Asianet Suvarna News Asianet Suvarna News

100 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಶಾಲೆ ಉಳಿಸಿಕೊಳ್ಳಲು ಪಣತೊಟ್ಟ ಹಳೆ ವಿದ್ಯಾರ್ಥಿಗಳು

* ಶಾಲೆ ಕಟ್ಟಡ ಉಳುವಿಗಾಗಿ ಹಳೆ ವಿದ್ಯಾರ್ಥಿಗಳ  ಅಭಿಯಾನ
* ಸುಮಾರು 100 ವರ್ಷಗಳಿಗೂ ಅಧಿಕ ಇತಿಹಾಸವಿರುವ ಪಾರಂಪರಿಕ ಶಾಲೆ
* 100 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಶಾಲೆ ಉಳಿಸಿಕೊಳ್ಳಲು ಪಣತೊಟ್ಟ ಹಳೆ ವಿದ್ಯಾರ್ಥಿಗ

Koppal old Students campaign for Save 100 Year Old School  rbj
Author
Bengaluru, First Published Mar 29, 2022, 4:51 PM IST | Last Updated Mar 29, 2022, 4:51 PM IST

ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಪ್ಪಳ

ಕೊಪ್ಪಳ, (ಮಾ.29): ಸವಿ ಸವಿ ನೆನಪು, ಸಾವಿರ ನೆನಪು, ಸಾವಿರ ಕಾಲಕು ಸವೆಯದ ನೆನಪು, ಎದೆಯಾಳದಲಿ ಬಚ್ಚಿಕೊಂಡಿರುವ  ಅಚ್ಚಳಿಯದ ನೂರೊಂದು ನೆನಪು, ಮೈ ಆಟೋಗ್ರಾಫ್ ಚಿತ್ರದ ಈ ಹಾಡು ಕೇಳಿದ ತಕ್ಷಣವೇ ಪ್ರತಿಯೊಬ್ಬರೂ ತಮ್ಮ ಶಾಲೆಯ ದಿನಗಳಿಗೆ ಜಾರಿಕೊಳ್ಳುತ್ತಾರೆ. ಯಾಕಂದ್ರೆ ನಾವು ಕಲಿತ ಶಾಲೆಯೊಂದಿಗೆ ಅಷ್ಟೊಂದು ಅವಿನಾಭಾವ ಸಂಬಂಧವನ್ನು ನಾವು ಹೊಂದಿರುತ್ತೇವೆ.

ಹೀಗೆ ಅವಿನಾಭಾವ ಹೊಂದಿರುವ ಶಾಲೆಯ ಕಟ್ಟಡ ನೆಲಸಮ ಆಗುತ್ತದೆ ಅಂದರೆ ಯಾರಿಗೆ ತಾನೆ ಸಹಿಸಿಕೊಳ್ಳಲು ಆಗುತ್ತೆ ಹೇಳಿ. ಆಗೋದಿಲ್ಲ ತಾನೆ. ಹೀಗಾಗಿ ಇಲ್ಲೊಂದು ಊರಲ್ಲಿ ತಾವು ಕಲಿತ ಶಾಲೆಯ ಕಟ್ಟಡ ನೆಲಸಮ ಆಗುವುದನ್ನು ಅರಿತ ಶಾಲೆಯ ಹಳೆಯ ವಿದ್ಯಾರ್ಥಿಗಳು ಇದೀಗ ಸೇವ್ ಎಂ ಎಚ್ ಪಿ ಎಸ್ ಸ್ಕೂಲ್ ಎನ್ನುವ ಅಭಿಯಾನ ಆರಂಭಿಸಿದ್ದಾರೆ.

Koppal: ಶಾಸಕ ರಾಘವೇಂದ್ರ ಹಿಟ್ನಾಳ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು!

ಹೌದು... ಕೊಪ್ಪಳ ನಗರದಲ್ಲಿ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಇದೆ. ಈ ಶಾಲೆಯ ಕಟ್ಟಡವೇ ಇದೀಗ ನೆಲಸಮವಾಗುತ್ತಿರುವುದು.  ಸುಮಾರು 100 ವರ್ಷಗಳಿಗೂ ಅಧಿಕ ಇತಿಹಾಸವಿರುವ ಪಾರಂಪರಿಕ ಎಂಹೆಚ್‌ಪಿಎಸ್ ಕಟ್ಟಡ ಉಳಿಸಿ ಇತಿಹಾಸ ಪರಂಪರೆ ಸಂರಕ್ಷಿಸಲು ಶಾಲೆಯ ಹಳೆಯ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ. 

