Textbook Revision Row: 70 ಜನರು ಕೂಗಿದ್ರೆ ಜನಾಕ್ರೋಶವಲ್ಲ: ಸಿ.ಟಿ.ರವಿ
* ಪಠ್ಯ ಪರಿಷ್ಕರಣೆಯಲ್ಲಿ ಲೋಪವಾಗಿದ್ದರೆ ಸರಿಪಡಿಸುತ್ತೇವೆ
* ಹಿಂದೆ ಆಗಿರುವ ತಪ್ಪುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ
* ಪಾರದರ್ಶಕ ಆಡಳಿತದಲ್ಲಿ ಯಶಸ್ವಿ
ಮಂಡ್ಯ(ಜೂ.03): ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ 70 ಜನರು ಕೂಗಿದಾಕ್ಷಣ ಅದು ಜನಾಕ್ರೋಶವಾಗುವುದಿಲ್ಲ. ಅದು ಟೂಲ್‌ಕಿಟ್ ರಾಜಕಾರಣದ ಒಂದು ಭಾಗವಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಕೆಲವರು ಈ ರೀತಿ ಚಟುವಟಿಕೆ ಮೂಲಕ ನಾವು ಬದುಕಿದ್ದೇವೆ ಎನ್ನುವುದನ್ನು ತೋರಿಸುತ್ತಿದ್ದಾರೆ. ಇದನ್ನೇ ಜನಕ್ರೋಶ ಎನ್ನಲಾಗುವುದಿಲ್ಲ. ನಮ್ಮ ರಾಜ್ಯದ ಜನಸಂಖ್ಯೆ 7 ಕೋಟಿ. 70 ಜನರು ಕೂಗಿದ್ದನ್ನ ಜನಾಕ್ರೋಶ ಎನ್ನುತ್ತೀರಾ? ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಯಾವುದೇ ಮೆಡಿಸನ್ ಇಲ್ಲ:
ಟೂಲ್‌ಕಿಟ್ ರಾಜಕಾರಣಕ್ಕೆ ಯಾವುದೇ ಬೆಲೆ ಇಲ್ಲ. ಪಠ್ಯ ವಿಷಯಗಳ ಅರಿವಿಲ್ಲದವರು ಹಾಗೂ ಮತ್ತೆ ಕೆಲವರು ದುರುದ್ದೇಶದಿಂದ ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ. ಟೂಲ್ ಕಿಟ್ ರಾಜಕಾರಣಕ್ಕೆ ಯಾವುದೇ ಮೆಡಿಸನ್ ಇಲ್ಲ. ಪಠ್ಯ ವಿಷಯಗಳ ಬಗ್ಗೆ ಅರಿವಿಲ್ಲದವರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದರು.
ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!
ಮೊದಲಿಗೆ ಭಗತ್‌ಸಿಂಗ್, ನಾರಾಯಣಗುರು, ಕುವೆಂಪು ಅವರನ್ನು ಪಠ್ಯದಿಂದ ಕೈಬಿಟ್ಟಿರುವುದಾಗಿ ಕೂಗಾಡಿದರು. ಆದರೆ, ಭಗತ್‌ಸಿಂಗ್, ನಾರಾಯಣಗುರು ಪಠ್ಯ ಕೈಬಿಟ್ಟಿರಲಿಲ್ಲ. ಕುವೆಂಪು ಪಠ್ಯ ಮೊದಲು 7 ಇತ್ತು, ಈಗ 10 ಮಾಡಿದ್ದೇವೆ ಎಂದು ಅರ್ಥೈಸಿಕೊಟ್ಟಬಳಿಕ ಇದು ನಮಗೆ ಗೊತ್ತಿರಲಿಲ್ಲ ಎನ್ನುತ್ತಿದ್ದಾರೆ ಎಂದರು.
ಬಸವಣ್ಣನವರನ್ನೂ ಬಿಟ್ಟಿಲ್ಲ:
ಇದೀಗ ಬಸವಣ್ಣನವರ ವಿಚಾರ ಎತ್ತಿದ್ದಾರೆ. ದೇಶ ಕಂಡ ಅಪ್ರತಿಮ ಸಮಾಜ ಸುಧಾರಕ ಬಸವಣ್ಣ. ಅವರ ವಿಚಾರಧಾರೆಗಳು ರಾಜ್ಯ, ರಾಷ್ಟ್ರ ಹಾಗೂ ವಿಶ್ವಮಟ್ಟದಲ್ಲಿ ದಾರ್ಶನಿಕರಾಗಿ ಹೊರಹೊಮ್ಮಿದ್ದಾರೆ. ಪಧಾನಿ ಮೋದಿಯವರು ಹತ್ತಾರು ಬಾರಿ ಬಸವಣ್ಣನವರ ವಿಚಾರಧಾರೆಗಳನ್ನು ಕೊಂಡಾಡಿದ್ದಾರೆ. ಹೀಗಿರುವಾಗ ಬಸವಣ್ಣನವರನ್ನು ಬಿಟ್ಟು ಪಠ್ಯ ಪರಿಷ್ಕರಣೆಯಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ:
ಕುವೆಂಪು ಅವರ ಬಗ್ಗೆ ಯಾರೋ ಏನೋ ಬರೆದಿದ್ದನ್ನು ರೋಹಿತ್ ಚಕ್ರತೀರ್ಥ ಶೇರ್ ಮಾಡಿದ್ದರು. ಈ ಬಗ್ಗೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲೇ ಪ್ರಕರಣ ದಾಖಲಿಸಿ, ತನಿಖೆಯನ್ನೂ ನಡೆಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಇಲ್ಲವೆಂಬ ಕಾರಣಕ್ಕೆ ಅವರ ಮೇಲಿದ್ದ ಪ್ರಕರಣಕ್ಕೆ ಬಿ ರಿಪೋರ್ಚ್ ಹಾಕಿದ್ದಾರೆ. ಹೀಗಿರುವಾಗ ಮತ್ತೆ ಅದೇ ವಿಚಾರವನ್ನು ಇಟ್ಟುಕೊಂಡು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದರು.
