ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದ ನಂತರ, ಅಂಕ ಸುಧಾರಿಸಲು ಬಯಸುವ ವಿದ್ಯಾರ್ಥಿಗಳಿಗೆ ಏಪ್ರಿಲ್ 30ರಿಂದ ಎರಡನೇ ಪರೀಕ್ಷೆ ನಡೆಯಲಿದೆ. ಇದರ ಜೊತೆಗೆ, ಉತ್ತರ ಪತ್ರಿಕೆಯ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದ್ದು, ಈ ವರ್ಷ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ–1ರ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ, ಮುಂದಿನ ಪರೀಕ್ಷೆಗಳ ವೇಳಾಪಟ್ಟಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಯಾವುದೇ ಬೇಸರ ಮಾಡಿಕೊಳ್ಳದೆ ಧೈರ್ಯವಾಗಿ ಫೇಲ್ ಆದ ವಿಷಯಗಳ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಅವಕಾಶ ಇದೆ.

Add Asianetnews Kannada as a Preferred SourcegooglePreferred

ಏಪ್ರಿಲ್ 30ರಿಂದ ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ

ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ (Exam-2) ಏಪ್ರಿಲ್ 30ರಿಂದ ಆರಂಭವಾಗಿ ಮೇ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಬಾರಿ ಮೂರನೇ ಪರೀಕ್ಷೆ (Exam-3) ನಡೆಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಇನ್ನು ಮುಂದೆ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದ್ದು, ಈ ವರ್ಷದ ಫಲಿತಾಂಶ ಉತ್ತಮವಾಗಿದ್ದರೆ ಮುಂದಿನ ವರ್ಷದಿಂದ ಕೇವಲ ಎರಡು ಪರೀಕ್ಷೆಗಳನ್ನೇ ನಡೆಸುವ ಯೋಜನೆ ಇದೆ. ಫಲಿತಾಂಶದಲ್ಲಿ ಯಾವುದೇ ಕುಸಿತ ಕಂಡುಬಂದರೆ ಮಾತ್ರ ಮೂರನೇ ಪರೀಕ್ಷೆಯ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಉತ್ತರ ಪತ್ರಿಕೆಯ ಛಾಯ ಪ್ರತಿಗೆ ಅರ್ಜಿ

ಪರೀಕ್ಷೆ-1 ಬರೆದ ವಿದ್ಯಾರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆಯ ಛಾಯ ಪ್ರತಿಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಏಪ್ರಿಲ್ 10ರಿಂದ ಏಪ್ರಿಲ್ 15ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಏಪ್ರಿಲ್ 12ರಿಂದ ಏಪ್ರಿಲ್ 15ರವರೆಗೆ ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರತಿ ವಿಷಯಕ್ಕೆ ಛಾಯ ಪ್ರತಿಯನ್ನು ಪಡೆಯಲು ₹530 ಶುಲ್ಕವನ್ನು ನಿಗದಿಪಡಿಸಲಾಗಿದೆ.

ಮರುಮೌಲ್ಯಮಾಪನ ಮತ್ತು ಮರುಎಣಿಕೆ

ಫಲಿತಾಂಶದ ಬಗ್ಗೆ ಅನುಮಾನ ಇರುವ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಮತ್ತು ಮರುಎಣಿಕೆ (Recounting)ಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಗಾಗಿ ಏಪ್ರಿಲ್ 13ರಿಂದ ಏಪ್ರಿಲ್ 19ರವರೆಗೆ ಸಮಯ ನಿಗದಿಪಡಿಸಲಾಗಿದೆ. ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ ₹1670 ಶುಲ್ಕ ವಿಧಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶ

ಒಟ್ಟಿನಲ್ಲಿ, ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ ಹಾಗೂ ಮರುಮೌಲ್ಯಮಾಪನ ವ್ಯವಸ್ಥೆ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಮತ್ತೊಂದು ಅವಕಾಶ ಒದಗಿಸುತ್ತಿದೆ. ವಿದ್ಯಾರ್ಥಿಗಳು ನೀಡಿದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ.