ಶಹಾಪುರ: ಬೆನಕನಹಳ್ಳಿ ಶಾಲೆ ಬಯಲು ಶೌಚ ಮುಕ್ತ ಆಗೋದು ಯಾವಾಗ?
ಶಾಲೆಯಲ್ಲಿ ಒಬ್ಬ ಶಿಕ್ಷಕರ ಕೊರತೆ ಇದ್ದು, ನೇಮಕ ಮಾಡುವಂತೆ ಒತ್ತಾಯ, ಶಾಲೆಯ ಸುತ್ತಮುತ್ತ ಮುಳ್ಳುಕಂಟಿಗಳು ಬೆಳೆದಿದ್ದು, ವಿಷ ಜಂತುಗಳು ಕಚ್ಚುವ ಭಯ, ಮಂಜೂರಾಗಿರುವ ಬಿಸಿಯೂಟ ಕೊಠಡಿ ನಿರ್ಮಾಣ ಕಾಮಗಾರಿ ಆರಂಭಕ್ಕೆ ಆಗ್ರಹ.
ಮಲ್ಲಯ್ಯ ಪೋಲಂಪಲ್ಲಿ
ಶಹಾಪುರ(ಜು.05): ರಾಜ್ಯ ಮತ್ತು ಕೇಂದ್ರ ಸರ್ಕಾರವೂ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಲು ಹಾಗೂ ಬಯಲು ಶೌಚ ಮುಕ್ತಗೊಳಿಸಲು ಕೋಟ್ಯಂತರ ರು. ವೆಚ್ಚ ಮಾಡುತ್ತಿದ್ದರೂ ಇಲ್ಲೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಬಯಲೆ ಗತಿಯಾಗಿದೆ.
ತಾಲೂಕಿನ ಅನತಿ ದೂರದಲ್ಲಿರುವ ಬೆನಕನಹಳ್ಳಿ ಗ್ರಾಮದ ಶಾಲೆ 1977ರಲ್ಲಿ ಆರಂಭಗೊಂಡಿದ್ದು, ಇಂದು ಶಾಲೆಯಲ್ಲಿ 153 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಐವರು ಶಿಕ್ಷಕರಿದ್ದಾರೆ. ಆದರೆ ಶೌಚಾಲಯವಿಲ್ಲ.
ಮೂರು ಕೊಠಡಿಗಳಿವೆ. ವಿದ್ಯಾರ್ಥಿಗಳ ಸಂಖ್ಯಾನುಸಾರ ಐವರು ಶಿಕ್ಷಕರಿದ್ದಾರೆ. ಮುಖ್ಯಶಿಕ್ಷಕರು ಶಾಲೆ ಕೆಲಸಗಳನ್ನು ನೋಡಿಕೊಂಡರೂ ಇರುವ ನಾಲ್ವರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ. ಮತ್ತೊಬ್ಬ ಶಿಕ್ಷಕರನ್ನು ಕೂಡಲೇ ನೇಮಿಸಬೇಕು ಎಂದು ಶಿಕ್ಷಣ ಪ್ರೇಮಿ ನಿಂಗಣ್ಣ ಒತ್ತಾಯಿಸಿದ್ದಾರೆ.
Dakshina kannada rains: ಮಳೆಗೆ ಗಡಿಯಾರ ಶಾಲೆ ಬಳಿ ಗುಡ್ಡಕುಸಿತ: ಶಾಲೆಗೆ ರಜೆ
ಸರ್ಕಾರಕ್ಕೆ ಪತ್ರ:
ಸರ್ಕಾರ ಶಿಕ್ಷಕರನ್ನು ನೇಮಿಸುವ ಕೆಲಸಕ್ಕೆ ಮಾತ್ರ ಮುಂದಾಗುತ್ತಿಲ್ಲ. ಶಾಲೆಗಳಿಗೆ ಬಿಸಿಯೂಟ, ಕ್ಷೀರಭಾಗ್ಯ ಇನ್ನಿತರ ಯೋಜನೆಗಳನ್ನು ಜಾರಿಗೆ ತರುವುದರಿಂದ ದೈಹಿಕವಾಗಿ ಬಲಿಷ್ಠರಾಗುತ್ತಾರೆ. ಓದಿನಲ್ಲಿ ಹಿಂದುಳಿಯುತ್ತಾರೆ. ಆದ್ದರಿಂದ ಸರ್ಕಾರಿ ಶಿಕ್ಷಕರ ನೇಮಕಕ್ಕೆ ಆದ್ಯತೆ ನೀಡಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಗ್ರಾಪಂ ಸದಸ್ಯ ಸಂಗಣ್ಣ ಬಂಗಾರಿ ತಿಳಿಸಿದ್ದಾರೆ.
