Bengaluru: ಬಿಬಿಎಂಪಿ ಬಸ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ..!
ಬೆಂಗಳೂರಿನ ಪೂರ್ವ ವಲಯದ ಮಕ್ಕಳಿಗೆ ಶಿಕ್ಷಣ ನೀಡಲು ಕ್ರಮ, ಪಾಲಿಕೆ ಬಸ್‌ನಲ್ಲಿ ಎನ್‌ಜಿಒದಿಂದ ಮಕ್ಕಳಿಗೆ ಶಿಕ್ಷಣ
ಬೆಂಗಳೂರು(ಸೆ.13): ಪಾಲಿಕೆ ವ್ಯಾಪ್ತಿಯ ಅಂಗನವಾಡಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಮನೆ ಬಾಗಿಲಿಗೆ (ವಂಡರ್ ಆನ್ ವ್ಹೀಲ್ಸ್) ಹೋಗಿ ಕಲಿಸುವ ವಾಹನಗಳಿಗೆ ಸೋಮವಾರ ಚಾಲನೆ ನೀಡಲಾಯಿತು. ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರು(ಶಿಕ್ಷಣ) ಡಾ. ರಾಮ್ ಪ್ರಸಾತ್ ಮನೋಹರ್ ಅವರು ಚಾಲನೆ ನೀಡಿದರು.
ಫ್ರೀ ಥಿಂಕಿಂಗ್ ಫೌಂಡೇಶನ್ ಸಂಸ್ಥೆಯು ಬಿಬಿಎಂಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ವಂಡರ್ ಆನ್ ವ್ಹೀಲ್ಸ್ ಕಾರ್ಯಕ್ರಮ ನಡೆಸಲಿದೆ. ವಂಡರ್ ಆನ್ ವ್ಹೀಲ್ಸ್ ಮೂಲಕ ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಅಂಗನವಾಡಿಯ ಮಕ್ಕಳಿಗೆ ಆರಂಭಿಕ ಕಲಿಕೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ. ಶಾಲಾ ಶಿಕ್ಷಣ ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯದೆ, ಮಕ್ಕಳು ಹತ್ತಿರದ ಉದ್ಯಾನವನದಲ್ಲಿ ಬಸ್ಸಿನಲ್ಲಿ ವಿದ್ಯಾಭ್ಯಾಸ ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪಾಲಿಕೆ ಬಸ್ಸುಗಳನ್ನು ಒದಗಿಸಿದೆ.
ಈ ಅಂಗನವಾಡಿಗೆ ಊರ ಸೊಸೆಯೇ ಶಿಕ್ಷಕಿಯಾಗಬೇಕಂತೆ!
ಪ್ರತಿಯೊಂದು ಬಸ್ಸಿನಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿಯ ಮಕ್ಕಳಿಗೆ ವಿನೂತನ ಕಲಿಕಾ ಸಾಮಗ್ರಿ, ನುರಿತ ಶಿಕ್ಷಕರು ಹಾಗೂ ವಿಭಿನ್ನ ವಾತಾವರಣವನ್ನು ಕಲ್ಪಿಸಿ ಅಂಗನವಾಡಿ ಮಕ್ಕಳ ಅಮೂಲಾಗ್ರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ವಾಹನದಲ್ಲಿ ಇಬ್ಬರು ಶಿಕ್ಷಕಿಯರು, ಓರ್ವ ಗ್ರೂಪ್ ಡಿ ನೌಕರ, ಬಿಳಿ ಹಲಗೆ(ವೈಟ್ ಬೋರ್ಡ್), ಮಕ್ಕಳ ಸ್ನೇಹಿ ಚಿತ್ರಗಳ ಅಳವಡಿಕೆ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಲಭ್ಯಗಳು ಇರಲಿವೆ.
ಈಗಾಗಲೇ ಪಾಲಿಕೆ ವ್ಯಾಪ್ತಿಯ ಎಲ್ಲ ವಲಯಗಳಲ್ಲೂ 10 ಬಸ್ಸುಗಳ ಮೂಲಕ ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಮೊದಲ ‘ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್’ ಅನ್ನು ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ಪ್ರಾರಂಭಿಸಲಾಗಿತ್ತು. ಬೆಂಗಳೂರಿನ ಕೊಳೆಗೇರಿಗಳಲ್ಲಿ ವಾಸಿಸುವ 2.5 ರಿಂದ 6 ವರ್ಷ ವಯಸ್ಸಿನ ಅಂಚಿನಲ್ಲಿರುವ ಮಕ್ಕಳ ಆರಂಭಿಕ ಕಲಿಕೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮ ಇದಾಗಿದ್ದು, ಮಾಂಟೆಸ್ಸರಿ ವಿಧಾನದಲ್ಲಿ ಬೋಧನೆ ಮಾಡಲು ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿದೆ.
ಹೊಸ 4244 ಅಂಗನವಾಡಿಗಳ ಆರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ
ಕಾರ್ಯಕ್ರಮದಲ್ಲಿ ಪಾಲಿಕೆ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕರಾದ ಉಷಾ, ಫ್ರೀ ಥಿಂಕಿಂಗ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಸುನೋಜ್ ಉಪಸ್ಥಿತರಿದ್ದರು.
ಬಸ್‌ನಲ್ಲಿ ಏನೇನಿರಲಿದೆ?
*ಇಬ್ಬರು ಶಿಕ್ಷಕಿಯರು, ಓರ್ವ ಗ್ರೂಪ್ ಡಿ ನೌಕರ
*ವೈಟ್ ಬೋರ್ಡ್, ಮಕ್ಕಳ ಸ್ನೇಹಿ ಚಿತ್ರಗಳು
*ಕುಡಿಯುವ ನೀರು ಸೇರಿದಂತೆ ಮೂಲ ಸೌಕರ‍್ಯ