ಇಸ್ರೋದ ಮಾಜಿ ವಿಜ್ಞಾನಿ ಕೆ.ಹರೀಶ್ ಅವರು ಬೆಂಗಳೂರಿನ ವಾಗ್ದೇವಿ ವಿಲಾಸ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ಸುಮಾರು 8000 ಮಕ್ಕಳು ಉಚಿತ ಶಿಕ್ಷಣ ಪಡೆದಿದ್ದಾರೆ. ಶೈಕ್ಷಣಿಕ ಸಾಧನೆ ಜೊತೆಗೆ ವಿಜ್ಞಾನ, ಪರಿಸರ ಮೌಲ್ಯಾಧಾರಿತ ಶಿಕ್ಷಣಕ್ಕೂ ಒತ್ತು.
-ವಿಜ್ಞಾನಿ ಶಿಕ್ಷಣ ಸೇವೆ । ಈ ವರ್ಷವೂ 800 ಮಕ್ಕಳಿಗೆ 1-10ನೇ ತರಗತಿ ವರೆಗೆ ಉಚಿತ ಶಿಕ್ಷಣ । ಬಡ ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿದ ಕನ್ನಡಿಗ ಕೆ.ಹರೀಶ್
ಬೆಂಗಳೂರು (ಅ.23): ಯಾವುದೇ ಮಗುವಿನ ಭವಿಷ್ಯವನ್ನು ಅದರ ಕುಟುಂಬದ ಆರ್ಥಿಕ ಸ್ಥಿತಿ ನಿರ್ಧರಿಸಬಾರದು. ಬದಲಿಗೆ ಮಗುವಿನ ಪ್ರತಿಭೆ, ಪರಿಶ್ರಮ ಮತ್ತು ಸಾಧನೆಗೆ ದೊರೆಯುವ ಅವಕಾಶಗಳು ನಿರ್ಧರಿಸಬೇಕು ಎಂಬ ಆಶಯದೊಂದಿಗೆ ನಡೆಯುತ್ತಿರುವ ಬೆಂಗಳೂರಿನ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 11 ವರ್ಷಗಳಿಂದ ಸಿಬಿಎಸ್ಇ ಪಠ್ಯಕ್ರಮದಲ್ಲಿ ಉಚಿತ ಶಿಕ್ಷಣ ಪಡೆದ ಮಕ್ಕಳ ಸಂಖ್ಯೆ ಬರೋಬ್ಬರಿ 8000 ತಲುಪಲಿದೆ.
ವಿಶೇಷವೆಂದರೆ ಈ ವರ್ಷವೂ ಈ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಸುಮಾರು 800ಕ್ಕೂ ಹೆಚ್ಚು ಬಡ ಕುಟುಂಬದ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಈ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಇಸ್ರೋದ ಮಾಜಿ ವಿಜ್ಞಾನ ಕೆ.ಹರೀಶ್.
ಮಗುವಿನ ಕನಸುಗಳಿಗೆ ಬಡತನ ಅಡ್ಡಿಯಾಗಬಾರದು. ಪ್ರತಿಭೆ ಮತ್ತು ಕಲಿಯುವ ಆಸಕ್ತಿ ಇರುವ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಧ್ಯೇಯದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿನ ಅವರ ಸೇವಾ ಮನೋಭಾವದಿಂದ ಬೆಂಗಳೂರಿನ ಮಾರತಹಳ್ಳಿ ಮತ್ತು ವರ್ತೂರಿನಲ್ಲಿರುವ ವಾಗ್ದೇವಿ ವಿಲಾಸ್ ಶಾಲೆಗಳ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗದ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ದೊರಕಿಸಿಕೊಟ್ಟಿದ್ದಾರೆ.
ಶಿಕ್ಷಣ ಮತ್ತು ಸಮಾಜ ಸೇವೆಯ ಮೂಲಕ ಕನ್ನಡಿಗರಿಗೆ ನೆರವಾಗುವ ಸಂಕಲ್ಪ ತೊಟ್ಟಿರುವ ಹರೀಶ್ ಅವರು, ‘ನನ್ನ ಬಾಲ್ಯದಲ್ಲಿ ಶಿಕ್ಷಣಕ್ಕಾಗಿ ಎದುರಿಸಿದ ಆರ್ಥಿಕ ಸವಾಲುಗಳು ಇಂದಿಗೂ ನೆನಪಿನಲ್ಲಿವೆ. ಹಣವಿಲ್ಲ ಎಂಬ ಕಾರಣಕ್ಕೆ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಪ್ರೋತ್ಸಾಹ ದೊರೆತರೆ ಅವರು ತಮ್ಮ ಬದುಕನ್ನು ಮಾತ್ರವಲ್ಲ, ಸಮಾಜವನ್ನೂ ಬದಲಾಯಿಸಬಲ್ಲರು’ ಎಂದು ಹೇಳಿದ್ದಾರೆ.
ವಿಜ್ಞಾನ, ಪರಿಸರ, ಮೌಲ್ಯಾಧಾರಿತ ಶಿಕ್ಷಣ:
ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ವಾಗ್ದೇವಿ ವಿಲಾಸ ಶಾಲೆಯಲ್ಲಿ ಸೈನ್ಸ್ ಟೆಕ್ ಪಾರ್ಕ್ನಂತಹ ಉಪಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಮಳೆನೀರು ಕೊಯ್ಲು, ಸೌರಶಕ್ತಿ ಬಳಕೆ, ಕಾಗದ ಮರುಬಳಕೆ, ಜೈವಿಕ ಅನಿಲ ಉತ್ಪಾದನೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯಂತಹ ಪರಿಸರ ಸ್ನೇಹಿ ಚಟುವಟಿಕೆಗಳನ್ನೂ ಅಳವಡಿಸಲಾಗಿದೆ. ಇವುಗಳ ಮೂಲಕ ಪರಿಸರ ಸಂರಕ್ಷಣೆ ಕೇವಲ ಪಠ್ಯದಲ್ಲಿನ ವಿಷಯವಾಗಿರದೆ, ದೈನಂದಿನ ಜೀವನದ ಭಾಗವಾಗಬೇಕು ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ.
ಶೈಕ್ಷಣಿಕ ಸಾಧನೆಯ ಜೊತೆಗೆ ಶಿಸ್ತು, ಪರಸ್ಪರ ಗೌರವ, ಮಾನವೀಯತೆ, ದೇಶಪ್ರೇಮ ಮತ್ತು ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳಿಗೂ ಸಂಸ್ಥೆ ಮಹತ್ವ ನೀಡುತ್ತಿದೆ.
ಇಸ್ರೋದ ಮಾಜಿ ವಿಜ್ಞಾನಿ ಹರೀಶ್
ಹರೀಶ್ ಅವರು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದು, ವಿಜ್ಞಾನ ಕ್ಷೇತ್ರದ ಅನುಭವದ ನಂತರ ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ. ನಗರದ ಮಾರತಹಳ್ಳಿ ಮತ್ತು ವರ್ತೂರಿನ ಸೂಪರ್ ಸ್ಕೂಲ್ಗಳಲ್ಲಿ ಬಡ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿವರೆಗೆ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಿದ್ದು, ಈ ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿ, ದೇಶಪ್ರೇಮ, ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ.