ಶಾಲೆಯ ಕಟ್ಟಡದ ಇತಿಹಾಸ 
Koppal old Students campaign for Save 100 Year Old School  rbj

ಇಲ್ಲಿನ ನಗರಸಭೆ ಬಳಿಯ ಸ್ಟೇಷನ್ ರಸ್ತೆಯಲ್ಲಿರುವ ನಗರದ ಪ್ರತಿಷ್ಠಿತ  ಸರ್ಕಾರಿ ಎಂಹೆಚ್‌ಪಿಎಸ್ (ಇಂದಿನ ಶಾಸಕರ  ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ) ಕಟ್ಟಡಕ್ಕೆ ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಹೈದ್ರಾಬಾದ್ ನವಾಬರ ಆಳ್ವಿಕೆಯ ಕಾಲದಲ್ಲಿ ಜಹಗೀರು ಜಿಲ್ಲೆಯಾಗಿದ್ದ ಕೊಪ್ಪಳದ ಐತಿಹಾಸಿಕ ಹಿನ್ನೆಲೆ ಯ ಸ್ಮಾರಕವೂ ಕೂಡ ಇದಾಗಿದೆ. ಮುಖ್ಯ ಕಟ್ಟಡದ ಎರಡೂ ಬದಿಗೆ ಗೋಲಾಕಾರದ ಕೊಠಡಿಗಳು, ಹೊರಗಿನ ಪರಿಸರ ವೀಕ್ಷಿಸಬಹುದಾದ ಜಾಲರಿ ಮಾದರಿಯ ಕಾಂಕ್ರೀಟ್ ರಚನೆಯ ಕಾರಿಡಾರ್, ವಿಶಾಲ ಸೆಂಟ್ರಲ್ ಹಾಲ್, ಐದಾರು ಕೊಠಡಿಗಳನ್ನು ಹೊಂದಿದೆ.ಮೊದಲ ನೋಟಕ್ಕೆ ತನ್ನತ್ತ ಆಕರ್ಷಿಸುವ ಚುಂಬಕ ಶಕ್ತಿಯನ್ನ ಈ ಕಟ್ಟಡ ಹೊಂದಿದೆ. ಜೊತೆಗೆ ಈ ಶಾಲೆಯಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ವಿವಿಧ ಉನ್ನತ ಹುದ್ದೆಯಲ್ಲಿರುವುದು ವಿಶೇಷ.

ಯಾಕೆ ಕಟ್ಟಡ ಕೆಡವಲಾಗುತ್ತಿದೆ?
ಇನ್ನು ಎಂ ಎಚ್ ಪಿ ಎಸ್ ಶಾಲೆ ನಗರದ ಹೃದಯ ಭಾಗದಲ್ಲಿರುವ ಏಕೈಕ ಸರಕಾರಿ ಶಾಲೆ. ಈ ಶಾಲೆಯ ಸುಮಾರು 3 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. ಈಗಾಗಲೇ ಇಂದಿರಾ ಕ್ಯಾಂಟೀನ್, ತೋಟಗಾರಿಕೆ ಇಲಾಖೆ, ಪೊಲೀಸ್ ಇಲಾಖೆಯವರು ಜಾಗ ತೆಗೆದುಕೊಂಡಿದ್ದಾರೆ. ಈಗ ಇದರ ಡೆಮಾಲಿಶ್ ಗೆ ಪ್ರಮುಖವಾದ ಕಾರ, ಗುರು ಭವನ. ಹೈದರಾಬಾದ್ ನವಾಬರ ಆಳ್ವಿಕೆಯ ಕಾಲದ ಉಪವಿಭಾಗಾಧಿಕಾರಿಗಳ ಬಂಗಲೆಯಾಗಿದ್ದ ಈ ಐತಿಹಾಸಿಕ ಕಟ್ಟಡ ನೆಲಸಮಗೊಳಿಸಿ ಗುರುಭವನ ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ಗುರುಭವನದ ಭೂಮಿ ಪೂಜೆ ನೆರವೆರಿಸಲಾಗಿದೆ.

ಎಚ್ಚೆತ್ತ ಹಳೆಯ ವಿದ್ಯಾರ್ಥಿಗಳು
ಇನ್ನು ಯಾವಾಗ ತಮ್ಮ ಶಾಲೆಯನ್ನು ಕೆಡವಿ ಗುರುಭವನ ನಿರ್ಮಾಣ ಮಾಡಬೇಕೆನ್ನುವ ಉದ್ದೇಶ ತಿಳಿಯಿತೋ ಆಗ ಶಾಲೆಯ ಹಳೆಯ ವಿದ್ಯಾರ್ಥಿಗಳು ಎಚ್ಚೇತ್ತುಕೊಂಡರು. ಕೂಡಲೇ ಸಮಾನ ಮನಸ್ಕ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು  ಎಂ ಎಚ್ ಪಿ ಎಸ್ ಸ್ಕೂಲ್ ಎನ್ನುವ ವಾಟ್ಸಪ್ ಗ್ರೂಪ್ ಮಾಡಿದರು.‌ಆ ಮೂಲಕ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಗ್ರೂಪ್ ಗೆ ಸೇರಿಸಿ ಆ ಮೂಲಕ ಶಾಲೆಯ ಕಟ್ಟಡದ ಉಳುವಿಗೆ ಮಾಡಬೇಕಾದ ಕಾರ್ಯಗಳ ಕುರಿತು ಸಲಹೆ ಸೂಚನೆ ಪಡೆಯಲಾಯಿತು. ಅದರಂತೆ ಇದೀಗ ಹಳೆಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳಿಗೆ ತಾವು ಕಲಿತ ಶಾಲೆಯ ಕಟ್ಟಡವನ್ನು ಉಳಿಸಲು ಮನವಿ ಮಾಡಿಕೊಳ್ಳುತ್ತಿದ್ದಾರೆ.ಜೊತೆಗೆ ಪತ್ರ ಚಳವಳಿಯನ್ನು ಸಹ ಮಾಡುತ್ತಿದ್ದಾರೆ.

ಹಳೆ ವಿದ್ಯಾರ್ಥಿಗಳ ದೃಷ್ಟಿಕೋನದಲ್ಲಿ ಮುಂದಿನ‌ ಯೋಜನೆ
ಶಾಲೆಯ ಮುಖ್ಯ ಕಟ್ಟಡವನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಂಡು ಈ ಭಾಗದ ಚರಿತ್ರೆಯ, ಪರಂಪರೆಯ ದ್ಯೋತಕವನ್ನಾಗಿ ಮುಂದಿನ ಪೀಳಿಗೆಗೆ ಪರಿಚಯಿಸಲು ಕಾಪಾಡಿಕೊಳ್ಳಬೇಕು.ಆಕರ್ಷಕ ಕಟ್ಟಡವನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಬೇಕು ಅಥವಾ ಪಾರಂಪರಿಕ ಕಟ್ಟಡವಾಗಿ ಸಂರಕ್ಷಿಸಬೇಕೇನ್ನುವುದು ಶಾಲೆಯ ಹಳೆಯ ವಿದ್ಯಾರ್ಥಿಗಳ ಒತ್ತಾಯವಾಗಿದೆ. ಪ್ರಾಚೀನ ಸ್ಮಾರಕಗಳು ಹಾಗೂ 100 ವರ್ಷಗಳಿಗಿಂತ ಹಳೆಯದಾದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕಾನೂನಿನಲ್ಲಿ ಅವಕಾಶಗಳಿವೆ.ಹೈದ್ರಾಬಾದ್ ನವಾಬರ ಆಳ್ವಿಕೆಯ ಕಾಲದಲ್ಲಿ ಉಪವಿಭಾಗಾಧಿಕಾರಿ ಬಂಗಲೆಯಾಗಿದ್ದ ಈ ನಿವಾಸವನ್ನು 1948 ರ ಹೈದ್ರಾದಾಬ್ ವಿಮೋಚನಾ ಹೋರಾಟದ ವೇಳೆಯಲ್ಲಿ, ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸೂಚನೆ ಮೇರೆಗೆ ಭಾರತದ ಸೇನೆ ವಶಪಡಿಸಿಕೊಂಡು ಹೈದ್ರಾಬಾದ್ ವಿಮೋಚನೆಗೆ ಪ್ರಮುಖ ಹೆಜ್ಜೆ ಇರಿಸಿತ್ತು.ಇಂತಹ ಮಹತ್ವದ ಘಟನೆಗೆ ಸಾಕ್ಷಿಯಾದ ಈ ಕಟ್ಟಡ ಉಳಿಸಿಕೊಂಡರೆ,ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸಲು ಸಹಕಾರಿಯಾಗುತ್ತದೆ .

ಎಂಹೆಚ್‌ಪಿಎಸ್ ಕಟ್ಟಡವನ್ನು ಕೂಡ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ಹಾಗೆ ಜೀರ್ಣೋದ್ಧಾರಗೊಳಿಸಿ ಅಲ್ಲಿ ಹೈದ್ರಾಬಾದ್ ವಿಮೋಚನಾ ಹೋರಾಟದ ಮ್ಯೂಸಿಯಂ,ಗ್ರಂಥಾಲಯ,ಆವರಣದಲ್ಲಿ ಸುಂದರ ಉದ್ಯಾನವನ‌ ನಿರ್ಮಿಸಬೇಕು ಮಕ್ಕಳಿಗೆ ವ್ಯಾಯಾಮ ,ಆಟಿಕೆ ಚಟುವಟಿಕೆಗಳನ್ನು ಅಳವಡಿಸಿ ರಕ್ಷಿಸಿದರೆ ನಗರದ ಸೌಂದರ್ಯೀಕರಣ ಸಾಧ್ಯವಾಗುತ್ತದೆ ಎನ್ನುವುದು ಶಾಲೆಯ ಹಳೆಯ ವಿದ್ಯಾರ್ಥಿಗಳ ಕಳಕಳಿಯಾಗಿದೆ.

ಆದರೆ ಜಿಲ್ಲಾ ಆಡಳಿತ, ಜನಪ್ರತಿನಿಧಿಗಳು ಎಂ ಎಚ್ ಪಿ ಎಸ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಮನವಿ ಪುರಸ್ಕರಿಸಿ ಕಟ್ಟಡವನ್ನು ಯಥಾಸ್ಥಿತಿಯಲ್ಲಿ ಉಳಿಸುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios