ಕಾಲಿಲ್ಲದಿದ್ದರೇನು ಕನಸಿದೆ: ಒಂಟಿ ಕಾಲಿನಲ್ಲೇ ಶಾಲೆಗೆ ಬರುವ ಬಾಲಕ ವಿಡಿಯೋ
ಕೇವಲ ಒಂದು ಕಾಲನ್ನು ಹೊಂದಿರುವ ಕಣಿವೆ ನಾಡಿನ ಬಾಲಕನೋರ್ವ ಒಂದೇ ಕಾಲಿನಲ್ಲಿ ನೆಗೆಯುತ್ತಲೇ ಎರಡು ಕಿಲೋ ಮೀಟರ್ ದೂರದಲ್ಲಿರುವ ಶಾಲೆಗೆ ಹೋಗುತ್ತಿದ್ದು ಈತ ಕುಂಟುತ್ತಾ ಸಾಗುವ ವಿಡಿಯೋ ವೈರಲ್ ಆಗಿದೆ.
ಜಮ್ಮು ಕಾಶ್ಮೀರ: ಮನಸ್ಸಿದ್ದರೆ ಮಾರ್ಗ ಬದುಕುವ ಛಲವಿದ್ದರೆ ಯಾವ ಅಡ್ಡಿಗಳು ಅಡ್ಡಿಯಾಗದು. ತಮಗಿದ್ದ ಹಲವು ಕೊರತೆಗಳು ಹಾಗೂ ಅಡ್ಡಿ ಆತಂಕಗಳನ್ನು ಮೀರಿ ಬದುಕಿನಲ್ಲಿ ಸಾಧನೆ ಮಾಡಿ ತೋರಿದ ಅನೇಕರು ನಮ್ಮ ಮುಂದಿದ್ದಾರೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಜಮ್ಮು ಕಾಶ್ಮೀರದ ಈ ಬಾಲಕ.
ಜಮ್ಮು ಕಾಶ್ಮೀರದ ಹಂದ್ವಾರ ನಿವಾಸಿಯಾದ ಪರ್ವೇಜ್ (Parvaiz) ಹೆಸರಿನ ಈ ಬಾಲಕನಿಗೆ ಒಂದು ಕಾಲಿಲ್ಲ. ಹಾಗೆಂದ ಮಾತ್ರಕ್ಕೆ ಈ ಕೊರತೆ ಆತನ ಕಲಿಯುವ ಉತ್ಸಾಹವನ್ನು ಕಡಿಮೆ ಮಾಡಿಲ್ಲ. ಕಣ್ಣುಗಳ ತುಂಬಾ ಕನಸು ಹೊತ್ತಿರುವ ಈ ಬಾಲಕ ತನ್ನ ಮನೆಯಿಂದ ಎರಡು ಕಿಲೋ ಮೀಟರ್ ದೂರವಿರುವ ಶಾಲೆಯನ್ನು ಕೇವಲ ಒಂದು ಕಾಲಿನಲ್ಲೇ ಕುಂಟುತ್ತಾ ನೆಗೆಯುತ್ತಾ ಕ್ರಮಿಸಿ ಶಾಲೆ ಸೇರುತ್ತಾನೆ.
