ಶಾಲಾ ಮಕ್ಕಳಿಗೆ ಮೊಟ್ಟೆ ಯೋಜನೆ ರಾಜ್ಯಕ್ಕೆ ವಿಸ್ತರಣೆ
ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 8ನೇ ತರಗತಿ ವರೆಗೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಾರದಲ್ಲಿ 2 ದಿನ ಬೇಯಿಸಿದ ಕೋಳಿ ಮೊಟ್ಟೆ ವಿತರಣೆ
ಬೆಂಗಳೂರು(ಜು.23): ಕಲ್ಯಾಣ ಕರ್ನಾಟಕ ಭಾಗದ ಎಂಟು ಜಿಲ್ಲೆಗಳ ಶಾಲೆಗಳಲ್ಲಿ ಜಾರಿಗೊಳಿಸಿದ್ದ ಬಿಸಿಯೂಟದ ಜೊತೆ ಎರಡು ದಿನ ಬೇಯಿಸಿದ ಮೊಟ್ಟೆ ನೀಡುವ ಯೋಜನೆಯನ್ನು ರಾಜ್ಯದ ಉಳಿದ 23 ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೂ ವಿಸ್ತರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇದಕ್ಕಾಗಿ ಸರ್ಕಾರ 84.52 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.
ಇದರಿಂದ ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 8ನೇ ತರಗತಿ ವರೆಗೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಾರದಲ್ಲಿ 2 ದಿನ ಬೇಯಿಸಿದ ಕೋಳಿ ಮೊಟ್ಟೆ ವಿತರಿಸಲಾಗುತ್ತದೆ. ಮೊಟ್ಟೆಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲು ಸೂಚಿಸಲಾಗಿದೆ. 6ರಿಂದ 15ನೇ ವರ್ಷದ ವರೆಗಿನ ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನತೆ ನಿವಾರಣೆಯ ಉದ್ದೇಶದಿಂದ ಪ್ರಧಾನ ಮಂತ್ರಿ ಪೋಷನ್ ಯೋಜನೆಯಡಿ ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
ರಾಜ್ಯದ ಎಲ್ಲ ಶಾಲೆಗಳಲ್ಲೂ ಮೊಟ್ಟೆ ನೀಡಲು ಒಪ್ಪಿಗೆ
ಪ್ರತಿ ಮೊಟ್ಟೆಖರೀದಿಗೆ 5 ರು., ಬೇಯಿಸುವ ಇಂಧನ ವೆಚ್ಚ 50 ಪೈಸೆ, ಸುಲಿಯುವ ವೆಚ್ಚ ಅಡುಗೆ ಸಿಬ್ಬಂದಿಗೆ 30 ಪೈಸೆ ಮತ್ತು 20 ಪೈಸೆ ಸಾಗಣೆ ವೆಚ್ಚ ಸೇರಿ ಪ್ರತಿ ಮೊಟ್ಟೆಗೆ 6 ರು. ನಿಗದಿಪಡಿಸಿದೆ. ಒಟ್ಟಾರೆ 84.52 ಕೋಟಿ ರು. ಬಿಡುಗಡೆ ಮಾಡಿದೆ.
2 ಬಾಳೆ ಹಣ್ಣು ಇಲ್ಲವೇ 1 ಶೇಂಗಾ ಚಿಕ್ಕಿ:
ಮೊಟ್ಟೆ ತಿನ್ನದ ಮಕ್ಕಳಿಗೆ 2 ಬಾಳೆ ಹಣ್ಣು, ಬಾಳೆ ಹಣ್ಣು ಸೇವಿಸದ ಮಕ್ಕಳಿಗೆ 20 ರಿಂದ 40 ಗ್ರಾಂ ತೂಕದ ಬಿಲ್ಲೆಯ ಶೇಂಗಾ ಚಿಕ್ಕಿ ವಿತರಿಸಲು ಸೂಚಿಸಲಾಗಿದೆ. ಇದಕ್ಕಾಗಿ ಪ್ರತಿ ಬಾಳೆಹಣ್ಣಿಗೆ 5.80 ರು. ಖರೀದಿ ದರ, 20 ಪೈಸೆ ಸಾಗಣೆ ವೆಚ್ಚ ನಿಗದಿಪಡಿಸಲಾಗಿದೆ. ಅದೇ ರೀತಿ ಪ್ರತಿ ಶೇಂಗಾ ಚಿಕ್ಕಿಗೆ 5.50 ರು. ಖರೀದಿ ವೆಚ್ಚ, 30 ಪೈಸೆ ಇಂಧನ ವೆಚ್ಚ ಮತ್ತು 20 ಪೈಸೆ ಸಾಗಣೆ ವೆಚ್ಚ ನಿಗದಿಪಡಿಸಿದೆ. ಶೇಂಗಾ ಚಿಕ್ಕಿಯನ್ನು ಶೇಂಗಾ, ಬೆಲ್ಲ ಮತ್ತು ಏಲಕ್ಕಿಯಿಂದ ತಯಾರಿಸಿರಬೇಕು ಎಂದು ಸೂಚಿಸಿದೆ.
ಆದೇಶದಲ್ಲಿ 2022ರ ಜುಲೈ ತಿಂಗಳಿಂದ 2023ರ ಫೆಬ್ರವರಿ ವರೆಗೆ ವಾರದಲ್ಲಿ ಎರಡು ದಿನದಂತೆ ಒಟ್ಟು 46 ದಿನ ಮೊಟ್ಟೆಅಥವಾ ಬಾಳೆಹಣ್ಣು, ಶೇಂಗಾ ಚಿಕ್ಕಿ ವತರಿಸಲು ಸೂಚಿಸಲಾಗಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ 8 ಜಿಲ್ಲೆಗಳ ಶಾಲೆಗಳಲ್ಲಿನ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಶೈಕ್ಷಣಿಕ ವರ್ಷ ಆರಂಭದಿಂದಲೇ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದೀಗ ಇತರೆ 23 ಜಿಲ್ಲೆಗಳ 30.62 ಲಕ್ಷ ಮಕ್ಕಳಿಗೂ ಕಾರ್ಯಕ್ರಮ ವಿಸ್ತರಣೆಯಾಗಲಿದೆ.