ಸೋರುವ ಶಾಲೆ: ಛತ್ರಿ ಹಿಡಿದೇ ಪಾಠ ಕೇಳುವ ವಿದ್ಯಾರ್ಥಿಗಳು!
ಇಲ್ಲಿನ ಸಮೀಪದ ಕೋಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೇಲ್ಚಾವಣೆ ಶಿಥಿಲವಾಗಿ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿದೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಿವ್ಯನಿರ್ಲಕ್ಷ್ಯದಿಂದಾಗಿ ಧೋ ಎಂದು ನೀರು ಸುರಿಯುವ ಕೊಠಡಿಗಳಲ್ಲೇ ವಿದ್ಯಾರ್ಥಿಗಳು ಛತ್ರಿ ಹಿಡಿದು ಪಾಠ ಕೇಳುವ ದುಸ್ಥಿತಿ ಎದುರಾಗಿದೆ!
ರಿಪ್ಪನ್‌ಪೇಟೆ (ಜು.8) : ಇಲ್ಲಿನ ಸಮೀಪದ ಕೋಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೇಲ್ಚಾವಣೆ ಶಿಥಿಲವಾಗಿ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿದೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಿವ್ಯನಿರ್ಲಕ್ಷ್ಯದಿಂದಾಗಿ ಧೋ ಎಂದು ನೀರು ಸುರಿಯುವ ಕೊಠಡಿಗಳಲ್ಲೇ ವಿದ್ಯಾರ್ಥಿಗಳು ಛತ್ರಿ ಹಿಡಿದು ಪಾಠ ಕೇಳುವ ದುಸ್ಥಿತಿ ಎದುರಾಗಿದೆ!
ಹೊಸನಗರ ಮುಖ್ಯ ರಸ್ತೆಯಲ್ಲಿರುವ ಕೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿವರಗೆ ಗ್ರಾಮೀಣ ಪ್ರದೇಶದ 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 6 ಜನ ಶಿಕ್ಷಕರು ಇದ್ದಾರೆ. 2022- 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ಶೇ.86ರಷ್ಟುಫಲಿತಾಂಶ ಪಡೆದಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿರುವ ಈ ಪ್ರೌಢಶಾಲೆಯಲ್ಲಿ ಮೇಲ್ಚಾವಣಿಯೇ ಸರಿಯಾಗಿಲ್ಲ. ಮಳೆ ಬಂದರೆ ನೀರು ಸುರಿದಂತೆ ಸೋರುತ್ತದೆ. ಸಂಪೂರ್ಣ ಶಿಥಿಲಗೊಂಡಿರುವ ಈ ಶಾಲೆ ಬಗ್ಗೆ ಎಸ್‌ಡಿಎಂಸಿ ಮತ್ತು ಮುಖ್ಯೋಪಾಧ್ಯಾಯರು, ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಲಾಗಿದೆ. ಆದರೂ ಗಮನಹರಿಸದೇ ಶಾಲೆ, ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿದ್ದಾರೆ. ಪರಿಣಾಮ ಶಾಲೆ ದುರಾವಸ್ಥೆಗೆ ತಲುಪಿದೆ.
ಬಾಗಲಕೋಟೆ: ನೋಡ ಬನ್ನಿ ಹಳಿಂಗಳಿ ಸರ್ಕಾರಿ ಶಾಲೆ..!
ಛತ್ರಿ ಹಿಡಿದೇ ಕುಳಿತುಕೊಳ್ಳಬೇಕು:
ಕಳೆದ ವರ್ಷದಲ್ಲಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೋಡೂರು ವ್ಯಾಪ್ತಿಯಲ್ಲಿ ಸಾಕಷ್ಟುಹಾನಿ ಸಂಭವಿಸಿದೆ. ಮಳೆಹಾನಿ ಪ್ರದೇಶದ ವೀಕ್ಷಣೆಗಾಗಿ ಭೇಟಿ ನೀಡಿದ ರಾಜ್ಯ ಗೃಹ ಸಚಿವ ಮತ್ತು ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾ ತಾಲೂಕುಮಟ್ಟದ ಅಧಿಕಾರಿಗಳ ತಂಡಕ್ಕೆ ಈ ಶಾಲಾ ಮೇಲ್ಚಾವಣಿಯ ಶಿಥಿಲಗೊಂಡಿರುವ ಬಗ್ಗೆ ಮನವಿ ನೀಡಲಾಗಿದೆ. ಮಳೆಹಾನಿ ಪರಿಹಾರದಡಿ ಶಾಲೆಯ ಮೇಲ್ಛಾವಣಿ ದುರಸ್ತಿಗೊಳಿಸುವ ಕಾಮಗಾರಿ ಪಟ್ಟಿಗೆ ಸೇರಿಸಿ, ಅನುಮೋದನೆಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಈ ವರೆಗೂ ಮೇಲ್ಚಾವಣೆ ದುರಸ್ತಿಗೆ ಹಣ ಬಿಡುಗಡೆಯಾಗಿಲ್ಲ. ಪ್ರೌಢಶಾಲೆ ವಿದ್ಯಾರ್ಥಿಗಳು ಮಾತ್ರ ಮಳೆಗಾಲದಲ್ಲಿ ಕೊಠಡಿಯಲ್ಲಿ ಛತ್ರಿ ಹಿಡಿದೇ ಕುಳಿತು ಪಾಠ ಕೇಳುವಂಥ ಸಂಕಟ, ಕಿರಿಕಿರಿ ತಪ್ಪಿಲ್ಲ ಎಂಬುದು ವಿದ್ಯಾರ್ಥಿಗಳು, ಪೋಷಕರ ಆಕ್ರೋಶ.
ಮೇಲ್ಚಾವಣಿ ಮರಗಳು ಗೆದ್ದಲು ಪಾಲು:
ತರಗತಿ ಕೊಠಡಿಯ ಮೇಲ್ಚಾವಣಿ ಮರದ ರೀಪ್-ಪಕಾಶಿಗಳು ಗೆದ್ದಲು ತಿಂದು ಹಾಳಾಗಿಹೋಗಿವೆ. ಮಳೆ-ಗಾಳಿಯಿಂದಾಗಿ ಹೆಂಚುಗಳು ಎಲ್ಲಿ ಮಕ್ಕಳ ತಲೆಗಳ ಮೇಲೆ ಬೀಳುತ್ತವೋ ಎಂಬ ಭಯ ನಿರಂತರ ಕಾಡುತ್ತಿದೆ. ಶಿಕ್ಷಕರು ಕೂಡ ಇದೇ ಆತಂಕದಿಂದ ಮೇಲ್ಚಾವಣಿಯತ್ತ ನೋಡುತ್ತ ಪಾಠ ಮಾಡುತ್ತಿದ್ದಾರೆ. ಒಡೆದ ಹಾಗೂ ಸರಿದ ಹೆಂಚುಗಳ ಸಂದಿಯಿಂದ ಮಳೆಹನಿಗಳು ಪಠ್ಯಪುಸ್ತಕ, ನೋಟ್‌ಬುಕ್‌ಗಳ ಮೇಲೆ ಬೀಳುತ್ತಿದ್ದು, ಬರವಣಿಗೆ ಅಳಿಸಿ ಹೋಗುವ ಸಮಸ್ಯೆ ಎದುರಾಗಿದೆ. ಕೊಠಡಿಯಲ್ಲಿ ಗಾಳಿ, ಚಳಿ ಜೊತೆಗೆ ಮಳೆನೀರು ಸೋರಿಕೆಯಾಗಿ ಮಕ್ಕಳ ಕಾಲಿನ ಬುಡದಲ್ಲೇ ಹರಿಯುತ್ತದೆ. ತಲೆಯ ಮೇಲೆ ನೀರು ಜಿನುಗಿ ಅರೋಗ್ಯವಂತ ಮಕ್ಕಳು ಶೀತ, ಜ್ವರದಂಥ ಅನಾರೋಗ್ಯಕ್ಕೂ ತುತ್ತಾಗುವ ಆತಂಕ ತಪ್ಪುತ್ತಿಲ್ಲ. ಹೀಗಾದರೆ, ಶಿಕ್ಷಕರ ಬೋಧನೆ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುವುದೇ?
ಶಹಾಪುರ: ಬೆನಕನಹಳ್ಳಿ ಶಾಲೆ ಬಯಲು ಶೌಚ ಮುಕ್ತ ಆಗೋದು ಯಾವಾಗ?
ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮತ್ತು ಜಿಲ್ಲಾಧಿಕಾರಿ, ಜಿಲ್ಲಾ ಶಿಕ್ಷಣಾಧಿಕಾರಿಗಳು ಕೂಡಲೇ ಇತ್ತ ಗಮನಹರಿಸಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳು, ಶಿಕ್ಷಕರ ರಕ್ಷಣೆ ಜೊತೆಗೆ ಶಿಥಿಲ ಸರ್ಕಾರಿ ಪ್ರೌಢಶಾಲೆಯ ದುರಸ್ತಿಗೆ ಅಗತ್ಯ ಕ್ರಮಗಳನ್ನು ಜರುಗಿಸಬೇಕಿದೆ.