ಅಲ್ಲದೇ ಈತ ಸಾಗುವ ಕಾಲು ದಾರಿಯು ಉಬ್ಬು ತಗ್ಗುಗಳಿಂದ ಕೂಡಿದ್ದು ಕಾಲಿದ್ದ ಸಾಮಾನ್ಯರು ನಡೆದಾಡಲು ಕೂಡ ಇದು ದುರ್ಗಮವಾಗಿದೆ. ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಬಯಸಿರುವ ನನಗೆ ಕೃತಕ ಕಾಲುಗಳ ಸಿಕ್ಕಲಿ ಇದು ಬದುಕನ್ನು ಬದಲಿಸಬಹುದು ಎಂದು ಹೇಳುತ್ತಾನೆ ಪರ್ವೀಜ್ ಎಂಬುದಾಗಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಒಂದೇ ಕಾಲಿನಲ್ಲಿ ನೆಗೆಯುತ್ತಾ ಶಾಲೆಗೆ ಬರುವ ಪುಟಾಣಿ: ನೆರವಿಗೆ ಮುಂದಾದ ಸೋನು ಸೂದ್
ಪರ್ವೇಜ್ ತನ್ನ ಶಾಲೆಗೆ ಹೋಗಲು ಒಂದು ಕಾಲಿನ ಮೇಲೆ ನೆಗೆಯುತ್ತಾ ಸಾಗುವ ವಿಡಿಯೋವನ್ನು ಎಎನ್‌ಐ ಟ್ವಿಟ್ ಮಾಡಿದ ಬಳಿಕ ಈ ಟ್ವಿಟ್ ವೈರಲ್ ಆಗಿದ್ದು, ಬಾಲಕನ ಕಡೆ ಅನೇಕರು ಕಣ್ಣು ನೆಟ್ಟಿದ್ದು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೇ ಪರ್ವೇಜ್ (Parvaiz) ಬಾಳಲ್ಲಿ ಭರವಸೆಯ ಬೆಳಕು ಮೂಡಿದೆ. ಪರ್ವೇಜ್ ಅವರ ವೀಡಿಯೊ ವೈರಲ್ ಆದ ನಂತರ, ಜೈಪುರ ಫುಟ್ ಯುಎಸ್ಎ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರೇಮ್ ಭಂಡಾರಿ (Prem Bhandari) ಅವರು ಪರ್ವೇಜ್ ಅವರ ಕುಟುಂಬವನ್ನು ಸಂಪರ್ಕಿಸಿದ್ದಾರೆ ಅಲ್ಲದೇ ಕೃತಕ ಅಂಗವನ್ನು ಉಚಿತವಾಗಿ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಕೇಂದ್ರ ಖಾತೆಯ ರಾಜ್ಯ ಸಚಿವರು ಕೂಡ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ @ANI ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದೆ. ನಾವು ಈ ವಿಚಾರವನ್ನು ಗಮನಿಸಿದ್ದೇವೆ. @MSJEGOI ಸಚಿವಾಲಯದ ಅಡಿಯಲ್ಲಿ ಶ್ರೀನಗರದ ಸಂಯೋಜಿತ ಪ್ರಾದೇಶಿಕ ಕೇಂದ್ರದ ಅಧಿಕಾರಿಗಳು, ಭಾರತ ಸರ್ಕಾರಕ್ಕೆ ಹುಡುಗನನ್ನು ಸಂಪರ್ಕಿಸಲು ಮತ್ತು ಅಗತ್ಯ ಸಹಾಯಕ ಸಾಧನವನ್ನು ತುರ್ತಾಗಿ ಒದಗಿಸುವಂತೆ ಸೂಚಿಸಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಮನಸ್ಸಿದ್ದರೆ ಮಾರ್ಗ : ಎರಡು ಕೈಗಳಿಲ್ಲದಿದ್ದರು ಸ್ಟ್ರೀಟ್ ಫುಡ್ ತಯಾರಿಸುವ ದಿವ್ಯಾಂಗ
ಇತ್ತೀಚೆಗೆ, ಇದೇ ರೀತಿಯ ಪ್ರಕರಣವೊಂದರಲ್ಲಿ ಒಂದು ಕಾಲನ್ನು ಹೊಂದಿದ್ದ ಬಿಹಾರದ ವಿಶೇಷ ಚೇತನ ಬಾಲಕಿಯೊಬ್ಬಳು ಶಾಲೆಗೆ ಹೋಗಲು ಒಂದೇ ಕಾಲಿನ ಮೇಲೆ ಜಿಗಿಯುತ್ತಾ ಸಾಗುತ್ತಿರುವ ವೀಡಿಯೊ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ ಸೋನು ಸೂದ್ ಸೇರಿದಂತೆ ಅನೇಕರು ಆಕೆಯ ನೆರವಿಗೆ ಧಾವಿಸಿ ಬಂದಿದ್ದರು. ಅಲ್ಲದೇ ಆಕೆಗೆ ಕೃತಕ ಕಾಲನ್ನು ಉಚಿತವಾಗಿ ನೀಡಿದ್ದರು.
10 ವರ್ಷದ ಸೀಮಾ ಅಪಘಾತವೊಂದರಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಳು. ವಿಡಿಯೋ ವೈರಲ್ ಆದ ಬಳಿಕ ರಾಜ್ಯ ಶಿಕ್ಷಣ ಇಲಾಖೆ ಆಕೆಗೆ ಉಚಿತ ಕಾಲನ್ನು ನೀಡಿತ್ತು.