ವಿಷಜಂತು ಹಾವಳಿ:
ಶಾಲೆ ಸುತ್ತಮುತ್ತ ಮುಳ್ಳುಕಂಟಿಗಳು ಬೆಳೆದಿವೆ. ಇದರ ಮರೆಯಲ್ಲಿ ಮಕ್ಕಳು ಮೂತ್ರ ವಿಸರ್ಜನೆ ಮಾಡಿ ಬರುತ್ತಾರೆ. ಮಳೆಗಾಲವಾಗಿದ್ದರಿಂದ ವಿಷ ಜಂತುಗಳು ಬರುವ ಸಂಭವ ಹೆಚ್ಚಿದೆ. ಆದ್ದರಿಂದ ಕೂಡಲೇ ಗ್ರಾಪಂನವರು ಸ್ವಚ್ಛಗೊಳಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ಬಿಸಿಯೂಟ ಕೊಠಡಿ:
ವರ್ಷಗಳ ಹಿಂದೆ ಈ ಶಾಲೆಗೆ ಬಿಸಿಯೂಟಕ್ಕಾಗಿ ಎರಡು ಕೊಠಡಿಗಳು ಮಂಜೂರಾಗಿದ್ದು, ಈ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ನಿರ್ಮಿತ ಕೇಂದ್ರದವರಿಗೆ ವಹಿಸಲಾಗಿತ್ತು. ಆದರೆ, ಇದುವರೆಗೂ ಕಟ್ಟಡ ಕಾಮಗಾರಿ ಪ್ರಾರಂಭಿಸಿಲ್ಲ. ಜಿಪಂ ಸಿಇಒ ಅವರು ಕಟ್ಟಡ ನಿರ್ಮಿಸುವಂತೆ ಸೂಚನೆ ನೀಡಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.
ಕಟ್ಟಡಕ್ಕೆ ಜನವರಿ ತಿಂಗಳಲ್ಲಿ ಕಾಮಗಾರಿಗೆ ಮಂಜೂರಾತಿ ನೀಡಿತ್ತು. ಆದರೆ, ಹೊಸ ಸರ್ಕಾರ ಹಳೆ ಕಾಮಗಾರಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಮುಂದಿನ ಆದೇಶ ಬಂದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಂಪೇಗೌಡರ ಹೆಸರಲ್ಲಿ ಸರ್ಕಾರಿ ಶಾಲೆ, ಹಾಸ್ಟೆಲ್ ನಿರ್ಮಾಣ: ಶಾಸಕ ಸತೀಶ್ ರೆಡ್ಡಿ
ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಒಬ್ಬ ಶಿಕ್ಷಕರ ಕೊರತೆಯಿದೆ. ಇರುವ ಶಿಕ್ಷಕರಲ್ಲೇ ಶಕ್ತಿ ಮೀರಿ ಶಿಕ್ಷಣ ಕೊಡುತ್ತಿದ್ದೇವೆ. ಶೌಚಾಲಯ, ಕೊಠಡಿಗಳು, ಕುಡಿಯುವ ನೀರು, ಕಾಂಪೌಂಡ್ ನಿರ್ಮಿಸಿ ಕೊಡುವಂತೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಪತ್ರದ ಮೂಲಕ ಗಮನಕ್ಕೆ ತರಲಾಗಿದೆ ಅಂತ ಬೆನಕನಹಳ್ಳಿ ಶಾಲೆ ಮುಖ್ಯಶಿಕ್ಷಕ ಮಲ್ಲಣ್ಣ ಹೇಳಿದ್ದಾರೆ.
ಈ ಶಾಲೆಗೆ ಶೌಚಾಲಯ ಕೊಠಡಿಗಳು ಹಾಗೂ ಕಾಂಪೌಂಡ್ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿ ಕೊಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡುತ್ತೇವೆ ಅಂತ ಬೆನಕನಹಳ್ಳಿ ಗ್ರಾಪಂ ಸದಸ್ಯ ಆಂಜನೇಯ ಆರ್. ತಂಗಲಬಾವಿ ತಿಳಿಸಿದ್ದಾರೆ.