ಕಲಬುರಗಿ: ಶಾಲಾ ಕಟ್ಟಡಕ್ಕಾಗಿ ಸಿಎಂ ಭೇಟಿಗೆ ಮಕ್ಕಳ ಪಾದಯಾತ್ರೆ..!
ಘತ್ತರಗಾ ಶಾಲಾ ಮಕ್ಕಳಿಂದ 70 ಕಿ.ಮೀ ಕಾಲ್ನಡಿಗೆ, ಸ್ವಂತ ಕಟ್ಟಡವಿಲ್ಲದ್ದಕ್ಕೆ ವಿದ್ಯಾರ್ಥಿಗಳ ಬದುಕು ಅತಂತ್ರ
ಚವಡಾಪುರ(ಸೆ.16): ಇಲ್ಲಿನ ಘತ್ತರಗಾ ಶಾಲೆಯ ಮಕ್ಕಳು ತಮ್ಮ ಶಾಲೆಗೆ ಕಟ್ಟಡ ಬೇಕೆಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಪಾದಯಾತ್ರೆಗೆ ಮುಂದಾಗಿದ್ದಾರೆ. ಘತ್ತರಗಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕಟ್ಟಡಗಳು ಶೀಥಿಲಾವಸ್ಥೆಯಲ್ಲಿವೆ. ಹಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಜಾಗ ಮತ್ತು ಕಟ್ಟಡವಿದ್ದು 1ರಿಂದ 8ನೇ ತರಗತಿ ವರೆಗೆ 342 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಜನ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದಾರೆ. ಆದರೆ 9ರಿಂದ 10ನೇ ತರಗತಿ ವರೆಗಿನ ಶಾಲೆಗೆ ಸ್ವಂತ ಜಾಗವಿಲ್ಲ. ಮುಜರಾಯಿ ಇಲಾಖೆಯ ಜಾಗದಲ್ಲಿ ಕಟ್ಟಿರುವ ಕಟ್ಟಡದಲ್ಲೇ ನಿತ್ಯ ಆಟ ಪಾಠ ನಡೆಯುತ್ತಿದೆ. ಪ್ರೌಢ ಶಾಲೆಯಲ್ಲಿ 220 ವಿದ್ಯಾರ್ಥಿಗಳು ನಿತ್ಯ ಜೀವ ಭಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 8 ಜನ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ.
ಜೀವಭಯದಲ್ಲೇ ನಿತ್ಯ ಪಾಠ:
ಆದರೆ ಈ ಎರಡು ಶಾಲೆಗಳ ಪರಿಸ್ಥಿತಿ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಷ್ಟುಭಯಾನಕವಾಗಿದೆ. ಶಾಲೆಯ ಬಹುತೇಕ ಕೋಣೆಗಳ ಮೇಲ್ಛಾವಣಿಗಳು ಮಳೆ ನೀರು ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ ಹೀಗಾಗಿ ಸಾಧಾರಣ ಮಳೆ ಬಂದರೂ ಮೇಲ್ಛಾವಣಿಗಳು ಸೋರುತ್ತಿವೆ. ಹೀಗಾಗಿ ಪ್ರೌಢ ಶಾಲೆಯ ಕಾರ್ಯಾಲಯ, ಗಣಕಯಂತ್ರ ಕೊಠಡಿ, ಆಹಾರಧಾನ್ಯಗಳ ಕೊಠಡಿಯ ಮೇಲ್ಛಾವಣಿಗಳಿಗೆ ತಾಡಪತ್ರಿಗಳನ್ನು ಕಟ್ಟಿಮಳೆ ನೀರು ಕೊಣೆಯೊಳಗೆ ಬಾರದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.
Bengaluru: ಬಿಬಿಎಂಪಿ ಬಸ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ..!
ಸಿಎಂ ಆಗಮನ ಹಿನ್ನೆಲೆ ಕಾಲ್ನಡಿಗೆ:
ಕಲ್ಯಾಣ ಕರ್ನಾಟಕ ಉತ್ಸವಕ್ಕಾಗಿ ಸೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ನಗರಕ್ಕೆ ಬರುತ್ತಿದ್ದಾರೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ತಮ್ಮ ಕಷ್ಟ ಹೇಳಿಕೊಳ್ಳುವುದಕ್ಕಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 562 ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು, ಗ್ರಾಪಂ ಅಧ್ಯಕ್ಷ ವಿಠ್ಠಲ್ ನಾಟಿಕಾರ ನೇತೃತ್ವದಲ್ಲಿ ಘತ್ತರಗಿಯಿಂದ ಕಲಬುರಗಿವರೆಗೆ ಕಾಲ್ನಡಿಗೆಯ ಮುಖಾಂತರ ಹೋಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ. ಸೆ.16ರಂದು ಬೆಳಗ್ಗೆ ಘತ್ತರಗಿಯಿಂದ ಕಾಲ್ನಡಿಗೆಯ ಮುಖಾಂತರ ತೆರಳಿ ಸೆ.17ರಂದು ಕಲಬುರಿಗೆ ಆಗಮಿಸುವ ಮುಖ್ಯಮಂತ್ರಿಗಳಿಗೆ ತಮ್ಮ ಅಹವಾಲು ಸಲ್ಲಿಸಲಿದ್ದಾರೆ.
