5, 8ನೇ ಕ್ಲಾಸ್ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್: ಷರತ್ತು ಅನ್ವಯ
ರಾಜ್ಯ ಪಠ್ಯಕ್ರಮವಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿರುವ ಹೈಕೋರ್ಟ್ ವಿಭಾಗೀಯ ಪೀಠ, ಮಾ.27ರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಬೆಂಗಳೂರು (ಮಾ.16): ರಾಜ್ಯ ಪಠ್ಯಕ್ರಮವಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿರುವ ಹೈಕೋರ್ಟ್ ವಿಭಾಗೀಯ ಪೀಠ, ಮಾ.27ರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ತೀರ್ಮಾನಿಸಿ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು.
ಈ ತೀರ್ಪು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ಮಧ್ಯಂತರ ಈ ಆದೇಶ ಮಾಡಿದೆ. ಅಲ್ಲದೆ, ರಾಜ್ಯ ಪಠ್ಯಕ್ರಮವಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿಸಲಾಗುತ್ತಿದೆ. ಅದರಂತೆ ಸರ್ಕಾರವು ಮಾ.27ರಿಂದ ಪರೀಕ್ಷೆ ನಡೆಸಬೇಕು. ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯೇತರವಾದ ಯಾವುದೇ ಪ್ರಶ್ನೆಗಳು ಇರದಂತೆ ಸರ್ಕಾರ ನೋಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣಗೊಳಿಸುವಂತಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸೂಚಿಸಿದೆ.
5, 8ನೇ ಕ್ಲಾಸ್ ಪರೀಕ್ಷೆ ಮುಂದೂಡಿಕೆ: ಪರೀಕ್ಷೆ ತಡೆಹಿಡಿಯಲು ಹೈಕೋರ್ಟ್ ಆದೇಶ
ಜತೆಗೆ, ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು. ಫಲಿತಾಂಶವನ್ನು ಆಯಾ ಶಾಲೆಗಳಿಗಷ್ಟೇ ರವಾನಿಸಬೇಕು. ಶಾಲೆಗಳು ಸಹ ಫಲಿತಾಂಶವನ್ನು ಗೌಪ್ಯವಾಗಿಡಬೇಕೇ ಹೊರತು ಪ್ರಕಟಿಸುವಂತಿಲ್ಲ. ಯಾವುದಾದರೂ ವಿದ್ಯಾರ್ಥಿ ಕಡಿಮೆ ಅಂಕ ಪಡೆದಿದ್ದರೆ, ಅದರ ಬಗ್ಗೆ ವಿದ್ಯಾರ್ಥಿಗೆ ಮಾತ್ರ ಮಾಹಿತಿ ನೀಡಬೇಕು. ಹಾಗೆಯೇ, ಪರೀಕ್ಷೆ ಸ್ವರೂಪದ ಬಗ್ಗೆ ಮತ್ತು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲಾಗದು ಎಂಬುದಾಗಿ ತಿಳಿಸಿ ಮಾಧ್ಯಮಗಳಲ್ಲಿ ಸರ್ಕಾರ ವ್ಯಾಪಕ ಪ್ರಚಾರ ನೀಡಬೇಕೆಂದು ಸೂಚಿಸಿದ ನ್ಯಾಯಪೀಠ, ಈ ಎಲ್ಲಾ ಪ್ರಕ್ರಿಯೆಗಳು ಮೇಲ್ಮನವಿ ಕುರಿತ ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುವುದಾಗಿ ಸ್ಪಷ್ಟಪಡಿಸಿ ಮೇಲ್ಮನವಿ ವಿಚಾರಣೆ ಮುಂದೂಡಿದೆ.
ಇದರೊಂದಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಜತೆಗೆ, ಬೋರ್ಡ್ ಪರೀಕ್ಷೆಯನ್ನೇ ನಡೆಸಬೇಕು ಎಂದು ಪಟ್ಟುಹಿಡಿದು ಕಾನೂನು ಸಮರ ಮಾಡುತ್ತಿದ್ದ ರಾಜ್ಯ ಸರ್ಕಾರ ಮೇಲುಗೈ ಸಾಧಿಸಿದಂತಾಗಿದೆ. ಈ ತೀರ್ಪಿನ್ವಯ ರಾಜ್ಯ ಪಠ್ಯಕ್ರಮವಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆ ಬರೆಯಬೇಕಿದೆ. ಪರೀಕ್ಷೆಗೆ ರಾಜ್ಯ ಸರ್ಕಾರವೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಎಲ್ಲಾ ಶಾಲೆಗಳಿಗೆ ರವಾನಿಸುತ್ತದೆ. ಸರ್ಕಾರವೇ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿ ಫಲಿತಾಂಶ ಒದಗಿಸಲಿದೆ.
ಪ್ರಕರಣವೇನು?: ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ 2022ರ ಡಿ.12, 13 ಮತ್ತು 2023ರ ಜ.4ರಂದು ಸುತ್ತೋಲೆ ಹೊರಡಿಸಿತ್ತು. ಅದನ್ನು ರದ್ದುಪಡಿಸಲು ಕೋರಿ ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಮತ್ತಿತರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ರದ್ದು: ಹೈಕೋರ್ಟ್
ಈ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ, ಮಾ.10ರಂದು ಸರ್ಕಾರದ ಸುತ್ತೋಲೆಯನ್ನು ರದ್ದುಪಡಿಸಿತ್ತು. ವ್ಯಾಸಂಗದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಹಾಗೂ ಅವರ ಬುದ್ಧಿವಂತಿಕೆ ಪರೀಕ್ಷಿಸುವ, ಮೌಲ್ಯಮಾಪನ ಕಾರ್ಯ ವಿಧಾನವನ್ನು ಸುಧಾರಿಸುವ ಉದ್ದೇಶದಿಂದ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಆದರೆ, ಅದಕ್ಕೂ ಮುನ್ನ ನಿಗದಿತ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ ಎಂದು ನುಡಿದಿತ್ತು. ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರ, ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿತ್ತು.