ರಾಜ್ಯದ ಎಲ್ಲ ಶಾಲೆಗಳಲ್ಲೂ ಮೊಟ್ಟೆ ನೀಡಲು ಒಪ್ಪಿಗೆ
ರಾಜ್ಯದ ಎಲ್ಲ ಶಾಲೆಗಳಲ್ಲೂ ಮೊಟ್ಟೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕದ ಯೋಜನೆ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡುವಂತೆ ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲು ತೀರ್ಮಾನಿಸಲಾಗಿದೆ.
ಬೆಂಗಳೂರು (ಜು.16): ಪ್ರಸ್ತುತ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ 1-8ನೇ ತರಗತಿಯ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆನೀಡುತ್ತಿರುವ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೂ ವಿಸ್ತರಿಸಲು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ರಾಜ್ಯದ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ವರ್ಷದಲ್ಲಿ 100 ದಿನ ಬಿಸಿಯೂಟದ ಜೊತೆ ಬೇಯಿಸಿದ ಮೊಟ್ಟೆವಿತರಿಸಲು, ಮೊಟ್ಟೆಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲು ಅನುಮತಿ ಕೋರಿ ಶಿಕ್ಷಣ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ 350 ಕೋಟಿ ರು. ವೆಚ್ಚದ ಅಂದಾಜು ಪಟ್ಟಿಗೆ ಒಪ್ಪಿಗೆ ಕೋರಲಾಗಿತ್ತು. ಆದರೆ, ಆರ್ಥಿಕ ಇಲಾಖೆಯು ಎಲ್ಲ ಶಾಲೆಗಳಲ್ಲೂ ಮೊಟ್ಟೆವಿತರಿಸಲು ಒಪ್ಪಿದೆಯಾದರೂ 100 ದಿನಗಳ ಬದಲು 46 ದಿನಗಳು ಮಾತ್ರ ವಿತರಿಸಲು ಒಪ್ಪಿಗೆ ನೀಡಿದೆ ಎಂದು ಗೊತ್ತಾಗಿದೆ. ಇದರಿಂದ ವಾರ್ಷಿಕ 125 ಕೋಟಿ ರು. ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತಮಗೆ ಇನ್ನೂ ಆರ್ಥಿಕ ಇಲಾಖೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹೇಳುತ್ತಿದ್ದಾರೆ.
2021-22ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯ 14 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮೊಟ್ಟೆವಿತರಿಸಲಾಗಿತ್ತು. ಬಳಿಕ ಅದನ್ನು 2022-23ನೇ ಸಾಲಿನಲ್ಲೂ ಯೋಜನೆ ಮುಂದುವರೆಸಲಾಗಿತ್ತು. ಇದೀಗ ರಾಜ್ಯಾದ್ಯಂತ ಮೊಟ್ಟೆಯೋಜನೆ ವಿಸ್ತರಿಸಲು ಸರ್ಕಾರ ಒಪ್ಪಿರುವುದರಿಂದ ರಾಜ್ಯದ ಎಲ್ಲ ಶಾಲಾ ಮಕ್ಕಳಿಗೂ ಬಿಸಿಯೂಟದ ಜೊತೆ ವಾರದಲ್ಲಿ ಕೆಲ ದಿನ ಮೊಟ್ಟೆಯನ್ನೂ ನೀಡಲಾಗುತ್ತದೆ. ಮೊಟ್ಟೆಸೇವಿಸದವರಿಗೆ ಶೇಂಗಾ ಚಿಕ್ಕಿ ನೀಡಲಾಗುತ್ತದೆ.
ಶಾಲೆಗಳಲ್ಲಿ ಮೊಟ್ಟೆಬೇಡ ಎಂದ ಸರ್ಕಾರಕ್ಕೆ ಕಾಂಗ್ರೆಸ್ಸಿಂದ ತರಾಟೆ: ಶಾಲೆಗಳಲ್ಲಿ ಮೊಟ್ಟೆ ಹಾಗೂ ಸುವಾಸಿತ ಹಾಲು ವಿತರಣೆ ಬೇಡ ಎಂದು ಕೇಂದ್ರಕ್ಕೆ ಅಭಿಪ್ರಾಯ ಸಲ್ಲಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ರಾಜ್ಯದ ಅಭಿಪ್ರಾಯಗಳನ್ನು ಸಲ್ಲಿಸಲು ರಚಿಸಿದ್ದ ಸಮಿತಿಯು ಮಕ್ಕಳಿಗೆ ಸುವಾಸಿತ ಹಾಲು ಹಾಗೂ ಮೊಟ್ಟೆವಿತರಣೆ ಬೇಡ ಎಂದು ಅಭಿಪ್ರಾಯಪಟ್ಟಿತ್ತು. ಈ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಸರ್ಕಾರ ಬಡ ಮಕ್ಕಳ ಆಹಾರಕ್ಕೆ ಕಣ್ಣು ಹಾಕಿದೆ. ಬಿಜೆಪಿಯ ಅಜೆಂಡಾ ಮುಂದೆ ತರುತ್ತಿದೆ. ಮಕ್ಕಳ ಪೌಷ್ಟಿಕಾಂಶ ವಿಚಾರದಲ್ಲೂ ರಾಜಕೀಯ ತರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಣತರಿಂದ ಸಲಹೆ ಪಡೆಯಿರಿ: ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟಿಲ್ ಮಾತನಾಡಿ, ಸರ್ಕಾರವು ಪರಿಣತ ನ್ಯೂಟ್ರಿಷಿಯನ್‌ಗಳ ಸಲಹೆ ಪಡೆಯಬೇಕು. ನಾವು ಸಣ್ಣವರಿದ್ದಾಗ ಹಾಲು ಕುಡಿದೇ ಬೆಳೆದಿದ್ದೇವೆ. ಈಗ ಹಾಲು, ಮೊಟ್ಟೆಕೊಡಬಾರದು ಎನ್ನುತ್ತಿದ್ದಾರೆ. ಬಿಜೆಪಿ ಸರ್ಕಾರವು ಕೆಲವು ಅಜೆಂಡಾಗಳನ್ನು ಹೇರಲು ಹೊರಟಿದೆ. ಮನಸ್ಸಿಗೆ ಬಂದಂತೆ ಮಾಡುವುದು ಬೇಡ. ಇದು ಇನ್ನೊಂದು ಚಕ್ರತೀರ್ಥ ಕತೆಯಾಗಲಿದೆ ಎಂದು ಎಚ್ಚರಿಸಿದರು.
ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಮೊಟ್ಟೆಎಲ್ಲವನ್ನೂ ಕೊಡಬೇಕು- ಎಚ್.ಡಿ. ರೇವಣ್ಣ ಆಗ್ರಹ: ಆಷಾಢ ಮಾಸದ 3ನೇ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಒಳಿತಾಗುವಂತೆ ಪ್ರಾರ್ಥಿಸಿದ್ದೇನೆ. ಉತ್ತಮ ಮಳೆಯಾಗಿದ್ದು, ನಾಡು ಸಮೃದ್ಧಿಗೆ ಬೇಡಿಕೊಂಡಿದ್ದೇನೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಮೊಟ್ಟೆತೆಗೆದು ಹಾಕುವಂತೆ ಎನ್‌ಇಪಿ ಸಮಿತಿ ಶಿಫಾರಸ್ಸು ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನ ಕೊಡುತ್ತಿಲ್ಲ. ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಮೊಟ್ಟೆಎಲ್ಲವನ್ನೂ ಕೊಡಬೇಕು ಎಂದು ಅವರು ಒತ್ತಾಯಿಸಿದರು.