ದೇಶದ ಜನರ ಅಭಿಮಾನದ ಸಂಕೇತದಂತೆ ಪಠ್ಯ ಪುಸ್ತಕ ರಚಿಸುತ್ತೇವೆ. ಒಂದು ವೇಳೆ ಪಠ್ಯ ಪರಿಷ್ಕರಣೆಯಲ್ಲಿ ಲೋಪವಾಗಿದ್ದರೆ ಸರಿಪಡಿಸುತ್ತೇವೆ. ಹಿಂದೆ ಆಗಿರುವ ತಪ್ಪುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈಗ ಗೊಂದಲ ಸೃಷ್ಟಿಸುವ ಸಲುವಾಗಿ ಇಂತಹ ಹಾದಿ ಹಿಡಿಯುತ್ತಿದ್ದಾರೆ. ಏನೇ ಆದರೂ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರವನ್ನು ಸಹಿಸಿಕೊಳ್ಳುತ್ತಿಲ್ಲ:
ಟೂಲ್ ಕಿಟ್ ರಾಜಕಾರಣ ಇವತ್ತು ನಿನ್ನೆಯದಲ್ಲ. ಮೋದಿ ಪ್ರಧಾನಿಯಾದ ದಿನ ಅಸಹಿಷ್ಣು ವಾತಾವರಣ ಇದೆ ಎಂದು ಕೆಲವರು ಪ್ರಶಸ್ತಿ ವಾಪಸ್ ಕೊಟ್ಟರು. ಅದೂ ಕೂಡ ಟೂಲ್ ಕಿಟ್ ರಾಜಕಾರಣದ ಒಂದು ಭಾಗ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ತಪ್ಪುಗಳನ್ನ ಸರಿಪಡಿಕೊಳ್ಳಲು ನಾವು ಸಿದ್ದರಿದ್ದೇವೆ. ನಮಗೆ ಅಹಂಭಾವ ಇಲ್ಲ. ಆದರೆ, ಇವರು ಮಾಡುತ್ತಿರುವ ಅಪಪ್ರಚಾರವನ್ನು ವಾಸ್ತವಿಕ ನೆಲೆಯಲ್ಲಿ ಜನರ ಮುಂದೆ ಇಡುತ್ತೇವೆ. ಪೂರ್ವಗ್ರಹ ಪೀಡಿತ ಜನರನ್ನು ನಾವು ಎದುರಿಸುತ್ತೇವೆ ಎಂದರು.
ಪಠ್ಯವಾಪ್ಸಿ ಪ್ರಶಸ್ತಿ ವಾಪ್ಸಿ ರೀತಿಯ ಹೋರಾಟ: ಸಾಹಿತಿ ಭೈರಪ್ಪ
ಪಾರದರ್ಶಕ ಆಡಳಿತದಲ್ಲಿ ಯಶಸ್ವಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ 8 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಹಲವಾರು ಪರಿಣಾಮಕಾರಿ ಜನಪರ ಆಡಳಿತ ನೀಡಿದ್ದಾರೆ. ಸುಧಾರಣೆ, ಪ್ರಗತಿ, ಪಾರದರ್ಶಕ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಅಂತ್ಯೋದಯ ಯೋಜನೆಯ ಮೂಲಕ ಎಲ್ಲರಿಗೂ ಯೋಜನೆ ತಲುಪುವಂತೆ ಮಾಡಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಬಗ್ಗೆ ಒಲವನ್ನು ಹೊಂದಿರುವ ಪದವೀಧರರು ನಮ್ಮ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರನ್ನು ಹೆಚ್ಚಿನ ಪ್ರಾಶಸ್ತ್ಯ ಮತಗಳನ್ನು ನೀಡಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮುಖಂಡರಾದ ಡಾ. ಸಿದ್ದರಾಮಯ್ಯ, ಎಚ್.ಪಿ.ಮಹೇಶ, ಎನ್. ಶಿವಣ್ಣ, ಅಶೋಕ್‌ಜಯರಾಂ, ಎಸ್.ಪಿ. ಸ್ವಾಮಿ, ಸಿ.ಟಿ.ಮಂಜುನಾಥ್ ಇತರರು ಗೋಷ್ಠಿಯಲ್ಲಿದ್ದರು.