ಯವಸ್ಥೆಯನ್ನೇ ಕೇಸರೀಕರಣ ಮಾಡಲು ಹೊರಟಿರುವ ಸಚಿವರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.
ಖಾಕಿ ಚಡ್ಡಿಗೆ ಬೆಂಕಿ:
ಈ ವೇಳೆ ಪ್ರತಿಭಟನಾಕಾರರು ಆರೆಸ್ಸೆಸ್ ಕಾರ್ಯಕರ್ತರು ಧರಿಸುವ ಮಾದರಿಯ ಖಾಕಿ ಬಣ್ಣದ ಚಡ್ಡಿಯೊಂದನ್ನು ಸಚಿವರ ಮನೆ ಕಾಂಪೌಂಡನ್‌ಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಲು ಯತ್ನಿಸಿದರು. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು 15 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಗೃಹ ಸಚಿವ ಆಕ್ರೋಶ: ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವರ ಮನೆಗೆ ಎನ್‌ಎಸ್‌ಯುಐ ಕಾರ್ಯಕರ್ತರು ನುಗ್ಗಿದ್ದಲ್ಲದೆ ಮನೆಗೆ ಬೆಂಕಿ ಹಾಕುವುದಕ್ಕೂ ಮುಂದಾಗಿದ್ದರು ಎಂದು ಆರೋಪಿಸಿದ್ದಾರೆ.
22 ಬ್ರಾಹ್ಮಣರ ಬರಹ ಸೇರಿಸಿದ್ದು ಬರಗೂರು: ರೋಹಿತ್ ಚಕ್ರತೀರ್ಥ
ಇದು ಪೂರ್ವ ಯೋಚಿತ ಪ್ರತಿಭಟನೆ. ಇದರ ಹಿಂದೆ ಕಾಂಗ್ರೆಸ್ ಮುಖಂಡರ ಕೈವಾಡ ಇದೆ. ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಘಟನೆ ಸಂಬಂಧ 15 ಮಂದಿಯನ್ನು ವಶಕ್ಕೆ ಪಡೆದಿದ್ದು, 2 ವಾಹನ ಜಪ್ತಿ ಮಾಡಲಾಗಿದೆ. ಪೊಲೀಸರು ವಶಕ್ಕೆ ಪಡೆದವರಲ್ಲಿ ಬೆಂಗಳೂರಿನಿಂದ ಐವರು, ದಾವಣಗೆರೆ, ಹಾಸನದಿಂದ ತಲಾ ಮೂವರು, ಚಿಕ್ಕಮಗಳೂರಿನಿಂದ ಇಬ್ಬರು, ಭದ್ರಾವತಿ, ತುಮಕೂರಿನಿಂದ ತಲಾ ಒಬ್ಬರು ಸೇರಿದ್ದಾರೆ. ಇನ್ನು ಕೆಲವರು ತಪ್ಪಿಸಿಕೊಂಡು ಹೋಗಿದ್ದಾರೆ. ಅವರನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ: ಸಚಿವರ ಮನೆಯಿಂದ ಪ್ರತಿಭಟನಾಕಾರರನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದೊಯ್ದಾಗ ಕೆಲ ಪ್ರತಿಭಟನಾಕಾರರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಕೆಲ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ತಪ್ಪಿಸಿಕೊಂಡು ಹೋಗುತ್ತಿದ್ದ ಪ್ರತಿಭಟನಾಕಾರರಲ್ಲಿ ಒಂದಿಬ್ಬರ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಹಿನ್ನೆಲೆಯಲ್ಲಿ ಸಚಿವ ಬಿ.ಸಿ.ನಾಗೇಶ್ ಮನೆಗೆ ಗೃಹ ಸಚಿವ ಆರಗಜ್ಞಾನೇಂದ್ರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.