5, 8ನೇ ಕ್ಲಾಸ್ ಪರೀಕ್ಷೆ ಮುಂದೂಡಿಕೆ: ಮತ್ತೊಮ್ಮೆ ಹೈಕೋರ್ಟ್ ನಕಾರ
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿಗಳಿಗೆ ಮಾ.27ರಿಂದ ನಡೆಯಲಿರುವ ಬೋರ್ಡ್ ಮಟ್ಟದ (ಮಂಡಳಿ) ಪರೀಕ್ಷೆಗಳನ್ನು ಮುಂದೂಡಬೇಕೆಂಬ ರಾಜ್ಯ ಖಾಸಗಿ ಅನುದಾನಿತ ರಹಿತ ಶಾಲೆಗಳ ಒಕ್ಕೂಟದ ಮನವಿಯನ್ನು ಹೈಕೋರ್ಟ್ ಮತ್ತೊಮ್ಮೆ ತಿರಸ್ಕರಿಸಿದೆ.
ಬೆಂಗಳೂರು (ಮಾ.25): ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿಗಳಿಗೆ ಮಾ.27ರಿಂದ ನಡೆಯಲಿರುವ ಬೋರ್ಡ್ ಮಟ್ಟದ (ಮಂಡಳಿ) ಪರೀಕ್ಷೆಗಳನ್ನು ಮುಂದೂಡಬೇಕೆಂಬ ರಾಜ್ಯ ಖಾಸಗಿ ಅನುದಾನಿತ ರಹಿತ ಶಾಲೆಗಳ ಒಕ್ಕೂಟದ ಮನವಿಯನ್ನು ಹೈಕೋರ್ಟ್ ಮತ್ತೊಮ್ಮೆ ತಿರಸ್ಕರಿಸಿದೆ. ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.
ವಿಚಾರಣೆ ವೇಳೆ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ (ಕುಸ್ಮಾ) ಪರ ವಕೀಲರು ಮೆಮೊ ಸಲ್ಲಿಸಿ, ಹೈಕೋರ್ಟ್ ವಿಭಾಗೀಯ ಪೀಠದ ನೀಡಿದ ಮಧ್ಯಂತರ ನಿರ್ದೇಶನದ ಮೇರೆಗೆ ಐದು ಮತ್ತು ಎಂಟನೇ ತರಗತಿಗಳಿಗೆ ಮಾ.27 ರಂದು ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ಮಕ್ಕಳ ಪೋಷಕರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅದು ಮಾ.27ರಂದೇ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
5, 8ನೇ ಕ್ಲಾಸ್ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್: ಷರತ್ತು ಅನ್ವಯ
ಹಾಗಾಗಿ, ಪರೀಕ್ಷೆ ಮತ್ತು ವಿಚಾರಣೆ ಒಂದೇ ದಿನ ನಡೆಯುವುದರಿಂದ ಪರೀಕ್ಷೆಯನ್ನು ಮುಂದೂಡಬೇಕು. ಈ ಕುರಿತು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣ ಪ್ರಸ್ತುತ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಆದ್ದರಿಂದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಸುಪ್ರೀಂಕೋರ್ಟ್ ಯಾವ ತೀರ್ಪು ನೀಡುತ್ತದೆಯೋ ಎಂಬುದನ್ನು ಕಾದು ನೋಡಬೇಕು. ನಿಮ್ಮ ಕೋರಿಕೆಯಂತೆ ಪರೀಕ್ಷೆಗಳನ್ನು ಮುಂದೂಡಲು ನಿರ್ದೇಶಿಸಲಾಗದು ಎಂದು ತಿಳಿಸಿತು.
ಮೌಲ್ಯಾಂಕನದ ಭಯ ಬೇಡ: 5 ಮತ್ತು 8ನೇ ತರಗತಿಯ ಮಕ್ಕಳಿಗೆ ಮೌಲ್ಯಾಂಕನದ ಭಯ ಬೇಡ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಿದೆ. ಈ ಮೌಲ್ಯಾಂಕನವನ್ನು ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನ್ಯತೆಗಳು, ಕಲಿಕಾ ಪ್ರಗತಿ ಹಾಗೂ ಯಾವ ವಿಷಯದ ಕಲಿಕೆಯಲ್ಲಿ ಎಷ್ಟುಹಿನ್ನೆಡೆಯಾಗಿದೆ ಎಂಬುದನ್ನು ತಿಳಿಯುವ ಉದ್ದೇಶ ಹೊಂದಿದೆ. 5 ಮತ್ತು 8ನೇ ತರಗತಿಯ ಮೌಲ್ಯಾಂಕನ ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ. ಇದು ಕೇವಲ ಮೌಲ್ಯಾಂಕನವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆಯನ್ನು ನೀಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇದರ ಉದ್ದೇಶವಾಗಿದೆ.
ನಾಳಿನ 5, 8ನೇ ಕ್ಲಾಸ್ ಪರೀಕ್ಷೆ ಮುಂದೂಡಿಕೆ: ಪರೀಕ್ಷೆ ತಡೆಹಿಡಿಯಲು ಹೈಕೋರ್ಟ್ ಆದೇಶ
ಪರಿಷ್ಕೃತ ವೇಳಾಪಟ್ಟಿ ವಿವರ: 5ನೇ ತರಗತಿಗೆ ಮಾ. 27ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲೀಷ, ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು ಪರೀಕ್ಷೆ ನಡೆಯಲಿವೆ. 28ರಂದು ದ್ವಿತೀಯ ಭಾಷೆ ಇಂಗ್ಲೀಷ, ಕನ್ನಡ. 29ರಂದು ಪರಿಸರ ಅಧ್ಯಯನ. 30ಕ್ಕೆ ಗಣಿತ ವಿಷಯ (ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30) ಹಾಗೂ 8ನೇ ತರಗತಿಗೆ ಮಾ. 27ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲೀಷ, ಇಂಗ್ಲೀಷ, ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು, ಸಂಸ್ಕೃತ ಪರೀಕ್ಷೆಗಳು ನಡೆಯಲಿವೆ. 28ರಂದು ದ್ವಿತೀಯ ಭಾಷೆ ಇಂಗ್ಲೀಷ, ಕನ್ನಡ. 29ರಂದು ತೃತೀಯ ಭಾಷೆ ಹಿಂದಿ, ಹಿಂದಿ(ಎನ್‌ಸಿಇಆರ್‌ಟಿ) ಕನ್ನಡ, ಇಂಗ್ಲೀಷ, ಅರೇಬಿಕ್, ಪರ್ಶಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ 30ಕ್ಕೆ ಗಣಿತ (ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30) 31ರಂದು ವಿಜ್ಞಾನ. ಏಪ್ರಿಲ್ 1ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಗಣಿತ ಹೊರತುಪಡಿಸಿ ಎಲ್ಲ ವಿಷಯಗಳ ಪರೀಕ್ಷೆ ಮಧ್ಯಾಹ್ನ 2.30ರಿಂದ ಸಂಜೆ 4.30ಕ್ಕೆ ನಡೆಯಲಿದೆ. ಪ್ರತಿ ವಿಷಯದ ಪರೀಕ್ಷೆ 40 ಅಂಕದ್ದಾಗಿರುತ್ತದೆ.