ಮಕ್ಕಳ ಶೈಕ್ಷಣಿಕ ಹಕ್ಕಿಗಾಗಿ ಕಾಲ್ನಡಿಗೆ
ಪ್ರೌಢ ಶಾಲೆ ಮುಜರಾಯಿ ಇಲಾಖೆ ಜಾಗದಲ್ಲಿದೆ. ಹೊಸದಾಗಿ ಶಾಲಾ ಕಟ್ಟಡಕ್ಕೆ ಜಾಗ ಖರೀದಿ ಮಾಡಲು ನಾವು ಘತ್ತರಗಿ ಪಂಚಾಯ್ತಿ ವತಿಯಿಂದ 5 ಲಕ್ಷ ಹಣ ನೀಡಲು ಸಿದ್ಧರಿದ್ದೇವೆ. ಸರ್ಕಾರ ಕೂಡಲೇ ನಮ್ಮೂರಿನ ಶಾಲೆಯ ಜಾಗದ ಸಮಸ್ಯೆ ನಿವಾರಿಸಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ಕಟ್ಟಿಸಿಕೊಡಬೇಕು. ಸೆ.17ರ ಪಾದಯಾತ್ರೆಯನ್ನು ಮಕ್ಕಳೊಂದಿಗೆ ನಾವು ಕೂಡ ಹೋಗಿ ಮುಖ್ಯಮಂತ್ರಿಗಳಿಗೆ ಸಮಸ್ಯೆ ಮನವರಿಕೆ ಮಾಡಲಿದ್ದೇವೆ. ಮುಜರಾಯಿ ಇಲಾಖೆ, ಶಿಕ್ಷಣ ಇಲಾಖೆ ಎರಡು ಸರ್ಕಾರದ ಭಾಗಗಳೇ ಆಗಿದ್ದರೂ ಕೂಡ ಘತ್ತರಗಿಯಲ್ಲಿ ಮಕ್ಕಳ ಶೈಕ್ಷಣಿಕ ಹಕ್ಕಿಗಾಗಿ ಮುಜರಾಯಿ ಇಲಾಖೆಯವರು ಶಾಲೆಯನ್ನು ಅಭಿವೃದ್ಧಿ ಪಡಿಸಲು ಬಿಡುತ್ತಿಲ್ಲ. ಯಾತ್ರಿಕ ಭವನ ಕಟ್ಟಿಸಿದ್ದಾರೆ. ಅದು ಯಾರ ಉಪಯೋಗಕ್ಕೂ ಬಾರದೆ ಭೂತ ಬಂಗಲೆಯಂತಾಗಿದೆ. ಇತ್ತ ಶಾಲೆ ಕುಸಿಯುವ ಹಂತ ತಲುಪಿದರೂ ಅಭಿವೃದ್ಧಿ ಕೆಲಸ ಮಾಡಲು ಮುಜರಾಯಿ ಇಲಾಖೆಯವರು ಬಿಡುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜವಾಬ್ದಾರಿತನ ಮತ್ತು ಇಲಾಖೆಯವರ ದ್ವಂದ್ವ ನೀತಿಯಯಿಂದಾಗಿ ಘತ್ತರಗಿಯ ಪ್ರತಿಭಾವಂತ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಮಕ್ಕಳ ಶೈಕ್ಷಣಿಕ ಹಕ್ಕಿಗಾಗಿ ಮಾಡುತ್ತಿರುವ ಕಾಲ್ನಡಿಗೆ ಹೋರಾಟಕ್ಕೆ ನಾವೆಲ್ಲ ಬೆಂಬಲಿಸುತ್ತಿದ್ದೇವೆ ಎಂದು ಘತ್ತರಗಿ ಗ್ರಾಮಸ್ಥರು ಹೇಳಿದ್ದಾರೆ.
ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್ ಶೀಘ್ರ: ರಾಘವೇಶ್ವರ ಶ್ರೀ
ಪ್ರೌಢ ಶಾಲೆಯ ಜಾಗ ಮುಜರಾಯಿ ಇಲಾಖೆಗೆ ಸಂಬಂಧಿಸಿದ್ದರಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ. ಮಕ್ಕಳ ಪರಿಸ್ಥಿತಿ ನೋಡಿದಾಗ ಯಾರಿಗಾದರೂ ಅಯ್ಯೋ ಎನಿಸದೇ ಇರುವುದಿಲ್ಲ. ಈ ಸಂಬಂಧ ನಾವು ಅನೇಕ ಬಾರಿ ಸಂಬಂಧ ಪಟ್ಟ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಅಂತ ಅಫಜಲ್ಪುರ ಬಿಇಒ ಮಾರುತಿ ಹುಜರತಿ ತಿಳಿಸಿದ್ದಾರೆ.
ಶಾಲಾ ಕೊಣೆಯೊಳಗೆ ಹೊಗಲು ಭಯವಾಗುತ್ತಿದೆ. ಯಾವಾಗ ಛಾವಣಿ ಕುಸಿದು ಬಿದ್ದು ಜೀವಕ್ಕೆ ಕುತ್ತು ಬರುತ್ತದೆಂದು ಗೊತ್ತಿಲ್ಲ. ಭಯಾನಕ ಸನ್ನಿವೇಶದಲ್ಲಿ ಶಾಲೆಗೆ ಬರಲು ಹೆದರಿಕೆ ಆಗುತ್ತಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಬರುವ ಮುಖ್ಯಮಂತ್ರಿಗಳಿಗೆ ನಾವು ಪಾದಯಾತ್ರೆಯ ಮುಖಾಂತರ ತೆರಳಿ ನಮ್ಮ ಸಮಸ್ಯೆ ಹೇಳಿಕೊಳ್ಳುತ್ತೇವೆ ಅಂತ ಶಾಲಾ ವಿದ್ಯಾರ್ಥಿಗಳು ಹೇಳಿದ್ದಾರೆ.