ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಘೋಷಣೆ ಮಾಡಿದ್ದು, ಕರ್ನಾಟಕವನ್ನು 'ಜವಾಬ್ದಾರಿಯುತ ಎಐ' ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರು: ತಂತ್ರಜ್ಞಾನ ಲೋಕದ ಜಾಗತಿಕ ರಾಜಧಾನಿ ಎನಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಮುಡಿಗೆ ಈಗ ಮತ್ತೊಂದು ಗರಿ ಸಿಗಲಿದೆ. ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ 'ಜವಾಬ್ದಾರಿಯುತ ಎಐ' (Responsible AI) ತಂತ್ರಜ್ಞಾನದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಮಾದಾವರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (BIEC) ಮಂಗಳವಾರ ನಡೆದ ಪ್ರತಿಷ್ಠಿತ ‘ಗೂಗಲ್ ಐಓ ಕನೆಕ್ಟ್ 2026’ (Google I/O Connect 2026) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಕೇವಲ ಒಂದು ವಾರದ ಹಿಂದಷ್ಟೇ ಅಂದರೆ ಜುಲೈ 8ರಂದು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ಜಿಎಸ್‌ಸಿ (GCC) ಮುಖಂಡರ ಸಭೆಯಲ್ಲಿ ಎಐ ವಿವಿ ಸ್ಥಾಪನೆಯ ಚಿಂತನೆ ಇದೆ ಎಂಬ ವಿಚಾರವನ್ನು ಹಂಚಿಕೊಂಡಿದ್ದ ಸಿಎಂ ಡಿಕೆಶಿ, ಇದೀಗ ಕೇವಲ ಏಳೇ ದಿನಗಳಲ್ಲಿ ಅದನ್ನು ಅಧಿಕೃತ ಘೋಷಣೆ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರಕ್ಕೆ ಇರುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕವನ್ನು 'ಎಐ-ನೇಟಿವ್' ರಾಜ್ಯವನ್ನಾಗಿ ರೂಪಿಸುವುದೇ ನಮ್ಮ ಗುರಿ: ಡಿಕೆಶಿ

ಕಾರ್ಯಕ್ರಮದಲ್ಲಿ ನೆರೆದಿದ್ದ ಜಾಗತಿಕ ಐಟಿ ತಜ್ಞರನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಜಗತ್ತಿನ ಅತ್ಯಂತ ಸುಂದರ ಹಾಗೂ ಬೃಹತ್ ತಂತ್ರಜ್ಞಾನದ ಇಕೋ ಸಿಸ್ಟಮ್ ನಮ್ಮ ಬೆಂಗಳೂರಿನಲ್ಲಿದೆ. ಇಂದು ಇಡೀ ಜಗತ್ತನ್ನು ಎಐ ಆಳುತ್ತಿದ್ದು, ಭವಿಷ್ಯದ ಪ್ರತಿಯೊಂದು ತಂತ್ರಜ್ಞಾನದ ಬೆಳವಣಿಗೆಗೆ ಎಐ ಒಂದೇ ಉತ್ತರವಾಗಿದೆ. ವಿಶ್ವಕ್ಕೆ ಬೇಕಾದ ಇಂತಹ ನಾವೀನ್ಯತೆಯ ತಂತ್ರಜ್ಞಾನದ ಉತ್ತರವನ್ನು ನಮ್ಮ ಬೆಂಗಳೂರು ನೀಡಲಿದೆ. ಕರ್ನಾಟಕವನ್ನು ಸಂಪೂರ್ಣ 'ಎಐ-ನೇಟಿವ್' ರಾಜ್ಯವನ್ನಾಗಿ ಪರಿವರ್ತಿಸುವುದು ನಮ್ಮ ಆಶಯವಾಗಿದೆ ಎಂದರು.

ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆಯ ಕ್ರಾಂತಿ

ಪ್ರಸ್ತಾವಿತ ಎಐ ವಿಶ್ವವಿದ್ಯಾಲಯವು ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ರಂಗ ಹಾಗೂ ಸರ್ಕಾರದ ನಡುವೆ ಬಲವಾದ ಸಹಯೋಗವನ್ನು ಬೆಳೆಸಲಿದೆ. ಮುಂಬರುವ ದಿನಗಳಲ್ಲಿ ಪ್ರಮುಖ ವಲಯಗಳಲ್ಲಿ ಎಐ ತಂತ್ರಜ್ಞಾನವನ್ನು ಸಂಯೋಜಿಸಲು ಸರ್ಕಾರ ಬೃಹತ್ ಯೋಜನೆ ರೂಪಿಸಿದೆ.

  • ಎಐ-ಸಹಾಯದ ಬೋಧನಾ (AI-Assisted Teaching) ಪದ್ಧತಿಯನ್ನು ಜಾರಿಗೆ ತಂದು ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯ ತರಬೇತಿ ನೀಡುವುದು.
  • ಗ್ರಾಮೀಣ ಹಾಗೂ ನಗರ ಭಾಗದ ಆಸ್ಪತ್ರೆಗಳಲ್ಲಿ ರೋಗಗಳ ಮುಂಚಿತ ಪತ್ತೆ (Early Detection) ಮತ್ತು ಅತ್ಯಾಧುನಿಕ ವೈದ್ಯಕೀಯ ಬೆಂಬಲಕ್ಕಾಗಿ ಎಐ ಬಳಕೆ.
  • ಹವಾಮಾನ ವೈಪರೀತ್ಯ ಮತ್ತು ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ರೈತರಿಗೆ ನೈಜ ಸಮಯದ ಎಐ-ಚಾಲಿತ ಕೃಷಿ ಸಲಹಾ ಸೇವೆಗಳನ್ನು ಒದಗಿಸುವುದು.
  • ಸಾರ್ವಜನಿಕ ಸೇವೆಗಳ ವಿತರಣೆಯನ್ನು ಹಸ್ತಕ್ಷೇಪ ರಹಿತ, ಜನಸ್ನೇಹಿ ಹಾಗೂ ಅತಿ ವೇಗವಾಗಿ ಮಾಡಲು ಕೃತಕ ಬುದ್ಧಿಮತ್ತೆಯ ಬಳಕೆ.
  • ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEs) ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಅಗತ್ಯವಿರುವ ಎಐ ಪರಿಕರಗಳನ್ನು ಒದಗಿಸುವುದು.

ಗೂಗಲ್ ಸಂಸ್ಥೆಗೆ ಮುಕ್ತ ಆಹ್ವಾನ ಹಾಗೂ ಮೂಲಸೌಕರ್ಯ ವಿಸ್ತರಣೆ

ಎಐ ಸಂಶೋಧನೆ ಮತ್ತು ನವೀನ ಆವಿಷ್ಕಾರಗಳಿಗೆ ಒತ್ತು ನೀಡುತ್ತಿರುವ ಕರ್ನಾಟಕ ಸರ್ಕಾರ, ಎಐ ಕ್ಷೇತ್ರದಲ್ಲಿ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವಂತೆ ಜಾಗತಿಕ ತಂತ್ರಜ್ಞಾನ ದೈತ್ಯ 'ಗೂಗಲ್' ಸಂಸ್ಥೆಗೆ ಆಹ್ವಾನ ನೀಡಿದೆ. ರಾಜ್ಯದಲ್ಲಿ ಡೇಟಾ ಸೆಂಟರ್‌ಗಳ (Data Centers) ವಿಸ್ತರಣೆಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಹಾಗೂ ಬೆಂಬಲವನ್ನು ಸರ್ಕಾರ ನೀಡಲಿದೆ. ಇದರೊಂದಿಗೆ ರಾಜ್ಯದ ಎಐ ಸ್ಟಾರ್ಟ್‌ಅಪ್‌ಗಳಿಗೆ ವಿಶೇಷ ಪ್ರೋತ್ಸಾಹ ಧನ ಹಾಗೂ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಾಗತಿಕ ಕಂಪನಿಗಳನ್ನು ಕರ್ನಾಟಕದತ್ತ ಸೆಳೆಯಲು ಸರ್ಕಾರ ಮುಂದಾಗಿದೆ.

ಕೇವಲ ಒಂದು ವಾರದಲ್ಲೇ ಘೋಷಣೆ!

ಕಳೆದ ವಾರ ಬುಧವಾರ (ಜುಲೈ 8) ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ಕ್ಯಾಟಲಿಸ್ಟ್ ಕನೆಕ್ಟ್’ ಸಭೆಯಲ್ಲಿ ಸಿಎಂ/ಡಿಸಿಎಂ ಅವರು ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ಮುಖಂಡರೊಂದಿಗೆ ಈ ಬಗ್ಗೆ ಪ್ರಾಥಮಿಕ ಚರ್ಚೆ ನಡೆಸಿದ್ದರು. ಇದೀಗ ಗೂಗಲ್ ವೇದಿಕೆಯಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಿರುವುದು ಸರ್ಕಾರದ ತಾಂತ್ರಿಕ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಂಗಳೂರು ಕೇವಲ ಭಾರತದ ಐಟಿ ಹಬ್ ಆಗಿ ಉಳಿಯದೆ, ವಿಶ್ವದ ಪ್ರಮುಖ ಮತ್ತು ಜವಾಬ್ದಾರಿಯುತ ಎಐ ಆವಿಷ್ಕಾರಗಳ ಜಾಗತಿಕ ಕೇಂದ್ರವಾಗಬೇಕು ಎಂಬ ಸರ್ಕಾರದ ಸಂಕಲ್ಪಕ್ಕೆ ಈ ನೂತನ ಎಐ ವಿಶ್ವವಿದ್ಯಾಲಯವು ಭದ್ರ ಬುನಾದಿ ಹಾಕಲಿದೆ.

ಡಿಕೆಶಿ ಟ್ವೀಟ್ ಮಾಡಿ ಸ್ಪಷ್ಟನೆ

“ವಿಶ್ವದ ಐದು ಅಗ್ರ AI ನಗರಗಳಲ್ಲಿ ಒಂದಾಗಿ ಮತ್ತು ಭಾರತದ ಸುಮಾರು 40% ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿರುವ ಬೆಂಗಳೂರು ಕರ್ನಾಟಕದ ಪ್ರತಿಭೆ, ನಾವೀನ್ಯತೆ ಪರಿಸರ ವ್ಯವಸ್ಥೆ ಮತ್ತು ಉದ್ಯಮಶೀಲತಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದ್ದರೂ, ನಮ್ಮ ದೃಷ್ಟಿಕೋನವು ತುಂಬಾ ದೊಡ್ಡದಾಗಿದೆ. ಕರ್ನಾಟಕವನ್ನು ಭಾರತದ AI ರಾಜಧಾನಿಯನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ಈ ದೃಷ್ಟಿಕೋನವನ್ನು ವಾಸ್ತವಕ್ಕೆ ತಿರುಗಿಸಲು, ನಾವು ಭಾರತದ ಮೊದಲ ಸರ್ಕಾರಿ ನೇತೃತ್ವದ AI ವಿಶ್ವವಿದ್ಯಾಲಯ ಮತ್ತು AI ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ನಾವು ಶಾಲಾ ಹಂತದಿಂದ AI ಶಿಕ್ಷಣವನ್ನು ಪರಿಚಯಿಸುತ್ತಿದ್ದೇವೆ ಮತ್ತು AI ಆರ್ಥಿಕತೆಗೆ ಶಕ್ತಿ ತುಂಬಲು ಕರ್ನಾಟಕದ ಕರಾವಳಿ ಮತ್ತು ಬೆಂಗಳೂರಿನ ಬಳಿ ಮುಂದಿನ ಪೀಳಿಗೆಯ ಹಸಿರು ದತ್ತಾಂಶ ಕೇಂದ್ರಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಬೆಂಗಳೂರು ಮೀರಿದ ದೃಷ್ಟಿಕೋನದ ಮೂಲಕ, ಜಾಗತಿಕ ಅವಕಾಶಗಳು ನಮ್ಮ ರಾಜ್ಯದ ಪ್ರತಿಯೊಂದು ಪ್ರದೇಶದಾದ್ಯಂತ ಪ್ರತಿಭಾನ್ವಿತ ಯುವಜನರನ್ನು ತಲುಪುವಂತೆ ನಾವು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶ್ವ ದರ್ಜೆಯ ತಂತ್ರಜ್ಞಾನ ಕೇಂದ್ರಗಳನ್ನು ಸಹ ರಚಿಸುತ್ತಿದ್ದೇವೆ. ತಂತ್ರಜ್ಞಾನವು ಎಂದಿಗೂ ಮಾನವೀಯತೆಯನ್ನು ಬದಲಾಯಿಸಬಾರದು ಎಂದು ನಾನು ದೃಢವಾಗಿ ನಂಬುತ್ತೇನೆ. ಜನರನ್ನು ಸಬಲೀಕರಣಗೊಳಿಸುವುದು ಮತ್ತು ಜೀವನವನ್ನು ಸುಧಾರಿಸುವುದು ಇದರ ನಿಜವಾದ ಉದ್ದೇಶವಾಗಿದೆ. ನಮ್ಮ ರೈತರಿಗೆ ಕನ್ನಡದಲ್ಲಿ AI-ಸಕ್ರಿಯಗೊಳಿಸಿದ ಕೃಷಿ ಸಲಹಾ ಸೇವೆಗಳನ್ನು ಒದಗಿಸುವುದರಿಂದ ಹಿಡಿದು ಗ್ರಾಮೀಣ ಆರೋಗ್ಯ ರಕ್ಷಣೆಯನ್ನು ಬಲಪಡಿಸುವುದು ಮತ್ತು ಶಿಕ್ಷಣವನ್ನು ಪರಿವರ್ತಿಸುವವರೆಗೆ, ತಂತ್ರಜ್ಞಾನವು ಪ್ರತಿಯೊಬ್ಬ ನಾಗರಿಕರಿಗೂ ಸೇವೆ ಸಲ್ಲಿಸುತ್ತದೆ ಎಂದು ದೃಡಪಡಿಸುತ್ತೇವೆ.”