ನಾಳಿನ 5, 8ನೇ ಕ್ಲಾಸ್ ಪರೀಕ್ಷೆ ಮುಂದೂಡಿಕೆ: ಪರೀಕ್ಷೆ ತಡೆಹಿಡಿಯಲು ಹೈಕೋರ್ಟ್ ಆದೇಶ
ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ಮಕ್ಕಳಿಗೆ ಇದೇ ಮಾ. 13ರಿಂದ ಆರಂಭವಾಗಬೇಕಿದ್ದ ರಾಜ್ಯ ಮಟ್ಟದ ಮೌಲ್ಯಾಂಕನ (ಬೋರ್ಡ್) ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶಿಸಿದೆ.
ಬೆಂಗಳೂರು (ಮಾ.12): ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ಮಕ್ಕಳಿಗೆ ಇದೇ ಮಾ. 13ರಿಂದ ಆರಂಭವಾಗಬೇಕಿದ್ದ ರಾಜ್ಯ ಮಟ್ಟದ ಮೌಲ್ಯಾಂಕನ (ಬೋರ್ಡ್) ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಮಾ.14ಕ್ಕೆ ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಪರೀಕ್ಷೆಗಳನ್ನು ಮುಂದೂಡಿದೆ. ‘ಹೈಕೋರ್ಟ್ ಆದೇಶದಂತೆ ಪರೀಕ್ಷೆ ಮುಂದೂಡಿದ್ದು ನ್ಯಾಯಾಲಯ ಅನುಮತಿ ನೀಡಿದರೆ ಮೌಲ್ಯಾಂಕನ ಪರೀಕ್ಷೆ ನಡೆಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದು ಹೇಳಿದೆ.
ಮೇಲ್ಮನವಿ ವಿಚಾರಣೆ 14ಕ್ಕೆ: ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರ ಶನಿವಾರವೇ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ನ್ಯಾ. ಜಿ. ನರೇಂದರ್ ಹಾಗೂ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ವಿಚಾರಣೆ ನಡೆಸಿತು.
5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ರದ್ದು: ಹೈಕೋರ್ಟ್
ಸರ್ಕಾರ ಹಾಗೂ ಪ್ರತಿವಾದಿಗಳ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠ, ಮಾ.13ರಿಂದ ನಿಗದಿಯಾಗಿರುವ ಪರೀಕ್ಷೆಗಳನ್ನು ಸದ್ಯಕ್ಕೆ ಮುಂದೂಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತಲ್ಲದೆ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕೆಂಬ ಸರ್ಕಾರದ ಮಧ್ಯಂತರ ಮನವಿಯ ವಿಚಾರಣೆಯನ್ನು ಮಾ. 14ಕ್ಕೆ ಮುಂದೂಡಿತು. ಅಲ್ಲದೆ, ಉದ್ದೇಶಿತ ಪರೀಕ್ಷೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸುವಂತೆಯೂ ಹೈಕೋರ್ಟ್ ಸೂಚನೆ ನೀಡಿತು.
ಸರ್ಕಾರದ ವಾದವೇನು?: ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಈಗಾಗಲೇ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಾ.13ರಿಂದ ಪರೀಕ್ಷೆ ಆರಂಭವಾಗಬೇಕಿದೆ. ಆದರೆ, ಏಕಸದಸ್ಯ ಪೀಠದ ಆದೇಶದಿಂದ ಪರೀಕ್ಷೆ ನಡೆಸುವುದು ಅಸಾಧ್ಯವಾಗಿದೆ. ಆದ್ದರಿಂದ, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿ, ಪರೀಕ್ಷೆಗೆ ಅನುವು ಮಾಡಿಕೊಡಬೇಕು ಎಂದು ಕೋರಿದರು. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವ ಉದ್ದೇಶವಿಲ್ಲ.
5, 8ನೇ ಕ್ಲಾಸ್ ಬೋರ್ಡ್ ಪರೀಕ್ಷೆಯಲ್ಲಿ ಎಲ್ರೂ ಪಾಸ್: ಹೈಕೋರ್ಟ್‌ನಲ್ಲಿ ಸರ್ಕಾರ ವಾದ
ಕೇವಲ ವಿದ್ಯಾರ್ಥಿಗಳ ಕಲಿಕಾ ಮಟ್ಟಹಾಗೂ ಕಲಿಕಾ ನ್ಯೂನ್ಯತೆಗಳನ್ನು ತಿಳಿಯುವುದಷ್ಟೇ ರಾಜ್ಯ ಮಟ್ಟದ ಮೌಲ್ಯಾಂಕನ ಪರೀಕ್ಷೆಯ ಉದ್ದೇಶವಾಗಿದೆ. ಆದರೆ, ಸರ್ಕಾರದ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ವಾಸ್ತವದಲ್ಲಿ ಪರೀಕ್ಷೆಯಿಂದ ವಿದ್ಯಾರ್ಥಿಗಳ ಪ್ರಗತಿಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಆದ್ದರಿಂದ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪೀಠವು, ಪರೀಕ್ಷೆಯನ್ನು ಸದ್ಯಕ್ಕೆ ತಡೆಹಿಡಿಯಲು ಸೂಚಿಸಿತಲ್ಲದೆ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕೆಂಬ ಮನವಿಯ ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಿತು.